ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚಂದ್ರನಿಗಿಂತ ಮಿಗಿಲು

ಕವಿಗಳು ವರ್ಣನೆಯಲ್ಲಿ ಪರಿಣಿತರು. ಹೊಸ ಕವಿಗಳು ವರ್ಣನೆ ಉಪಮೆ ರೂಪಕಗಳ ಹೊಸ ದಾರಿಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ.

Srinivasa Murthy VN
Updated On : 4 Nov 2013, 12:45 pm

ಕವಿಗಳು ವರ್ಣನೆಯಲ್ಲಿ ಪರಿಣಿತರು. ಹೊಸ ಕವಿಗಳು ವರ್ಣನೆ ಉಪಮೆ ರೂಪಕಗಳ ಹೊಸ ದಾರಿಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಕವಿರಾಜಮಾರ್ಗವು ಅದಾಗಲೇ ಪ್ರಖ್ಯಾತರಿಂದ ನಡೆಯಲ್ಪಟ್ಟು, ಅದರಲ್ಲೇ ನಡೆಯುವುದೆಂದರೆ ಸ್ವಾರಸ್ಯವಿರುವುದಿಲ್ಲ. ಹೀಗಾಗಿ ಕೆಲವೊಮ್ಮೆ, ಪುರಾತನ ಕವಿಗಳ ವರ್ಣನೆಗಳನ್ನು ಅಲ್ಲಗಳೆಯಲೂ ಬೇಕಾಗುತ್ತದೆ.
ತರುಣಿಯ ಮುಖವನ್ನು ಚಂದ್ರನಿಗೆ ಹೋಲಿಸುವುದು, ಪುರಾತನ ಕಾಲದಿಂದಲೂ ಬಂದಿರುವ ಅಭ್ಯಾಸ. ಎಂಥ ಸಾಮಾನ್ಯ ಕವಿಯೇ ಆದರೂ ಈ ರೂಪಕವನ್ನು ಒಮ್ಮೆಯಾದರೂ ಪ್ರಯೋಗಿಸದೆ ಇಲ್ಲ. ರಸಿಕ ಕವಿಯೊಬ್ಬ ಅದನ್ನೇ ಉಪಯೋಗಿಸಿ ತನ್ನ ನಲ್ಲೆಯನ್ನು ಹೊಗಳಲು ಬೇರೆ ದಾರಿ ಹುಡುಕಿಕೊಂಡ.

ನ ಮನಾಗಪಿ ರಾಹುರೋಷಶಂಕಾ
ನ ಕಲಂಕಾನುಗಮೋ ನ ಪಾಂಡುಭಾವಃ
ಉಪಚಾಯತ ಏವ ಕಾಪಿ ಶೋಭಾ
ಪರಿತೋ ಭಾಮಿನಿ ತೇ ಮುಖಸ್ಯ ನಿತ್ಯಮ್


'ಭಾಮಿನಿ, ನಿನ್ನ ಮುಖವು ಚಂದ್ರನಿಗಿಂತಲೂ ಮಿಗಿಲು! ಯಾಕೆಂದು ಕೇಳಿದೆಯಾ? ನಿನ್ನ ವದನಾರವಿಂದದ ಕಾಂತಿ ಕಳೆಗುಂದದೆ ವರ್ಧಿಸುತ್ತಲೇ ಇರುತ್ತದೆ. ಅದನ್ನು ರಾಹು ಮುಸುಕಿ ಗ್ರಹಣ ಉಂಟುಮಾಡುವುದಿಲ್ಲ. ಮುಖದಲ್ಲಿ ಕಲೆಗಳೂ ಇಲ್ಲ.'
ಚಂದ್ರನ ಮೇಲೆ ಕಲೆಗಳಿರುವುದೂ, ಆತ ಕೃಷ್ಣಪಕ್ಷದಲ್ಲಿ ಕಳೆಗುಂದುತ್ತ ನಡೆದು ಇಲ್ಲವಾಗುವುದೂ, ಆತನಿಗೆ ಗ್ರಹಣವಾಗುವುದೂ ನಮಗೆ ಗೊತ್ತಿದ್ದದ್ದೇ. ಅವ್ಯಾವುದೂ ಇಲ್ಲವಾದ್ದರಿಂದ ನಲ್ಲೆಯ ಮುಖ ಶಶಿಗಿಂತ ಮಿಗಿಲು ಎಂಬುದು ಅವನ ಭಾವ. ಪ್ರಿಯಕರರು ತಮ್ಮ ನಲ್ಲೆಯರನ್ನು 'ಶಶಿಮುಖಿ'ಯೆಂದು ಕರೆಯುವ ಮುನ್ನ ಇದನ್ನು ಯೋಚಿಸಬೇಕು.

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement