ಇಂಡಿಯನ್ ಇನ್ನಿಂಗ್ಸ್
ಒಂಚೂರು ರೋಚಕತೆ, ಸಾಹಸ, ಪ್ರತಿಭೆ ಪ್ರದರ್ಶನ, ಒಮ್ಮೆಗೆ ಹೆದರಿಸಿ ಬಿಡುವ ಟಾಸ್ಕ್‌ಗಳು, ಸ್ಥಳೀಯ ಸಂಸ್ಕೃತಿಯ ಸ್ಪರ್ಶ,...
ಇಂಡಿಯನ್ ಶೋನ ನೇರ ವೀಕ್ಷಣೆಗೆ ಬೆಂಗಳೂರಿನಿಂದ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮುಂದೆ 11 ಸ್ಪರ್ಧಿಗಳು ಒಂಟೆಗಳೊಂದಿಗೆ ಕಮಾಲ್ ಪ್ರದರ್ಶಿಸುತ್ತಿದ್ದರೆ, 13 ಕ್ಯಾಮೆರಾಗಳು ಅವರ ಪ್ರತಿ ಹೆಜ್ಜೆಯನ್ನೂ ಸೆರೆ ಹಿಡಿಯುತ್ತಿದ್ದವು...
ಒಂಚೂರು ರೋಚಕತೆ, ಸಾಹಸ, ಪ್ರತಿಭೆ ಪ್ರದರ್ಶನ, ಒಮ್ಮೆಗೆ ಹೆದರಿಸಿ ಬಿಡುವ ಟಾಸ್ಕ್‌ಗಳು, ಸ್ಥಳೀಯ ಸಂಸ್ಕೃತಿಯ ಸ್ಪರ್ಶ, ಎಲ್ಲಕ್ಕಿಂತ ಮುಖ್ಯವಾಗಿ ಮನರಂಜನೆ... ಇವುಗಳ ಒಟ್ಟು ಮಿಶ್ರಣ 'ಇಂಡಿಯನ್' ಎನ್ನುವ ರಿಯಾಲಿಟಿ ಶೋ. ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇದು, 'ಬಿಗ್‌ಬಾಸ್' ನಂತರದ ಬಿಗ್ ರಿಯಾಲಿಟಿ ಶೋ. ಈಗಾಗಲೇ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ.
ಕಾಶ್ಮಿರ, ಪಂಜಾಬ್‌ನ ಅಪರೂಪದ ಸ್ಥಳಗಳಲ್ಲಿ ಸಂಚರಿಸಿದ 'ಇಂಡಿಯನ್' ತಂಡ ಮರುಭೂಮಿಯ ನಾಡು, ಒಂಟೆಗಳ ಬೀಡು, ಕೋಟೆಗಳ ಅರಮನೆಯಂತಿರುವ ಜೋಧ್‌ಪುರ್ ಬಳಿ ಜೈಸಲ್ಮೇರ್‌ನಲ್ಲಿ ಬೀಡು ಬಿಟ್ಟಿತು. ಅದು ಜೈಸಲ್ಮೇರ್‌ನಿಂದ 50 ಕಿ.ಮೀ. ದೂರದಲ್ಲಿದೆ ಥಾರ್ ಮರುಭೂಮಿ. ನೆತ್ತಿ ಸುಡುವ ಬಿಸಿಲು, ಮರಳು ಮಿಶ್ರಿತ ಗಾಳಿ, ಸೂರ್ಯನ ಕಿರಣಗಳು ಮರಳಿಗೆ ಮಾತ್ರವಲ್ಲ ಸ್ಪರ್ಧಿಗಳ ಮೈಗೂ ಶಾಖದ ರುಚಿ ತೋರಿಸುತ್ತಿತ್ತು. ಈಟಿವಿ ಕಾರ್ಯಕ್ರಮದ ನಾನ್ ಫಿಕ್ಷನ್ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರ ಆ್ಯಕ್ಷನ್ ಕಟ್, ಅಕುಲ್ ಬಾಲಾಜಿಯ ಹರಿತ ನಿರೂಪಣೆ, ಆಧುನಿತಕತೆಯ ಯಾವುದೇ ಸಂಪರ್ಕಗಳಿಲ್ಲದ ಮರಳು ಗುಡ್ಡಗಳ ನಡುವೆ 'ಇಂಡಿಯನ್' ಟೀಮ್ ಟೆಂಟ್ ಹಾಕಿತ್ತು.
'ಇಂಡಿಯನ್' ಶೋನ ನೇರ ವೀಕ್ಷಣೆಗೆ ಬೆಂಗಳೂರಿನಿಂದ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮುಂದೆ 11 ಸ್ಪರ್ಧಿಗಳು ಒಂಟೆಗಳೊಂದಿಗೆ ಕಮಾಲ್ ಪ್ರದರ್ಶಿಸುತ್ತಿದ್ದರೆ, 13 ಕ್ಯಾಮೆರಾಗಳು ಅವರ ಪ್ರತಿ ಹೆಜ್ಜೆಯನ್ನೂ ಸೆರೆ ಹಿಡಿಯುತ್ತಿದ್ದವು. ತಾವೇ ಬೆಳಗ್ಗಿನಿಂದ ಕಲರ್‌ಫುಲ್ ಆಗಿ ಸಿಂಗರಿಸಿದ್ದ ಒಂಟೆಯ ಮುಂದೆ ಒಬ್ಬಳು ಬೆಲ್ಲಿ ಡ್ಯಾನ್ಸ್ ಮಾಡಿದರೆ, ಮತ್ತೊಬ್ಬಳು ಒಂಟೆ ಮೇಲೆ ಕೂತು ಮರುಭೂಮಿ ಸುತ್ತುತ್ತಾಳೆ, ಮತ್ತೊಂದೆಡೆ ಅದೇ ಒಂಟೆಗಳ ಜೊತೆ ಹುಡುಗ- ಹುಡುಗಿಯ ಫ್ಯಾಷನ್ ಶೋ, ಇದ್ದಕ್ಕಿದ್ದಂತೆ ಒಬ್ಬ ಒಂಟೆ ಮೇಲೆ ಜಂಪ್ ಮಾಡುತ್ತಾನೆ. ಇದರ ನಡುವೆ 'ಈಗ ಟಾಸ್ಕ್ ಏನಪ್ಪಾ ಅಂದ್ರೆ? ಯಾರು ಎಷ್ಟು ಚೆನ್ನಾಗಿ, ಎಷ್ಟು ಹೊತ್ತು ಒಂಟೆಗೆ ಲಿಪ್ ಕಿಸ್ ಕೊಡ್ತಾರೋ ನೋಡೋಣ' ಎಂದು ನಿರೂಪಕ ಹೇಳುತ್ತಿದ್ದಂತೆ ಸ್ಪರ್ಧಿಗಳಿಗೆ ಮಾತ್ರವಲ್ಲ, ಇಡೀ ಶೋ ಸೆರೆ ಹಿಡಿಯುತ್ತಿರುವ ಕ್ಯಾಮೆರಾಗಳಿಗೂ ಕುತೂಹಲ.
ಕಟ್... ಈಗ ಒಂದಿಷ್ಟು ಮಾತು
ಹೀಗೆ ಒಂಟೆಗಳ ಜೊತೆ 11 ಮಂದಿ 'ಇಂಡಿಯನ್' ಸ್ಪರ್ಧಿಗಳ ಆಟವನ್ನು ಕಣ್ತುಂಬಿಕೊಳ್ಳುತ್ತಿದ್ದ ಪತ್ರಕರ್ತರಿಗೆ ಮರಳುಗಾಡಿನ ವರ್ಮಾನಂತೆ ಕಂಡ ರಾಘವೇಂದ್ರ ಮಾತಿಗೆ ಸಿಕ್ಕರು. ಇವರ ನಂತರ ಶೋನ ಮೇನ್ ಪಿಲ್ಲರ್ ಅಕುಲ್ ಬಾಲಾಜಿ ಆಗಮಿಸಿದರು. ಕಾರ್ಯಕ್ರಮ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಆಗಲೇ ವಾಹಿನಿಯ ಕಾರ್ಯಕ್ರಮ ವಿಶೇಷತೆಗಳನ್ನು ವಿವರಿಸಿಯಾಗಿತ್ತು. 'ಈಗಾಗಲೇ 3 ರಾಜ್ಯಗಳಲ್ಲಿ ಸಂಚರಿಸಿದ್ದೇವೆ. ಪ್ರತಿ ಎಪಿಸೋಡ್‌ನಲ್ಲಿ ಬರುವ ಟಾಸ್ಕ್‌ಗಳು ಆಯಾ ರಾಜ್ಯದ ವಿಶೇಷತೆಗಳನ್ನು ಆಧರಿಸಿ ರೂಪಿಸಲಾಗಿದೆ. ಪ್ರತಿ ದಿನ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಶೋ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ' ಎನ್ನುವುದು ರಾಘವೇಂದ್ರ ಅವರ ಮಾತು. 'ಇದು ಕೇವಲ ಸ್ಪರ್ಧಿಗಳಿಗೆ ಮಾತ್ರವಲ್ಲ ಈ ಶೋ ಹಿಂದೆ ಕೆಲಸ ಮಾಡುವ 180 ಮಂದಿಗೂ ಸವಾಲಿನ ಕೆಲಸ. ನಾನಂತೂ ಈ ಶೋ ಮೂಲಕ ಅದ್ಭುತ ತಾಣಗಳನ್ನು ನೋಡಿದ್ದೇನೆ. ಲೇಹ್, ಲಡಾಕ್‌ನ ಚಿತ್ರೀಕರಣ ಅನುಭವಂತೂ ಹೇಳಕ್ಕಾಗಲ್ಲ. ಪ್ರತಿ ರಾಜ್ಯಕ್ಕೆ ಹೋದಾಗಲೆಲ್ಲ ಅಲ್ಲಿನ ವೇಷ ಧರಿಸುತ್ತಿದ್ದೇವೆ. ವೈಯಕ್ತಿವಾಗಿ ನನಗೆ ತುಂಬಾ ಮಜಾ ಕೊಡುತ್ತಿರುವ ಶೋ ಇದು. ರಾಜಸ್ಥಾನದಲ್ಲಿ ಬಿಸಿಲು, ಚಳಿ ಮತ್ತು ಗಾಳಿ ಜೊತೆ ಮರಳೂ ಭಯ ಹುಟ್ಟಿಸುತ್ತದೆ. ಆದರೂ ಯಾರೇನು ಹೆದರುತ್ತಿಲ್ಲ. ಇಲ್ಲಿ ನಿರೂಪಕನಾಗಿ ನನಗೆ ತುಂಬಾ ದಿನಗಳ ನಂತರ ಗೆಲುವು ಸಿಕ್ಕಿದೆ' ಎಂದರು ಅಕುಲ್.
ಹೊಸ ಮೆರುಗು
ಒಟ್ಟಾರೆ ಈಟಿವಿ ವಾಹಿನಿಯ ಕಾರ್ಯಕ್ರಮಗಳಿಗೆ ಹೊಸ ಮೆರುಗು ಕೊಟ್ಟಿದ್ದೇವೆ. ಎಲ್ಲ ವರ್ಗದ ಪ್ರೇಕ್ಷಕರನ್ನು ತಲುಪುವಂಥ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಶೋ 'ಇಂಡಿಯನ್'.
- ಪರಮೇಶ್ವರ್ ಗುಂಡ್ಕಲ್
7 ರಾಜ್ಯಗಳಲ್ಲಿ ಸಂಚಾರ
70 ಇಂಡಿಯನ್‌ನ ಒಟ್ಟು ಕಂತುಗಳು
180 ಒಟ್ಟು ಕೆಲಸಗಾರರು.
10 ಲಕ್ಷ ವಿಜೇತನಿಗೆ ಬಹುಮಾನ ಇಷ್ಟು ರುಪಾಯಿ
- ಆರ್. ಕೇಶವಮೂರ್ತಿ
ಚಿತ್ರಗಳು: ವಿನೋದ್ ಕುಮಾರ್