ವಿಜ್ಞಾನಕ್ಕೇ ಸವಾಲಾಗಿರುವ ಒಣದ್ರಾಕ್ಷಿ ಒಗಟು!
ಸಣ್ಣಪುಟ್ಟ ಕಾಯಿಲೆಗಳಿಗೆ ಮನೆಮದ್ದು ಮಾಡುವುದು ಭಾರತೀಯರ ಸ್ವಭಾವ...
ಸಣ್ಣಪುಟ್ಟ ಕಾಯಿಲೆಗಳಿಗೆ ಮೊದಲು ಮನೆಮದ್ದು ಮಾಡುವುದು ಭಾರತೀಯರ ಸ್ವಭಾವ. ಬಹಳಷ್ಟು ಸಂದರ್ಭಗಳಲ್ಲಿ ಅದು ಪ್ರಯೋಜನಕಾರಿಯೂ ಹೌದು. ಸಮಸ್ಯೆ ತೀರಾ ಗಂಭೀರವಾಗಿಲ್ಲ ಎಂದಾದರೆ ಇದು ಪ್ರಭಾವ ಬೀರುತ್ತದೆ. ಮಲಬದ್ಧತೆ ವಿಚಾರದಲ್ಲೂ ಅಷ್ಟೆ. ಬಹಳಷ್ಟು ಪರಿಹಾರಗಳು ಮನೆಯಲ್ಲಿಯೇ ಇವೆ. ಅವುಗಳಲ್ಲಿ ಕೆಲವಷ್ಟು ಸಂಗತಿಗಳ ಬಗ್ಗೆ ನಾವು ವಿವರವಾಗಿ ಚರ್ಚಿಸಿದ್ದೇವೆ ಕೂಡ. ಒಣದ್ರಾಕ್ಷಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಮಲಬದ್ಧತೆಯಿಂದ ಶೀಘ್ರ ಬಿಡುಗಡೆ ಪಡೆಯಲು ಇದು ಅತ್ಯುತ್ತಮವಾದ ಔಷಧ. ಒಣದ್ರಾಕ್ಷಿ ಸೇವನೆ ಮಲಬದ್ಧತೆಯನ್ನು ಹೋಗಲಾಡಿಸುವುದು ಮಾತ್ರವಲ್ಲ, ಎಲ್ಡಿಎಲ್ ಕೊಲೆಸ್ಟರಾಲ್ ಅನ್ನು ಗಣನೀಯವಾಗಿ ತಗ್ಗಿಸುತ್ತದೆ ಎನ್ನುವ ಸಂಗತಿಯೂ ನಿರೂಪಿತವಾಗಿದೆ.
ಒಣದ್ರಾಕ್ಷಿ ಪೌಷ್ಟಿಕಾಂಶಗಳ ಆಗರ ಮಾತ್ರವಲ್ಲ, ಮಲವಿಸರ್ಜನೆಗೆ ಉತ್ತೇಜನ ನೀಡುವ ವಿರೇಚಕಗಳ ಸಾಗರ ಕೂಡ. ಯಾವುದೇ ವಯಸ್ಸಿನವರಲ್ಲೂ ತ್ವರಿತ ಪರಿಣಾಮ ಉಂಟುಮಾಡುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಂತೂ ಬಹುತೇಕ ನೂರು ವರ್ಷದಿಂದಲೂ ಒಣದ್ರಾಕ್ಷಿ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಅದರಲ್ಲಿನ ಯಾವ ಅಂಶ ಮಲವಿಸರ್ಜನೆಗೆ ಪ್ರಚೋದನೆ ನೀಡುತ್ತದೆ ಎನ್ನುವುದು ನಿರ್ದಿಷ್ಟವಾಗಿ ಪತ್ತೆಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ವೈದ್ಯವಿಜ್ಞಾನಕ್ಕೆ ಇದೊಂದು ಸವಾಲಾಗಿಯೂ ಪರಿಣಮಿಸಿದೆ.
