ಅನಿರೀಕ್ಷಿತ ಭೇಟಿಯ ಅನುಭವಕ್ಕಿಲ್ಲ ಸಾಟಿ
ಸ್ವಾಮಿ ವಿವೇಕಾನಂದರು ಪೋರ್‌ಬಂದರ್‌ನಲ್ಲಿದ್ದಾಗ ಸ್ವಾಮಿ ತ್ರಿಗುಣಾತೀತಾನಂದರು ಯಾತ್ರಾಸ್ಥಳಗಳನ್ನು ಸಂದರ್ಶಿಸುತ್ತ ಅಲ್ಲಿಗೆ ಬಂದರು. ಅವರೆಲ್ಲ ಪಾಕಿಸ್ತಾನದ ಹಿಂಗಲಾಜ್‌ಗೆ ಯಾತ್ರೆ ಹೋಗಬೇಕಾಗಿತ್ತು. ಆದರೆ ದಾರಿಖರ್ಚಿಗೆ ಅವರ ಬಳಿ ದುಡ್ಡಿರಲಿಲ್ಲ. ಆಗ ಅವರಲ್ಲೊಬ್ಬ ಸ್ವಾಮೀಜಿ ಬಗ್ಗೆ ತಿಳಿಸಿದ. ಅವರು ಮಾತ್ರ ದಿವಾನರಿಂದ ನಮಗೆ ಹಣದ ಸಹಾಯವಾಗುವಂತೆ ಮಾಡಬಲ್ಲರೆಂದ. ಎಲ್ಲರೂ ಅರಮನೆಯ ಕಡೆ ಹೊರಟರು.
ಅರಮನೆಯ ತಾರಸಿಯಿಂದ ಇವರೆಲ್ಲರನ್ನೂ ನೋಡಿದ ವಿವೇಕಾನಂದರು ತಟಸ್ಥ ಮುಖಭಾವ ಧರಿಸಿ ಕೆಳಗೆ ಬಂದರು. ತ್ರಿಗುಣಾತೀತಾನಂದರನ್ನು ಕಂಡು ಆನಂದವಾದರೂ ಗಂಭೀರ ಮುಖಭಾವದಿಂದ 'ನಾನು ಅಷ್ಟು ಹೇಳಿದ್ದರೂ ನನ್ನನ್ನು ಹಿಂಬಾಲಿಸುತ್ತಿದ್ದೀರಲ್ಲ, ಏಕೆ?' ಎಂದು ಗದರಿದರು. ತಬ್ಬಿಬ್ಬಾದ ತ್ರಿಗುಣಾತೀತಾನಂದರು 'ಇಲ್ಲ ಇಲ್ಲ, ನೀವಿಲ್ಲಿರುವುದರ ಕಲ್ಪನೆಯೇ ನಮಗಿರಲಿಲ್ಲ. ಹಿಂಗಲಾಜ್‌ಗೆ ಹೋಗಲು ದಾರಿಖರ್ಚಿಗೆ ಹಣ ಕೇಳುವುದಕ್ಕಾಗಿ ಇಲ್ಲಿಗೆ ಬಂದೆವು ಅಷ್ಟೆ' ಎಂದರು. 'ಸನ್ಯಾಸಿಗಳು ಹಣ ಬೇಡಬಾರದು, ತಾನಾಗಿ ಬಂದುದನ್ನು ಸ್ವೀಕರಿಸಬೇಕು' ಎಂದಾಗ, ತ್ರಿಗುಣಾತೀತಾನಂದರು ಸಪ್ಪೆ ಮುಖ ಹಾಕಿಕೊಂಡು ಅಲ್ಲಿಂದ ಹೊರಟರು.
ತಮ್ಮ ಪ್ರಿಯ ಗುರುಭಾಯಿಯನ್ನು ಪರೀಕ್ಷಿಸಿದ ನಂತರ ಸ್ವಾಮೀಜಿ ದಿವಾನರೊಂದಿಗೆ ಮಾತನಾಡಿ, ಅವರೆಲ್ಲರನ್ನೂ ಹಿಂಗಲಾಜ್‌ಗೆ ಕಳುಹಿಸಲು ಏರ್ಪಾಟು ಮಾಡಿ ಬೀಳ್ಕೊಟ್ಟರು.
-ಆನಂದ ಎಸ್.ಎನ್.
anandsn193@gmail.com