ಒಬ್ಬಳೇ ಇದ್ದೇನೆ
ಕಳ್ಳಪ್ರಣಯದ ಪ್ರಕರಣಗಳು ಇಂದಿನದೇನೂ ಅಲ್ಲ. ಅವು ಎಂದಿನಿಂದಲೂ ಇವೆ. ಕಾಳಿದಾಸನ ನಾಟಕಗಳಲ್ಲೂ ಅವು ಬರುತ್ತವೆ. ಅಂದ ಮೇಲೆ ಭರ್ತೃಹರಿಯಂಥ 'ಪೋಲಿ ಕವಿ'ಯ ಪಾಡೇನು? ಕಳ್ಳಬೇಟಕ್ಕೆಳಸುವ ಗೃಹಿಣಿಯೊಬ್ಬಳ ಚಿತ್ರಣವನ್ನು ಆತ ಕಟ್ಟಿಕೊಟ್ಟಿರುವುದು ಹೀಗೆ.
ವಾಣಿಜ್ಯೇನ ಗತಃ ಸ ಮೇ ಗೃಹಪತಿರ್ವಾರ್ತಾಪಿ ನ ಶ್ರೂಯತೇ
ಪ್ರಾತಸ್ತಜ್ಜನನೀ ಪ್ರಸೂತತನಯಾ ಜಾಮಾತೃಗೇಹಂ ಗತಾ
ಬಾಲಾಹಂ ನವಯವ್ವನಾ ನಿಶಿ ಕಥಂ ಸ್ಥಾತವ್ಯಮೇಕಾಕಿನೀ
ಸಾಯಂ ಸಂಪ್ರತಿ ವರ್ತತೇ ಪಥಿಕ ಹೇ ಸ್ಥಾನಾಂತರಂ ಗಮ್ಯತಾಮ್
ತರುಣ ದಾರಿಹೋಕನೊಬ್ಬ ಸಂಜೆ ಹೊತ್ತಿಗೆ ಒಂದು ಮನೆಯನ್ನು ಸಮೀಪಿಸಿದ್ದಾನೆ. ಆಲ್ಲಿರುವ ಗೃಹಿಣಿಯೋ ಚತುರೆ. ಹೇಳುತ್ತಾಳೆ- 'ನನ್ನ ಗಂಡ ವ್ಯಾಪಾರ ವ್ಯವಹಾರದ ನಿಮಿತ್ತ ಎಲ್ಲೋ ದೂರ ಹೋಗಿದ್ದಾನೆ. ಅತನ ಸುದ್ದಿಯೇ ಇಲ್ಲದೆ ತುಂಬಾ ಸಮಯವಾಯಿತು. ನನ್ನ ಅತ್ತೆ, ಆಕೆಯ ಮಗಳ ಹೆರಿಗೆ ಮಾಡಿಸಲು ಬೀಗರ ಮನೆಗೆ ಹೋಗಿದ್ದಾರೆ. ಈಗಾಗಲೇ ಸಂಜೆಯಾಗುತ್ತಿದೆ. ನಾನಿನ್ನೂ ಚಿಕ್ಕವಳು. ನನ್ನ ಯವ್ವನ ಉಕ್ಕುತ್ತಿದೆ. ಈ ಮನೆಯಲ್ಲಿ ನನ್ನನ್ನು ಬಿಟ್ಟರೆ ಬೇರ್ಯಾರೂ ಇಲ್ಲ. ಅದೂ ಇಡೀ ರಾತ್ರಿ! ನಾನು ಹೇಗೆ ನಿನ್ನನ್ನು ಒಳಕ್ಕೆ ಕರೆಯಲಿ ಹೇಳು? ನೀನೇ ಬೇರೆ ಕಡೆ ಹೋಗಿದ್ದರೆ ಚೆನ್ನಾಗಿತ್ತು!'
ತರುಣಿ ಹೇಳುತ್ತಿರುವ ಮಾತುಗಳೂ ಅದು ಸೂಚಿಸುತ್ತಿರುವ ಅರ್ಥಗಳೂ ಸಂಪೂರ್ಣ ಭಿನ್ನವಾಗಿವೆ ಎಂಬುದನ್ನು ಗಮನಿಸಿ. ದೂರ ಹೋಗು ಎನ್ನುತ್ತಲೇ ತನ್ನ ಮನೆಯಲ್ಲೇ ಆತನಿಗೆ ಹಾಸಿಗೆ ಏರ್ಪಾಡು ಮಾಡಿದಂತಿದೆ ಈಕೆ! ಎಂಥ ಪ್ರಳಯಾಂತಕಿ ಅಲ್ಲವೆ?
- ಹರಿಹರ