ಸ್ವಾಧೀನಪತಿಕೆ ಎಂಬ ಡಾನ್
ಭರತನ ಅಷ್ಟನಾಯಕಿಯರಲ್ಲೊಬ್ಬಳು ಸ್ವಾಧೀನಪತಿಕೆ ಅಥವಾ ಸ್ವಾಧೀನಭರ್ತೃಕಾ.
ಭರತನ ಅಷ್ಟನಾಯಕಿಯರಲ್ಲೊಬ್ಬಳು ಸ್ವಾಧೀನಪತಿಕೆ ಅಥವಾ ಸ್ವಾಧೀನಭರ್ತೃಕಾ. ಈ ಪದದ ಅರ್ಥ, ಗಂಡನನ್ನು ಅಥವಾ ಪ್ರಿಯತಮನನ್ನು ಸಂಪೂರ್ಣವಾಗಿ ತನ್ನ ಬಿಗಿಮುಷ್ಟಿಯಲ್ಲಿಟ್ಟುಕೊಂಡವಳು ಎಂಬುದು. ಈಕೆ ತನ್ನ ನಲ್ಲನಿಗೆ ತನ್ನನ್ನು ಪೂರ್ತಿ ಅರ್ಪಿಸಿಕೊಂಡವಳೂ ಹೌದು. ಆದ್ದರಿಂದಲೇ ಆಕೆ ತನ್ನ ನಲ್ಲನಿಂದಲೂ ತನ್ನತ್ತಲೇ ಸಂಪೂರ್ಣ ಪ್ರೇಮವನ್ನು ಬಯಸುವವಳು. ಈಕೆ ತಾಮಸ ಅಥವಾ ರಾಜಸ ಸ್ವಭಾವದವಳೇ ಆಗಿರಬೇಕೆಂದೇನಿಲ್ಲ. ಆದರೆ ಈಕೆ ಪೊಸೆಸ್ಸಿವ್ ಹೌದು. ಅನ್ಯ ಸ್ತ್ರೀಯರೊಂದಿಗೆ ಆತನನ್ನು ಹಂಚಿಕೊಳ್ಳಲಾರಳು. ಪುರಾಣದಲ್ಲಿ ನಮಗೆ ಈ ಸ್ವಭಾವದ ಲಲನೆಗೆ ಸೊಗಸಾದ ಉದಾಹರಣೆಯೊಬ್ಬಳು ಸಿಗುತ್ತಾಳೆ. ಆಕೆ ರಾಧೆ. ಈಕೆ ಕೃಷ್ಣನನ್ನು ತನಗೆ ಬೇಕಾದಂತೆ ಆಟವಾಡಿಸಬಲ್ಲಳು. ಕೃಷ್ಣ ಅನ್ಯ ಗೋಪಿಕೆಯರ ಬಳಿಗೆ ಹೋದರೆ ಕೋಪಿಸಿಕೊಂಡು ಆತನನ್ನು ಬಳಿಗೆ ಕರೆಸಿಯೇ ಸಿದ್ಧ.
ಕುರುಯದುನಂದನ ಚಂದಶಿಶಿರತರೇಣ ಕರೇಣ ಪಯೋಧರೇ
ಮೃಗಮದಪತ್ರಕಮತ್ರ ಮನೋಭವಮಂಗಲಕಲಶಸಹೋದರೇ
ಅಲಿಕುಲಗಂಜನಮಂಜನಕಂ ರತಿನಾಯಕಸಾಯಕಮೋಚನೇ
ತ್ವದಧರಚುಂಬನಲಂಬಿತಕಜ್ಜಲಮುಜ್ವಲಯ ಪ್ರಿಯಲೋಚನೇ
ರಾಧೆ- ಕೃಷ್ಣರ ಸುರತಕೇಲಿ ಮುಗಿದಿದೆ. ಆಕೆಯ ಶೃಂಗಾರಾಲಂಕಾರಗಳು ಅಸ್ತವ್ಯಸ್ತಗೊಂಡಿವೆ. ಪಕ್ಕದಲ್ಲಿರುವ ಶ್ಯಾಮನಿಗೆ ಆಕೆ ಕೆಲಸ ಹಚ್ಚುತ್ತಿದ್ದಾಳೆ- ನನ್ನ ಕುಚಗಳ ಮೇಲಿದ್ದ ಕಸ್ತೂರಿರೇಖೆ ನಿನ್ನ ಕೈಚಳಕದಿಂದ ಅಳಿಸಿಹೋಗಿದೆ. ಅದನ್ನೀಗ ಮತ್ತೆ ಬರೆ! ನನ್ನ ಕಂಗಳ ಕಾಡಿಗೆ ಉಜ್ಜಿಹೋಗಿದೆ. ಮತ್ತೆ ಚಿತ್ರಿಸು! ನನ್ನ ಕಂಗಳಲ್ಲಿ ಕುಂಡಲಗಳನ್ನಿಡು! ಪಾಪ ಕೃಷ್ಣ, ಆಕೆ ಹೇಳಿದಂತೆ ಕೇಳುತ್ತಿದ್ದಾನೆ.
ಅಷ್ಟನಾಯಿಕೆಯರಿಗೂ ಕೆಲವಾರು ಸ್ವಭಾವರಾಗಗಳನ್ನು ಸಂಗೀತಜ್ಞರು ಗುರುತಿಸಿದ್ದಾರೆ. ಸ್ವಾಧೀನಪತಿಕೆಯ ಭಾವರಾಗಗಳು ಮಲಾಶ್ರೀ, ಪೂರ್ವಿ, ಜೈತಶ್ರೀ.
-ಹರಿಹರ