ವಿಧಿಯ ನೆರಳು
ಯಾರು ಹಿತವರು ನಿನಗೆ ವಧುವೇ?
ಅದು ಕರ್ನಾಟಕದ ಕಾಶ್ಮೀರವೆಂದೇ ಖ್ಯಾತಿ ಗಳಿಸಿರುವ ಕೊಡಗು ಜಿಲ್ಲೆ. ಕೊಡವರು ಕಾಫಿ, ಕಾಳು ಮೆಣಸು ಬೆಳೆಸುವುದು ಮಾತ್ರವಲ್ಲ, ಅಪಾರ ದೇಶಪ್ರೇಮಿಗಳು. ಭಾರತೀಯ ಸೇನೆಗೆ ಕೊಡಗಿನ ವೀರರ ಸೇವೆ ಅಪಾರ. ಮನೆಗೆ ಒಬ್ಬರೋ ಇಬ್ಬರೋ ಸೈನ್ಯದಲ್ಲಿದ್ದರೆ ಮನೆಗೆ ಒಬ್ಬರಾದರೂ ಸೈನ್ಯದ ಪಿಂಚಣಿ ಪಡೆಯುವವರು ಇರುತ್ತಾರೆ. ರಾಜ್ಯಾದ್ಯಂತ ಓದು ಮುಗಿಸಿ ಕೆಲಸ ಹುಡುಕಿದರೆ ಕೊಡಗಿನಲ್ಲಿ ಓದು ಮುಗಿಯುವ ಮೊದಲೇ ಸೈನ್ಯ ಸೇರುತ್ತಾರೆ. ಕೊಡವರು ಸೈನ್ಯಕ್ಕೆ ಸೇರುವುದು ನಮ್ಮ ಹಕ್ಕು ಎಂದೇ ಭಾವಿಸಿದ್ದಾರೆ.
ಇಷ್ಟಕ್ಕೂ ನಿಶ್ಶಬ್ದದಲ್ಲೇಕೆ ಈ ವಿಚಾರಗಳು ಎಂದು ತಲೆ ಕೆರೆದುಕೊಳ್ಳಬೇಡಿ. ಕೊಡಗಿನ ವಿರಾಜಪೇಟೆ ಗೊತ್ತಲ್ಲಾ? ಇದು ಹಿಂದೆ ವೀರರಾಜೇಂದ್ರಪೇಟೆಯಾಗಿ ಹಿಂದು ಕೊಡವ ಅರಸ ಆಳ್ವಿಕೆ ನಡೆಸಿದ್ದ ಪ್ರದೇಶ. ಇದೇ ತಾಲೂಕಿನ ಗೋಣಿಕೊಪ್ಪಲು ಸಮೀಪದ ಒಂದು ಪುಟ್ಟ ಗ್ರಾಮದಲ್ಲಿದ್ದಾರೆ ನವೀನ್ ಪುಟ್ಟಪ್ಪ. ಇವರು ಸೈನ್ಯದಿಂದ ನಿವೃತ್ತರಾಗಿದ್ದಾರೆ. ಹಿರಿಯರಿಂದ ಬಂದ ಆಸ್ತಿ ಮೂರು ಎಕರೆ ಕಾಫಿ ತೋಟ, ಎರಡು ಎಕರೆ ಗದ್ದೆ. ಇವರಿಗೆ ಒಬ್ಬಳೇ ಮಗಳು, ಹೆಸರು ಬಿಂದು.
ಬಿಂದು ಮಣಿಪಾಲ್ನಲ್ಲಿ ಬಿಇ ಮುಗಿಸಿದಳು. ಅದೇ ವೇಳೆಗೆ ಕೇರಳ ಗಡಿಯಲ್ಲಿರುವ ಕುಟ್ಟ ಗ್ರಾಮದಿಂದ ಸಂಬಂಧಿಕರು ಬಂದು ಬಿಂದು ವಿವಾಹದ ಬಗ್ಗೆ ಪ್ರಸ್ತಾಪ ಮಾಡಿದರು. ಉತ್ತಮ ಸಂಬಂಧ, ಹುಡುಗ ಸೇನೆಯಲ್ಲಿದ್ದಾನೆ. ಆತನ ಪಾಲಿಗೆ 10ಕ್ಕೂ ಹೆಚ್ಚು ಎಕರೆ ಕಾಫಿ ತೋಟ ಇದೆ. ಮನೆತನ ತುಂಬಾ ಒಳ್ಳೆಯದು, ಜತೆಗೆ ಒಬ್ಬನೇ ಮಗ. ಇದಕ್ಕಿಂತ ಏನು ಬೇಕು? ನವೀನ್ ಪುಟ್ಟಪ್ಪ ಈ ಸಂಬಂಧವನ್ನು ನಿರಾಕರಿಸಲು ಯಾವುದೇ ಕಾರಣಗಳಿರಲಿಲ್ಲ. ಮಗಳ ಒಪ್ಪಿಗೆಯೂ ಲಭಿಸಿತು.
=
ಆ ದಿನ ಬಂದೇ ಬಂತು. ಬಿಪಿನ್ಗೆ ಸೇನೆಯಿಂದ ರಜೆ ಸಿಕ್ಕಿ ಮನೆಗೆ ಬಂದ. ಕೂಡಲೇ ಮದುವೆ ಕಾರ್ಯಗಳು ಚುರುಕುಗೊಂಡವು. ವಿರಾಜಪೇಟೆಯ ಬೃಹತ್ ಕಲ್ಯಾಣಮಂಟಪದಲ್ಲಿ ವಿಜೃಂಭಣೆಯಿಂದ ಬಿಂದು- ಬಿಪಿನ್ ಮದುವೆ ನೆರವೇರಿತು. ನಂತರದ ಒಂದು ತಿಂಗಳು ಮುಗಿದಿದ್ದೇ ಗೊತ್ತಾಗಲಿಲ್ಲ. ನೂತನ ವಧು ವರರು ಕಾಫಿ ಕಣಿವೆಯಲ್ಲಿಯೇ ತಮ್ಮ ಮಧುಚಂದ್ರವನ್ನು ಸವಿಯುತ್ತಿರುವ ಸಮಯದಲ್ಲಿಯೇ ಸೇನೆಯಿಂದ ಕರೆ ಬಂದಿತ್ತು. ರಜೆ ಮಾತ್ರವಲ್ಲ ಮಧುಚಂದ್ರವನ್ನೂ ಮಧ್ಯದಲ್ಲಿಯೇ ಸ್ಥಗಿತಗೊಳಿಸಿ ಭಾರವಾದ ಹೃದಯದೊಂದಿಗೆ ಬಿಪಿನ್ ಕಾಶ್ಮೀರಕ್ಕೆ ಹೊರಟ.
ಇತ್ತ ಬಿಂದುಗೆ ಸಹ ಮಧುಚಂದ್ರಕ್ಕೆ ಆದ ರಸಭಂಗದಿಂದಾಗಿ ಭಾರತೀಯ ಸೇನೆಯ ಮೇಲೆ ಕೋಪ ಬಂದಿತ್ತು. ಆದರೆ ಕೊಡವರು ಸೈನ್ಯವನ್ನು ಒಂದು ವೃತ್ತಿ ಎಂದು ನೋಡುವುದಿಲ್ಲ. ಬದಲಿಗೆ ಅದೊಂದು ಪವಿತ್ರ ಕರ್ತವ್ಯ ಎಂದೇ ಭಾವಿಸುತ್ತಾರೆ. ಹಾಗಾಗಿಯೇ ಬಿಂದು ತನ್ನ ಗಂಡನ ಬಗ್ಗೆ ಹೆಮ್ಮೆ, ಆತನ ಬರುವಿಕೆಯ ನಿರೀಕ್ಷೆ, ನಂತರ ತಾನೂ ಕಾಶ್ಮೀರಕ್ಕೆ ಹೋಗಿ ಸಂಸಾರ ಹೂಡುವ ದಿನಗಳ ಕನಸು ಕಾಣುತ್ತಾ ದಿನದೂಡತೊಡಗಿದ್ದಳು. ಪ್ರತಿದಿನ ರಾತ್ರಿ ಬಿಪಿನ್ ಕೆಲಸ ಮುಗಿದ ಕೂಡಲೇ ಬಿಂದುಗೆ ಫೋನ್ ಮಾಡುತ್ತಿದ್ದ. ಗಂಟೆಗಟ್ಟಲೆ ಪ್ರಣಯಪಕ್ಷಿಗಳು ಫೋನಿನಲ್ಲಿ ಮಾತುಕತೆ ನಡೆಸುತ್ತಿದ್ದರು. ಹೀಗೆ ಮೂರು ತಿಂಗಳು ಕಳೆದಿತ್ತು. ಅದೊಂದು ದಿನ ಒಂದು ದುರ್ವಾರ್ತೆ ಬಿಂದು ಮನೆಗೆ ಬರಸಿಡಿಲಿನಂತೆ ಬಂದೆರಗಿತ್ತು.
=
ಸೈನ್ಯದಲ್ಲಿದ್ದ ಬಿಪಿನ್ ಅಂದು ಮುಂಜಾನೆ ಚೀನಾ ಗಡಿಯಲ್ಲಿ ಕಾವಲಿನಲ್ಲಿರುವಾಗ ಭಾರಿ ಪ್ರಮಾಣದ ಹಿಮ ಕುಸಿತವಾಗಿ ಐವರು ಸಹಚರರೊಂದಿಗೆ ಮಂಜಿನಲ್ಲೇ ಸಮಾಧಿಯಾಗಿದ್ದಾನೆ ಎಂಬ ಸುದ್ದಿ ಹೊತ್ತ ಟೆಲಿಗ್ರಾಂ ಬಾಗಿಲು ಬಡಿದಿತ್ತು. ಬಿಂದು ಮಾತ್ರವಲ್ಲ ಎರಡೂ ಕುಟುಂಬಗಳು ಕಣ್ಣೀರಿನಲ್ಲೇ ಕೈತೊಳೆಯುವ ಪರಿಸ್ಥಿತಿ ಒದಗಿಬಂತು. ಮಂಜಿನಲ್ಲಿ ಹೂತು ಹೋಗಿರುವ ಮೃತದೇಹಗಳಿಗಾಗಿ ಬಿಎಸ್ಎಫ್ ಯೋಧರು ಶೋಧ ಮುಂದುವರೆಸಿದ್ದಾರೆ, ದೇಹ ದೊರೆತ ಕೂಡಲೇ ಮನೆಗೆ ಕಳುಹಿಸಿಕೊಡಲಾಗುವುದು ಎಂಬ ವಾರ್ತೆ ಅಲ್ಲಿಂದ ಬಂತು.
ಬಿಪಿನ್ ಮೃತದೇಹ ಲಭ್ಯವಾಗಲಿಲ್ಲ. ಸಹಚರರ ಪೈಕಿ ಇಬ್ಬರ ಮೃತದೇಹಗಳು ಮಾತ್ರ ದೊರೆತು ಉಳಿದ ಮೂರು ಜನ ನಾಪತ್ತೆಯಾಗಿದ್ದರು. ಮೂರು ತಿಂಗಳು ಕಳೆದರೂ ಶವದ ಬಗ್ಗೆ ಮಾಹಿತಿ ದೊರೆಯಲಿಲ್ಲ. ನಿಧಾನವಾಗಿ ಉಭಯ ಕುಟುಂಬಗಳು ದುಃಖವನ್ನು ಮರೆಯುತ್ತಿದ್ದರು. ಅದೇ ಸಮಯದಲ್ಲಿ ಬಿಪಿನ್ ತಂದೆ ಬಂದು ನವೀನ್ ಪುಟ್ಟಪ್ಪರನ್ನು ಸಂತೈಸಿದರು. ತನಗೆ ಇದ್ದ ಒಬ್ಬನೇ ಮಗ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾನೆ. ಇನ್ನು ಉಳಿದಿರುವುದು ಮಗ, ಸೊಸೆ, ಮಗಳು ಎಲ್ಲವೂ ಆಗಿರುವ ಬಿಂದು ಒಬ್ಬಳೇ. ಹಾಗಾಗಿ ಅವಳ ಬಾಳು ಅಂತ್ಯವಾಗಬಾರದು. ಅವಳಿಗೆ ಒಳ್ಳೆಯ ಹುಡುಗನನ್ನು ನೋಡಿ ಮತ್ತೊಂದು ಮದುವೆ ಮಾಡೋಣ, ಮತ್ತೆ ಅವಳ ಬಾಳಿನಲ್ಲಿ ಚಿಗುರು ಮೂಡಲಿ ಎಂದರು.
ಇದಕ್ಕೆ ಬಿಂದು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದಳು. ಆದರೆ ಛಲ ಬಿಡದ ಆಕೆಯ ಮಾವ ಸ್ವಲ್ಪ ಕಾಲ ಕಳೆದ ಮೇಲಾದರೂ ಅವಳನ್ನು ಒಪ್ಪಿಸೋಣ ಎಂದು ನವೀನ್ರವರಿಗೆ ಹೇಳಿ ಎದ್ದು ಬಂದರು. ಬಿಪಿನ್ ನಿಧನವಾರ್ತೆ ಬಂದು ಆರು ತಿಂಗಳು ಕಳೆದಿದೆ. ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪಮಟ್ಟಿಗೆ ಬಿಂದು ದುಃಖ ಮತ್ತು ಬಿಪಿನ್ ನೆನಪುಗಳಿಂದ ಹೊರಬರುತ್ತಿದ್ದಾಳೆ. ಅದೇ ಸಮಯಕ್ಕೆ ಬಿಪಿನ್ ತಾಯಿ ತಂದೆ ಬಂದು ಮತ್ತೊಂದು ಮದುವೆ ಪ್ರಸ್ತಾಪ ಮುಂದಿಟ್ಟರು. ಇದಕ್ಕೆ ಬಿಂದು ತಂದೆ ತಾಯಿ ಸಹ ಬೆಂಬಲ ವ್ಯಕ್ತಪಡಿಸಿದರು.
ಬಿಂದು ಪೋಷಕರ ಒತ್ತಾಯಕ್ಕೆ ಮಣಿಯಲೇಬೇಕಾಯಿತು. ಇದರಿಂದ ಹುಡುಗನ ಅನ್ವೇಷಣೆ ಚುರುಕುಗೊಳಿಸಿದ ಉಭಯ ಕುಟುಂಬಗಳು ಮಡಿಕೇರಿ ಸಮೀಪದ ಒಂದು ಗ್ರಾಮದಲ್ಲಿ ಉತ್ತಮ ಸಂಬಂಧ ಇರುವ ಬಗ್ಗೆ ಮಾಹಿತಿ ಪಡೆದರು. ಅಲ್ಲಿಗೆ ತೆರಳಿ ಹಿಂದೆ ನಡೆದ ಎಲ್ಲ ವಿಚಾರ ತಿಳಿಸಿ ಬಿಂದುವನ್ನು ಮದುವೆಯಾಗುವಂತೆ ಹುಡುಗ ಮತ್ತು ಆತನ ಕುಟುಂಬವನ್ನು ಕೋರಲಾಯಿತು.
ಇದಕ್ಕೆ ಹುಡುಗನ ಕುಟುಂಬ ಸಂತಸದಿಂದಲೇ ಒಪ್ಪಿಗೆ ಸೂಚಿಸಿ ಮದುವೆ ಆಗುವ ಇಂಗಿತ ವ್ಯಕ್ತಪಡಿಸಿತು. ಪರಿಣಾಮವಾಗಿ ಅದೊಂದು ದಿನ ಶುಭಗಳಿಗೆಯಲ್ಲಿ ಬಿಂದು ಎರಡನೇ ಬಾರಿಗೆ ಹಸೆಮಣೆ ಏರಿದಳು. ನೂತನ ವರನೊಂದಿಗೆ ಹಳೆಯ ಕಹಿ ನೆನಪುಗಳನ್ನು ಮರೆಯುವ ಪ್ರಯತ್ನ ಮಾಡತೊಡಗಿದಳು. ಇವರ ಪೋಷಕರು ಕೂಡಾ ಹಳೆಯ ನೆನಪುಗಳು ಆಕೆಯತ್ತ ಸುಳಿಯದಂತೆ ಎಚ್ಚರ ವಹಿಸಿದರು. ಪರಿಣಾಮವಾಗಿ ಬಿಂದು ವರ್ಷ ಕಳೆಯುವ ಒಳಗೆ ತಾಯಿ ಆದಳು. ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಹೆಂಡತಿಯ ಬಗ್ಗೆ ಗಂಡನಿಗೆ ಎಲ್ಲಿಲ್ಲದ ಅಕ್ಕರೆ. ತನ್ನ ವಂಶವನ್ನು ಎತ್ತಿ ಹಿಡಿಯಬೇಕಿದ್ದ ಸೊಸೆ ಮತ್ತೊಂದು ವಂಶದ ಕುಡಿಯನ್ನು ಹೆತ್ತಿದ್ದಕ್ಕಾಗಿ ಬಿಪಿನ್ ತಂದೆ ತಾಯಿ ಯಾವುದೇ ಮತ್ಸರ ತೋರದೆ ತಮ್ಮದೇ ಮೊಮ್ಮಗನೇನೋ ಎಂಬಂತೆ ಅಕ್ಕರೆಯಿಂದ ನೋಡಿಕೊಂಡು ಬಂದರು. ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ ತದನಂತರವೇ ಪರಿಸ್ಥಿತಿ ಏರುಪೇರಾಯಿತು.
=
ಬಿಪಿನ್ ಸಾವನ್ನಪ್ಪಿ ಒಂದೂವರೆ ವರ್ಷ ಆಗಿದೆ. ಮೊದಲ ಮದುವೆಯ ಕಹಿ ನೆನಪುಗಳಿಂದ ಆಗ ತಾನೆ ಹೊರಬಂದಿದ್ದಾಳೆ ಬಿಂದು. ಎರಡನೇ ಪತಿಯೊಂದಿಗೆ ಹೊಂದಿಕೊಂಡು ಬಾಳು ನಡೆಸಿ, ಹೆರಿಗೆಗಾಗಿ ತವರಿಗೆ ಬಂದಿದ್ದ ಬಿಂದು ಮುದ್ದಾದ ಮಗುವಿಗೆ ಆಗ ತಾನೆ ಸ್ನಾನ ಮಾಡಿಸಿ ಎಳೆ ಬಿಸಿಲಿಗೆ ಮಗುವಿನ ದೇಹ ಒಡ್ಡಿ ಮನೆಯ ಮುಂದಿದ್ದ ಬೂರುಗದ ಮರದ ಕೆಳಗೆ ಕೂತು ಆಗತಾನೆ ಬಿಟ್ಟಿರುವ ಕಾಫಿ ಹೂಗಳ ಪರಿಮಳ ಮತ್ತು ಅದರಲ್ಲಿರುವ ಮಕರಂದ ಹೀರಲು ಬಂದಿರುವ ಜೇನು ನೊಣಗಳ ಝೇಂಕಾರವನ್ನು ಆಲಿಸುತ್ತಿದ್ದಳು. ಯಾಕೋ ಬೆಳಗಿನಿಂದ ಬಲಗಣ್ಣು ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು.
'ಹೆಂಗಸರ ಬಲಗಣ್ಣು ಹೊಡೆದುಕೊಂಡರೆ ಅಪಶಕುನವಂತೆ ಹೌದಾ ಅಮ್ಮಾ' ಎಂದು ಅಡುಗೆ ಮನೆಯಲ್ಲಿ ಕೆಲಸದಲ್ಲಿ ತಲ್ಲೀನರಾಗಿದ್ದ ತಾಯಿಯನ್ನು ಬಿಂದು ಕೇಳಿದಳು. ಆ ಮಾತು ಕೇಳಿಯೂ ಕೇಳದಂತೆ ಅವಳ ತಾಯಿ ಕೆಲಸದಲ್ಲಿ ತೊಡಗಿದ್ದಳು. ಹಾಲುಗಲ್ಲದ ಹಸುಗೂಸು ತಾಯಿಯ ಮಾತು ಅರ್ಥವಾಯಿತೇನೋ ಎನ್ನುವಂತೆ ಒಮ್ಮೆ ತನಗೆ ತಾನೇ ತುಟಿ ಅರಳಿಸಿ ನಗುತ್ತಿತ್ತು. ಅದನ್ನು ಕಂಡ ಬಿಂದುಗೆ ಮಾತೃಪ್ರೀತಿ ಉಕ್ಕಿ ಬಂತು. ಮಗುವಿನ ಗಲ್ಲಕ್ಕೆ ಒಂದು ಹೂ ಮುತ್ತು ನೀಡಿದಳು. ಸರಿಯಾಗಿ ಅದೇ ಸಮಯಕ್ಕೆ ತಮ್ಮ ಮನೆಯ ಹಾದಿಯಲ್ಲಿ ಯಾವುದೋ ಆಟೋ ಬರುತ್ತಿರುವ ಸದ್ದಾಯಿತು.
ಬಿಂದು ಅವರ ಮನೆ ಇದ್ದುದ್ದು ಕಾಫಿ ತೋಟಗಳ ನಡುವೆ ಒಂದು ಪುಟ್ಟ ಹಳ್ಳಿಯಲ್ಲಿ. ಕೊಡಗಿನಲ್ಲಿ ಮನೆಗಳು ಅಲ್ಲೊಂದು ಇಲ್ಲೊಂದು ಇರುವುದರಿಂದ ಪ್ರತಿ ಮನೆಗೆ ಹೋಗಲು ಒಂದು ದಾರಿ ಇರುತ್ತದೆ. ಆ ದಾರಿ ಬಿಂದು ಮನೆಯ ಬಳಿ ಅಂತ್ಯವಾಗಿ ಮುಂದೆ ಯಾರದೇ ಮನೆಗಳಿರಲಿಲ್ಲ. ಹಾಗಾಗಿ ಆ ಮಾರ್ಗದಲ್ಲಿ ಯಾವುದೇ ವಾಹನ ಬಂದರೂ ಅದು ಅವರ ಮನೆಗೆ ಎಂಬುದು ದೂರದಿಂದಲೇ ಖಚಿತವಾಗುತ್ತಿತ್ತು. ಅದೇ ಕಾರಣಕ್ಕೆ ತಮ್ಮ ಮನೆಗೆ ಯಾರೋ ನೆಂಟರು ಬರುತ್ತಿದ್ದಾರೆ ಎಂದು ತನಗೆ ತಾನೇ ಹೇಳಿಕೊಂಡಳು.
=
ನವೀನ್ ಪುಟ್ಟಪ್ಪನ ಮನೆಯ ಮುಂದೆ ದೊಡ್ಡ ಜನಜಂಗುಳಿಯೇ ಸೇರಿದೆ. ಬಂದಿರುವ ಎಲ್ಲರಿಗೂ ಇದು ಬಗೆಹರಿಯದ ಸಮಸ್ಯೆಯಾಗಿ ಪರಿಣಮಿಸಿದೆ. ಬಿಪಿನ್ ತಂದೆ ತಾಯಿಗೆ ಸ್ವರ್ಗವೇ ಕೈಗೆಟುಕಿದಂತಾಗಿದೆ. ಆದರೆ ಅದನ್ನು ಅನುಭವಿಸುವ ಸ್ಥಿತಿಯಲ್ಲಿ ಅವರಿಲ್ಲ. ಇನ್ನು ಬಿಂದು ಮತ್ತು ಆಕೆಯ ತಂದೆ ತಾಯಿ ಪರಿಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಬಿಂದು ಎರಡನೇ ಗಂಡ ಬಂದು ಮೂಲೆಯಲ್ಲಿರುವ ಒಂದು ಮರದ ಕೆಳಗೆ ತಲೆ ಮೇಲೆ ಕೈಹೊತ್ತು ಕೂತಿದ್ದಾನೆ. ಆತನಿಗೂ ಸಮಸ್ಯೆಗೆ ಪರಿಹಾರ ತಿಳಿಯುತ್ತಿಲ್ಲ. ಇನ್ನು ಬಿಂದು ಮತ್ತು ಮಗು ಮನೆಯ ಒಂದು ಮೂಲೆ ಸೇರಿದ್ದಾರೆ. ಹೊರಗೆ ಬರದಂತಾಗಿದೆ ಅವರ ಸ್ಥಿತಿ.
ಈ ಪರಿಸ್ಥಿತಿ ನಿರ್ಮಾಣ ಆಗಲು ಕಾರಣ, ಕಳೆದ ಒಂದೂವರೆ ವರ್ಷದ ಹಿಂದೆ ಕಾಣೆಯಾಗಿದ್ದ ಬಿಂದು ಮೊದಲ ಗಂಡ ಬಿಪಿನ್, ಇಂದು ಜೀವಂತವಾಗಿ ವಾಪಸ್ ಬಂದಿದ್ದ! ಆತ ಚೀನಾ ಸೈನಿಕರ ಕೈಗೆ ಸಿಕ್ಕಿ ಹೈರಾಣಾಗಿ ಕೊನೆಗೆ ಅವರ ಬಂಧನದಿಂದ ಬಿಡುಗಡೆಯಾಗಿ ಭಾರತಕ್ಕೆ ಬಂದು ಭಾರತೀಯ ಸೈನಿಕರ ಹತ್ತು ಹಲವು ಪರೀಕ್ಷೆಗಳನ್ನು ಎದುರಿಸಿದ ನಂತರ ಮನೆಗೆ ವಾಪಸ್ ಆಗಿದ್ದ. ತನ್ನ ಪತ್ನಿ ತನ್ನನ್ನು ಕಂಡು ಖುಷಿ ಪಡುತ್ತಾಳೆ ಎಂಬೆಲ್ಲ ಕನಸುಗಳನ್ನು ಹೊತ್ತು ಬಂದ ಬಿಪಿನ್ಗೆ ಇಲ್ಲಿ ಆಘಾತ ಕಾದಿತ್ತು. ಅದು ಬಿಂದು ಎರಡನೇ ಮದುವೆ ರೂಪದಲ್ಲಿ!
=
ಮುಂದೆ ಏನು ಮಾಡಬೇಕು, ಬಿಂದು ಯಾರಿಗೆ ಸೇರಿದ್ದಾಳೆ, ಇದರಿಂದ ಯಾರಿಗೆ ಅನ್ಯಾಯವಾಗಿದೆ, ಯಾರಿಗೆ ನ್ಯಾಯವಾಗಿದೆ ಎಂಬ ಪ್ರಶ್ನೆಗಳಿಗೆ ಅಲ್ಲಿ ಉತ್ತರವಿರಲಿಲ್ಲ. ಆದರೆ ಬಿಂದು ತಾಯಿ ತನಗೆ ತಾನೇ ಹೇಳಿಕೊಂಡಳು, ಇದಕ್ಕೇ ಇರಬೇಕು ಅವಳಿಗೆ ಬಲಗಣ್ಣು ಹೊಡೆದುಕೊಂಡಿದ್ದು. ಅಲ್ಲಿಯವರೆಗೆ ಕಾಫಿ ಹೂಗಳ ಪರಿಮಳ, ದುಂಬಿಗಳ ಇಂಚರದಲ್ಲಿ ಮೈಮರೆತಿದ್ದ ಬಿಂದು ಏಕಾಏಕಿ ಕಂಗಾಲಾಗಿದ್ದಳು.
ಕೊನೆಗೂ ಬಿಪಿನ್, ಬಿಂದು ಬಾಳಿನಿಂದ ಹೊರನಡೆದ. ಬಿಂದುವಿನ ಎರಡನೇ ಗಂಡನ ಹೃದಯ ಶ್ರೀಮಂತಿಕೆಗೆ ಬೆಲೆ ಕೊಟ್ಟಿದ್ದ. ಇದನ್ನು ಎಲ್ಲರೂ ಒಪ್ಪಿ ಮೆಚ್ಚುಗೆಯಿಂದ ತಲೆಯಾಡಿಸಿದರು. ಬಿಪಿನ್ ಮತ್ತೊಂದು ಮದುವೆ ಆಗಿ ಈಗ ಹಾಯಾಗಿದ್ದಾನೆ. ಬಿಂದು ಮತ್ತು ಗಂಡ ಸುಖವಾಗಿದ್ದಾರೆ. ಒಟ್ಟಿನಲ್ಲಿ ಸುನಾಮಿಯಂತೆ ಬಂದೆರಗಿದ ಸಮಸ್ಯೆ ಕೇವಲ ಬಿರುಗಾಳಿಯಲ್ಲೇ ಶಮನವಾಗಿ ಇಬ್ಬರ ಬಾಳಿನಲ್ಲೂ ಬೆಳಕು ಮೂಡಿಸಿತ್ತು. <
- ಅಶ್ವತ್ಥನಾರಾಯಣ್ ಎಲ್.
sathyajns@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.