ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸುಪ್ರೀಂ ಕೋರ್ಟಿನ ಕಟಕಟೆಯಲ್ಲಿ ಲೋಕಶಿಕ್ಷಣ ಟ್ರಸ್ಟ್

Srinivasa Murthy VN
Updated On : 17 Mar 2014, 1:16 am

ಹೈಕೋರ್ಟ್ ತೀರ್ಪನ್ನು ನೀಡಿದ ನಂತರ ಅದರ ರಿಜಿಸ್ಟ್ರಾರರು ಇಬ್ಬರು ರಿಸೀವರ್‌ಗಳಿಗೆ ಪತ್ರ ಬರೆದು, ಕೋರ್ಟಿನ ತೀರ್ಪನ್ನು ತಿಳಿಸಿ, ಅವರ ಸ್ವಾಧೀನದಲ್ಲಿದ್ದ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಟ್ರಸ್ಟಿನ ಧರ್ಮದರ್ಶಿಗಳ ಮಂಡಲಿಯ ಅಧ್ಯಕ್ಷರಾದ ಬಿ.ಡಿ. ಜತ್ತಿಯವರ ಸ್ವಾಧೀನಕ್ಕೆ ಕೊಡುವಂತೆ ಆಜ್ಞೆ ಮಾಡಿದರು. ಅದರಂತೆ ಇಬ್ಬರು ರಿಸೀವರ್‌ಗಳು ತಮ್ಮ ಸ್ವಾಧೀನದಲ್ಲಿದ್ದ ಆಸ್ತಿಗಳನ್ನು ಜತ್ತಿಯವರಿಗೆ ವಹಿಸಿಕೊಟ್ಟರು. 1986ನೇ ಮಾರ್ಚ್ 10ರಂದು ರಿಸೀವರ್ ಆರ್.ಜೆ. ದೇಸಾಯಿಯವರು ತಮ್ಮ ಸ್ವಾಧೀನದಲ್ಲಿದ್ದ ಚರಾಸ್ತಿಗಳನ್ನು ಮಾರ್ಚ್ 11ರಂದು ಹುಬ್ಬಳ್ಳಿ ತಹಸೀಲ್ದಾರರು ತಮ್ಮ ಸ್ವಾಧೀನದಲ್ಲಿದ್ದ ಸ್ತಿರಾಸ್ತಿಗಳನ್ನು ನೂತನ ಧರ್ಮದರ್ಶಿ ಮಂಡಲಿ ಅಧ್ಯಕ್ಷರಿಗೆ ಒಪ್ಪಿಸಿದರು.

ಸುದೈವದಿಂದ ನನ್ನ ಸಂಬಂಧಿಕರಾದ ಡಾ. ಆರ್.ಎಸ್. ಕುಂಭಕೋಣಂ ಮತ್ತು ಸ್ನೇಹಿತ ಡಿ.ಡಿ. ಜಾಂಬ್ಳೆಯವರು ಹೈಕೋರ್ಟಿಗೆ ಸಲ್ಲಿಸಬೇಕಾಗಿದ್ದ ಮೇಲ್ಮನವಿಗೆ ರುಜು ಹಾಕಲುಒಪ್ಪಿದರು. ಅಂತೂ 1984ನೇ ಜುಲೈ ತಿಂಗಳಿನಲ್ಲಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಯಿತು. (ಆರ್‌ಎಫ್‌ಎ 331/84) ಇದರ ಜೊತೆಗೆ ಚಾರಿಟಿ ಕಮಿಷನರರು ಸಹ ಮತ್ತೊಂದು ಮೇಲ್ಮನವಿ ಸಲ್ಲಿಸಿ, ಧಾರವಾಡ ಜಿಲ್ಲಾ ನ್ಯಾಯಾಧೀಶರ ಆಜ್ಞೆಯನ್ನು ಪ್ರಶ್ನಿಸಿದರು. (ಆರ್‌ಎಫ್‌ಎ 331/84). ಈ ಎರಡೂ ಮೇಲ್ಮನವಿಗಳ ವಿಚಾರಣೆ ಒಟ್ಟಿಗೆ ನಡೆಯಿತು ಮತ್ತು ಜಿಲ್ಲಾ ನ್ಯಾಯಾಧೀಶರ ತೀರ್ಪನ್ನು ತಡೆಹಿಡಿಯಲಾಯಿತು. ಒಂದು ವಿಶೇಷ ಸಂಗತಿ ಎಂದರೆ ಈ ಮೇಲ್ಮನವಿಗಳು ಅಂಗೀಕಾರಕ್ಕಾಗಿ ಹೈಕೋರ್ಟಿನಲ್ಲಿ ನ್ಯಾ. ಸಭಾಹಿತರ ಮುಂದೆ ಬಂದಾಗ ಸ್ವತಃ ಆರ್.ಆರ್. ದಿವಾಕರರು ಕೋರ್ಟಿಗೆ ಬಂದು ಅವರ ಮುಂದೆ ಕುಳಿತಿದ್ದರು. ಆದರೆ ನ್ಯಾಯಾಧೀಶರು ಅದನ್ನು ಲೆಕ್ಕಿಸದೆ, ಮೇಲ್ಮನವಿಗಳನ್ನು ವಿಚಾರಣೆಗೆ ಅಂಗೀಕರಿಸಿ, ತಡೆಯಾಜ್ಞೆ ನೀಡಿದರು. ಮುಂದೆ ಈ ಎರಡೂ ಮೇಲ್ಮನವಿಗಳು ನ್ಯಾಯಮೂರ್ತಿ ಆರ್.ಜೆ. ದೇಸಾಯಿ ಮತ್ತು ನ್ಯಾಯಾಧೀಶ ರಾಮಕೃಷ್ಣ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದವು. ಸುಮಾರು ಎರಡು ವರ್ಷ ವಿಚಾರಣೆ ನಡೆಯಿತು. ಕೊನೆಗೆ ತಾ. 28.02.86ರಂದು ಕೋರ್ಟ್ ಈ ಬಗ್ಗೆ ತೀರ್ಪು ನೀಡಿತು.
ಈ ತೀರ್ಪಿನ ಪ್ರಕಾರ ಲೋಕ ಶಿಕ್ಷಣ ಟ್ರಸ್ಟನ್ನು ಪಬ್ಲಿಕ್ ಚಾರಿಟೇಬಲ್ ಟ್ರಸ್ ಎಂದು ಘೋಷಿಸಲಾಯಿತು ಮತ್ತು ಇದುವರೆಗೆ ಟ್ರಸ್ಟಿಗಳಾಗಿದ್ದ ಆರ್. ಆರ್. ದಿವಾಕರ್ ಮತ್ತು ಅನಂತ ದಿವಾಕರರನ್ನು ಟ್ರಸ್ಟಿನಿಂದ ವಜಾ ಮಾಡಿ, ಈ ಹುದ್ದೆಗಳಿಗೆ ಅವರು ಅನರ್ಹರೆಂದು ಹೇಳಲಾಯಿತು. ಇನ್ನು ಮುಂದೆ ಟ್ರಸ್ಟ್ ಆಡಳಿತವನ್ನು ನೋಡಿಕೊಳ್ಳಲು ಮಾಜಿ ಉಪರಾಷ್ಟ್ರಪತಿ ಬಿ.ಡಿ. ಜತ್ತಿಯವರ ಅಧ್ಯಕ್ಷತೆಯಲ್ಲಿ ಐದು ಜನ ಧರ್ಮದರ್ಶಿಗಳ ಒಂದು ಮಂಡಲಿಯನ್ನು ರಚನೆ ಮಾಡಲಾಯಿತು. ಕರ್ನಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ಎಸ್.ಎನ್. ಅಡಿಗ, ನಿವೃತ್ತ ಡಿಐಜಿ ಆರ್.ಎ. ಮುಂಡಕೂರ್, ಪವರ್ ಕಾರ್ಪೊರೇಷನ್ ಮಾಜಿ ಅಧ್ಯಕ್ಷ ಎಸ್.ಪಿ. ಭಟ್ ಮತ್ತು ಧಾರವಾಡದ ಹಿರಿಯ ನ್ಯಾಯವಾದಿ ಜಿ.ಎಂ. ಪಾಟೀಲರು ಈ ಮಂಡಲಿಯ ಇತರ ಸದಸ್ಯರಾಗಿದ್ದರು. ಮಂಡಲಿಯ ಮಾರ್ಗದರ್ಶನಕ್ಕಾಗಿ ಹೈಕೋರ್ಟ್ ಒಂದು ಯೋಜನೆಯನ್ನೂ ಸಿದ್ಧಪಡಿಸಿಕೊಟ್ಟಿತ್ತು. ಇದರ ಪ್ರಕಾರವೇ ಟ್ರಸ್ಟಿನ ಆಡಳಿತವನ್ನು ನಡೆಸಬೇಕಾಗಿತ್ತು.
ಹೈಕೋರ್ಟ್ ತೀರ್ಪನ್ನು ನೀಡಿದ ನಂತರ ಅದರ ರಿಜಿಸ್ಟ್ರಾರರು ಇಬ್ಬರು ರಿಸೀವರ್‌ಗಳಿಗೆ ಪತ್ರ ಬರೆದು, ಕೋರ್ಟಿನ ತೀರ್ಪನ್ನು ತಿಳಿಸಿ, ಅವರ ಸ್ವಾಧೀನದಲ್ಲಿದ್ದ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಟ್ರಸ್ಟಿನ ಧರ್ಮದರ್ಶಿಗಳ ಮಂಡಲಿಯ ಅಧ್ಯಕ್ಷರಾದ ಬಿ.ಡಿ. ಜತ್ತಿಯವರ ಸ್ವಾಧೀನಕ್ಕೆ ಕೊಡುವಂತೆ ಆಜ್ಞೆ ಮಾಡಿದರು. ಅದರಂತೆ ಇಬ್ಬರು ರಿಸೀವರ್‌ಗಳು ತಮ್ಮ ಸ್ವಾಧೀನದಲ್ಲಿದ್ದ ಆಸ್ತಿಗಳನ್ನು ಜತ್ತಿಯವರಿಗೆ ವಹಿಸಿಕೊಟ್ಟರು. 1986ನೇ ಮಾರ್ಚ್ 10ರಂದು ರಿಸೀವರ್ ಆರ್.ಜೆ. ದೇಸಾಯಿಯವರು ತಮ್ಮ ಸ್ವಾಧೀನದಲ್ಲಿದ್ದ ಚರಾಸ್ತಿಗಳನ್ನು ಮಾರ್ಚ್ 11ರಂದು ಹುಬ್ಬಳ್ಳಿ ತಹಸೀಲ್ದಾರರು ತಮ್ಮ ಸ್ವಾಧೀನದಲ್ಲಿದ್ದ ಸ್ತಿರಾಸ್ತಿಗಳನ್ನು ನೂತನ ಧರ್ಮದರ್ಶಿ ಮಂಡಲಿ ಅಧ್ಯಕ್ಷರಿಗೆ ಒಪ್ಪಿಸಿದರು.
ಪರಭಾರೆ ಸಮಸ್ಯೆ ಇನ್ನೂ ಇದೆ
ಹೈಕೋರ್ಟಿನ ತೀರ್ಪಿನ ಬಗ್ಗೆ ಇನ್ನೂ ಒಂದೆರಡು ಮಾತುಗಳನ್ನು ಹೇಳುವುದು ಅವಶ್ಯ. 1974ರಲ್ಲಿ ದಿವಾಕರರು ಪರಭಾರೆ ಮಾಡಿದ್ದ ಟ್ರಸ್ಟಿನ ಆಸ್ತಿಗಳು ಮತ್ತು ಪ್ರಕಟಣೆಗಳ ಪರಭಾರೆ ಬಗ್ಗೆ ಕೋರ್ಟ್ ತೀರ್ಪು ಕೊಟ್ಟಿರಲಿಲ್ಲ. ಏಕೆಂದರೆ ಈ ಪರಭಾರೆ ವ್ಯವಹಾರ ಕಾನೂನುಬದ್ಧವೇ ಅಥವಾ ಅಲ್ಲವೇ ಎಂಬ ಬಗ್ಗೆ ಧಾರವಾಡ ಜಿಲ್ಲಾ ನ್ಯಾಯಾಧೀಶರು ತೀರ್ಮಾನಿಸಿರಲಿಲ್ಲ. ಆ ಪ್ರಶ್ನೆ ಹಾಗೆಯೇ ಇತ್ತು. ಆದ್ದರಿಂದ ಹೈಕೋರ್ಟ್ ಈ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಹಿಂಜರಿಯಿತು. ಲೋಕ ಶಿಕ್ಷಣ ಟ್ರಸ್ಟ್ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಎಂದು ಮಾತ್ರ ಹೇಳಿ ಪರಭಾರೆ ವ್ಯವಹಾರದ ಪ್ರಶ್ನೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಬಿಟ್ಟು ಬಿಡಲು ಅದು ಯೋಚಿಸಿತ್ತು ಮತ್ತು ಜಿಲ್ಲಾ ನ್ಯಾಯಾಲಯದ ತೀರ್ಪು ಬರುವವರೆಗೆ ಪತ್ರಿಕೆಗಳನ್ನು ಜಯಕರ್ನಾಟಕ ಕಂಪೆನಿಯವರಿಗೆ ಕೊಟ್ಟು ನಡೆಸಿಕೊಂಡು ಹೋಗುವಂತೆ ಹೇಳಲು ಸಹ ಅದು ತೀರ್ಮಾನಿಸಿತ್ತು.
ಆದರೆ ಜಯಕರ್ನಾಟಕ ಕಂಪೆನಿಯ ವಕೀಲರು ಇದಕ್ಕೆ ಒಪ್ಪಲಿಲ್ಲ. ಈ ಪತ್ರಿಕೆಗಳ ದೆಸೆಯಿಂದ ತಾವು ಈಗಾಗಲೇ ಅಪಾರ ನಷ್ಟ ಹೊಂದಿರುವುದರಿಂದ ಪುನಃ ಇವನ್ನು ನಡೆಸುವುದು ಸಾಧ್ಯವೇ ಇಲ್ಲವೆಂದು ಸ್ಪಷ್ಟವಾಗಿ ಹೇಳಿದರು. ಆಗ ಕೋರ್ಟು ಬೇರೆ ಯಾವ ಉಪಾಯವನ್ನೂ ಕಾಣದೆ, ಟ್ರಸ್ಟಿನ ಆಸ್ತಿಗಳ ಮತ್ತು ಪ್ರಕಟಣೆಗಳ ಆಡಳಿತಕ್ಕಾಗಿ ಪ್ರತ್ಯೇಕವಾಗಿ ತಾನೇ ಒಂದು ಮಂಡಲಿಯನ್ನು ರಚಿಸಲು ತೀರ್ಮಾನಿಸಿತು. ಈ ಮಂಡಲಿಯೇ ಇದುವರೆಗೆ ಆಡಳಿತ ನಡೆಸುತ್ತಿದೆ. ಇದು ಅತ್ಯಂತ ಮಹತ್ವದ ಸಂಗತಿ. ಏಕೆಂದರೆ ನೂತನ ಆಡಳಿತ ಮಂಡಳಿಯ ಬಗ್ಗೆ ಅನೇಕರಲ್ಲಿ ತಪ್ಪು ತಿಳಿವಳಿಕೆಗಳಿವೆ. ಜಯಕರ್ನಾಟಕ ಕಂಪೆನಿಯವರಿಂದ ಅಥವಾ ರಿಸೀವರುಗಳಿಂದ ನೂತನ ಮಂಡಲಿ ಆಡಳಿತ ವಹಿಸಿಕೊಂಡಿತೆಂದು ಅನೇಕರು ಬಾವಿಸಿದ್ದಾರೆ. ಇದು ತಪ್ಪು. ಇಂದಿನ ಆಡಳಿತ ವರ್ಗದವರಿಗೂ ಹಿಂದಿನ ಆಡಳಿತ ಮಂಡಲಿಗೂ ಸಂಬಂಧವಿಲ್ಲ. ಹೈಕೋರ್ಟಿನ ಆದೇಶದ ಮೇರೆಗೆ ರಚಿಸಿದ ಮಂಡಲಿ 10.03.1986ರಿಂದ ಅಧಿಕಾರದಲ್ಲಿದೆ. ಹೈಕೋರ್ಟ್‌ನ ಆದೇಶದ ಪ್ರಕಾರ ರಿಸೀವರ್‌ಗಳು ಕೇವಲ ಆಸ್ತಿಗಳನ್ನು ಮಾತ್ರ ನೂತನ ಮಂಡಲಿಗೆ ವಹಿಸಿಕೊಟ್ಟರಲ್ಲದೆ, ಹಿಂದಿನ ಆಡಳಿತ ವರ್ಗಗಳ ಸಾಲಸೋಲಗಳನ್ನು ವಹಿಸಿಕೊಡಲಿಲ್ಲ. ಲೆಕ್ಕಗಳನ್ನೂ ಕೊಡಲಿಲ್ಲ. ಸಾಲಸೋಲಗಳಿಗೆ ಹಿಂದಿನ ಆಡಳಿತ ಮಂಡಳಿಗಳೇ ಹೊಣೆ ಎಂಬುದು ಹೊಸ ಆಡಳಿತ ಮಂಡಳಿಯ ನಿಲುವು. ಈ ಸಾಲ ಸೋಲಗಳ ಬಗ್ಗೆ ಹೈಕೋರ್ಟಿನ ತೀರ್ಪಿನಲ್ಲಾಗಲಿ, ಅದು ರಚಿಸಿದ ಯೋಜನೆಯಲ್ಲಾಗಲಿ ಒಂದು ಶಬ್ಧವೂ ಇಲ್ಲದಿರುವುದು ಗಮನಾರ್ಹ. ಈ ಸಾಲಗಳನ್ನು ತಾವು ತೀರಿಸುವುದಾಗಿ ಮತ್ತು ಕಾರ್ಮಿಕರಿಗೆ ಕೊಡಬೇಕಾಗಿದ್ದ ಎಲ್ಲ ಹಣವನ್ನು ತಾವು ಕೊಡುವುದಾಗಿ ಕೆಪಿಪಿ ಮತ್ತು ಜೆಕೆಎನ್‌ಪಿಯವರು ಬರೆದು ಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಒಪ್ಪಂದಗಳು ಕಾನೂನುಬದ್ಧವಾಗಿ ನೋಂದಾಯಿಸಲ್ಪಟ್ಟಿವೆ. ಅಂದ ಮೇಲೆ ಇವುಗಳ ಜವಾಬ್ದಾರಿ ಈ ಎರಡು ಕಂಪೆನಿಗಳದ್ದೇ ಹೊರತು ತಮ್ಮದ್ದಲ್ಲವೆಂಬುದು ನೂತನ ಆಡಳಿತ ಮಂಡಳಿಯ ನಿಲುವು.
ಸುಪ್ರೀಂ ಕೋರ್ಟಿನಲ್ಲಿ
ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ದಿವಾಕರರು ನಿರ್ಧರಿಸಿ, ಈ ತೀರ್ಪಿಗೆ ತಡೆಯಾಜ್ಞೆ ನೀಡಬೇಕೆಂದೂ, ಮೇಲ್ಮನವಿ ಸಲ್ಲಿಸಲು ಅನುಮತಿ ಕೊಡಬೇಕೆಂದೂ ಕೇಳಿಕೊಂಡರು. ಆದರೆ ಕೋರ್ಟ್ ತಡೆಯಾಜ್ಞೆ ನೀಡಲಿಲ್ಲ. ಸುಪ್ರೀಂ ಕೋರ್ಟಿಗೆ ಹೋಗಲು ಅನುಮತಿಯನ್ನೂ ಕೊಡಲಿಲ್ಲ. ಆದರೂ ದಿವಾಕರರು ಸುಪ್ರೀಂ ಕೋರ್ಟಿನಲ್ಲಿ ವಿಶೇಷ ಅನುಮತಿಗೆ ಅರ್ಜಿ ಕೊಟ್ಟು, ಹೈಕೋರ್ಟಿನ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಿದರು. ಈ ಅರ್ಜಿಗಳು ಅಂಗೀಕಾರವಾದರೆ ಟ್ರಸ್ಟಿನ ಆಸ್ತಿಗಳಿಗೆ ಒಬ್ಬ ರಿಸೀವರನ್ನು ತಕ್ಷಣ ನೇಮಿಸಬೇಕೆಂದು ಅವರು ಕೇಳಿಕೊಂಡಿದ್ದರು. ಆ ಅರ್ಜಿಯನ್ನು ವಿರೋಧಿಸುವುದಕ್ಕಾಗಿ ಟ್ರಸ್ಟಿನ ಹಿತೈಷಿಗಳು ದೆಹಲಿವರೆಗೂ ಹೋಗಬೇಕಾಯಿತು. ದಿವಾಕರರ ಪರವಾಗಿ ಮುಂಬೈ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ತಾರ್ಕುಂಡೆಯವರು ವಕಾಲತ್ತು ವಹಿಸಿದ್ದರು. ಟ್ರಸ್ಟಿನ ಹಿತೈಷಿಗಳ ಪರವಾಗಿ ಸೋಲಿ ಸೊರಾಬ್ಜಿ ವಕಾಲತ್ತು ವಹಿಸಿದ್ದರು.
ದಿವಾಕರರ ಅರ್ಜಿ ವಿಚಾರಣೆ ಮೊದಲು ನ್ಯಾ. ಇ.ಎಸ್. ವೆಂಕಟರಾಮಯ್ಯ ಮತ್ತು ನ್ಯಾ.ರೇ ಅವರ ಮುಂದೆ ಬಂದಿತ್ತು. ಆ ಸಮಯದಲ್ಲಿ ನಾವು ನ್ಯಾಯಪೀಠದ ಮುಂದೆಯೇ ಇದ್ದ ಕುರ್ಚಿಗಳಲ್ಲಿ ಕುಳಿತಿದ್ದೆವು. ನನ್ನನ್ನು ನೋಡಿ ನ್ಯಾ. ವೆಂಕಟರಾಮಯ್ಯನವರು ಈ ಅರ್ಜಿಗಳ ವಿಚಾರಣೆ ನನ್ನ ಮುಂದೆ ಬೇಡ, ವಾದಿ, ಪ್ರತಿವಾದಿಗಳನ್ನು ನಾನೂ ಚೆನ್ನಾಗಿ ಬಲ್ಲೆ. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಬೇರೆ ನ್ಯಾಯಾಧೀಶರ ಮುಂದೆ ಇದರ ವಿಚಾರಣೆ ಆಗಲಿ ಎಂದು ಹೇಳಿದರು. ನಮಗೆ ನಿರಾಶೆಯಾದರೂ ಏನೂ ಮಾಡುವಂತಿರಲಿಲ್ಲ. ಮುಂದೆ ಈ ಅರ್ಜಿಯ ವಿಚಾರಣೆ ನ್ಯಾ. ಮುಖರ್ಜಿ ಮತ್ತು ನ್ಯಾ.ರೇ ಅವರ ಪೀಠದ ಮುಂದೆ ಬಂದಿತು. ನ್ಯಾ. ಮುಖರ್ಜಿಯವರು ಈ ಅರ್ಜಿಯನ್ನು ಹಿಂದಿನ ದಿನವೇ ಚೆನ್ನಾಗಿ ಅಭ್ಯಾಸ ಮಾಡಿಕೊಂಡು ಬಂದಿದ್ದರು. ವಿಚಾರಣೆಯ ಕಾಲಕ್ಕೆ ನಮ್ಮ ವಕೀಲರಾದ ಸೋಲಿ ಸೊರಾಬ್ಜಿಯವರು ಹಾಜರಿರಲಿಲ್ಲ.
(ಮುಂದುವರಿಯುವುದು)

ಕೆ.ಶ್ಯಾಮರಾವ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement