ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಾಧನೆಯ ಹಾದಿಯಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು

Srinivasa Murthy VN
Updated On : 5 Feb 2014, 1:42 am

ಸುಗಮ ಸಂಗೀತ ಪಿತಾಮಹರೆನಿಸಿದ ಹುಕ್ಕೇರಿ ಬಾಳಪ್ಪ ಹಾಗೂ ಪಿ. ಕಾಳಿಂಗರಾಯರುಗಳು ತಮ್ಮ ಮಧುರ ಕಂಠದಲ್ಲಿ ಕವಿಗೀತೆಗಳನ್ನು ಹಾಡಿ ಕನ್ನಡದ ಬಾವುಟವನ್ನು ನಭಕ್ಕೇರಿಸಿದರು. ಅಂತೆಯೆ ಸುಗಮ ಸಂಗೀತದ ದೊರೆಯಾಗಿ ಮೆರೆದ ಮೈಸೂರು ಅನಂತಸ್ವಾಮಿಯವರು ನೀರೆರದು ಘೋಷಿಸಿದರು. ಅನಂತಸ್ವಾಮಿಯವರ ಜೊತೆಯಲ್ಲೆ ಸುಗಮಸಂಗೀತ ವೃಕ್ಷವನ್ನು ಸಮೃದ್ಧವಾಗಿ ತಮ್ಮ ವಿಶಿಷ್ಟ ಸಂಯೋಜನೆಗಳ ಮೂಲಕ ಬೆಳೆಸಿದವರು ಸಿ.ಅಶ್ವತ್ಥ್ ಮತ್ತಿತರರು ಹಾಗೂ ಈ ಮಹನೀಯರುಗಳಿಗೆ ಬೆಂಬಲವಾಗಿ ನಿಂತು ಅವರುಗಳ ಉತ್ಕೃಷ್ಟ ಸಂಯೋಜನೆಗಳನ್ನು ಶ್ರೇಷ್ಠ ಮಟ್ಟದ ಗಾಯನದ ಮೂಲಕ ತಲುಪಿಸಿದ ಗಾಯಕ ಪಡೆ.
 ಸುಗಮ ಸಂಗೀತ ಬೆಳವಣಿಗೆಯಲ್ಲಿ ಆಕಾಶವಾಣಿಯ ಪಾತ್ರ ಮಹತ್ವವಾದುದು. ಮುಂಬೈ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಸೀತಾಮುಲ್ಕಿ ಅವರು ಹಾಡಿದ ಎನ್.ಕೆ. ಅವರ ಗೀತೆಗಳಾಗಲಿ, ಜಯವಂತಿದೇವಿ ಹಿರೇಬೇಟ್ ಅವರು ಹಾಡಿದ ಕೆ.ಎಸ್. ನರಸಿಂಹಸ್ವಾಮಿಯವರ ಗೀತೆಯಾಗಲಿ ಕನ್ನಡಿಗರಲ್ಲಿ ಪುಳಕ ಉಂಟುಮಾಡುತ್ತಿತ್ತು. ಕಾವ್ಯ ಗಾಯನ ಪರಂಪರೆಯ ಉತ್ಕಷಕ್ಕೆ  ಇದು ನಾಂದಿಯಾಯಿತು.

ಜೊತೆಗೆ ಬೆಂಗಳೂರು ಆಕಾಶವಾಣಿಯ ಮೇರು ಪ್ರತಿಭೆಗಳಾದ ಎಂ.ಡಿ. ಪಾರ್ಥಸಾರಥಿ, ಡಾ. ವಿ. ದೊರೆಸ್ವಾಮಿ ಅಯ್ಯಂಗಾರ್, ಎಸ್. ಕೃಷ್ಣಮೂರ್ತಿ, ಪದ್ಮಚರಣ್ ಹಾಗೂ ಹೆಚ್.ಕೆ. ನಾರಾಯಣ ಅವರ ಸಂಯೋಜನೆಗಳು ಪ್ರತಿನಿತ್ಯ ಬಾನುಲಿಯಲ್ಲಿ ಬೆಳಗಿ ಕನ್ನಡಿಗರಲ್ಲಿ ಕವಿ ಗೀತೆ ಗಾಯನದ ಅಭಿರುಚಿಯನ್ನು ಹೆಚ್ಚಿಸಿದವು.
ಸುಗಮ ಸಂಗೀತ ಕ್ಷೇತ್ರದ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವನ್ನು 1987 ರಿಂದಲೇ ನಡೆಸಿದ್ದರು ಮುದ್ದು ಕೃಷ್ಣ. 1993ರಿಂದ ಅಖಿಲ ಭಾರತ ಕನ್ನಡ ಸಮ್ಮೇಳನಗಳಲ್ಲಿ ನಡೆಯುತ್ತಿರುವ ಗೀತ ಸಂಗೀತ ಕಾರ್ಯಕ್ರಮ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆಯುತ್ತಿದ್ದ "ಕಾವ್ಯ ಕಾವೇರಿ" ಕಾರ್ಯಕ್ರಮಗಳು ಎಲ್ಲವು ಇವರ ಪರಿಶ್ರಮದ ಫಲವೆ. ಸಿ. ಅಶ್ವತ್ಥ್ ಹಾಗೂ ಮುದ್ದುಕೃಷ್ಣ ರವರ ಕನಸಿನ ಕೂಸಾದ "ಧ್ವನಿ ಸುಗಮ ಸಂಗೀತ ಕೇಂದ್ರ"ದ ವತಿಯಿಂದ ಕವಿಗಳು ಹಾಗೂ ಕಲಾವಿದರುಗಳ ಜೊತೆ ನಾಡಿನಾದ್ಯಂತ ಸುಗಮ ಸಂಗೀತ ಯಾತ್ರೆಯನ್ನು ಕೈಗೊಂಡಿದ್ದು ಇವರ ಪ್ರಯತ್ನದಿಂದಲೇ.
ಮುದ್ದುಕೃಷ್ಣ ಅವರ ಹಂಬಲಕ್ಕೆ ಕವಿ ದಿಗ್ಗಜ್ಜರು, ಸಿ. ಅಶ್ವತ್ಥ್, ಬಿ.ವಿ. ಶ್ರೀನಿವಾಸ್, ಜಯಂತಿ ಅರವಿಂದ್, ಎನ್.ಎಸ್. ಪ್ರಸಾದ್, ಮುಂತಾದ ಸೃಜನಶೀಲ ಸಂಯೋಜಕರು ಹಿರಿಯ ಗಾಯಕ ಗಾಯಕಿಯರು, ಎಸ್. ಬಾಲಿ, ಗಾಯಕ ಕಿಕ್ಕೇರಿ, ಕೃಷ್ಣಮೂರ್ತಿ, ಹೊಬಾಳೆ, ಫಲ್ಗುಣ, ಮುಂತಾದವರು ಬೆಂಬಲವಾಗಿ ನಿಂತ ಭರವಸೆಯ ಬೆಳಕು ಮೂಡಿಸಿದರು. ತತ್ಫಲವಾಗಿ 24.04.2003ರಂದು ಸುಗಮ ಸಂಗೀತ ಪರಿಷತ್ತಿನ ಪ್ರವರ್ತಕರ ಪ್ರಪ್ರಥಮ ಸಭೆ, ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯಿತು. ಸುಗಮ ಸಂಗೀತ ಕ್ಷೇತ್ರದ ಸರ್ವಾಂಗಿಣ ಬೆಳವಣಿಗೆಗೆ ಎಲ್ಲ ಕಲಾವಿದರು, ಸಂಘ ಸಂಸ್ಥೆಗಳು ಒಂದೇ ಸೂರಿನಡಿಯಲ್ಲಿ  ಬರಬೇಕು ಎಂಬ ಡಾ. ಜಿ.ಎಸ್.ಎಸ್. ಅವರ ಆಶಯದಂತೆ "ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ" ಉಗಮವಾಯಿತು. ಗಾಯಕ, ಸಂಘಟಕ, ಚಿಂತಕ, ಕ್ಷೇತ್ರರು ಅಭಿವೃದ್ಧಿಯೇ ಪರಮ ಗುರಿ ಎನ್ನುವ ಜೆ.ಕೆ. ಮುದ್ದುಕೃಷ್ಣ ಅವರು ಸರ್ವಸಮ್ಮತವಾದ ಪರಿಷತ್ತದಿನ ಪ್ರಥಮ ಅಧ್ಯಕ್ಷರಾಗಿ ಆಯ್ಕೆಗೊಂಡರು. ಚಟುವಟಿಕೆ ಮತ್ತು ಕಾರ್ಯತತ್ಪರತೆಗೆ ಹೆಸರಾದ ಗಾಯಕ, ಕಿಕ್ಕೇರಿ ಕೃಷ್ಣಮೂರ್ತಿ ಪ್ರಧಾನ ಕಾರ್ಯದರ್ಶಿಗಳಾಗಿಯೂ, ಶ್ರೀಯುತರಾದ ಬಾಲಿ, "ಫಲ್ಗುಣ, ರಾಜು ಅನಂತಸ್ವಾಮಿ ಹಾಗೂ ಡಾ. ರೋಹಿಣಿ ಮೋಹನ್‌" ಅವರುಗಳು ಸದಸ್ಯರಾಗಿ ಆಯ್ಕೆಯಾದರಾದರೂ ಡಾ. ಜಿ.ಎಸ್.ಎಸ್., ಡಾ. ಹೆಚ್.ಎಸ್. ವೆಂಕಟೇಶಮೂರ್ತಿ, ಸಿ. ಅಶ್ವತ್ಥ್, ಶಿವಮೊಗ್ಗ ಸುಬ್ಬಣ್ಣ, ಶ್ರೀನಿವಾಸ ಜಿ. ಕಪ್ಪಣ್ಣ ಅವರನ್ನೊಳಗೊಂಡ ಸಲಹಾ ಸಮಿತಿ ರೂಪಿತವಾಯ್ತು.
 ಸುಗಮ ಸಂಗೀತ ಪರಿಷತ್ತು ಅಸ್ತಿತ್ವಕ್ಕೆ ಬಂದ ತರುಣದಲ್ಲಿಯೇ ಇಟ್ಟ ಮೊದಲ ಹೆಜ್ಜೆ, ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನ. ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಕಿಕ್ಕೇರಿ ಕೃಷ್ಣಮೂರ್ತಿ ಅವರ ಒತ್ತಾಸೆಯ ಮೇರೆಗೆ ಸಕ್ಕರೆಯ ನಾಡು ಮಂಡ್ಯದಲ್ಲಿ ಅಕ್ಕರೆಯ ಅಭಿಮಾನಿಗಳ ಮಹಾಪೂರದೊಂದಿಗೆ ಜೆ.ಕೆ.ಎಂ. ಅವರ ಕನಸ್ಸಿಗೆ ಮೂರ್ತಿ ರೂಪ ಬಂತು. ಈ ಅಭೂತಪೂರ್ವ ಸಮ್ಮೇಳನಕ್ಕೆ ಶುಭ ಹಾರೈಸಿದವರು ಮಲ್ಲಿಗೆಯ ಕವಿ ಡಾ. ಕೆ.ಎಸ್. ನರಸಿಂಹಸ್ವಾಮಿಯವರು. ಅವರು ಅಂದು ಬೆಳಗಿಸಿದ ದೀಪದ ಮಂಗಳ ಬೆಳಕು, ಕ್ಷೇತ್ರದ ಅಭಿವೃದ್ಧಿಗೆ ದಾರಿ ದೀಪವಾಗಿ ಶುಭನಾಂದಿಯಾಯ್ತು. ಈಗ 11ನೇ ಸಮ್ಮೇಳನದ ಸಂಭ್ರಮಕ್ಕೆ ಮೆರಗು ನೀಡಲು, ಕರ್ನಾಟಕದ ಹೆಮ್ಮೆಯ ಜೇನಕಂಠದ ಗಾಯಕಿ ರತ್ನಮಾಲ ಪ್ರಕಾಶ್ ಸಮ್ಮೇಳದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

-ಮಾಲತಿ ಶರ್ಮ, ಸುಗಮ ಸಂಗೀತ ಗಾಯಕಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement