ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಂಬಳಕ್ಕೆ ಹೊಸ ಕೋಣ

Srinivasa Murthy VN
Updated On : 4 Nov 2013, 12:43 pm

ಕೆಸರುಗದ್ದೆಯಲ್ಲಿ ಓಡುವ ಈ ಕೋಣಗಳಿಗೆ ತರಬೇತಿ ನೀಡುವ ಪದ್ಧತಿ ಮೊದಲಿನಿಂದಲೂ ಇತ್ತು, ಈಗ ಈ ಕೋಣಗಳ ಹಿಂದೆ ಓಡುವ 'ಕೋಣ ಓಡಿಸುವವ'ರಿಗೂ ತರಬೇತಿ ನೀಡಲಾಗುತ್ತಿದೆ.

ಒಂದು ಕಾಲದಲ್ಲಿ ಕರಾವಳಿಯ ಹಳ್ಳಿಗಳಲ್ಲಿ ನಡೆಯುತ್ತಿದ್ದ ಜಾನಪದ ಕ್ರೀಡೆ ಕಂಬಳ (ಕೋಣಗಳ ಓಟದ ಸ್ಪರ್ಧೆ) ಕಾಲಕ್ರಮೇಣ ಅದರ ಆಯೋಜನೆಯ ದುಬಾರಿತನದಿಂದಾಗಿ ಅಲ್ಲೊಂದು ಇಲ್ಲೊಂದು ಮಾತ್ರ ನಡೆಯುತ್ತಿತ್ತು. ಇತ್ತೀಚೆಗೆ ಮತ್ತೆ ಕೆಲವು ಆರ್ಥಿಕ ಸದೃಢರ ಬೆಂಬಲದಿಂದ ಪ್ರಸಿದ್ಧಿಗೆ ಬಂದಿರುವ ಕಂಬಳಕ್ಕೆ ಇದೀಗ ಅಕಾಡೆಮಿಕ್ ಸ್ಪರ್ಶ.
ಕೆಸರುಗದ್ದೆಯಲ್ಲಿ ಓಡುವ ಈ ಕೋಣಗಳಿಗೆ ತರಬೇತಿ ನೀಡುವ ಪದ್ಧತಿ ಮೊದಲಿನಿಂದಲೂ ಇತ್ತು, ಈಗ ಈ ಕೋಣಗಳ ಹಿಂದೆ ಓಡುವ 'ಕೋಣ ಓಡಿಸುವವ'ರಿಗೂ ತರಬೇತಿ ನೀಡಲಾಗುತ್ತಿದೆ. ಅದಕ್ಕಾಗಿ 3 ವರ್ಷಗಳ ಹಿಂದೆ ಕಂಬಳ ಸಂರಕ್ಷಣೆ, ನಿರ್ವಹಣೆ ಹಾಗೂ ತರಬೇತಿ ಅಕಾಡೆಮಿ ಅಸ್ತಿತ್ವಕ್ಕೆ ತರಲಾಗಿದೆ. ಕಳೆದ ವರ್ಷ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ ಈ ಅಕಾಡೆಮಿಯ ಮೂಲಕ 55 ಯುವಕರು ಕೋಣ ಓಡಿಸುವ ಕಲೆಯಲ್ಲಿ ಪಾರಂಗತರಾಗಿದ್ದರೆ, ಈ ಬಾರಿ ಮಿಯಾರು ಎಂಬಲ್ಲಿ 35 ಯುವಕರು 10 ದಿನಗಳಿಂದ ಈ ತರಬೇತಿ ನಿರತರಾಗಿದ್ದಾರೆ.

ಮಾಲೀಕರಿಂದ ಭಾರಿ ಬೇಡಿಕೆ
ಇದುವರೆಗೆ ಕೋಣ ಓಡಿಸುವವರಿಗೆ ವೈದ್ಯಕೀಯ ತಪಾಸಣೆ ನಡೆಯುತ್ತಿತ್ತು. ಈಗ ಅಕಾಡೆಮಿಕ್ ತರಬೇತಿ ಪಡೆಯುವ ಯುವಕರಿಗೆ ಕೋಣಗಳ ಮಾಲೀಕರಿಂದ ಭಾರಿ ಬೇಡಿಕೆ ಬಂದಿದೆ. ವಿಶೇಷವೆಂದರೆ ಕೆಸರುಗದ್ದೆಯಲ್ಲಿ ಕೋಣ ಓಡಿಸುವ ಈ ತರಬೇತಿ ಪಡೆಯಲು ಬಂದವರಲ್ಲಿ ಎಂಜಿನಿಯರ್‌ಗಳೂ ಇದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿ ಒಳ್ಳೆಯ ಸಂಬಳದ ಉದ್ಯೋಗದಲ್ಲಿರುವವರು, ಸ್ನಾತಕೋತ್ತರ ಪದವಿ ಪಡೆದವರೂ ಕಂಬಳ ಓಡಿಸುವ ಕಲೆಯನ್ನು ಅಕಾಡೆಮಿಕ್ ಆಗಿ ಕಲಿಯಲು ಮುಂದೆ ಬಂದಿದ್ದಾರೆ.
ನಿಮಗ್ಯಾಕೆ ಈ ಉಸಾಬರಿ ಎಂದರೆ, ಕಂಬಳ ಒಂದು ಸಾಹಸಿ ಕ್ರೀಡೆ, ಅದೊಂದು ಥ್ರಿಲ್ ನೀಡುವ ಹವ್ಯಾಸ, ಕ್ರೀಡೆ ಮೇಲಿನ ಪ್ರೀತಿ ಇತ್ಯಾದಿ ಕಾರಣ ನೀಡುತ್ತಾರೆ. ಈ ಬಾರಿ 65 ಮಂದಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ದಕ, ಉಡುಪಿ, ಕಾಸರಗೋಡಿನ 35 ಮಂದಿಯನ್ನು ಮಾತ್ರ ಆರಿಸಲಾಗಿದೆ. 20 ಜೋಡಿ ಕೋಣಗಳ ಜತೆ ನಿತ್ಯ ತರಬೇತಿ.
ತರಬೇತಿ ಸಮಯ ಕೋಣಗಳ ಹಿಂದೆ ಕೆಸರಿನಲ್ಲಿ ವೇಗವಾಗಿ ಓಡುವುದಷ್ಟೇ ಅಲ್ಲದೆ ದೈಹಿಕ ವ್ಯಾಯಾಮ, ಕೋಣಗಳ ಆರೈಕೆ, ಹಗ್ಗ ಬಿಗಿಯುವುದು, ಆಹಾರ ಪದ್ಧತಿ, ಮಾನಸಿಕ ಸಿದ್ಧತೆ ಇತ್ಯಾದಿ ಕಲಿಸಲಾಗುತ್ತದೆ. ಓಡುವಾಗ ಕೋಣಗಳಿಗೆ ಹೊಡೆಯಲು ಬಳಸುವ ಬೆತ್ತಗಳನ್ನು ಕಲಾತ್ಮಕವಾಗಿ ನಿರ್ಮಿಸುವುದು, ಹಗ್ಗ ಹೆಣೆಯುವುದನ್ನೂ ಕಲಿಸಲಾಗುತ್ತದೆ. ನ.10ರಂದು ಮಿಯ್ಯಾರು ಲವಕುಶ ಜೋಡುಕರೆ ಕಂಬಳ ಕ್ರೀಡಾಂಗಣದಲ್ಲಿ ನಡೆಯುವ ಕಂಬಳ ಈ ಯುವಕರ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದೆ.

ತೀರ್ಪಿಗೂ ಹೈಟೆಕ್ ಸ್ಪರ್ಶ
145 ಮೀಟರ್ ಉದ್ದದ, 40 ಮೀಟರ್ ಅಗಲದ ಕೆಸರು ಗದ್ದೆಯಲ್ಲಿ ನಡೆಯುವ ಈ ಕಂಬಳದಲ್ಲಿ ಹಿಂದೆ ಅನೇಕ ಬಾರಿ ಯಾವ ಕೋಣ ಪ್ರಥಮ ಎನ್ನುವ ಬಗ್ಗೆ ವಿವಾದ ಎದ್ದಿರುವ ಉದಾಹರಣೆಗಳಿವೆ. ಆದ್ದರಿಂದ ಈ ತೀರ್ಪಿಗೂ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಗದ್ದೆಯ ಮೇಲೆ ಕೇಬಲ್ ಕ್ಯಾಮೆರಾ ಅಳವಡಿಸಿ, ಇಡೀ ಓಟವನ್ನು ಶೂಟಿಂಗ್ ಮಾಡಿಸಲಾಗುತ್ತದೆ. ಕೋಣಗಳು ಗುರಿ ಮುಟ್ಟಿದ್ದನ್ನು ದಾಖಲಿಸುವ ಎಲೆಕ್ಟ್ರಾನಿಕ್ ಸೆನ್ಸಾರ್ ಅಳವಡಿಸಲಾಗುತ್ತಿದೆ. ನ.10ರಂದು ನಡೆಯುವ ಕಂಬಳದಲ್ಲಿ ಈ ವ್ಯವಸ್ಥೆ ಪ್ರಥಮ ಬಾರಿಗೆ ಜಾರಿಯಾಗುತ್ತಿದೆ.

ನಷ್ಟವಾದರೂ ತರಬೇತಿ
ತರಬೇತಿ ಸಮಯ 20 ಜೋಡಿ ಕೋಣಗಳಿಗೆ ಪ್ರತಿದಿನ ಸುಮಾರು 60 ಕೆಜಿ ಹುರುಳಿ ಬೇಕಾಗುತ್ತದೆ. 10 ದಿನದ ಶಿಬಿರಕ್ಕೆ ಸುಮಾರು ರು. 4 ಲಕ್ಷ ಹಣ ಖರ್ಚಾಗುತ್ತಿದೆ. ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ಕಂಬಳದ ಅಭಿಮಾನಿಗಳು ನೀಡುವ ಹಣದಿಂದಲೇ ಈ ಶಿಬಿರ. ಕಂಬಳ ಕಲೆ ಉಳಿಯಬೇಕು ಎನ್ನುವುದಕ್ಕಾಗಿ ನಷ್ಟವಾದರೂ ಈ ತರಬೇತಿ ನಡೆಸಲಾಗುತ್ತಿದೆ ಎನ್ನುತ್ತಾರೆ ಅಕಾಡೆಮಿ ಸಂಚಾಲಕ ಕೆ. ಗುಣಪಾಲ ಕಡಂಬ. <

- ಚೈತ್ರಾ ಹೆರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement