ಅಂಜದ ಹಾಡು
10 ವರ್ಷ ವಯಸ್ಸಿನ ಅಂಜನಾ, ಸೋನಿ ಟಿವಿ ನಡೆಸಿದ ಇಂಡಿಯನ್ ಐಡಾಲ್ ಜ್ಯೂನಿಯರ್ ಕಾಂಪಿಟೇಷನ್‌ನಲ್ಲಿ ಚಾಂಪಿಯನ್ ಆಗಿದ್ದಾಳೆ.
10 ವರ್ಷ ವಯಸ್ಸಿನ ಅಂಜನಾ, ಸೋನಿ ಟಿವಿ ನಡೆಸಿದ ಇಂಡಿಯನ್ ಐಡಾಲ್ ಜ್ಯೂನಿಯರ್ ಕಾಂಪಿಟೇಷನ್‌ನಲ್ಲಿ ಚಾಂಪಿಯನ್ ಆಗಿದ್ದಾಳೆ. ಈಕೆ ಬೆಂಗಳೂರಿನ ಹುಡುಗಿ.
'ಸರ್, ಇಸ್ಕೊ ಹಿಂದಿ ನಹೀ ಆತೀ. ಫಿರ್ ಭೀ ಇತ್ನಾ ಫೀಲಿಂಗ್ಸ್ ಕೇ ಸಾತ್ ಕೈಸೇ ಗಾತೇ ಹೋ' ಅಂತಾರೆ ಶ್ರೇಯಾ ಗೋಶಾಲ್. 'ಲಕ್ಷ್ಮೀಕಾಂತ್‌ಜೀ ಕೋ ಏ ಗಾನ ಬಹುತ್ ಪಸಂದ್ ಹೈ, ಇತ್ನಾ ಅಚ್ಛಾ ಗಾಯಾ ತುಮ್ನೆ' ಅಂತ ಪ್ಯಾರೇಲಾಲ್ ಉದ್ಗರಿಸಿದರು. 'ಯು ಡೋಂಟ್ ಕಾಪಿ ಎನಿಬಡಿ' ಅನ್ನುತ್ತಾ ಮೆಚ್ಚುವವರು ಕೆಲವರು.
10 ವರ್ಷ ವಯಸ್ಸಿನ ನಮ್ಮ ಬೆಂಗಳೂರಿನ ಅಂಜನಾ ಗೊತ್ತಲ್ಲಾ? ಇತ್ತೀಚೆಗೆ, ಸೋನಿ ಎಂಟರ್‌ಟೇನ್‌ಮೆಂಟ್ ಟಿವಿ ನಡೆಸಿದ ಇಂಡಿಯನ್ ಐಡಾಲ್ ಜ್ಯೂನಿಯರ್ ಕಾಂಪಿಟೇಷನ್‌ನಲ್ಲಿ 'ಇಕ್ ಪ್ಯಾರ್ ಕಾ ನಗಮಾ ಹೈ' ಹಾಡಿದಾಗ, ದಿಗ್ಗಜರು ಮೆಚ್ಚಿ ನುಡಿದ ಮಾತುಗಳಿವು. ಅಂಜನಾ, ಇಂಡಿಯನ್ ಐಡಾಲ್ ಜ್ಯೂನಿಯರ್ ಟ್ರೋಫಿ ಗೆದ್ದಿದ್ದು ನಮ್ಮೂರಿಗೆ ಹೆಮ್ಮೆಯ ಸಂಗತಿ.
ಚಾರ್ಟೆಡ್ ಅಕೌಂಟೆಂಟ್ ಅಪ್ಪ ಪದ್ಮನಾಭನ್ ಮತ್ತು ಅಮ್ಮ ಕಲ್ಯಾಣಿ ರಾಘವನ್‌ರ ಏಕೈಕ ಪುತ್ರಿ ಅಂಜನಾ ನಗರದ ಡೆಲ್ಲಿ ಪಬ್ಲಿಕ್ ಸ್ಕೂಲ್‌ನ 5ನೇ ತರಗತಿ ವಿದ್ಯಾರ್ಥಿನಿ. ಪೈಲೆಟ್ ಆಗುವ ಆಸೆ. ಅವಳ ಹೆಮ್ಮೆಯ ಅಪ್ಪ ಅವಳಿಗೆ ಹೇಳೋದು ಇಷ್ಟೆ- 'ನಮ್ರತೆಯಿಂದ ನಡೆದುಕೊಳ್ಳೋದನ್ನ ರೂಢಿ ಮಾಡ್ಕೋ' ಅಂತ. 'ನಾನು ಪ್ರತಿ ವಾರಾಂತ್ಯ ಅವಳ ಶಾಲೆಗೆ ಹೋಗಿ, ಆ ವಾರದ ಓದು ಮತ್ತು ಹೋಂವರ್ಕ್ ತಗೊಂಡು ಹೋಗ್ತಿದ್ದೆ. ಅವರ ಅಮ್ಮ ಹೋಂವರ್ಕ್ ಮಾಡಿಸಿ ಕಳಿಸ್ತಿದ್ರು. ಒಂಥರ ಒಳ್ಳೇ ಅನುಭವ' ಅಂತಾರೆ. ಅಂಜನಾಳ ಅಮ್ಮ 'ಈಗ ನಾವೆಲ್ಲಾ ಆಚೆ ಹೋದ್ರೆ ನೀವು ಅಂಜನಾ ಅಮ್ಮ ಅಲ್ವಾ ಅಂತಾರೆ. ಖುಷಿಯಾಗುತ್ತೆ. ಅಲ್ಲಿ ಅವ್ಳ ಜೊತೆ 4 ತಿಂಗಳು ಕಳೆದಿದ್ದು ತುಂಬಾ ಚೆನ್ನಾಗಿತ್ತು'. ಅಂಜನಾ ಜತೆ ಒಂದು ಚಿಟ್‌ಚಾಟ್ ನಿಮಗಾಗಿ.
ನಾನು 7 ವಯಸ್ಸಿನವಳಿದ್ದಾಗ ಹಾಡಲು ಕಲಿತೆ, ಒಂದು ವರ್ಷ ಅಖಿಲಾ ಭೂಪತಿಯವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತೆ. ಹಿಂದುಸ್ಥಾನಿ ಸಂಗೀತ ಕಲಿಯುವ ಆಸೆ ಇದೆ. ನನ್ನ ತಂದೆ ಹಿಂದಿ ಹಾಡು ಚೆನ್ನಾಗಿ ಹಾಡ್ತಾರೆ, ಅವ್ರು ಹಾಡೋದನ್ನ ಕೇಳ್ತಾ ಕಲ್ತು ನಾನು ಹಾಡ್ತಿದ್ದೆ. ನನ್ನ ಅಮ್ಮ, ನೀ ಚೆನ್ನಾಗಿ ಹಾಡ್ತೀಯ, ಈ ಸರ್ತಿ ಇಂಡಿಯನ್ ಐಡಾಲ್‌ನಲ್ಲಿ ಭಾಗವಹಿಸಬಾರದೇಕೆ ಅಂದ್ರು, ಬಂದೆ.
ನಿಂಗೆ ಹಿಂದಿ ಗೊತ್ತಿಲ್ಲ, ಆದ್ರೂ ಅಷ್ಟು ಅರ್ಥವತ್ತಾಗಿ ಹಾಡಲು ಹೇಗೆ ಸಾಧ್ಯವಾಯ್ತು?
ಅದು ಹಾಗೇ ಬರುತ್ತೆ! ಹಾಡಿನ ಲಿಂಕ್ಸ್ ಬಾಯಿ ಪಾಠ ಮಾಡ್ಕೊಂಡಿದ್ದೆ. ನಮ್ಮ ಟ್ರೈನರ್ಸ್ ಹೀಗಲ್ಲ ಹಾಗೆ ಅಂತ ತಿದ್ದಿ ಹೇಳಿ ಕೊಡ್ತಿದ್ರು. ಕಲಿತು ಹಾಡ್ತಿದ್ದೆ ಅಷ್ಟೆ.
ಸೆಲೆಬ್ರಿಟಿ ಆಗಿದೀಯ. ನಿನ್ನ ಜೊತೆ ಸ್ನೇಹಿತರ ನಡವಳಿಕೆಯಲ್ಲಿ ಬದಲಾವಣೆ ಆಗಿದ್ಯಾ?
