ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತಂತಾನೇ ಒಳಗೆ ಸೇರಿಕೊಳ್ಳುವ ವಾಯು!

Srinivasa Murthy VN
Updated On : 29 Oct 2013, 12:32 pm

ಬಹುಶಃ ನಿಮಗೆ ಈಗಾಗಲೇ ಗ್ಯಾಸ್ ಸಮಸ್ಯೆ ಶುರುವಾಗುವುದು ಹೇಗೆ ಎಂದು ಅರ್ಥವಾಗಿರಲಿಕ್ಕೆ ಸಾಕು. ಸರಳವಾಗಿ ಹೇಳುವುದಿದ್ದರೆ ಬಾಯಿಯಿಂದ ಹಿಡಿದು ಗುದದ್ವಾರದವರೆಗಿನ ಜೀರ್ಣಾಂಗ ನಾಳಗಳಲ್ಲಿ ತುಂಬಿಕೊಳ್ಳುವ ವಾಯು. ಗ್ಯಾಸ್ ಸಮಸ್ಯೆ ಹೊಟ್ಟೆ ಉಬ್ಬರ, ತೇಗುಗಳ ಮೂಲಕವೂ ವ್ಯಕ್ತವಾಗುತ್ತದೆ. ಸಮಸ್ಯೆ ತೀವ್ರವಾಗಿದ್ದಾಗ ವಿಸರ್ಜನಾಂಗದ ಮೂಲಕ ಈ ವಾಯು ಹೊರಹೋಗುತ್ತದೆ. ರಾಸಾಯನಿಕ ಸಂಯೋಜನೆ ಬಗ್ಗೆ ಹೇಳುವುದಾದರೆ ನಮ್ಮ ದೇಹದಲ್ಲೇ ಉತ್ಪತ್ತಿಯಾಗುವ ಅನಿಲದಲ್ಲಿರುವ ಪ್ರಮುಖ ಅಂಶ ಎಂದರೆ ಇಂಗಾಲದ ಡೈ ಆಕ್ಸೈಡ್, ಆಮ್ಲಜನಕ, ಸಾರಜನಕ, ಜಲಜನಕ ಮತ್ತು ಕೆಲವೊಮ್ಮೆ ಮಿಥೇನ್. ನಿರ್ದಿಷ್ಟವಾಗಿ ಗುದದ್ವಾರದ ಮೂಲಕ ಹೊರಹೋಗುವ ವಾಯುವಿನಲ್ಲಿ ಸ್ವಲ್ಪಮಟ್ಟಿನ ಗಂಧಕ ಕೂಡ ಸೇರಿರುತ್ತದೆ.
ಆಹಾರದ ಬಗ್ಗೆ ಮಾತನಾಡುವವರು ಗ್ಯಾಸ್ಟ್ರಿಕ್ ಸಮಸ್ಯೆ ಬಗ್ಗೆ ಇಷ್ಟೆಲ್ಲ ಏಕೆ ಹೇಳುತ್ತಿದ್ದಾರೆ ಎಂದುಕೊಳ್ಳಬೇಡಿ. ಈ ತೊಂದರೆಯೂ ಶುರುವಾಗುವುದೇ ಆಹಾರದಿಂದ. ವಾಯು ಉತ್ಪತ್ತಿಯಾಗುವುದು ಮತ್ತು ಹೊರ ಹೋಗುವುದು ಪ್ರತಿ ವ್ಯಕ್ತಿಯಲ್ಲಿಯೂ ನಡೆಯುವ ಸಾಮಾನ್ಯ ಕ್ರಿಯೆ. ಕೆಲವರಲ್ಲಿ ಉತ್ಪಾದನೆ ಜಾಸ್ತಿಯಾಗಿ, ಹೊರ ಹೋಗುವುದು ಕಷ್ಟವಾಗುತ್ತದೆ. ವಾಯು ಸಮಸ್ಯೆ ತೀವ್ರಗೊಳ್ಳಲು ಕರುಳಿನ ಭಾಗದಲ್ಲಿರುವ ಬ್ಯಾಕ್ಟೀರಿಯಾಗಳು ಕಾರಣ.
ನಿಮಗೆ ಇನ್ನೊಂದು ಕುತೂಹಲದ ಸಂಗತಿ ಹೇಳಬೇಕು. ಪ್ರತಿಯೊಬ್ಬರೂ ಏನನ್ನಾದರೂ ತಿನ್ನುವಾಗ ಅಥವಾ ಕುಡಿಯುವಾಗ ಸ್ವಲ್ಪ ಪ್ರಮಾಣದ ವಾಯುವನ್ನೂ ನುಂಗುತ್ತಾರೆ. ಆದರೆ ತಿನ್ನುವುದು ಅಥವಾ ಕುಡಿಯುವುದನ್ನು ಅತಿವೇಗದಲ್ಲಿ ಮಾಡುವವರು, ಧೂಮಪಾನ ಮಾಡುವವರು, ಕಾರ್ಬೊನೇಟೆಡ್ ಪೇಯಗಳನ್ನು ಜಾಸ್ತಿ ಸೇವಿಸುವವರು, ಸಡಿಲ ದಂತಪಂಕ್ತಿಗಳನ್ನು ಹೊಂದಿರುವವರಲ್ಲಿ ತಿನ್ನುವಾಗ, ಕುಡಿಯುವಾಗ ಒಳಸೇರುವ ಗ್ಯಾಸ್ ಪ್ರಮಾಣ ಹೆಚ್ಚು. ನಿಧಾನವಾಗಿ ತಿನ್ನಬೇಕು ಎಂದು ನಮ್ಮ ಹಿರಿಯರು ಏಕೆ ಹೇಳುತ್ತಿದ್ದರು ಎನ್ನುವುದು ಅರ್ಥವಾಯಿತಲ್ಲ? ಜಪಾನ್‌ನಲ್ಲಿ ಈಗಲೂ ಮಕ್ಕಳಿಗೆ ತಿನ್ನಲು, ಕುಡಿಯಲು ಅವಸರ ಮಾಡುವುದಿಲ್ಲ; ಬದಲಾಗಿ ನಿಧಾನವಾಗಿ ಅಗಿದು ತಿನ್ನುವುದನ್ನು ಕಲಿಸಿ, ಉತ್ತೇಜಿಸುತ್ತಾರೆ ಎಂದು ಕೇಳಿದ್ದೇನೆ. ಇರಲಿ. ಹೀಗೆ ಹೊಟ್ಟೆ ಸೇರುವ ವಾಯು, ಅಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳಿಂದ ಹೊರದಬ್ಬಲ್ಪಡುತ್ತದೆ. ಅಲ್ಲಿಂದ ಹೊರಬಿದ್ದದ್ದು ಸಣ್ಣಕರುಳಿನ ಭಾಗಕ್ಕೆ ಬರುತ್ತದೆ. ಸಣ್ಣಕರುಳು ಬಹುದೊಡ್ಡ ಪ್ರಮಾಣದಲ್ಲಿ ವಾಯುವನ್ನು ಹೀರಿಕೊಳ್ಳುತ್ತದೆ. ಆದಾಗ್ಯೂ ಉಳಿಯುವ ವಾಯು ದೊಡ್ಡಕರುಳಿಗೆ ಹೋಗುತ್ತದೆ ಮತ್ತು ಗುದದ್ವಾರದ ಮೂಲಕ ಹೊರಬೀಳುತ್ತದೆ. ಒಮ್ಮೊಮ್ಮೆ ಅಲ್ಪಪ್ರಮಾಣದ ವಾಯು ರಕ್ತನಾಳಗಳ ಮೂಲಕ ಶ್ವಾಸಕೋಶಗಳನ್ನು ಸೇರಿ, ಉಸಿರಾಟದ ಸಂದರ್ಭದಲ್ಲಿ ಹೊರಹೋಗುತ್ತದೆ.
ಆಧುನಿಕ ಜಗತ್ತು ಎದುರಿಸುತ್ತಿರುವ ಸಾಮಾನ್ಯ ಮತ್ತು ಅಷ್ಟೇ ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ ಗ್ಯಾಸ್ಟ್ರಿಕ್ ಕೂಡ ಒಂದು. ಆದ್ದರಿಂದ ಇಷ್ಟು ಸ್ಥೂಲವಾಗಿ ಹೇಳಬೇಕಾಯಿತು.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement