ಶೋ ಪೀಸ್
ನಟ ಕಮಲ್ ಹಾಸನ್ ಮಾತ್ರ ಯಾರ ಪರವಾಗಿಯೂ ಪ್ರಚಾರ ಮಾಡದೆ, 'ನಿಮ್ಮ ಮತವನ್ನು ಒಳ್ಳೆಯವರಿಗೆ ಕೊಡಿ. ಹಣಕ್ಕಾಗಿ ಮತ ಮಾರಿಕೊಳ್ಳಬೇಡಿ' ಎಂದು ಸಾರುತ್ತಿದ್ದಾರೆ.
ನಟ ಕಮಲ್ ಹಾಸನ್ ಮಾತ್ರ ಯಾರ ಪರವಾಗಿಯೂ ಪ್ರಚಾರ ಮಾಡದೆ, 'ನಿಮ್ಮ ಮತವನ್ನು ಒಳ್ಳೆಯವರಿಗೆ ಕೊಡಿ. ಹಣಕ್ಕಾಗಿ ಮತ ಮಾರಿಕೊಳ್ಳಬೇಡಿ' ಎಂದು ಸಾರುತ್ತಿದ್ದಾರೆ. ಒಟ್ಟಿನಲ್ಲಿ ತೆಲುಗು ಚಿತ್ರರಂಗದಷ್ಟು ರಾಜಕೀಯದಲ್ಲಿ ಮೆರೆಯುವ ತಾರೆಗಳು ಬೇರೆ ಭಾಷೆಯಲ್ಲಿ ತೀರಾ ಕಡಿಮೆ.
ರಾಜಕೀಯ ಜೊತೆಗೆ ಸಿನಿಮಾ ಕೂಡ ಸೇರಿಕೊಂಡಿದೆ. ಯಾವ ಪಕ್ಷಕ್ಕೆ ಎಷ್ಟು ಬಲ ಸಿಗುತ್ತದೆ, ಯಾರ್ಯಾರು ಗೆಲ್ಲಬಹುದು ಎನ್ನುವ ವಿಷಯ ಮಾತ್ರವಲ್ಲ, ಯಾವ ಪಕ್ಷಕ್ಕೆ, ಯಾವ ನಾಯಕನ ಜೊತೆ ಯಾವ ಸಿನಿಮಾ ಸ್ಟಾರ್ಗಳು ಪ್ರಚಾರಕ್ಕೆ ಬರುತ್ತಾರೆ ಎನ್ನುವುದೂ ಸಹ ಕುತೂಹಲದ ಸಂಗತಿಯಾಗಿದೆ.
ಇನ್ನೇನಿದ್ದರೂ ರಾಜಕೀಯ ತೆರೆ ಮೇಲೆ ಸಿನಿ ಸ್ಟಾರ್ಗಳ ಪ್ರಚಾರ ಸಂಗ್ರಾಮ. ಹೌದು, ಕತ್ತಲ ಕೋಣೆಯಲ್ಲಿ ಕೂತು ನೆಚ್ಚಿನ ನಟ, ನಟಿಯರನ್ನು ನೋಡುತ್ತಿದ್ದ ನಾವೇ ಈಗ ಆ ತಾರೆಗಳನ್ನು ನಮ್ಮೂರಿನ ಗಲ್ಲಿಯಲ್ಲಿ, ಕಾಲೊನಿಯಲ್ಲಿ, ಪಟ್ಟಣದಲ್ಲಿ ನೋಡುವ ಭಾಗ್ಯ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದಾದರೂ ಸರಿ, ಇಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಂದ್ರೆ ನಮ್ಮ ರೀಲ್ ತಾರೆಗಳ ರಿಯಲ್ ದರ್ಶನ. ಫುಲ್ಟೈಮ್ ರಾಜಕಾರಣಕ್ಕೆ ಇಳಿಯದೆ ನಟನೆ ಜೊತೆಗೆ ಚುನಾವಣೆ ಸಮಯದಲ್ಲಿ ಮಾತ್ರ ಪ್ರಚಾರಕ್ಕೆ ಬರುವ ತಾರೆಯರ ದಂಡು ಕೂಡ ಇಲ್ಲಿದೆ.
ಕಳೆದ ಬಾರಿ ಚುನಾವಣೆಯಲ್ಲಿ ಅಂಬರೀಷ್ ಪರವಾಗಿ ನಟರಾದ ಸುದೀಪ್, ದರ್ಶನ್, ಪ್ರೇಮ್, ಯಶ್, ಯೋಗೀಶ್ ಪ್ರಚಾರಕ್ಕೆ ಬಂದರೆ, ನಟಿ ಉಮಾಶ್ರೀ ಪರವಾಗಿ ಭಾವನಾ, ಆದಿಲೋಕೇಶ್ ಮುಂತಾದವರು ಆಗಮಿಸಿ ತಾರಾ ಮೆರುಗು ತಂದರು. ಹಾಗೆ ನಿರ್ಮಾಪಕ ಮುನಿರತ್ನ ಪರವಾಗಿ ದರ್ಶನ್, ಸುದೀಪ್, ಆರ್. ಅಶೋಕ್ ಪರವಾಗಿ ಗಣೇಶ್ ದಂಪತಿ ಪ್ರಚಾರದ ಅಖಾಡದಲ್ಲಿ ಸದ್ದು ಮಾಡಿದರು. ಆದರೆ, ಈ ಬಾರಿ ಕನ್ನಡ ಸ್ಟಾರ್ ತಾರೆಗಳು ಚುನಾವಣಾ ಪ್ರಚಾರಕ್ಕೆ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಇದಕ್ಕೆ ಅಂಬರೀಶ್ ಗೈರು ಹಾಜರಿಯೂ ಒಂದು ಕಾರಣ ಇರಬಹುದು. ಆ ದರೂ ಮಂಡ್ಯ ಲೋಕಸಭಾ ಆಭ್ಯರ್ಥಿ ನಟಿ ರಮ್ಯಾ ಪರವಾಗಿ ದರ್ಶನ್, ಯಶ್ ಹಾಗೂ ನಟಿ ಭಾವನಾ ಪ್ರಚಾರಕ್ಕೆ ಧುಮುಕುವ ಸಂಭವ ಇದೆ.
ಹಾಗೆ ಬಿಜೆಪಿಯಲ್ಲೂ ತಾರಾ ಮೆರುಗು ಕೊಂಚ ಜಾಸ್ತಿ ಇದ್ದು, ನಟ ಜಗ್ಗೇಶ್, ನಟಿಯರಾದ ಶ್ರುತಿ, ಮಾಳವಿಕಾ ಪ್ರಚಾರ ಕಣಕ್ಕಿಳಿಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇನ್ನು ನಟಿ ರಕ್ಷಿತಾ ಜೆಡಿಎಸ್ಗೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಕಮಲ ಪಾಳೆಯಕ್ಕೆ ಮತ್ತೊಂದು ಪ್ರಚಾರ ತಾರೆ ಸಿಕ್ಕಂತಾಗಿದೆ. ಇನ್ನು ಜೆಡಿಎಸ್ನಲ್ಲಿ ಸಿನಿಮಾ ಗ್ಲಾಮರ್ ಕೊಂಚ ಕಡಿಮೆ. ಮಳೆ ಹುಡುಗಿ ಪೂಜಾ ಗಾಂಧಿ ಇದ್ದಕ್ಕಿದ್ದಂತೆ ಜೆಡಿಎಸ್ಗೆ ಬಂದು ತೆನೆ ಹೊತ್ತರೂ ತುಂಬಾ ದಿನ ಕುಮಾರಣ್ಣರ ಜೊತೆ ಇರಲಿಲ್ಲ. ಸೀದಾ ಕೆಜೆಪಿಗೆ ಹಾರಿದರು. ಇಲ್ಲೂ ನಿಲ್ಲದೆ ಬಿಜೆಪಿಗೆ ಜಂಪ್ ಆಗಿದ್ದು ಹೊಸ ಸುದ್ದಿಯೇನಲ್ಲ. ಆದರೆ, ಡಾ. ರಾಜ್ ಕುಟುಂಬದ ಸೊಸೆ, ನಟ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಜೆಡಿಎಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಪತ್ನಿ ಪರವಾಗಿ ಸೆಂಚುರಿ ಸ್ಟಾರ್ ಶಿವಮೊಗ್ಗದಲ್ಲಿ ಪ್ರಚಾರಕ್ಕಿಳಿಯುವುದು ಖಚಿತವಾಗಿದೆ. ಶಿವಣ್ಣರ ಮೇಲಿನ ಅಭಿಮಾನಕ್ಕಾಗಿ ಕೆಲ ತಾರೆಯರು ಗೀತಾ ಅವರ ಪರವಾಗಿ ಪ್ರಚಾರಕ್ಕೆ ಬರುವ ಸಾಧ್ಯತೆಗಳಿವೆ.
ಬಾಲಿವುಡ್ ಪ್ರಚಾರ ಕಲಿಗಳು ಮಾತ್ರ ಕೊಂಚ ಭಿನ್ನ. ಇಲ್ಲಿ ಗಂಭೀರ ಪ್ರಚಾರಕರ್ತರಿಗಿಂತ ಬಿಚ್ಚಮ್ಮಗಳೇ ಹೆಚ್ಚು ಸುದ್ದಿ ಮಾಡುತ್ತಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ ಪರವಾಗಿ ಮಾಡೆಲ್ ಕಂ ನಟಿ ತನಿಷಾ ಸಿಂಗ್ ಅರೆಬೆತ್ತಲಾಗಿ ಪೋಸು ಕೊಟ್ಟಿದ್ದಾರೆ. ಮತ್ತೊಬ್ಬಳು ಮಾಡೆಲ್ ಕಂ ನಟಿ ಮೇಘನಾ ಪಟೇಲ್ ತನಿಷಾಗಿಂತ ತಾನೇನು ಕಮ್ಮಿ ಎನ್ನುತ್ತ ಮೈ ಮೇಲಿನ ಬಟ್ಟೆ ಕಳಚಿ ಮೋದಿ ಜಪ ಮಾಡುತ್ತಿದ್ದಾಳೆ. ಇವರಿಬ್ಬರ ಬೆತ್ತಲೆ ಅಬ್ಬರದಲ್ಲಿ 'ನಾನು ಮೋದಿ ಪರ' ಎಂದು ಮಸಲ್ಮ್ಯಾನ್ ಸನ್ಮಾನ್ ಖಾನ್ರ ಕೂಗು ಮಾತ್ರ ಹೆಚ್ಚು ಕೇಳಿಸುತ್ತಿಲ್ಲ. ಬಾಲಿವುಡ್ ಖಾನ್ಗಳ ಪೈಕಿ ಒಬ್ಬರಾದ ಅಮೀರ್ ಖಾನ್ ಸದ್ಯಕ್ಕೆ ಯಾವ ಪಕ್ಷದ ಜೊತೆಗೂ ಗುರುತಿಸಿಕೊಂಡಿಲ್ಲ. ಇವರನ್ನು ಚುನಾವಣಾ ಆಯೋಗ ಪ್ರಚಾರ ರಾಯಬಾರಿಯನ್ನಾಗಿಸಿಕೊಳ್ಳುವ ಯೋಚನೆಯಲ್ಲಿದೆ. ಈ ನಡುವೆ ಅಮಿತಾಭ್ ಬಚ್ಚನ್ ಕೂಡ ಮೌನವಾಗಿದ್ದಾರೆ. ಹಾಗೆ ನೋಡಿದರೆ ಬಿಗ್ ಬಿ ಗುಜರಾತ್ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ರಾಯಭಾರಿ. ಅಲ್ಲದೆ ಆಗಾಗ ಮೋದಿ ಪರವಾಗಿ ಮಾತನಾಡುತ್ತಿರುತ್ತಾರೆ. ಹೀಗಾಗಿ ಅಮಿತಾಭ್ ಮೋದಿಗೆ ಜೊತೆಯಾಗಬಹುದೇ?
ಇದಿಷ್ಟು ಕನ್ನಡ ಸಿನಿಮಾ ರಾಜಕೀಯ ಆದರೆ, ಅಕ್ಕಪಕ್ಕದ ಭಾಷೆಯ ತಾರೆಗಳು ನಮ್ಮೂರಿನ ತಾರೆಗಳಿಗಿಂತ ಪ್ರಚಾರ ಕಣದಲ್ಲಿ ತುಂಬಾ ಜೋರಾಗಿದ್ದಾರೆ. ಆಂಧ್ರದ ಪ್ರತಿಯೊಂದು ಪಕ್ಷಕ್ಕೂ ಸಿನಿ ಗ್ಲಾಮರ್ ಅಂಟಿಕೊಂಡಿದೆ. ಜ್ಯೂನಿಯರ್ ಎನ್ಟಿಆರ್, ಮಹೇಶ್ ಬಾಬು ಪ್ರಚಾರದ ಅಖಾಡಕ್ಕೆ ಬರುವ ಸ್ಟಾರ್ ನಟರು. ಇವರ ಜೊತೆಗೆ ಹಿರಿ ನಟ ಮುರಳಿಮೋಹನ್, ಆಲಿ, ಮೋಹನ್ ಬಾಬು ಕುಟುಂಬ, ಜೀವಿತ ರಾಜಶೇಖರ್ ದಂಪತಿ, ನಿತಿನ್, ಸಮಂತ, ನಾನಿ, ಲಕ್ಷ್ಮಿ ಮಂಚು, ಜಯಸುಧಾ ಮುಂತಾದವರೂ ಆಂಧ್ರದಲ್ಲಿ ಪ್ರಚಾರದ ಅಬ್ಬರ ಹೆಚ್ಚಿಸಲಿದ್ದಾರೆ.
ನಟ ಮಹೇಶ್ ಬಾಬು ತಮ್ಮ ಬಾವ ಗಲ್ಲಾ ಜಯದೇವ್ ಪರವಾಗಿ ಪ್ರಚಾರಕ್ಕೆ ಬಂದರೆ, ಜ್ಯೂನಿಯರ್ ಎನ್ಟಿಆರ್ ತೆಲುಗುದೇಶಂ ಪರವಾಗಿ ಅಬ್ಬರಿಸಲಿದ್ದಾರೆ. ಇನ್ನು ನಿತಿನ್, ಸಮಂತ, ನಾನಿ, ಲಕ್ಷ್ಮಿ ಮಂಚು ಪವನ್ ಕಲ್ಯಾಣ್ರ ಜನ ಸೇನಾ ಪಕ್ಷಕ್ಕೆ ಬಹುಪರಾಕ್ ಹಾಕಿದ್ದಾರೆ. ಒಂದು ವೇಳೆ ಪವನ್ ಕಾಕಿನಾಡ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ಇವರೆಲ್ಲ ಪವನ್ರ ಪವರ್ಗೆ ಲಿಫ್ಟ್ ಕೊಡಲಿದ್ದಾರೆ. ಪ್ರಚಾರದಲ್ಲಿ ಪಟ್ಟಿಯಲ್ಲಿರುವ ಉಳಿದ ನಟ, ನಟಿಯರು ಯಾವ ಪಕ್ಷಕ್ಕೆ ಪ್ರಚಾರ ಮಾಡಲಿದ್ದಾರೆ ಎಂಬುದು ಅವರು ರಸ್ತೆಗಿಳಿದ ಮೇಲೆಯೇ ಗೊತ್ತಾಗಲಿದೆ.
ಅಂದರೆ, ಹಾಗೆ ನೋಡಿದರೆ ಬಾಲಿವುಡ್ನಲ್ಲಿ ಸಾಕಷ್ಟು ಮಂದಿ ರಾಜಕೀಯ ನೇತಾರೆಯರಿದ್ದಾರೆ. ಆದರೆ, ಇವರಿಗೆ ಸಿನಿಮಾದವರನ್ನೇ ಪ್ರಚಾರಕ್ಕೆ ಕರೆತರುವ ತಾಕತ್ತು ಇಲ್ಲ. ಒಮ್ಮೆ ಕಾಂಗ್ರೆಸ್ ಪರವಾಗಿ ಸುನೀಲ್ ದತ್ ಪ್ರಚಾರಕ್ಕೆ ಬಂದ ನೆನಪು. ತಮಿಳುನಾಡಿನಲ್ಲಿ ರಾಜಕೀಯದವರ ಪರವಾಗಿ ಪ್ರಚಾರಕ್ಕೆ ಬರುವ ಕಲಾವಿದರಿಗೆ ಬರಗಾಲವಿದೆ. ವಿಶಾಲ್, ಅಜಿತ್, ವಿಜಯ್, ಧನುಷ್ ಮುಂತಾದ ಸ್ಟಾರ್ ನಟರು ಯಾರ ಪರವಾಗಿ ಬರುತ್ತಾರೋ ಹೇಳಲಾಗದು. ಆದರೆ, ಇಳಯದಳಪತಿ ವಿಜಯ್, ಜಯಲಲಿತಾ ಪರ ಪ್ರಚಾರ ಮಾಡಲಿದ್ದಾರೆಂಬ ಸುದ್ದಿ ಇದೆ.
ನಟ ಕಮಲ್ ಹಾಸನ್ ಮಾತ್ರ ಯಾರ ಪರವಾಗಿಯೂ ಪ್ರಚಾರ ಮಾಡದೆ, 'ನಿಮ್ಮ ಮತವನ್ನು ಒಳ್ಳೆಯವರಿಗೆ ಕೊಡಿ. ಹಣಕ್ಕಾಗಿ ಮತ ಮಾರಿಕೊಳ್ಳಬೇಡಿ' ಎಂದು ಸಾರುತ್ತಿದ್ದಾರೆ. ಒಟ್ಟಿನಲ್ಲಿ ತೆಲುಗು ಚಿತ್ರರಂಗದಷ್ಟು ರಾಜಕೀಯದಲ್ಲಿ ಮೆರೆಯುವ ತಾರೆಗಳು ಬೇರೆ ಭಾಷೆಯಲ್ಲಿ ತೀರಾ ಕಡಿಮೆ.
ಫುಲ್ಟೈಮ್ ಸಿನಿ ರಾಜಕಾರಣಿಗಳು
ಕನ್ನಡ
ಅಂಬರೀಷ್, ಜಗ್ಗೇಶ್, ನೆ.ಲ. ನರೇಂದ್ರಬಾಬು, ಬಿ.ಸಿ. ಪಾಟೀಲ್, ರಮ್ಯಾ, ರಕ್ಷಿತಾ, ತಾರಾ, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಶ್ರೀನಾಥ್, ಪೂಜಾಗಾಂಧಿ, ಶ್ರುತಿ, ಮಾಳವಿಕ.
ತೆಲುಗು
ಎನ್.ಟಿ. ರಾಮರಾವ್, ಕೃಷ್ಣ, ಕೃಷ್ಣಂರಾಜು, ಕೋಟಾ ಶ್ರೀನಿವಾಸ್ ರಾವ್, ದಾಸರಿ ನಾರಾಯಣ್ ರಾವ್, ಡಿ. ರಾಮಾನಾಯಡು, ಚಿರಂಜೀವಿ, ವಿಜಯ್ಶಾಂತಿ, ಬಾಲಕೃಷ್ಣ, ಪವನ್ ಕಲ್ಯಾಣ್, ನಾರಾಯಣ ಮೂರ್ತಿ, ರೋಜಾ.
ತಮಿಳು
ಕರುಣಾನಿಧಿ, ಎಂ.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್, ಜಯಲಲಿತಾ, ವಿಜಯ್ಕಾಂತ್, ಶರತ್ಕುಮಾರ್, ಎಸ್.ಎಸ್. ರಾಜೇಂದ್ರನ್, ಜಾನಕಿ (ಎಂಜಿಆರ್ ಪತ್ನಿ) ನೆಪೋಲಿಯನ್, ರಾಧಿಕಾ ಶರತ್ಕುಮಾರ್,
ಹಿಂದಿ
ಹೇಮಾಮಾಲಿನಿ, ಶತ್ರುಘ್ನ ಸಿನ್ಹಾ, ಜಯಪ್ರದಾ, ಗೋವಿಂದಾ, ಮಹೇಶ್ ಮಂಜ್ರೇಕರ್, ಕಿರಣ್ ಖೇರ್, ಗುಲ್ಪನಾಗ್, ನಗ್ಮಾ, ಮೂನ್ಮೂನ್ ಸೇನ್, ಸ್ಮ ೃತಿ ಇರಾನಿ.
-ಆರ್.ಕೇಶವಮೂರ್ತಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.