ನ್ಯಾನೋ ಕತೆಗಳು
ಶಾಲೆಯಲ್ಲಿ ಚಿತ್ರಕಲೆ ಮಾಸ್ತರಿಂದ ಸದಾ ಬೈಸಿಕೊಳ್ಳುತ್ತಿದ್ದವ ಮುಂದೆ ಹೆಸರಾಂತ ವ್ಯಂಗ್ಯಚಿತ್ರಗಾರನಾದ.
=
ಹಾಗಲಕಾಯಿ ಕಹಿ ಎಂದು ನಿರಾಕರಿಸುತ್ತಿದ್ದವ ಮುಂದೆ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾಗ ಸಿಹಿಯಾಗಿದೆ ಎಂದು ತಿನ್ನತೊಡಗಿದ.
=
ಮನೆ ಮನೆಗೆ ಹೋಗಿ ಮಕ್ಕಳನ್ನು ತನ್ನ ಶಾಲೆಗೆ ಕರೆತರುತ್ತಿದ್ದ ಸರ್ಕಾರಿ ಶಾಲೆಯ ಶಿಕ್ಷಕ ತನ್ನ ಮಕ್ಕಳನ್ನು ಕಾನ್ವೆಂಟಿಗೆ ಕಳುಹಿಸುತ್ತಿದ್ದಾನೆ.
=
ನಾಗರಪಂಚಮಿಯಂದು ಹುತ್ತಕ್ಕೆ ಭಕ್ತಿಯಿಂದ ಹಾಲೆರೆಯುತ್ತಿದ್ದ ಜನ ಬೇರೊಂದು ದಿನ ತನ್ನ ಪಾಡಿಗೆ ತಾನೆಂದು ಹರಿದಾಡುತ್ತಿದ್ದ ಹಾವನ್ನು ಬಡಿದು ಸಾಯಿಸಿದರು.
=
ವರದಕ್ಷಿಣೆ ಬೇಡವೆಂದ ಆದರ್ಶ ಯುವಕನಿಗೆ ಹೆಣ್ಣು ಕೊಡಲು ಅನುಮಾನಿಸುತ್ತಿದ್ದಾರೆ, ಹೆತ್ತವರು.
=
ಹೊಟ್ಟೆ ಬಟ್ಟೆ ಕಟ್ಟಿ ಸಂಪಾದಿಸಿದವನಿಗೆ ಹೊಟ್ಟೆ ತುಂಬಾ ರುಚಿ, ರುಚಿ ಎನಿಸುವ ತಿಂಡಿ ತಿನ್ನಬೇಕೆನಿಸಿದಾಗ ಹಲವಾರು ರೋಗಗಳು ಅಡ್ಡ ಬಂದಿವೆ.
=
'ಹೆಣ್ಣು ಎಂದಿಗೂ ಗಂಡಿನ ಗುಲಾಮಳಲ್ಲ' ಎಂದು ವಾದ ಮಂಡಿಸುತ್ತಿದ್ದವಳಿಗೆ ಗಂಡನಿಂದ ಬುಲಾವ್ನ ಫೋನ್ ಬರಲು ವಾದ ಅರ್ಧಕ್ಕೆ ನಿಲ್ಲಿಸಿ ಮನೆ ಸೇರಿದಳು.
=
ಬಾಡಿಗೆ ಬಸುರಿನಲ್ಲಿ ಹುಟ್ಟಿದ ಮಗು ಅಂಗವಿಕಲ ಎಂಬ ಕಾರಣಕ್ಕೆ ಅನಾಥಾಲಯ ಸೇರಿದೆ.
=
ಕುದುರೆ ಬಾಲದ ಹಿಂದೆ ಬಿದ್ದು ಹಣ ಕಟ್ಟುತ್ತಿದ್ದ ಶ್ರೀಮಂತನಿಗೆ 'ಆದಷ್ಟು ಬೇಗ ಅದೃಷ್ಟ ಲಕ್ಷ್ಮಿ ಒದೆಯುತ್ತಾಳೆ ಜಾಗ್ರತೆ' ಎಂಬ ಜ್ಯೋತಿಷಿಯ ಮಾತುಗಳು ಎಚ್ಚರಿಕೆಯ ಗಂಟೆಯಾಗಿತ್ತು.
=
ಮಗನ ಹಸಿವನ್ನು ಮರೆಸಲು ಅಮ್ಮ ಕಟ್ಟಿ ಹೇಳುತ್ತಿದ್ದ ಕತೆಗಳು ಮುಂದೆ ಪುಸ್ತಕ ರೂಪ ಪಡೆದು ಮಗನ ಹೊಟ್ಟೆಪಾಡಿಗೆ ದಾರಿಯಾಯಿತು.
= ಗಂಗಾಚಾರಿ, ಬೆಂಗಳೂರು