ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತರವಲ್ಲವೀ ವ್ಯಥೆ!

Srinivasa Murthy VN
Updated On : 27 Nov 2013, 5:58 am

ಸಚಿನ್‌ರ ಸಾಧನೆಗಿಂತಲೂ ಅವರ ನಡೆನುಡಿ, ಮಾನವೀಯ ಅಂತಃಕರಣ ಸ್ತುತ್ಯರ್ಹ. ಕ್ರಿಕೆಟ್‌ಗೆ ಅವರ ವಿದಾಯ  ಭವ್ಯ ನೆನಪು ಬಿಟ್ಟು ಹೋಗಿದೆ. ಹೊಸ ನೀರು ಬಂದು ಹಳೆಯದನ್ನು ಇಲ್ಲವಾಗಿಸುವುದು ಲೋಕ ನಿಯಮ. ಅದಕ್ಕಾಗಿ  ಮರುಗುವುದು ಸಲ್ಲದು. ರಸಋಷಿ ಕುವೆಂಪುರವರು  'ಒಂದೆಡೆ ಎಲ್ಲಿಯೂ ನಿಲ್ಲಬಾರದು. ಯಾವುದೂ ಅಖೈರಲ್ಲ'  ಎನ್ನುತ್ತಾರೆ. ಹಾಗಾಗಿ  ನೋವು, ನಿರಾಸೆ ಸಲ್ಲದು. ಸಚಿನ್‌ರಂಥವರನ್ನು ನಾವು  ಸೃಷ್ಟಿಸಬೇಕು, ಸೃಷ್ಟಿಸೋಣ. ಸಾಧಕರ ಇತಿಹಾಸವೆ ಮುಗಿಯಿತು ಅಂತ  ಪ್ರಲಾಪಿಸುವುದು  ಭಾವೀ  ಪೀಳಿಗೆಗಳನ್ನು  ಅವಮಾನಿಸಿದಂತೆ.
-ಬಿಂಡಿಗನವಿಲೆ ಭಗವಾನ್,  ಬೆಂಗಳೂರು

ಸಚಿನ್ ದೇವರಲ್ಲ!

'ಆಟ ತನ್ನಿಚ್ಛೆ ನೋಟ ಪರರಿಚ್ಛೆ' ಎಂದು ಸಚಿನ್ ಇತರೆ ಕ್ರಿಕೆಟಿಗರಿಗಿಂತ ಹೆಚ್ಚು ಕಾಲ ಆಟವಾಡಿದರು. ಪ್ರತಿಭೆ, ಸಾಮರ್ಥ್ಯಗಳ ಜೊತೆ ಅವಕಾಶಗಳ ಅದೃಷ್ಟ ಕೂಡಾ ಸಚಿನ್‌ಗೆ ಇತ್ತು. ಕೇವಲ ಕ್ರಿಕೆಟ್ ಒಂದೇ ಆಟವಲ್ಲ, ಅನೇಕ ರೀತಿಯ ಆಟಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಸಾಧನೆ ಮೆರೆದವರು ಸಾಕಷ್ಟಿದ್ದಾರೆ. ಸಚಿನ್ ನಿವೃತ್ತಿ ಭಾರತಕ್ಕೆ ಯಾವುದೇ ನಷ್ಟ ತರುವುದಿಲ್ಲ. ಅವರ ಪರಿಶ್ರಮಕ್ಕೆ ತಕ್ಕಂತೆ ಸಂದ ಗೌರವಗಳು ಸ್ವಾಗತಾರ್ಹವೇ. ಆದರೆ ಸಚಿನ್ ಆಟವಾಡಿದ್ದೇ ರಾಷ್ಟ್ರ ಸೇವೆ ಎಂದು ಪರಿಗಣಿಸಬೇಕಾಗಿಲ್ಲ. ಅವರನ್ನು ದೇವರು ಎಂದು ಕರೆಯುವುದರಲ್ಲಿ ಅವಿವೇಕತನ ಕಾಣುತ್ತದೆ. ಅದು ಅಭಿಮಾನದ ಅತಿರೇಕತನವಲ್ಲ, ಮೂರ್ಖತನವಾಗಿದೆ.
-ವಿನೋದ ಕರಣಂ, ಬಳ್ಳಾರಿ

ಮಾರ್ಗದರ್ಶಕವಾಗಲಿ!

ಸಚಿನ್ ತೆಂಡೂಲ್ಕರ್ ವಿದಾಯ ಒಂದೆಡೆ ಸಾರ್ಥಕ ಭಾವ ಮೂಡಿಸಿದರೆ ಇನ್ನೊಂದೆಡೆ ಅವರು ಇನ್ನೂ ಆಡಬೇಕಿತ್ತು ಎನಿಸುವುದು ಸಹಜ. ಅವರ ನಿವೃತಿ ಬಗ್ಗೆ ಹಲವು ವರ್ಷಗಳಿಂದ ಪರ-ವಿರೋಧ ಚರ್ಚೆಗಳು ನಡೆದಿದ್ದರೂ ಸಚಿನ್ ಮಾತ್ರ ಇದ್ಯಾವುದಕ್ಕೂ ಕಿವಿಗೊಡದೆ ತಮ್ಮಷ್ಟಕ್ಕೇ ತಾವು ಆಡುವುದರಲ್ಲಿ ಮಗ್ನರಾಗಿದ್ದರು. ನಿಜವಾದ ಪ್ರತಿಭಾವಂತರಲ್ಲಿ ಇರಬೇಕಾದ ಲಕ್ಷಣವದು. ಈಗ ನಿವೃತ್ತಿ ಪ್ರಕಟಿಸಿ ತೆರೆಮರೆಯಲ್ಲಿ ಸೇವೆ ಸಲ್ಲಿಸಲು ಅವರು ಸನ್ನದ್ಧರಾಗಿದ್ದಾರೆ. ಅವರ ನಿವೃತ್ತಿ ಜೀವನ ಮುಂಬರುವ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಿ ಸ್ಫೂರ್ತಿ ತುಂಬುವಂತಾಗಲಿ.
-ಎಚ್.ಆರ್.ವಸ್ತ್ರದ, ಧಾರವಾಡ

'ಜಗುಲಿ'ಯಲ್ಲಿ ಈ ಸಲದ ವಿಷಯ 'ಖಾಸಗಿ ಬಸ್ ಪ್ರಯಾಣ ಸುರಕ್ಷಿತವೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement