ಬೆಸ್ಟ್ ಪೊಲೀಸ್
ಸಾರ್ವಜನಿಕ ಸೇವೆಯ ಶ್ರೇಷ್ಠತೆಗೆ ನೀಡುವ ಐಎಸ್ಓ ಮಾನ್ಯತೆ ಒಂದು ಜಿಲ್ಲಾ ಎಸ್ಪಿ ಕಚೇರಿಗೆ ಸಿಗುತ್ತದೆ ಎಂದರೆ ನಂಬಲಾಗುತ್ತದೆಯೇ?
ಸಾರ್ವಜನಿಕ ಸೇವೆಯ ಶ್ರೇಷ್ಠತೆಗೆ ನೀಡುವ ಐಎಸ್ಓ ಮಾನ್ಯತೆ ಒಂದು ಜಿಲ್ಲಾ ಎಸ್ಪಿ ಕಚೇರಿಗೆ ಸಿಗುತ್ತದೆ ಎಂದರೆ ನಂಬಲಾಗುತ್ತದೆಯೇ?
'ಪೊಲೀಸರ ಸೇವೆ' ಎಂದರೆ ಹೊಮ್ಮುವ ಅರ್ಥವೇ ಬೇರೆ. ಆದರೆ, ಗದಗ ಜಿಲ್ಲಾ ಪೊಲೀಸ್ ಇಲಾಖೆಯ ಸೇವೆಗೆ ಸಂದಿರುವ ಮೆಚ್ಚುಗೆಯೇ ಬೇರೆ. ನಮ್ಮ ದೇಶದಲ್ಲಿ ಗುಣಮಟ್ಟದ ಸೇವೆಗಾಗಿ ನೀಡುವ ಐಎಸ್ಒ ಮಾನ್ಯತೆ ಪಡೆದ ದೇಶದ ಮೊದಲ ಎಸ್ಪಿ ಕಚೇರಿ ಎಂಬ ಹೆಗ್ಗಳಿಕೆ. ಜತೆಗೆ ತಂಬಾಕು ನಿಷೇಧ ಜಾರಿ ಕಾಯ್ದೆಯ ಸಮರ್ಪಕ ಅನುಷ್ಠಾನ.
ಇದೆಲ್ಲ ನಡೆದಿರುವುದು ಕ್ರಿಯಾಶೀಲ ಎಸ್ಪಿ ಡಾ. ಶರಣಪ್ಪ ಎಸ್.ಡಿ. ಅವರ ಮಾರ್ಗದರ್ಶನದಲ್ಲಿ. ಕಳೆದ ಸಾಲಿನ ಜನವರಿ ತಿಂಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಶರಣಪ್ಪ ಎಸ್.ಡಿ. ಅವರದು ಚಟುವಟಿಕೆಯ ಜೀವನ. ಜಿಲ್ಲೆಗೆ ವಿಶೇಷ ಕೊಡುಗೆ ನೀಡಬೇಕು ಎನ್ನುವ ತವಕ ಹಾಗೂ ಇಲಾಖೆಯ ಸಿಬ್ಬಂದಿಯನ್ನು ಹುರಿದುಂಬಿಸಿ ಕೆಲಸಕ್ಕೆ ಅಣಿಗೊಳಿಸುವ ಪರಿ, ಸತತ ಪರಿಶ್ರಮ ಇಂದು ದೇಶ ಮಟ್ಟದಲ್ಲಿ ಗುರುತಿಸುವ ಸ್ಥಾನಕ್ಕೆ ತಂದಿದೆ.
ದೇಶದಲ್ಲಿ ಐಎಸ್ಒ ಮಾನ್ಯತೆ ನೀಡುವುದು ಸಾರ್ವಜನಿಕ ಸೇವೆಯಲ್ಲಿರುವ ಸಂಸ್ಥೆ ಹಾಗೂ ಕೈಗಾರಿಕೆಗಳ ಗುಣಮಟ್ಟದ ಸೇವೆ ಗುರುತಿಸಿ. ಹೀಗೆ ಐಎಸ್ಒ ಪಡೆದ ದೇಶದ ಮೊದಲ ಜಿಲ್ಲಾ ಎಸ್ಪಿ ಕಚೇರಿ ಗದಗದ್ದು. ತಂಬಾಕು ಹಾಗೂ ತಂಬಾಕಿನ ಉತ್ಪನ್ನಗಳ ಬಳಕೆ ನಿಷೇಧಕ್ಕೆ ಜಿಲ್ಲೆಯ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಶಾಲೆ, ಕಾಲೇಜು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳೇ ಸಿಗುವುದಿಲ್ಲ.
ಪ್ರಶಸ್ತಿ ಪ್ರದಾನ
ಜನವರಿ 25ರಂದು ಗದಗದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ತಂಬಾಕು ನಿಷೇಧ ಪರಿಶೀಲನೆ ತಂಡದ ಸದಸ್ಯರು ಕೋಪ್ಟಾ ಜಾರಿಯಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನ ಪ್ರಶಸ್ತಿ ವಿತರಿಸಿದರು. ಮಾರ್ಚ್ 1ರ ಸಮಾರಂಭದಲ್ಲಿ ಉತ್ತರ ವಲಯದ ಐಜಿಪಿ ಹಾಗೂ ಐಎಸ್ಒ ಸಂಸ್ಥೆಯ ಅಧಿಕಾರಿಗಳು ಉತ್ತಮ ಸೇವೆಗಾಗಿ ಐಎಸ್ಒ ಮಾನ್ಯತೆ ಪ್ರಮಾಣಪತ್ರ ನೀಡಿದರು.
ಯಾರು ಈ ಎಸ್ಪಿ ?
ಡಾ.ಶರಣಪ್ಪ ಗುಲ್ಬರ್ಗ ಜಿಲ್ಲೆಯ ಖಜೂರಿ ಗ್ರಾಮದವರು. ರಾಯಚೂರಿನಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಅಗ್ರಿಗಳಲ್ಲಿ ಗೋಲ್ಡ್ ಮೆಡಲ್. ಪಿಎಚ್ಡಿ ನಂತರ ಸಾರ್ವಜನಿಕ ಸೇವೆಗೆ. 2009ರ ಐಪಿಎಸ್ ಬ್ಯಾಚ್ನ ಟಾಪರ್. ಹೆಚ್ಚುವರಿ ಎಸ್ಪಿ, ನಂತರ ಗದಗದಲ್ಲಿ ಎಸ್ಪಿ. ಸದ್ಯ ದಕ್ಷಿಣ ಕನ್ನಡ ಎಸ್ಪಿಯಾಗಿ ವರ್ಗವಾಗಿದ್ದಾರೆ.
-ಶಿವಕುಮಾರ ಕುಷ್ಟಗಿ