ವೀರಗಲ್ಲು ಮರುಹುಟ್ಟು
ಪ್ರಾಚೀನ ಕಾಲದ ವೀರ ಮರಣದ ಸ್ಮಾರಕಗಳನ್ನು ವೀರಗಲ್ಲುಗಳ ರೂಪದಲ್ಲಿ ನೀವು ನೋಡಿರುತ್ತೀರಿ. ಆದರೆ ಈ ಪರಂಪರೆ 300 ವರ್ಷ ಹಿಂದೆಯೇ ನಿಂತುಹೋಗಿದೆ. ವಿಸ್ಮಯಕರ ಎಂಬಂತೆ, ಹಂಪಿ ವಿಶ್ವವಿದ್ಯಾಲಯವು ಕಾರ್ಗಿಲ್ ಯೋಧರಿಗಾಗಿ ವೀರಗಲ್ಲು ನಿರ್ಮಿಸಿ, ಪರಂಪರೆಗೆ ಮರುಹುಟ್ಟು ನೀಡಿದೆ. ಬಾದಾಮಿ ತಾಲೂಕಿನ ಚೊಳಚಗುಡ್ಡದ ಯೋಧ ಶಿವಬಸಯ್ಯ ಕುಲಕರ್ಣಿ ಅವರ ಸ್ಮರಣೆಗಾಗಿ ಈ ಕಲ್ಲು ಸ್ಥಾಪಿಸಲಾಯ್ತು. ಕಲಾಕೃತಿಯನ್ನು ಶಿಲ್ಪಕಲಾ ಶಿಕ್ಷಣ ವಿಭಾಗದ ಹಿಂದಿನ ಮುಖ್ಯಸ್ಥ ಡಾ.ಎಸ್.ಎನ್.ಪಾಟೀಲ್ ಅವರ ನೇತೃತ್ವದಲ್ಲಿ ಶಿಲ್ಪಿಗಳಾದ ಭಾಸ್ಕರ್ ಆಚಾರ್ಯ ಹಾಗೂ ಕೆ.ಬಿ.ಸಾಬಣ್ಣ ಕೆತ್ತಿದ್ದಾರೆ. ಶಿಲ್ಪ ಆರು ಅಡಿ ಎತ್ತರವಾಗಿದ್ದು, ಶತಮಾನದ ಮೊದಲ ವೀರಗಲ್ಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
- ಪ್ರವೀಣರಾಜು ಎಸ್. ಸೊನ್ನದ