ಆಹಾರದ ಮೂಲಕ ನಿಯಂತ್ರಣ ಕಷ್ಟವಲ್ಲ
ಯಾವುದೋ ಸಮಾರಂಭ, ಪಾರ್ಟಿಗೆ ಹೋಗಿದ್ದೀರಿ. ಗಡದ್ದಾಗಿ ತಿಂದಿರುತ್ತೀರಿ. ಒಂದೆರಡು ಗಂಟೆ ನಿಮಗೆ ಏನೂ ಅನ್ನಿಸುವುದಿಲ್ಲ.
ಯಾವುದೋ ಸಮಾರಂಭ, ಪಾರ್ಟಿಗೆ ಹೋಗಿದ್ದೀರಿ. ಗಡದ್ದಾಗಿ ತಿಂದಿರುತ್ತೀರಿ. ಒಂದೆರಡು ಗಂಟೆ ನಿಮಗೆ ಏನೂ ಅನ್ನಿಸುವುದಿಲ್ಲ. ಆಮೇಲೆ ಶುರುವಾಗುತ್ತದೆ ನೋಡಿ ಪ್ರತಾಪ. 'ಗ್ಯಾಸ್ಟ್ರಿಕ್ ಶುರುವಾಗುವುದಿದ್ದರೆ ತಿಂದ ತಕ್ಷಣ ಆಗಬೇಕಲ್ಲ?' ಎನ್ನುವುದು ಕೆಲವರ ಪ್ರಶ್ನೆ. ಎರಡಲ್ಲ, ಮೂರು ಗಂಟೆ ಕಾಲ ಏನೂ ಆಗುವುದಿಲ್ಲ. ಗ್ಯಾಸ್ ಉತ್ಪಾದಿಸುವ ಪದಾರ್ಥಗಳನ್ನು ಸೇವಿಸಿದ ಮೂರು ಗಂಟೆ ತರುವಾಯವೇ ಅದು ತನ್ನ ಕೆಲಸ ಆರಂಭಿಸುವುದು. ಮೂರರಿಂದ ಐದು ಗಂಟೆ ಅವಧಿಯಲ್ಲಿ ಗರಿಷ್ಠ ಪ್ರಮಾಣದ ವಾಯು ಉತ್ಪಾದನೆಯಾಗುತ್ತದೆ. ಏಳು ಗಂಟೆವರೆಗೂ ಅದರ ಪರಿಣಾಮ ಇರುತ್ತದೆ. ಆನಂತರ ತನ್ನಿಂತಾನೇ ಕಡಿಮೆ ಆಗುತ್ತದೆ. ಬ್ರಕೋಲಿ, ಕ್ಯಾಬೇಜ್, ಕಾಲಿಫ್ಲವರ್, ಒಣಗಿದ ಬೀನ್ಸ್ ಮತ್ತು ಅವರೆಕಾಳು, ಹಾಲು ಮತ್ತು ಅದರ ಉತ್ಪನ್ನಗಳು (ಲ್ಯಾಕ್ಟೋಸ್ ಅಲರ್ಜಿ ಇರುವವರಲ್ಲಿ), ಈರುಳ್ಳಿ, ಸೋಯಾಬೀನ್ಸ್, ಟರ್ನಿಪ್ ಗೆಡ್ಡೆಗಳು ಇವು ಅತಿಯಾಗಿ ಗ್ಯಾಸ್ ಉತ್ಪಾದಿಸುವ ಪದಾರ್ಥಗಳು. ಸೇಬು, ಬಾಳೆಹಣ್ಣು, ಬ್ರೆಡ್ ಮತ್ತು ಅದನ್ನು ಬಳಸಿ ತಯಾರಿಸುವ ಪದಾರ್ಥಗಳು, ಕ್ಯಾರೆಟ್ ಅಲ್ಪಪ್ರಮಾಣದಲ್ಲಿ ಗ್ಯಾಸ್ ಉತ್ಪಾದಿಸುತ್ತವೆ. ಅಕ್ಕಿ, ಅನ್ನ ಯಾವುದೇ ತೊಂದರೆ ಉಂಟುಮಾಡುವುದಿಲ್ಲ. ನಿಮಗೆ ಯಾವುದರಿಂದ ಸಮಸ್ಯೆ ಇದೆ ಎನ್ನವುದನ್ನು ನೀವೇ ಟ್ರಯಲ್ ಅಂಡ್ ಎರರ್ ವಿಧಾನದಿಂದ ಕಂಡುಕೊಳ್ಳಬೇಕು. ಗ್ಯಾಸ್ಟ್ರಿಕ್ ತೊಂದರೆಯಿಂದ ಶಾಶ್ವತ ಪರಿಹಾರ ಬೇಕು ಎಂತಾದರೆ ಅಷ್ಟು ತಾಳ್ಮೆಯನ್ನು ನೀವು ತೋರಿಸಬೇಕಾದದ್ದು ಅನಿವಾರ್ಯ.
ಇದನ್ನು ಹೊರತುಪಡಿಸಿ ಬೇರಾವುದಾದರೂ ಮಾರ್ಗ ಇದೆಯೆ? ಸೋಯಾಬೀನ್, ಕೆಲವು ಕಾಳುಗಳನ್ನು ಚೆನ್ನಾಗಿ ನೆನೆಸಿ ಆ ನಂತರ ಬೇಯಿಸಿದರೆ ಅವು ಗ್ಯಾಸ್ ಉತ್ಪತ್ತಿ ಮಾಡುವ ಶಕ್ತಿಯನ್ನು ಬಹುಮಟ್ಟಿಗೆ ಕಳೆದುಕೊಳ್ಳುತ್ತವೆ. ಗ್ಯಾಸ್ಟ್ರಿಕ್ ಉಂಟುಮಾಡುವ ಪದಾರ್ಥಗಳನ್ನು ಬಳಸಿ ಅಡುಗೆ ಮಾಡುವಾಗ ಅವುಗಳ ಜತೆ ಶುಂಠಿ ಅಥವಾ ಬೆಳ್ಳುಳ್ಳಿ ಬಳಸುವುದು ಇನ್ನೊಂದು ಅತಿಸುಲಭದ ಉಪಾಯ. ನಮ್ಮ ಜನಪದರು ಉದರ ಸಂಬಂಧಿ ಆರೋಗ್ಯ ತೊಂದರೆಗಳಿಗೆ ಇವನ್ನು ಬಹಳ ಹಿಂದಿನಿಂದಲೂ ಔಷಧವಾಗಿ ಬಳಸುತ್ತಿದ್ದರು. ದ್ವಿದಳ ಧಾನ್ಯಗಳು ಮತ್ತು ನಿರ್ದಿಷ್ಟ ತರಕಾರಿಗಳನ್ನು ಬಳಸಿ ಅಡುಗೆ ಮಾಡುವಾಗ ಶುಂಠಿ, ಬೆಳ್ಳುಳ್ಳಿ ಉಪಯೋಗಿಸುವ ಕ್ರಮ ಈಗಲೂ ಕೆಲವು ಕಡೆಗಳಲ್ಲಿ ಇದೆ. ಕೆಲವು ಪದಾರ್ಥಗಳು ಗ್ಯಾಸ್ ಉತ್ಪಾದಿಸುವ ಶಕ್ತಿ ಕಳೆದುಕೊಳ್ಳುವಂತೆ ಮಾಡುವ ತಾಕತ್ತು ಇವುಗಳಿಗೆ ಇದೆ ಎನ್ನುವುದನ್ನು ಉತ್ತರಪ್ರದೇಶದ ಜಿ.ಬಿ.ಪಂತ್ ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಕೆಲವು ವರ್ಷಗಳ ಹಿಂದೆ ಕಂಡುಕೊಂಡಿದ್ದಾರೆ ಮತ್ತು ತಮ್ಮ ಪ್ರಯೋಗಗಳನ್ನು ವಿವರವಾಗಿ ದಾಖಲಿಸಿದ್ದಾರೆ.
ಗ್ಯಾಸ್ಟ್ರಿಕ್ ಸಮಸ್ಯೆಗೆ ಔಷಧಗಳನ್ನು ಅತಿಯಾಗಿ ಅವಲಂಬಿಸದೆ ಆಹಾರ ಕ್ರಮದ ಮೂಲಕವೇ ನಿಯಂತ್ರಿಸಿಕೊಳ್ಳುವುದು ಖಂಡಿತವಾಗಲೂ ನಮ್ಮಿಂದ ಸಾಧ್ಯವಿದೆ. ಏನಂತೀರಿ?
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com