ವಿಶ್ವವಿಜೇತ ವಿವೇಕಾನಂದ!
'ಅಮೆರಿಕದ ಸಹೋದರ ಸಹೋದರಿಯರೆ!!! ಪ್ರಪಂಚದ ಅತ್ಯಂತ ಪ್ರಾಚೀನವಾದ ಸನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಕಲ ಧರ್ಮಗಳ ಮಾತೆಯಾದ ಹಿಂದೂಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಜಗತ್ತಿಗೆ ಸಹಿಷ್ಣುತೆಯನ್ನು, ಸರ್ವಧರ್ಮ ಸ್ವೀಕಾರಭಾವವನ್ನು ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವು ಸರ್ವಮತ ಸಹಿಷ್ಣುತೆಯನ್ನು ಒಪ್ಪುತ್ತೇವಷ್ಟೇ ಅಲ್ಲದೆ, ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಪ್ರಪಂಚದ ಎಲ್ಲ ಧರ್ಮಗಳ ಎಲ್ಲ ರಾಷ್ಟ್ರಗಳ ಸಂಕಟಪೀಡಿತ ನಿರಾಶ್ರಿತರಿಗೆ ಆಶ್ರಯವನ್ನಿತ್ತ ರಾಷ್ಟ್ರಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು.
ಗುಂಪುಗಾರಿಕೆ, ಅತಿಯಾದ ಸ್ವಮತಾಭಿಮಾನ ಹಾಗೂ ಧರ್ಮಾಂಧತೆಗಳು ಬಹುಕಾಲದಿಂದ ಈ ಸುಂದರ ಪೃಥ್ವಿಯನ್ನು ಆಕ್ರಮಿಸಿಕೊಂಡಿವೆ. ಅವು ದೇಶದೇಶಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಈಗ ಅವುಗಳ ಅಂತ್ಯಕಾಲ ಸಮೀಪಿಸಿದೆ. ಈ ಸಮ್ಮೇಳನದಲ್ಲಿ ಬೆಳಗ್ಗೆ ಮೊಳಗಿದ ಘಂಟಾನಾದವು ಎಲ್ಲ ಮತಾಂಧತೆಗೆ ಮೃತ್ಯಘಾತವನ್ನೀಯುವುದೆಂದು ಆಶಿಸುತ್ತೇನೆ.'
ಅಮೆರಿಕದಲ್ಲಿ ಸಾಮಾನ್ಯ ಸನ್ಯಾಸಿಯಂತೆ ಅಲೆಯುತ್ತಿದ್ದ ಸ್ವಾಮೀಜಿ ಇಂದು ವಿಶ್ವವೇದಿಕೆಯಲ್ಲಿ ಜಗಚ್ಛಕ್ತಿಯಾಗಿ ವಿಜಯಪತಾಕೆಯನ್ನು ಹಾರಿಸಿದ ವಿಶ್ವವಿಜೇತರಾಗಿದ್ದಾರೆ. ಅವರ 'ಸೋದರ ಸೋದರಿಯರೇ!' ಸಂಬೋಧನೆಯೇ ಸಭಿಕರ ಹೃದಯಾಂತರಾಳದಲ್ಲಿ ಹುದುಗಿದ್ದ ಮಾನವಪ್ರೇಮವನ್ನು ಬಡಿದೆಬ್ಬಿಸಿತ್ತು. ಸ್ವಾಮೀಜಿ ಸಂದೇಶವನ್ನು ವಿಶ್ವ ವೇದಿಕೆಯ ಮೇಲೆ ಯಶಸ್ವಿಯಾಗಿ ಸಾರಿದರು!
- ಆನಂದ ಎಸ್.ಎನ್.
anandsn193@gmail.com