ಇವತ್ತೇ ಮಾಡೋಣ
ನಾಳೆ ಮಾಡಿದರಾಯಿತು ಬಿಡು- ಹಾಗಂತ ಸಾವಿರ ಸಲ ಅಂದುಕೊಂಡಿರುತ್ತೇವೆ. ಆ ನಾಳೆ ಎಂಬುದು ಯಾವತ್ತಾದರೂ ಬಂದಿದೆಯಾ? ಹಾಗೊಂದು ಪ್ರಶ್ನೆಯನ್ನು ಮನಸ್ಸಿಗೆ ಕೇಳಿ ನೋಡಿ. ಅದು ಗುಮ್ಮನ ಗುಸಕನಂತೆ ಕುಳಿತಿರುತ್ತದೆ.
ವಿಚಿತ್ರ ಅಂದರೆ, ನಮ್ಮಲ್ಲಿ ನೂರಾ ಎಂಟು ಕೆಟ್ಟ ಚಟಗಳಿರುತ್ತವೆ, ಹವ್ಯಾಸಗಳಿರುತ್ತವೆ. ಅವುಗಳನ್ನು ಮಾಡಲು ಹೊರಟಾಗ ಈ ಖೋಡಿ ಮನಸ್ಸು ನಮ್ಮನ್ನು 'ಇದನ್ನು ನಾಳೆಗಿಟ್ಟುಕೋ' ಎಂದು ತಡೆಯುವುದೇ ಇಲ್ಲ ನೋಡಿ! ಗೆಳೆಯರ ಜತೆ ಕುಡಿಯಲು ಕುಳಿತಾಗ ಇದನ್ನು ನಾಳೆಗಿಟ್ಟುಕೊಳ್ಳೋಣ ಎಂದು ಎಂದಾದರೂ ಹೇಳಿಕೊಂಡದ್ದಿದೆಯಾ? ಸಿಗರೇಟ್ ಸೇದುವಾಗ ಇದು ನಾಳೆಗಿರಲಿ ಎಂದು ಎತ್ತಿಟ್ಟುಕೊಂಡದ್ದಿದೆಯಾ? ಇವಕ್ಕೆಲ್ಲ ಇಲ್ಲದ ನಾಳೆಯೆಂಬ ನೆಪ, ಒಳ್ಳೆಯ ಕೆಲಸಕ್ಕೆ ಹೊರಟಾಗ ಅದೆಲ್ಲಿಂದ ಎದ್ದು ಧುತ್ತನೆ ಎದುರು ನಿಂತುಬಿಡುತ್ತದೆ ಅಲ್ಲವೆ?
ಅನ್ಯರಿಗೆ ಒಳಿತನ್ನು ಮಾಡುವ ಕೆಲಸವೇ ಆಗಬೇಕೆಂದಿಲ್ಲ. ನಮ್ಮ ಭವಿಷ್ಯದ ಒಳಿತಿಗೆ ಮುನ್ನುಡಿಯಾಗುವ ಕೆಲಸಗಳಿಗೂ ಈ ನಾಳೆಯೆಂಬ ನೆಪ ಕಲ್ಲು ಹಾಕುತ್ತದೆ. ಒಂದು ಫೈಲಿದೆ, ಇಂದು ಮುಗಿಯುತ್ತಿಲ್ಲ, ನಾಳೆಗಿಡೋಣ ಅಂದುಕೊಳ್ಳುತ್ತೇವೆ. ನಾಳೆ ಮತ್ತೆರಡು ಫೈಲುಗಳು ಬಂದು ಕೂತಿರುತ್ತವೆ. ಅವನ್ನೂ ಬದಿಗಿಟ್ಟು ಫಿಲಂ ನೋಡಲು ಎದ್ದು ಹೊರಟದ್ದಾಯ್ತು. ನಾಳೆ ಮತ್ತದೇ ರಾಗ. ಹೀಗೇ ದಿನ ದೂಡುವುದು. ಎಲ್ಲವನ್ನೂ ಒಟ್ಟಿಗೆ ಮುಗಿಸೋಣ, ಅದಕ್ಕೆಷ್ಟು ಹೊತ್ತು ಬೇಕು ಎಂಬ ಸಮಜಾಯಿಷಿ. ತಿಂಗಳ ಕೊನೆಗೆ ನೋಡಿದರೆ, ಫೈಲುಗಳ ರಾಶಿ ಬೆಟ್ಟದಂತಾಗಿರುತ್ತದೆ. ಕೆಲಸ ಮುಗಿಸಲು ಸಾಧ್ಯವೇ ಇಲ್ಲದಂತಾಗುತ್ತದೆ. ಆಗ ಅನ್ಯರ ನೆರವಿಗೆ ಅಂಗಲಾಚಬೇಕಾಗುತ್ತದೆ.
ನೌಕರಿಯಲ್ಲಿ ಹೆಚ್ಚಿನ ಸಾಧನೆ ಮಾಡಲು ಅದ್ಯಾವುದೋ ಡಿಗ್ರಿಯೊಂದರ ಅವಶ್ಯಕತೆಯಿರುತ್ತದೆ. ಮುಂದಿನ ವರ್ಷ ಕಟ್ಟಿದರಾಯಿತು ಎಂದು ಮುಂದೂಡುತ್ತೇವೆ. ತೆಂಗಿನ ಗಿಡಕ್ಕೆ ಅದ್ಯಾವುದೋ ಹುಳ ಹಾವಳಿಯಿಟ್ಟಿದೆ. ಮುಂದಿನ ವಾರ ಔಷಧ ತರಲು ಹೋಗೋಣ ಎನ್ನುವಷ್ಟರಲ್ಲೇ ಇಡೀ ತೋಟಕ್ಕೆ ಅದು ಹಬ್ಬಿಯಾಗಿದೆ. ಇಂದಿನ ಪಾಠ ಓದಿಕೊಂಡಿಲ್ಲ. ನಾಳೆ ಓದೋಣ ಎಂದು ದಿನದೂಡುತ್ತಾ ಬಂದು, ಮಾರ್ಚ್ ಸಮೀಪಿಸಿಬಿಟ್ಟಿದೆ. ಈಗ ಓದೋಣವೆಂದರೂ ಸಮಯವಿಲ್ಲ. ಪರಿಣಾಮ, ಫಸ್ಟ್ಕ್ಲಾಸ್ ಬರಬೇಕಾದವನೂ ಡುಮ್ಕಿ.
ಇದಕ್ಕೆಲ್ಲ ಏನು ಪರಿಹಾರ? ಒಂದೇ ಒಂದು- ಇವತ್ತೇ ಮಾಡುತ್ತೇನೆ ಎಂದು ಎದ್ದು ಹೊರಟುಬಿಡಿ. ಆಗಲೇ ಕೆಲಸ ಆಗುವುದು. ಎಲ್ಲ ಯಶಸ್ಸುಗಳೂ ಕಾಲಿಗೆರಗುವುದು ಆಗಲೇ. ಪರಿಶ್ರಮಿಗೆ ಮಾತ್ರವೇ ಫಲದ ಹಕ್ಕು.
- ಸಹನೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.