ಒಣದ್ರಾಕ್ಷಿಯಲ್ಲಿ ನಾರಿನ ಅಂಶ ಸಮೃದ್ಧವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 'ನಾರಿನ ಅಂಶವೇ ಮಲಬದ್ಧತೆಯನ್ನು ಕಡಿಮೆ ಮಾಡುವುದು' ಎನ್ನುವುದು ಬಹಳಷ್ಟು ಜನರ ವಾದ. ಅದನ್ನು ಅಲ್ಲಗಳೆಯುವವರೂ ಸಾಕಷ್ಟು ಪ್ರಮಾಣದಲ್ಲಿ ಇದ್ದಾರೆ. ಎರಡೂ ಕಡೆಯವರು ತಮ್ಮತಮ್ಮ ವಾದಗಳನ್ನು ತರ್ಕಬದ್ಧವಾಗಿ ಮಂಡಿಸುತ್ತಲೇ ಇದ್ದಾರೆ. ಸರ್ವಸಮ್ಮತ ಅಭಿಪ್ರಾಯಕ್ಕೆ ಇನ್ನೂ ಬರಲಾಗಿಲ್ಲ.
ಕ್ಯಾಲಿಫೋರ್ನಿಯಾದ ಹಾರೋವರ್ ಪ್ರಯೋಗಾಲಯದ ಮೂವರು ಸಂಶೋಧಕರು 1951ರಲ್ಲಿ ಒಣದ್ರಾಕ್ಷಿ ರಹಸ್ಯವನ್ನು ತಾವು ಬಿಡಿಸಿದ್ದೇವೆ ಎಂದು ಹೇಳಿಕೊಂಡರು. ಡೈಫೀನೈಲ್ ಐಸಟಿನ್ ಎನ್ನುವ ರಾಸಾಯನಿಕದಿಂದ ಕರುಳಇನ ಭಾಗದಲ್ಲಿ ಮಲದ ಸಂಚಾರ ಸುಗಮವಾಗುತ್ತದೆ ಎಂಬುದಾಗಿ ಅವರು ಹೇಳಿಕೊಂಡರು. ಉಳಿದ ವಿಜ್ಞಾನಿಗಳು ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಒಣದ್ರಾಕ್ಷಿಯಲ್ಲಿ ಡೈಫೀನೈಲ್ ಐಸಟಿನ್ ಅನ್ನು ಪತ್ತೆ ಮಾಡುವುದೇ ಸಾಧ್ಯವಾಗಲಿಲ್ಲ. ಹೀಗಾಗಿ ಈ ವಾದ ಬಿದ್ದುಹೋಯಿತು. ಒಣದ್ರಾಕ್ಷಿಯಲ್ಲಿನ ಮ್ಯಾಗ್ನೇಶಿಯಂ ಖನಿಜಾಂಶ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ ಎಂದು ಅಮೆರಿಕದ ಕೃಷಿ ಇಲಾಖೆ ವಿಜ್ಞಾನಿಗಳು ಅಭಿಪ್ರಾಯಪಟ್ಟರು. ಮ್ಯಾಗ್ನೇಶಿಯಂ ಮಲಬದ್ಧತೆ ನಿವಾರಣೆಗೆ ಯಾವ ರೀತಿಯಲ್ಲೂ ಸಹಕಾರಿಯಲ್ಲ ಎನ್ನುವುದು ಕೆಲಸಮಯದಲ್ಲೇ ದೃಢಪಟ್ಟಿತು.
ದಿನಕ್ಕೆ 6-7 ಒಣದ್ರಾಕ್ಷಿ ಅಥವಾ ಅರ್ಧ ಕಪ್ನಷ್ಟು ಈ ಹಣ್ಣಿನ ತಾಜಾ ರಸ ಕುಡಿಯುವುದು ಉತ್ತಮ. ಬಿಸಿನೀರಿಗೆ ಆರೇಳು ದ್ರಾಕ್ಷಿ ಹಾಕಿ ಚೆನ್ನಾಗಿ ಕುದಿಸಿ ಕುಡಿದರೂ ಆದೀತು.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com