ಚೇಂಜ್ ಅಂದ್ರೆ, ನನ್ನ ರಿಸೀವ್ ಮಾಡ್ಕೊಳಕ್ಕೆ ಎಲ್ರೂ ಆಸಕ್ತಿ ತೋರಿದ್ರು. ಅಲ್ಲಿಂದ ಬಂದ ಮೇಲೆ ಮೊದಲ ಬಾರಿ ಸ್ಕೂಲ್‌ಗೆ ಹೋದಾಗ ಕ್ಲಾಸ್ ರೂಂನಿಂದ ಬಗ್ಗಿ ಬಗ್ಗಿ ನೋಡ್ತಿದ್ರು. ಓಡಿ ಬಂದು ನನ್ನ ಆಟೋಗ್ರಾಫ್ ಕೊಡು ಅಂದ್ರು. ಅಷ್ಟೊಂದು ಜನರ ಪ್ರೀತಿ ವಿಶ್ವಾಸ ನೋಡಿ ತುಂಬಾ ಖುಷಿ ಆಯ್ತು. ಅವರಿಗೆ ನನ್ನ ಬಗ್ಗೆ ಹೆಮ್ಮೆಯಿತ್ತು.
ಟ್ರೋಫಿ ಗೆದ್ದ ಕ್ಷಣ ಹೇಗಿತ್ತು?
ಐ ವಾಸ್ ಶಾಕ್ಡ್! ನಂಜೊತೆ ಟಾಪ್ 4 ಕಂಟೆಸ್ಟೆಂಟ್ಸ್ ಅನ್ಮೋಲ್, ನಿರ್ವೇಶ್, ದೇವಾಂಜನ್- ಒಬ್ರಿಗಿಂತ ಒಬ್ರು ತುಂಬಾ ಚೆನ್ನಾಗಿ ಹಾಡ್ತಿದ್ರು. ಅವ್ರ ಜೊತೆ ಕಾಂಪಿಟ್ ಮಾಡಿ ಗೆದ್ದಾಗ 'ನಾನಾ' ಅಂತ ಶಾಕ್ ಆಯ್ತು. ಖುಷಿಯಾಯ್ತು.
ನೀನಿದನ್ನ ನಿರೀಕ್ಷಿಸಿದ್ಯಾ?
ಖಂಡಿತ ಇಲ್ಲ! ಅದರಲ್ಲೂ ಅಮಿತಾಭ್‌ಜೀ ಕೈಯಿಂದ ಟ್ರೋಫಿ ಪಡೀತೀನಿ ಅನ್ನೋದು ಇನ್ನೂ ಬಿಗ್ಗೆಸ್ಟ್ ಶಾಕ್.
ಸ್ಪರ್ಧಿಸುವಾಗ ಒತ್ತಡವನ್ನು ಹೇಗೆ ನಿಭಾಯಿಸಿದೆ?
ಟಫ್ ಕಾಂಪಿಟೇಷನ್ ಇತ್ತು. ಆದ್ರೆ ನಾನು ಗೆಲ್ಲಬೇಕು ಅವ್ಳು ಗೆಲ್ಲಬಾರ್ದು ಅಂತ ನೋಡ್ಲಿಲ್ಲ. ಶ್ರದ್ಧೆಯಿಂದ ಕಲ್ತು ಹಾಡ್ತಿದ್ದೆ. ದಟ್ಸ್ ಇಟ್! ನಾವೆಲ್ಲಾ ಫ್ರೆಂಡ್ಸ್, ಯಾರು ಗೆದ್ರೂ ಅದು ನಂಗೆ ಓಕೆ.
ನಿನ್ನ ಅಭ್ಯಾಸದ ಸೆಷೆನ್ಸ್ ಬಗ್ಗೆ?
ನಮ್ಮ ಟ್ರೈನರ್ಸ್ ಆದ ಆನಂದ್‌ಜೀ ಮತ್ತು ಅನೂಪ್‌ಜೀ ಒಡನೆ ಕಳೆದ ಕ್ಷಣಗಳು ಸೂಪರ್! ತಮಾಷೆಯಾಗಿ ಮಾತಾಡ್ತಿದ್ರು, ಸಕ್ಕತ್ ಮಸ್ತಿ, ಸಕ್ಕತ್ ಮಜಾ ಮಾಡ್ತಿದ್ವಿ.
ವೃತ್ತಿಪರ ಸಂಗೀತಗಾರರ ಜೊತೆ ಹಾಡಿದಾಗಿನ ಅನುಭವ?
ಓಹ್ ಫೆಂಟಾಸ್ಟಿಕ್! ಅಂತಹ ಮ್ಯೂಸಿಷಿಯನ್ಸ್ ಜೊತೆ ಹಾಡೋ ಅವಕಾಶ ಸಿಗತ್ತೆ ಅಂತ ಕಲ್ಪನೆ ಕೂಡಾ ಇರಲಿಲ್ಲ. ಜೀವನದಲ್ಲಿ ಮರೆಯಲಾಗದ ಅನುಭವ. ಶ್ರೇಯಾ ಗೋಶಾಲ್, ವಿಷಾಲ್, ಶೇಖರ್‌ರಂತಹ ಜಡ್ಜ್‌ಗಳ ಜೊತೆಗಿನ ಅನುಭವ, ಅವರು ಮೂರೂ ಜನ ತುಂಬಾ ಹಂಬಲ್! ಚಿಕ್ಕ ಮಕ್ಕಳ ಹಾಗೆ ನಮ್ಮ ಸಮಕ್ಕೂ ಆಡ್ತಿದ್ರು. ಪ್ರೀತಿಯಿಂದ ಮಾತಾಡ್ತಿದ್ರು.
ಪ್ರಾಕ್ಟೀಸ್ ಸಮಯದಲ್ಲಿ ನಿಮ್ಮ ವೇಳಾಪಟ್ಟಿ ಹೇಗಿತ್ತು?
ಬೆಳಗ್ಗೆ ಎದ್ದ ಕೂಡ್ಲೇ ಒಂದು ಗಂಟೆ ನಮ್ಮ ಪಾಡಿಗೆ ರಿಯಾಜ್ ಮಾಡ್ತಿದ್ವಿ. ತಿಂಡಿಯಾದ ಮೇಲೆ ನಮ್ಮ ಟ್ರೈನರ್ಸ್ ಜೊತೆ ಪ್ರಾಕ್ಟೀಸ್. ಊಟದ ಬಳಿಕ ನಮಗಾಗಿ ನಿಗದಿಪಡಿಸಿದ ಹಾಡನ್ನು ಪ್ಲೇ ಮಾಡಿ ಕೇಳಿಸ್ತಿದ್ರು. ಆಮೇಲೆ ಕಲಿಸುತ್ತಿದ್ರು. ಪ್ರಾಕ್ಟೀಸ್ ಮುಗಿದ ಮೇಲೆ ಸಂಜೆ ನಾವೆಲ್ಲಾ ಫ್ರೀ, ಪ್ಲೇ ರೂಂಗೆ ಹೋಗಿ ಕೇರಂ, ಗೇಮ್ಸ್ ಆಡ್ತಿದ್ವಿ.
ನಿಮ್ಮ ಜಡ್ಜಸ್‌ನಲ್ಲಿ ನೀನು ಅತಿಯಾಗಿ ಮೆಚ್ಚಿಕೊಂಡ ಗುಣ?
ಶ್ರೇಯಾ ಗೋಶಾಲ್ ಜೀ ಒಂದು ಮಗು ಥರಾ, ಅವ್ರ ವಾಯ್ಸ್ ನಂಗೆ ತುಂಬಾ ಇಷ್ಟ. ಹಾಡು ಇಷ್ಟ. ಆದ್ರೆ ಫಯರ್ ಬ್ರಿಗೇಡ್ ಪರ್ಫಾರ್ಮೆನ್ಸ್ ಅಂತಿದ್ರು. ಇನ್ನು ವಿಶಾಲ್ ಜೀ, ಥೋಡ್ ಧಾಡ್ ಪರ್ಫಾರ್ಮೆನ್ಸ್ ಹಾಹಾಹಾ ಅಂತ ನಗ್ತಿದ್ರು. ಶೇಖರ್‌ಜೀ ಮೆಲುಮಾತಿನವರು. ಅವರೆಲ್ಲರ ಸರಳ ಸ್ವಭಾವ ನಂಗೆ ಇಷ್ಟ.
ನಿನ್ನ ಹಾಬೀಸ್?
ಸ್ವಿಮ್ಮಿಂಗ್, ಬ್ಯಾಡ್ಮಿಂಟನ್, ಟೆನ್ನಿಸ್, ಬಾಸ್ಕೆಟ್‌ಬಾಲ್ ಎಲ್ಲಾನೂ ತುಂಬಾ ಇಷ್ಟ.
- ಗೀತಾ ಶ್ರೀನಿವಾಸನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.