ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಗೀಜಗ ಸೋಜಿಗ

ಗುಲ್ಬರ್ಗದ ಲಕ್ಷ್ಮೀನಾರಾಯಣ ನಗರದಲ್ಲಿರುವ ಹಿಟ್ಟಿನ ಗಿರಣಿ ಮಾಲೀಕ, ಮಣ್ಣೂರು ಮೂಲದ ಮಹಿಪತಿ ವೈದ್ಯರ ಮನೆಯಂಗಳ ಗೀಜಗನ ಗೂಡುಗಳ ಗ್ಯಾಲರಿ...

Srinivasa Murthy VN
Updated On : 11 Sept 2013, 7:29 am

ನೀರು- ನೆರಳಿಲ್ಲದ ಗುಲ್ಬರ್ಗದಲ್ಲೇನಿದೆ ಎಂದು ಕೇಳುವವರಿಗೆ ನೂರಾರು ಸಿದ್ಧ ಉತ್ತರಗಳಿವೆ. ಅದರಲ್ಲಿ ಒಂದು ಈ ಗೀಜಗನ ಗೂಡುಗಳು! ಇಲ್ಲಿನ ಲಕ್ಷ್ಮೀನಾರಾಯಣ ನಗರದಲ್ಲಿರುವ ಹಿಟ್ಟಿನ ಗಿರಣಿ ಮಾಲೀಕ, ಮಣ್ಣೂರು ಮೂಲದ ಮಹಿಪತಿ ವೈದ್ಯರ ಮನೆಂಗಳ ಈ ಗೂಡುಗಳ ಗ್ಯಾಲರಿ. ಇಲ್ಲಿರುವ ಪುಟ್ಟ ಸೈಟಿನಲ್ಲಿ ಗಿಡ- ಮರ ನೆಟ್ಟು ಪೋಷಿಸಿ ಗೀಜಗನಿಗೆ ಜಾಗ ಮಾಡಿಕೊಟ್ಟಿದ್ದಾರೆ ಇವರು. ಈ ಹಸಿರಿನ ಕಾರಣಕ್ಕಾಗಿಯೇ ಇವು ಹತ್ತಾರು ವರ್ಷದಿಂದ ಇಲ್ಲೇ ನಿರ್ಭಯವಾಗಿ ನೆಲೆಯೂರಿವೆ.
ಜೂನ್ ಆರಂಭದಲ್ಲಿ ಇಲ್ಲಿ ಗೀಜಗಗಳ ಚಿಲಿಪಿಲಿ ಕೇಳುತ್ತವೆ. ವಾರದೊಳಗೆ 40- 50 ಗೂಡುಗಳನ್ನು ನಿರ್ಮಿಸಿ ಸಂಸಾರ ಹೂಡುತ್ತವೆ. ಹೇರಳ ಆಹಾರ, ಗೂಡು ಕಟ್ಟಲು ಕಚ್ಚಾ ಸಾಮಗ್ರಿ, ನೀರು, ಸುರಕ್ಷತೆ ಇರುವಂಥ ಸ್ಥಳವನ್ನೇ ಗೀಜಗ ಸಂಸಾರ ಹೂಡಲು ಆಯ್ಕೆ ಮಾಡುತ್ತದೆ. ಮಹಿಪತಿಯವರ ಮನೆಯಂಗಳದಲ್ಲಿ ಇವುಗಳಿಗೆ ಸಕಲ ವ್ಯವಸ್ಥೆಯೇ ಇದೆ. ತೆಂಗಿನ ಗರಿಕೆಗಳಿಂದ 8ರಿಂದ 10 ದಿನದೊಳಗೆ ಗೂಡು ಹೆಣೆಯುತ್ತವೆ ಇವು. 6 ತಿಂಗಳು ಇಲ್ಲೇ ವಾಸವಿದ್ದು, ವಾಗಿದ್ದು, ಮೊಟ್ಟೆ ಇಟ್ಟು ಸಂಸಾರ ಹರಡುತ್ತವೆ. ಶ್ರಾವಣ- ಭಾದ್ರಪದದ ನಂತರ ಕಾಳುಕಡ್ಡಿಗಾಗಿ ಬೇರೆಡೆ ಹಾರುತ್ತವೆ. ಇಲ್ಲಿ ಗೀಜಗಗಳೂ ಇವರ ಮನೆಯ ಸದಸ್ಯರು! ಮಹಿಪತಿ ದಂಪತಿಗೆ ಇವುಗಳೆಂದರೆ ಎಲ್ಲಿಲ್ಲದ ಪ್ರೇಮ.
ಈ ಗೂಡುಗಳು ಕಲಾತ್ಮಕತೆಗೆ ಕನ್ನಡಿ. ಯಾವ ಆರ್ಕಿಟೆಕ್ಟ್‌ಗೂ ಕಮ್ಮಿ ಇಲ್ಲದಂತೆ ಮನೆ ಕಟ್ಟುವ ಈ ಹಕ್ಕಿ, ವಿನ್ಯಾಸದಲ್ಲಿ ಯಾವುದೇ ರಾಜಿಯನ್ನು ಅಪ್ಪಿಕೊಳ್ಳದು. ಎಂಜಿನಿಯರಿಂಗ್ ಕೌಶಲ್ಯ, ಸೂಕ್ಷ್ಮತೆ, ಅಳತೆ- ಆಕಾರ, ನಯ- ನಾಜೂಕುತನ... ಹೀಗೆ ಯಾವುದರಲ್ಲೂ ಕೊಂಕಿಲ್ಲದಂತೆ ಎಳೆಗಳಿಂದಲೇ ಗೂಡು ನೇಯುತ್ತದೆ ಇದು. ಉದ್ದನೆಯ ಕೊಳವೆ ಆಕಾರದ ರಚನೆ, ನಡುವೆ ಗೋಲಾಕಾರ, ಎರಡು ರಂಧ್ರಗಳ ಸುಂದರ ಗೂಡು ಮೊದಲ ನೋಟದಲ್ಲೇ ಸೂಚಿಗಲ್ಲಿನಂತೆ ಸೆಳೆಯುತ್ತದೆ. ಗೀಜಗ ಸುರಕ್ಷತೆ ವಿಚಾರದಲ್ಲೂ ಅಷ್ಟೇ ಜಾಣ. ಯಾರ ಕೈಗೆಟುಕದಂತೆ, ದಾಳಿಗಳಿಗೂ ಅವಕಾಶವಿರದಂತೆ, ಬಿರುಗಾಳಿಗೂ ತಪ್ಪಿಸಿಕೊಳ್ಳುವಂತೆ ನೆಲದಿಂದ ಸುರಕ್ಷಿತ ಅಂತರವನ್ನು ಹುಡುಕಿಯೇ ಗೂಡು ಕಟ್ಟುತ್ತದೆ. ಹಕ್ಕಿಯ ಮನೆಯನ್ನು ಸಂರಕ್ಷಿಸಿ ಪರಿಸರಪ್ರೇಮ ಮೆರೆಯುತ್ತಿರುವ ಮಹಿಪತಿ ವೈದ್ಯ- ರಂಜನಾ ದಂಪತಿಗೆ ನೀವೂ ಹಲೋ ಹೇಳಿ... ಮೊ. 9900527993.

- ಶೇಷಮೂರ್ತಿ ಅವಧಾನಿ
ಚಿತ್ರಗಳು: ಶರಣಬಸಪ್ಪ ಬೆಣ್ಣೂರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments