ಬೆಳಕು ಬತ್ತಿ
ವರ್ಣಮಯ ಹಾಗೂ ವೈವಿಧ್ಯಮಯ ಮೋಂಬತ್ತಿಗಳನ್ನು ತಯಾರಿಸುವುದೇ ಶ್ರೀನಿವಾಸ್ ಪ್ರಸಾದ್ ವೈಶಿಷ್ಟ್ಯ. ಕೊಡಗಿನ ಗ್ರಾಮೀಣ ಪರಿಸರದಲ್ಲಿರುವ ಇವರ ತಯಾರಿಯ ಮೋಂಬತ್ತಿಗಳಿಗೆ ದೇಶವ್ಯಾಪಿ ಬೇಡಿಕೆ.
ವರ್ಣಮಯ ಹಾಗೂ ವೈವಿಧ್ಯಮಯ ಮೋಂಬತ್ತಿಗಳನ್ನು ತಯಾರಿಸುವುದೇ ಶ್ರೀನಿವಾಸ್ ಪ್ರಸಾದ್ ವೈಶಿಷ್ಟ್ಯ. ಕೊಡಗಿನ ಗ್ರಾಮೀಣ ಪರಿಸರದಲ್ಲಿರುವ ಇವರ ತಯಾರಿಯ ಮೋಂಬತ್ತಿಗಳಿಗೆ ದೇಶವ್ಯಾಪಿ ಬೇಡಿಕೆ.
ದೀಪಾವಳಿ ಸಂದರ್ಭ ವೈವಿಧ್ಯಮಯ ಕ್ಯಾಂಡಲ್‌ಗಳಿಗೆ ಎಲ್ಲಿಲ್ಲದ ಬೇಡಿಕೆ. ಈ ಹಬ್ಬಕ್ಕೆ ಕೆಲವೇ ದಿನಗಳ ಮುನ್ನ ಕೊಡಗು ಜಿಲ್ಲೆಯ ಮನೆಯೊಂದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೆಳಕಿನ ದೀಪಗಳ ತಯಾರಿ. ಒಂದಲ್ಲ ಎರಡಲ್ಲ, ಮೂವತ್ತು ರೀತಿಯ ಕ್ಯಾಂಡಲ್‌ಗಳು ಇಲ್ಲಿ ರೂಪುಗೊಳ್ಳುತ್ತವೆ.
ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಬಳಿಯ ಕೈಕೇರಿಯಲ್ಲಿ ಪ್ರಸಾದ್ ವ್ಯಾಕ್ಸ್ ಕ್ರಿಯೇಷನ್ ಹೆಸರಿನ ಕ್ಯಾಂಡಲ್ ಮ್ಯೂಸಿಯಂ ಮತ್ತು ಕ್ಯಾಂಡಲ್ ಗುಡಿಕೈಗಾರಿಕೆ ಶ್ರೀನಿವಾಸ್ ಪ್ರಸಾದ್ ಕೈಹಿಡಿದಿದ್ದು ಮನೆ ಉದ್ಯಮದಲ್ಲಿ ಯಶಸ್ಸು ಸಾಧಿಸಿದ್ದಾರೆ.
ವರ್ಣಮಯ ಹಾಗೂ ವೈವಿಧ್ಯಮಯ ಮೋಂಬತ್ತಿಗಳನ್ನು ತಯಾರಿಸುವುದೇ ಶ್ರೀನಿವಾಸ್ ಪ್ರಸಾದ್ ವೈಶಿಷ್ಟ್ಯ. ಇವರು ಕುಟುಂಬ ಸಹಿತ ರೂಪುಗೊಳಿಸಿದ ಕ್ಯಾಂಡಲ್‌ಗಳಲ್ಲಿ ವಿಧವಿಧ ಆಕಾರಗಳಿವೆ. ಬೊಂಬೆಗಳು, ಕಪ್‌ಗಳು, ತೇಲುವ ಕ್ಯಾಂಡಲ್‌ಗಳು, ಪರಿಮಳ ಸೂಸುವ ಕ್ಯಾಂಡಲ್, ತೆರೆದೊಡನೆ ಸಂಗೀತದ ನಿನಾದ ಹೊಮ್ಮಿಸುವ ಕ್ಯಾಂಡಲ್, ಕೊಡಗಿಗೆ ಬರುವ ಪ್ರವಾಸಿಗರಿಗಾಗಿಯೇ ವಿಶೇಷವಾಗಿ ಸಿದ್ಧಗೊಳಿಸಿದ ದುಬಾರೆಯ ಆನೆಗಳ ಕ್ಯಾಂಡಲ್... ಹೀಗೆ.
ಚಿಕ್ಕಮಕ್ಕಳಿಂದ ಮೊದಲ್ಗೊಂಡು ದೊಡ್ಡವರಿಗೂ ಆಕರ್ಷಕವಾಗಬಲ್ಲ ಕ್ಯಾಂಡಲ್ ತಯಾರಿಕೆಯಲ್ಲಿ ಶ್ರೀನಿವಾಸ್ ನಿಸ್ಸೀಮರು. ಅವರು ರೂಪಿಸುವ ವಿಶಿಷ್ಟ, ನವನವೀನ ಕ್ಯಾಂಡಲ್‌ಗಳಿಗೆ ದೇಶವ್ಯಾಪಿ ಬೇಡಿಕೆ. ದಿಲ್ಲಿ, ಚೆನ್ನೈ, ಬೆಂಗಳೂರಿಗೆ ಕೊಡಗಿನ ಕ್ಯಾಂಡಲ್‌ಗಳು ಸಾವಿರಾರು ಸಂಖ್ಯೆಯಲ್ಲಿ ವಿತರಣೆಯಾಗುತ್ತಿವೆ. ಕೊಡಗಿಗೆ ಬರುವ ಪ್ರವಾಸಿಗರೂ ಈ ಕ್ಯಾಂಡಲ್‌ಗಳನ್ನು ಕೊಡಗಿನ ನೆನಪಾಗಿ ಕೊಂಡೊಯ್ಯುತ್ತಿದ್ದಾರೆ.
ಕೊಡಗಿನ ರೆಸಾರ್ಟ್‌ಗಳಲ್ಲಿ, ಹೋಂಸ್ಟೇಗಳಲ್ಲಿಯೂ ಪ್ರಸಾದ್ ರೂಪಿಸಿದ ಅಲಂಕಾರಿಕ ಕ್ಯಾಂಡಲ್‌ಗಳು ಬೆಳಕು ತೋರಿವೆ. ಕೊಡಗಿನಲ್ಲಿ ಹೇರಳವಾಗಿ ಸಿಗುವ ಕಾಫಿ ರೆಂಬೆಗಳನ್ನು ಬಳಸಿ ಕ್ಯಾಂಡಲ್ ಸ್ಟ್ಯಾಂಡ್‌ಗಳ ನಾನಾ ಮಾದರಿಗಳನ್ನೂ ಪ್ರಸಾದ್ ತಯಾರಿಸಿದ್ದಾರೆ. ಗೋಣಿಕೊಪ್ಪಲಿನಂಥ ಗ್ರಾಮೀಣ ಭಾಗದಲ್ಲಿ ಕ್ಯಾಂಡಲ್ ಮ್ಯೂಸಿಯಂ ಮಾಡುವ ಕನಸು ಪ್ರಸಾದ್‌ರದು. ಹೊಸ ಅನ್ವೇಷಣೆಯತ್ತ ಮುಖ ಮಾಡಿರುವ ಶ್ರೀನಿವಾಸ್ ಅವರ ಪ್ರಯೋಗಗಳ ಹಿಂದೆ ಪತ್ನಿ ಸುನೀತಾ ಮತ್ತು ಮಗಳು ಕಾವ್ಯ ಬೆಂಬಲವಿದೆ. ವರ್ಷದ ಬಹುಪಾಲು ಮಳೆಗಾಲವಾಗಿ, ಕರೆಂಟ್ ಇಲ್ಲದಿರೋದರಿಂದ ಕೊಡಗಿನವರಿಗೆ ಕ್ಯಾಂಡಲ್ ಬೇಕೇ ಬೇಕು. ಹೀಗಾಗಿಯೇ ನಾನು ಕೊಡಗಿನಲ್ಲಿ ಕ್ಯಾಂಡಲ್ ಉದ್ಯಮದಲ್ಲಿ ಮುಂದುವರಿದೆ ಎಂದು ಟ್ರೇಡ್ ಸೀಕ್ರೆಟ್ ಹೇಳುತ್ತಾರೆ ಶ್ರೀನಿವಾಸ್. ಸಂಪರ್ಕ: 9945759047.
- ಅನಿಲ್ ಎಚ್.ಟಿ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.