ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಫೇಸ್ ಬುಕ್ ಗೆಳೆಯರ ಫೀಲ್

ಫೇಸ್‌ಬುಕ್ ಫ್ರೆಂಡ್‌ಶಿಪ್ ಎಂದರೆ ಬರೇ ಲೈಕ್ ಬಟನ್ ಒತ್ತುವುದಕ್ಕಷ್ಟೇ ಸೀಮಿತವಾ? ದಾವಣಗೆರೆ, ಚಿತ್ರದುರ್ಗ, ಬೆಳಗಾವಿ ಜಿಲ್ಲೆಗಳ ಈ ಗೆಳೆಯರನ್ನು ನೋಡಿ. ನಿಮಗೆ ಆದರ್ಶವಾದಾರು.

Srinivasa Murthy VN
Updated On : 18 Mar 2014, 11:31 am

ಫೇಸ್‌ಬುಕ್ ಫ್ರೆಂಡ್‌ಶಿಪ್ ಎಂದರೆ ಬರೇ ಲೈಕ್ ಬಟನ್ ಒತ್ತುವುದಕ್ಕಷ್ಟೇ ಸೀಮಿತವಾ? ದಾವಣಗೆರೆ, ಚಿತ್ರದುರ್ಗ, ಬೆಳಗಾವಿ ಜಿಲ್ಲೆಗಳ ಈ ಗೆಳೆಯರನ್ನು ನೋಡಿ. ನಿಮಗೆ ಆದರ್ಶವಾದಾರು.

ಫೇಸ್‌ಬುಕ್. ದಿನಕ್ಕೆ ನೂರಾರು ಬಾರಿ ತೆರೆದು ನೋಡುವ, ಇಷ್ಟವಾದರೆ ಗೆಳೆಯರ ಫೋಟೋಗಳಿಗೆ ಲೈಕ್ ಒತ್ತುವ, ಇನ್ನಷ್ಟು ಇಷ್ಟವಾದರೆ ಶೇರ್ ಮಾಡುವ, ಮಾತು ಹಂಚಿಕೊಳ್ಳುವ, ಕಚ್ಚಾಡಿಕೊಳ್ಳುವ ರಂಗ. ಇದನ್ನು ಅದರಿಂದಾಚೆಗೂ ಬಳಸಿಕೊಳ್ಳಬಹುದೇ?
ಬನ್ನಿ, ಈ ಯುವ ಪ್ರತಿಭೆಗಳನ್ನು ಭೇಟಿ ಮಾಡಿ. ರಾಜ್ಯದ ವಿವಿಧ ಜಿಲ್ಲೆಯ ಪ್ರತಿಭೆಗಳು ಒಂದೆಡೆ ಸೇರಿ, ತಮಗೆ ತಾವೇ ವೇದಿಕೆ ಕಲ್ಪಿಸಿಕೊಂಡಿದ್ದಾರೆ ಇಲ್ಲಿ. 'ಫೀಲ್... ಹೃದಯದಿಂದ' ಎಂಬ ಧ್ವನಿ ಸುರುಳಿ ಹೊರತಂದಿದ್ದಾರೆ. ಇದಕ್ಕೆ ಮಾಧ್ಯಮ, ಪ್ರೇರಣೆ ಫೇಸ್‌ಬುಕ್.
ಈ 9 ಜನ ಗೆಳೆಯರಲ್ಲಿ ಒಬ್ಬೊಬ್ಬರದ್ದು ಒಂದೊಂದು ಕತೆ. ಯಾರೂ ಸ್ಥಿತಿವಂತ ಕುಟುಂಬದವರಲ್ಲ. ಇವರ ಹೆತ್ತವರೆಲ್ಲ ಸರ್ಕಾರಿ ಶಾಲೆ ಜವಾನ, ಬಸ್ಸು ಚಾಲಕ, ಟಿಫಿನ್ ರೂಂ, ಸ್ಟೇಷನರಿ ಅಂಗಡಿ ಮಾಲಿಕ ಇಂಥವರೇ. ಆಲ್ಪಂಗೆ ಸಂಗೀತ ನಿರ್ದೇಶನ ಮಾಡಿರುವ 2ನೇ ವರ್ಷದ ಎಂಎಸ್ಸಿ ನರ್ಸಿಂಗ್ ವಿದ್ಯಾರ್ಥಿಗೆ ಲಕ್ಷಕ್ಕೊಬ್ಬರಲ್ಲಿ ಕಾಣಿಸಿಕೊಳ್ಳುವ ಅಪರೂಪದ ಕಾಯಿಲೆ.
ದಾವಣಗೆರೆ ಎಚ್. ಸಂತೋಷ, ಬಿ.ಎಸ್. ಯುಗರಾಜ, ಜೆ.ಪಿ. ವಿಜಯಕುಮಾರ, ಎ. ಮಣಿಕಂಠ, ಎಸ್. ಮೈತ್ರಿ, ಚಿತ್ರದುರ್ಗದ ಕೆ.ಆರ್. ವಿನೋದಕುಮಾರ, ಅಜಯ ಭಾವಸಾರ, ಪಿ. ಅಖಿಲ, ಬೆಳಗಾವಿಯ ರಾಜದೀಪ ಸಮಾನಮನಸ್ಕರು. ತಂಡದ ಮೊದಲ ಪ್ರಯತ್ನವೇ 'ಫೀಲ್‌'. ಹೊಸತನದ ಸಂಗೀತ, ಸಾಹಿತ್ಯ, ಕಂಠ ಮಾಧುರ್ಯ. ಸಂಗೀತ ನಿರ್ದೇಶನ, ಸಾಹಿತ್ಯ ರಚನೆ, ಗಾಯನ ಹೀಗೆ ಎಲ್ಲವನ್ನೂ ಇವರೇ ನಿರ್ವಹಿಸಿದ್ದಾರೆ.
ಬಡ, ಮಧ್ಯಮ ವರ್ಗದ ಈ ಹುಡುಗರು ಆರ್ಥಿಕ ನೆರವು ಕೇಳಿ ಕೆಲವರ ಬಳಿ ಹೋದರು. ಸಿಗಲಿಲ್ಲ. ಮಾಜಿ ಶಾಸಕರೊಬ್ಬರು ನಿಮ್ಮ ಹರಿಕಥೆ ಕೇಳೋಕೆ ಪುರುಸೊತ್ತಿಲ್ಲವೆಂದು 1 ಸಾವಿರ ಕೈಗಿಟ್ಟಿದ್ದರು. ಅದನ್ನು ಅಲ್ಲಿಯೇ ನಯವಾಗಿ ಮರಳಿಸಿದ ತಂಡ ಅದನ್ನು ಸವಾಲಾಗಿ ಸ್ವೀಕರಿಸಿದರು. ನಿಮ್ಮಂತಹವರಿಗೆ ದೊಡ್ಡ ಸಭಾಂಗಣವೆಲ್ಲಾ ಯಾಕೆಂಬಂತೆ ಮಾತನಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ವ್ಯಕ್ತಿಯೊಬ್ಬರ ಠೇಂಕಾರ ಇವರಲ್ಲಿ ಛಲ ತುಂಬಿತು.
ಆಲ್ಬಂಗೆ ಧಾರವಾಡದ ಜೋಯಲ್ ವಯಲಿನ್ ನುಡಿಸಿದ್ದಾರೆ. ಜಿಪಿ ಸಿಂಡ್ರೋಮ್‌ಗೆ ತುತ್ತಾಗಿರುವ ಆಲ್ಪಂನ ಸಂಗೀತ ನಿರ್ದೇಶಕ ಎಚ್. ಸಂತೋಷ್ 10 ವರ್ಷ ಹಿಂದೆಯೇ ತಂದೆ ಕಳೆದುಕೊಂಡಿದ್ದಾನೆ. ತಾಯಿ ಸರ್ಕಾರಿ ಶಾಲೆ ಆಯಾ, ಚಿಕಿತ್ಸೆಗೆ 7 ಲಕ್ಷ ಖರ್ಚು ಮಾಡಿದ್ದಾರೆ.
ಚಿತ್ರದುರ್ಗದ ಮೆದೆಹಳ್ಳಿ ಗ್ರಾಮದ ವಿನೋದಕುಮಾರ ಗೀತೆ ರಚನೆ ಮಾಡಿದ್ದಾನೆ. ದಾವಣಗೆರೆಯ ಯುಗರಾಜಗೆ ಬಿಎ ಅಪೂರ್ಣವಾದರೂ ಬರೆಯುವ ಹವ್ಯಾಸ. ಮೈಗೂಡಿಸಿಕೊಂಡಿದ್ದಾನೆ. ಪತ್ರಿಕೋದ್ಯಮ ವಿದ್ಯಾರ್ಥಿ ಅಜಯ ಭಾವಸಾರ ಗಿಟಾರ್ ನುಡಿಸಬಲ್ಲ, ಹಾಡಬಲ್ಲ. ಬೆಳಗಾವಿಯ ರಾಜದೀಪ ಸಹ ಮಧುರ ಕಂಠದಿಂದ ಗಮನ ಸೆಳೆಯುತ್ತಾರೆ. ಹೀಗೆ ಒಬ್ಬೊಬ್ಬರೂ ಪ್ರತಿಭಾಸಂಪನ್ನರು. ತಂಡಕ್ಕೆ ಪ್ರೋತ್ಸಾಹಿಸುವವರಿಗೆ: 9164893818, 8553584022.

-ನಾಗರಾಜ ಬಡದಾಳ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement