ಸೃಷ್ಟಿಕರ್ತ ಯಾರು?
ಸಂಸ್ಕೃತ ಕಾವ್ಯ ಸಾಹಿತ್ಯಗಳಲ್ಲಿ ಶೃಂಗಾರ ರಸಕ್ಕೆ ಪೂರಕವಾಗಿ ಸ್ತ್ರೀಯರ ಅಂಗಾಂಗಗಳ ವರ್ಣನೆ ನಡೆದಿರುವಂತೆ ಪುರುಷರ ದೇಹವರ್ಣನೆ ನಡೆದಿರುವುದು ಕಮ್ಮಿ. ಇಲ್ಲವೆಂದೇ ಹೇಳಬಹುದು. ಅದರಲ್ಲಿ ಶೃಂಗಾರಕ್ಕೆ ಪೋಷಕವಾದದ್ದು ಏನಿದೆ? ತೋಳುಗಳು ಬಾಳೆದಿಂಡಿನಂತಿರದೆ ಕಬ್ಬಿಣದ ಕೊರಡಿನಂತಿರುತ್ತವೆ; ಮುಖ ಮೂರಿ ದಿನದಿಂದ ಶೇವ್ ಮಾಡದೆ ಹುಲ್ಲುಮೆದೆಯಂತಿರುತ್ತದೆ; ಮೂಗು ಕಪ್ಪೆಯ ಹಾಗಿರುವುದೇ ಹೆಚ್ಚು; ಮೈ ರೋಮಾವಳಿಯಿಂದ ತುಂಬಿ ಹೋಗಿರುತ್ತದೆ. ಇಂಥ ಮೈಗೆ ವರ್ಣನೆ ಬೇರೆ ಕೇಡು ಎಂದು ಹೆಚ್ಚಿನವರು ಮೂಗು ಮುರಿಯಬಹುದು.
ಆದರೆ ಇಲ್ಲೊಬ್ಬ ಕಿಲಾಡಿ ಕವಿ, ದಿಗ್ಮೂಢಗೊಳಿಸುವಂಥ ಪ್ರಹೇಳಿಕೆಯೊಂದನ್ನು ಬರೆದುಬಿಟ್ಟಿದ್ದಾನೆ. ಪ್ರಹೇಳಿಕೆ ಎಂದರೆ ಒಗಟು. ಅದೂ ಚಾಟೂಕ್ತಿಯ ರೂಪದಲ್ಲಿರುತ್ತದೆ. ಒಗಟು ಬಿಡಿಸಬೇಕಾದ್ದು ಜಾಣರ ಕಾಯಕ.
ಛತ್ರಧಾರಿ ನ ರಾಜಾಸೌ ಜಟಾಧಾರೀ ನಚೇಶ್ವರಃ
ಸೃಷ್ಟಿಕರ್ತಾ ನ ಸ ಬ್ರಹ್ಮಾ ಛಿದ್ರಕರ್ತಾ ನ ತಸ್ಕರಃ
ಈತನಿಗೆ ಛತ್ರದ ಮರೆಯಿದೆ, ಆದರೆ ರಾಜನಲ್ಲ. ಜಟಾಜೂಟವಿದೆ, ಆದರೆ ಶಿವನಲ್ಲ. ಸೃಷ್ಟಿಸುವ ಶಕ್ತಿ ಇದೆ, ಆದರೆ ಬ್ರಹ್ಮನಲ್ಲ. ಕನ್ನ ಕೊರೆಯಲು ಚೆನ್ನಾಗಿ ಬಲ್ಲ, ಆದರೆ ಕಳ್ಳನಲ್ಲ. ಇದು ಯಾವುದು?
ಊಹಿಸಿದವರಿಗೆ ಬಹುಮಾನವಿಲ್ಲ. ಈ ಪೋಲಿ ಕವಿಯ ಪ್ರತಿಭೆಗೆ ಸಾಟಿಯೇ ಇಲ್ಲ. ಶೃಂಗಾರ ಸನ್ನಿವೇಶದಲ್ಲಿ ಪುರುಷನಿಗೆ ಬಲು ಪ್ರಧಾನವಾದ, ಆತನ ಪುರುಷತ್ವದ ಪ್ರತೀಕವೇ ಆದ, ಅದಿಲ್ಲದೆ ಮದುಮಗನೇ ಇಲ್ಲ ಅನ್ನುತ್ತೇವಲ್ಲ ಅಂಥ ಗಾದೆಗೆ ಮೂಲವಾದ ಮದನಧ್ವಜಕ್ಕೆ ನಮಸ್ಕಾರ.