ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪದ ಕಾರಣ

ಮಾತು ಬಲ್ಲವನಿಗೆ ರಾಜಕಾರಣ ಸಲೀಸು. ಯಾಕಂದ್ರೆ ಆತ ಮಾತಿನಲ್ಲೇ ಮನೆ ಕಟ್ಟಬಲ್ಲ.

Srinivasa Murthy VN
Updated On : 23 Mar 2014, 2:28 am

ಮಾತು ಬಲ್ಲವನಿಗೆ  ರಾಜಕಾರಣ ಸಲೀಸು. ಯಾಕಂದ್ರೆ ಆತ ಮಾತಿನಲ್ಲೇ ಮನೆ ಕಟ್ಟಬಲ್ಲ. ಆಶ್ವಾಸನೆಗಳ ಮೂಲಕ ಜನರನ್ನು ಸೆಳೆಯಬಲ್ಲ. ತನ್ನ ಅಸಂಖ್ಯಾತ ಹುಳುಕುಗಳನ್ನು, ಭ್ರಷ್ಟಾಚಾರಗಳನ್ನು ಕೂಡ ಬಣ್ಣದ ಮಾತುಗಳ ಮೂಲಕ ಮುಚ್ಚಿ ಹಾಕಬಲ್ಲ.  ಹಾಗಂತ ಮಾತೇ ಮುತ್ತು ಅನ್ನೋದು ಎಲ್ಲ ಬಾರಿಯೂ ವರ್ಕೌಟ್ ಆಗಿದೆ ಅಂತೇನೂ ಅಲ್ಲ. ಹಲವು ಬಾರಿ ಮಾತೇ ಮೃತ್ಯು ಎಂಬಂತೆ  ಅವರ  ರಾಜಕೀಯ ಭವಿಷ್ಯಕ್ಕೆ ಕುತ್ತು ತಂದಿರುವ ಉದಾಹರಣೆಗಳೂ ಇವೆ. ಹಲವು ಸಾಮಾಜಿಕ ವಿಷಯಕ್ಕೆ ಸಂಬಂಧ ಪಟ್ಟಂತೆ ಘಟನೆಯ ಗಂಭೀರತೆ ತಿಳಿಯದೆ ಲಘುವಾಗಿ ಪ್ರತಿಕ್ರಿಯಿಸಿ ತೀವ್ರ ಪ್ರತಿಭಟನೆಗೆ ಒಳಗಾದ ರಾಜಕಾರಣಿಗಳ ಉದಾಹರಣೆ ನಮ್ಮೆದುರಿಗಿದೆ. ಕೆಲವರು ಮಂತ್ರಿಗಿರಿಯಿಂದ ಎತ್ತಂಗಡಿ ಆಗಿದ್ದಿದೆ, ರಾಜಕೀಯ ಭವಿಷ್ಯವೇ ಮುಳುಗಿ ಹೋಗಿದ್ದಿದೆ.  ಇನ್ನು ಕೆಲವೊಮ್ಮೆ ಹಾಸ್ಯಾಸ್ಪದ ಹೇಳಿಕೆ ನೀಡಿ ಜೋಕರ್ ಆದದ್ದೂ ಇದೆ. ಬಾಯಿಚಪಲಕ್ಕೆ ಮಾತಾಡೋ ರಾಜಕಾರಣಿಗಳು, ಜನರನ್ನು ರಂಜಿಸಲೆಂದೇ ಮಾತಾಡುವ ನಾಯಕರು, ವಿವಾದ ಸೃಷ್ಟಿಸಲೆಂದೇ ಮಾತಾಡುವ ರಾಜಕಾರಣಿಗಳೂ ನಮ್ಮಲಿದ್ದಾರೆ. ಈಗಂತೂ ಸಾಮಾಜಿಕ ತಾಣಗಳು ವಿರೋಧ ಪಕ್ಷಗಳನ್ನು ಮೀರಿಸುವ ಲೆವೆಲ್ಲಿಗೆ ಆ್ಯಕ್ಟಿವ್ ಇರುವುದರಿಂದ ಯಾವುದೇ ವ್ಯಕ್ತಿ ಏನೇ ಹೇಳಿಕೆ ಕೊಟ್ಟರೂ ಅದಕ್ಕೆ ವ್ಯಂಗ್ಯವಾಗಿ, ವಿರೋಧವಾಗಿ, ಪರವಾಗಿ ಹೀಗೆ ತಕ್ಷಣಕ್ಕೆ ಸಾವಿರಾರು ಪ್ರತಿಕ್ರಿಯೆಗಳು ಹುಟ್ಟಿ ಅದು ರಾಜಕಾರಣಿಯ ಭವಿಷ್ಯಕ್ಕೆ ಪೆಟ್ಟು ಕೊಡುವ ಮಟ್ಟಕ್ಕೆ ಹೋಗುವಂತಾಗಿದೆ.
ಅರ್ನಬ್ ಗೋಸ್ವಾಮಿಯೊಂದಿಗಿನ ರಾಹುಲ್ ಗಾಂಧಿ ಸಂದರ್ಶನವಿರಬಹುದು, ಶ್ರೀರಾಮುಲು, ರೇಣುಕಾಚಾರ್ಯ ಮುಂತಾದವರ ಟೀವಿ ಸಂದರ್ಶನಗಳಿರಬಹುದು, ಜನರಿಗೆ ಪುಕ್ಕಟೆ ಮನರಂಜನೆ ಹಾಗೂ ಚರ್ಚೆಗೆ ಆಹಾರ ಒದಗಿಸುತ್ತಲೇ ಇವೆ. ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಅಂಥ  ಕೆಲವು ತಮಾಷಿ ಹಾಗೂ ವಿವಾದಾಸ್ಪದ ಮಾತುಗಳನ್ನು ನೆನಪಿಸುವ ಪ್ರಯತ್ನ ಇಲ್ಲಿ ಮಾಡಿದ್ದೇವೆ. ಇವೆಲ್ಲ ಈಗಾಗಲೇ ತಣ್ಣಗಾಗಿರುವ ಮಾತುಗಳಾದ್ದರಿಂದ ಇವು ಮತ್ತೆ ಹೊಸದಾಗಿ ವಿವಾದವೆಬ್ಬಿಸುವ ಸಾಧ್ಯತೆ ಇಲ್ಲ ಎಂಬ ನಂಬಿಕೆ!

ಶರದ್ ಯಾದವ್- ಸಂಸದ
    ಇಂಡಿಯಾ ಗೇಟ್ ಬಳಿ ನಾಯಿಗಳನ್ನು ಹಿಡ್ಕೊಂಡು
ಅಲೆದಾಡ್ತಾ ಗೋಲ್ ಗಪ್ಪಾ ತಿನ್ನೋವ್ರು ಇವ್ರು! (ಭ್ರಷ್ಟಾಚಾರ ವಿರೋಧಿ ಕ್ಯಾಂಪೇನ್ ವಿರುದ್ಧ)
ಗುಲಾಮ್ ನಬಿ ಆಜಾದ್
    ಹಳ್ಳಿಗಳಿಗೆ  ಕರೆಂಟ್ ಸೌಲಭ್ಯ ಕೊಟ್ಟರೆ, ಜನ ತಡರಾತ್ರಿಯ ತನಕ ಟೀವಿ ನೋಡಿ ಸುಸ್ತಾಗಿ ಮಲ್ಕೊಳ್ತಾರೆ. ಅವರಿಗೆ ಮಕ್ಕಳು ಮಾಡೋಕೆ ಅವಕಾಶ ಸಿಗೋಲ್ಲ. ಕರೆಂಟ್ ಇಲ್ಲ ಅಂದ್ರೆ , ಅವರಿಗೆ ಮಾಡೋಕೆ  ಬೇರೆ ಕೆಲಸವೇ ಇರಲ್ಲ. ಆಗ ಮಕ್ಕಳನ್ನು ಹುಟ್ಟಿಸೋ ಕೆಲಸ ಮಾಡ್ತಾರೆ.  (ಜನಸಂಖ್ಯಾ ನಿಯಂತ್ರಣದ ಬಗ್ಗೆ ಭಾಷಣ ಮಾಡುತ್ತಾ ಹೇಳಿದ್ದು)
ಸುಬೆ ಸಿಂಗ್ -ಪಂಚಾಯತ್ ಮುಖಂಡ
= ಗಂಡು ಮತ್ತು ಹೆಣ್ಣು 16 ತುಂಬುತ್ತಿದ್ದ ಹಾಗೆ ಮದುವೆಯಾಗಿ ಬಿಡಬೇಕು. ಆಗ ಬೀದಿ ಸುತ್ತೋದಿಲ್ಲ. ರೇಪ್ ಥರದ ಪ್ರಕರಣಗಳು ತಂತಾನೇ ಕಮ್ಮಿಯಾಗುತೆ.್ತ
(ಅತ್ಯಾಚಾರ ಘಟನೆಗಳನ್ನು ಕಮ್ಮಿ ಮಾಡಲು ನೀಡಿದ ಸಲಹೆ)
ಜಿತೇಂದ್ರ ಚಾತರ್- ಪಂಚಾಯತ್ ಮುಖಂಡ
    ಫಾಸ್ಟ್ ಫುಡ್‌ಗಳಿಂದ ಮನುಷ್ಯನಲ್ಲಿ ಹಾರ್ಮೋನ್ ಸಂತುಲನ ಏರುಪೇರಾಗುತ್ತಿದೆ. ಇದೇ ಕಾರಣಕ್ಕೆ ಅವನು ರೇಪ್ ಥರದ ಕೆಲಸಕ್ಕೆ ಕೈ ಹಾಕುವಂತಾಗಿದೆ.
ಸುಶೀಲ್‌ಕುಮಾರ್ ಶಿಂಧೆ
    ಜನರ ನೆನಪಿನ ಶಕ್ತಿ ತುಂಬಾ ಕಮ್ಮಿ. ಬೋಫೋರ್ಸ್ ಹಗರಣ ಮರೆತಂತೆ ಕಲ್ಲಿದ್ದಲು ಹಗರಣವನ್ನೂ ಮರೆಯುತ್ತಾರೆ ಬಿಡಿ.
ಅಜಿತ್ ಪವಾರ್
    ಈ ವ್ಯಕ್ತಿ  55 ದಿನಗಳಿಂದ ಡ್ಯಾಮಿನಿಂದ ನೀರು ಬಿಡಿ ಅಂತ  ಧರಣಿ ಕೂತಿದ್ದಾನೆ. ಎಲ್ಲಿಂದ ಕೊಡೋಣ ನೀರು? ಮೂತ್ರ ಮಾಡಬೇಕು ಅಷ್ಟೇ. ಅದಕ್ಕಾದರೂ ನೀರು ಕುಡಿಬೇಕು ತಾನೇ? ಕುಡಿಯೋಕೆ ನೀರಿಲ್ದೆ ಹೋದ್ರೆ ಮೂತ್ರದಾನ ಹೇಗೆ ಮಾಡೋದು?
ಧರಮ್‌ವೀರ್ ಗೋಯತ್
    ಶೇಕಡಾ ತೊಂಬತ್ತು ಅತ್ಯಾಚಾರಗಳು ಹೆಣ್ಣಿನ ಒಪ್ಪಿಗೆಯ ಮೇರೆಗೇ ನಡೆಯುತ್ತವೆ.
ಶೀಲಾ ದೀಕ್ಷಿತ್
    ಐದು ಜನರ ಕುಟುಂಬವನ್ನು ಸಂಭಾಳಿಸಲು ಆರುನೂರು ರೂಪಾಯಿ ಆರಾಮಾಗಿ ಸಾಕು.
ದಿಗ್ವಿಜಯ್ ಸಿಂಗ್ -ಕಾಂಗ್ರೆಸ್ ನಾಯಕ
    ಕೇಜ್ರಿವಾಲ್ ಒಂಥರಾ ರಾಖಿ ಸಾವಂತ್ ಇದ್ದ ಹಾಗೆ. ತೋರಿಸೋಕೆ ಅಂಥಾದ್ದೇನೂ ಇಲ್ಲದೆ ಹೋದರೂ ತೆರೆದು ತೆರೆದು ತೋರಿಸ್ತಾರೆ.
ಮಮತಾ ಬ್ಯಾನರ್ಜಿ
    ಹೆಣ್ಣು ಗಂಡು ಈಗ ತುಂಬಾ ಸಲೀಸಾಗಿ ಬೆರೆಯುತ್ತಿದ್ದಾರೆ. ಅತ್ಯಾಚಾರ ಪ್ರಕರಣಗಳು ಹೆಚ್ಚೋದಕ್ಕೆ ಇದೇ ಕಾರಣ.
ನಿತಿನ್ ಗಡ್ಕರಿ-ಬಿಜೆಪಿ ನಾಯಕ
    ಯಡಿಯೂರಪ್ಪ ಮಾಡಿದ್ದು ನೈತಿಕವಾಗಿ ತಪ್ಪು. ಆದರೆ ಕಾನೂನು ಪ್ರಕಾರ ಸರಿ.

ಪಿ.ಚಿದಂಬರಂ - ಕೇಂದ್ರ ವಿತ್ತ ಸಚಿವ
ಇಪ್ಪತ್ತು ರೂಪಾಯಿ ಕೊಟ್ಟು ಖುಷಿಯಿಂದ  ಐಸ್‌ಕ್ರೀಮ್ ತಿನ್ನೋ ನೀವು, ಬೆಲೆಯೇರಿಕೆ ಬಗ್ಗೆ ಮಾತಾಡೋದು ಎಷ್ಟು ಸರಿ?
(ಬೆಲೆ ಏರಿಕೆ ಬಗ್ಗೆ ವಿರೋಧ ಬಂದಾಗ)

ಮನಮೋಹನ್ ಸಿಂಗ್- ಪ್ರಧಾನಿ
    ಭಯೋತ್ಪಾದಕರು ಯಾವಾಗಲೂ ಹೀಗೆಯೇ.  ಹೇಳದೆ ಕೇಳದೆ ಅಟ್ಯಾಕ್ ಮಾಡಿ ಅಚ್ಚರಿ ಮೂಡಿಸುತ್ತಾರೆ
    (ಮುಂಬೈ ದಾಳಿಯ ನಂತರ)
    ದುಡ್ಡು ಮರದಲ್ಲಿ ಬೆಳೆಯುವುದಿಲ್ಲ !
    (ಎಫ್‌ಡಿಐ ಬಿಲ್ ಪಾಸ್ ಮಾಡುವ ಸಂದರ್ಭ)
    ನನ್ನ ಮೌನ ಸಾವಿರ ಉತ್ತರಗಳಿಗೆ ಸಮ. ನಿಮ್ಮೆಲ್ಲ ಪ್ರಶ್ನೆಗಳಿಗೆ ನನ್ನ ಮೌನವೇ ಉತ್ತರ.
    (ಕಲ್ಲಿದ್ದಲು ಹಗರಣದ ಸಂದರ್ಭ)

ಮುರಳಿ ಮನೋಹರ್ ಜೋಷಿ - ಬಿಜೆಪಿ ಧುರೀಣ
    ಓಹ್ ಛೇ ...  ಅದನ್ನು ನಾನು ಜ್ಯೂಸ್ ಅಂದ್ಕೊಂಡು ಕುಡಿದುಬಿಟ್ಟೆ!
    (ಶಾಲೆಯೊಂದರ ವಿಜ್ಞಾನ ಮೇಳದಲ್ಲಿ ಫೆರಸ್ ಸಲ್ಫೇಟ್ ದ್ರಾವಣವನ್ನು ಕುಡಿದು ಆಸ್ಪತ್ರೆ ಸೇರಿದಾಗ ಹೇಳಿದ್ದು. ಆಗಅವರು ಸೈನ್ಸ್ ಮತ್ತು ಟೆಕ್ ಮಂತ್ರಿಯಾಗಿದ್ದರು.)

ನರೇಂದ್ರ ಮೋದಿ- ಗುಜರಾತ್ ಮುಖ್ಯಮಂತ್ರಿ
    ಗುಜರಾತಿನಲ್ಲಿ ಅಪೌಷ್ಟಿಕತೆ ಸಮಸ್ಯೆ ಇದೆ ಎಂಬ ಸುದ್ದಿ ಹಬ್ಬಿಸುತ್ತಿದ್ದಾರೆ. ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ಇರೋ ಹುಡುಗಿಯರು ಡಯಟ್‌ನಲ್ಲಿದ್ದು ಸಣ್ಣಗಾಗಿದ್ದಾರೆ. ಅದನ್ನು ಅಪೌಷ್ಟಿಕತೆ ಅಂದರೆ ಹೇಗೆ?

ರಾಹುಲ್ ಗಾಂಧಿ-ಕಾಂಗ್ರೆಸ್ ನಾಯಕ
    ಪಂಜಾಬಿನಲ್ಲಿ ಪ್ರತಿ ಏಳು ಜನರಲ್ಲಿ ಹತ್ತು ಜನ ಮಾದಕ ವ್ಯಸನಿಗಳಾಗಿದ್ದಾರೆ.
    ಭಾರತ ಇಪ್ಪತ್ತೊಂದನೆಯ ಶತಮಾನದ ಸೌದಿ ಅರೇಬಿಯಾ!
    ರಾಜಕೀಯ ಎಂಬುದು ನಿಮ್ಮ ಅಂಗಿಯಲ್ಲಿದೆ.. ನಿಮ್ಮ ಪ್ಯಾಂಟಿನಲ್ಲಿದೆ.

ಎಸ್.ಎಂ. ಕೃಷ್ಣ - ವಿದೇಶಾಂಗ ವ್ಯವಹಾರಗಳ ಸಚಿವ
    ಎಲ್ಲ ಭಾಷಣಗಳ ಆರಂಭಿಕ ಸಾಲುಗಳು ಒಂದೇ ಆಗಿರುತ್ತದೆ.
    (ವಿಶ್ವಸಂಸ್ಥೆಯ ಸಭೆಯಲ್ಲಿ ತಪ್ಪಾಗಿ ಪೋರ್ಚುಗೀಸ್ ದೇಶದ ಸಚಿವರ ಭಾಷಣವನ್ನು ಎತ್ತಿಕೊಂಡು ಓದಿದ ನಂತರ)

ಸಲ್ಮಾನ್ ಖುರ್ಷಿದ್-ಕೇಂದ್ರ ಸಚಿವ
ಆತ ಫಾರೂಕಾಬಾದ್‌ಗೆ ಕಾಲಿಟ್ಟು ನೋಡಲಿ. ವಾಪಸ್ ಹೋಗ್ತಾನಾ ಅಂತ ನೋಡೇಬಿಡ್ತೀನಿ.
    (ಕೇಜ್ರಿವಾಲ್ ವಿರುದ್ಧ ಹರಿಹಾಯ್ದದ್ದು)

ಬೇನಿ ಪ್ರಸಾದ ವರ್ಮಾ- ಕೇಂದ್ರ ಕಬ್ಬಿಣ ಮತ್ತು ಉಕ್ಕು ಮಂತ್ರಿ
    ಎಪ್ಪತ್ತು ಲಕ್ಷದ ಹಗರಣ ಎಲ್ಲಾ ಒಬ್ಬ ಸಚಿವನ ಲೆವೆಲ್ಲಿಗೆ ತೀರಾ ಕಮ್ಮಿ. ಎಪ್ಪತ್ತು ಕೋಟಿ ಹಗರಣ ಅಂತಾದಲ್ಲಿ ಅದರ ಬಗ್ಗೆ ಗಂಭೀರವಾಗಿ ಯೋಚಿಸೋದ್ರಲ್ಲಿ ಅರ್ಥ ಇದೆ
    (ಸಲ್ಮಾನ್ ಖುರ್ಷಿದ್ ಹಣಕಾಸಿನ ಹಗರಣ ಕುರಿತು)
    ಬೆಲೆ ಏರಿಕೆ ಯಿಂದ ರೈತರಿಗೆ ಲಾಭವಾಗಿದೆ. ಅವರ ಧಾನ್ಯಗಳ ಬೆಲೆ ಹೆಚ್ಚಿದೆ. ಬೆಲೆ ಹೀಗೆಯೇ ಹೆಚ್ಚಿ ರೈತರಿಗೆ ಖುಷಿ ತರಲಿ ಅನ್ನೋದೇ ನನ್ನ ಆಸೆ.

ಕಪಿಲ್ ಸಿಬಲ್

    2ಜಿ ಹಗರಣದಿಂದ ಸರ್ಕಾರಕ್ಕೆ ನಷ್ಟವೇನೂ ಆಗಿಲ್ಲ ಬಿಡಿ!
    (ನಿಜ. ನಷ್ಟವಾಗಿದ್ದು ದೇಶಕ್ಕೆ. ಸರ್ಕಾರಕ್ಕಲ್ಲ )

ಆರ್. ಆರ್. ಪಾಟೀಲ್
    ಬಡೇ ಬಡೇ ದೇಶೊ ಮೇ ಐಸೆ ಛೋಟಿ ಛೋಟಿ ಬಾತೆ ಹೋತಿ ರೆಹ್ತಿ ಹೈ (ದೊಡ್ಡ ದೇಶದಲ್ಲಿ ಇಂಥ ಚಿಕ್ಕ ವಿಷಯಗಳು ನಡೀತಾ ಇರ್ತವೆ) 2008ರಲ್ಲಿ ಮುಂಬೈಯಲ್ಲಿ ಭಯೋತ್ಪಾದಕರ ದಾಳಿ ಆದಾಗ ಹೇಳಿದ್ದು.( ಇದು ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ ಚಿತ್ರದಲ್ಲಿ ಶಾರುಕ್ ಖಾನ್ ಹೇಳುವ ಜನಪ್ರಿಯ ಡೈಲಾಗ್)

ಹಿಂಗೂ ಆಗಿತ್ತು
ಅರುಣಾಚಲ ಪ್ರದೇಶದ ಬೋಂಡಿಲ್ಲಾ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮತದಾನದ ದಾಖಲೆಯಾಗಿತ್ತು. ಕಡಿಮೆ ಎಂದರೆ ಎಷ್ಟಿರಬಹುದು ಅಂತ ಊಹಿಸಬಲ್ಲಿರಾ? ಅದನ್ನು ಶೇಕಡಾವಾರು ಲೆಕ್ಕದಲ್ಲಿ ಹೇಳಲೂ ಸಾಧ್ಯವಿಲ್ಲ. ಇಡೀ ಜಿಲ್ಲೆಯಲ್ಲಿ ಕೇವಲ ಮೂವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದರು ಒಂದಿಡೀ ಜಿಲ್ಲಾ ಕ್ಷೇತ್ರದಲ್ಲಿ ಕನಿಷ್ಟವೆಂದರೂ ಲಕ್ಷಕ್ಕೆ ಮೀರಿ ಪ್ರಜೆಗಳಿರುತ್ತಾರೆ. ಅವರಲ್ಲಿ ಕೇವಲ ಮೂವರು ಮಾತ್ರ ಎಲೆಕ್ಷನ್ ಬಗ್ಗೆ ಆಸಕ್ತಿ ತೋರಿದ್ದರೆಂದರೆ ಅಲ್ಲಿ ಸರ್ಕಾರದ ಮೇಲೆ ಜನತೆಗೆ ಅದೆಷ್ಟು ನಿರಾಸಕ್ತಿ ಇದ್ದಿರಬಹುದು. ಅಥವಾ ಬೇರೇನು ಕಾರಣವಿತ್ತೋ!

ಯಾವುದೇ ಪ್ರಕೃತಿ ವಿಕೋಪ ಸಂಭವಿಸಿದಾಗಲೂ ಪರಿಹಾರ ಪ್ಯಾಕೇಜ್ ಪ್ರಕಟಿಸುವುದು ಕಾಂಗ್ರೆಸ್ ಸರಕಾರಗಳ ಹವ್ಯಾಸ ಆಗಿಬಿಟ್ಟಿದೆ. ಈಗ ಅವರನ್ನೇ ಪ್ಯಾಕ್ ಮಾಡಿ ಕಳಿಸುವ ಕಾಲ.
- ನರೇಂದ್ರ ಮೋದಿ

ನಮ್ಮಲ್ಲಿ (ಪತ್ರಕರ್ತರಲ್ಲಿ) ಕೆಲವರು ಭ್ರಷ್ಟರಿರಬಹುದು. ಆದರೆ ನಾವು ಮೌನಿಗಳಲ್ಲ. ನಮಗೆ ಮಾತನಾಡುವ ಸ್ವಾತಂತ್ರ್ಯವಿದೆ. ಸುಳ್ಳು ಹೇಳುವ ಸ್ವಾತಂತ್ರ್ಯ ಕೂಡ.
- ಪ್ರೀತೀಶ್ ನಂದಿ

ಕಾರ್ಪೊರೇಟ್ ಸಂಸ್ಥೆಗಳು ಉತ್ಪಾದಿಸಿರುವ ಸಂಪತ್ತು, ತೆರಿಗೆ, ಉದ್ಯೋಗಗಳ ಬಗ್ಗೆ ಭಾರತೀಯ ಸಮಾಜವಾದಿಗಳಿಗೆ ತೃಪ್ತಿಯಿಲ್ಲ. ಅವರ ಒಂದೇ ಉದ್ದೇಶ ಕಾರ್ಪೊರೇಟ್‌ಗಳನ್ನು ಉರುಳಿಸುವುದು.
- ಅಮಿಶ್ ತ್ರಿಪಾಠಿ

 -ಎನ್ನೆಸ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments