ಆಟ ರಾಜ
ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವ ಆಟ ರಾಜಕೀಯದಲ್ಲಿ ಸರ್ವೇಸಾಮಾನ್ಯ. ಬೇರೆ ಕ್ಷೇತ್ರಗಳಿಂದ ರಾಜಕೀಯಕ್ಕೆ ಬರುವ ಮಂದಿಗೂ ಕೊರತೆ ಇಲ್ಲ. ಕ್ರೀಡೆಯಲ್ಲಿ ಸಾಧನೆಗೈದು ರಾಜಕೀಯದಲ್ಲೂ ಒಂದು ಆಟ ಆಡೋಣ ಎಂಬ ಅಪೇಕ್ಷೆ ಉಳ್ಳವರೂ ಅಧಿಕ. ಅಭಿಮಾನಿಗಳನ್ನೇ ಮತದಾರರು ಎಂದು ಪರಿಗಣಿಸಿ ರಾಜಕೀಯಕ್ಕೆ ಬಂದು ಕೈಸುಟ್ಟುಕೊಳ್ಳುತ್ತಿರುವ ಸಿನಿಮಾ ಮಂದಿಗೆ ಸೆಡ್ಡು ಹೊಡೆಯುವಂತೆ ಕ್ರೀಡಾಳುಗಳು ರಾಜಕೀಯ ಪ್ರವೇಶಿಸುತ್ತಿದ್ದಾರೆ. 'ಕ್ರಿಕೆಟ್ ದೇವರು' ಎಂದು ಆರಾಧಿಸುವ ಸಚಿನ್ ತೆಂಡೂಲ್ಕರ್ ರಾಜಕೀಯ ಸೇರಿರಬೇಕಾದರೆ ಮೂಗು ಮುರಿಯುವ ಮಾತುಂಟೇ?
ವಿದೇಶದಲ್ಲೂ ರಾಜಕೀಯ ಅಂಗಳಕ್ಕಿಳಿದ ಕ್ರೀಡಾ ವಲಸಿಗರ ಸಂಖ್ಯೆ ಹೆಚ್ಚಿದೆ. ಅನ್ಯ ದೇಶದ ರಾಜಕೀಯದತ್ತ ಕಣ್ಣು ಹಾಯಿಸಿದರೆ ವೃತ್ತಿಯಲ್ಲಿ ಕ್ರೀಡಾಪಟುಗಳಾಗಿದ್ದು ನಂತರ ದೇಶದ ಅಧ್ಯಕ್ಷರಾದ ಸಾಕ್ಷಿಗಳು ಕಾಣಸಿಗುತ್ತವೆ. ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ರಾಜಕೀಯ ಅಂಗಳದಲ್ಲಿ ಆಡಲು ಬಂದು ಗೆದ್ದವರು ಮತ್ತು ಹೊರಬಿದ್ದವರಿವರು.
ಆ್ಯಂಡ್ರಿ ಶೆವ್ಚೆಂಕೊ
ದೇಶ: ಉಕ್ರೇನ್
ಕ್ರೀಡೆ: ಫುಟ್ಬಾಲ್
ಚೆಲ್ಸಿಯಾ, ಎ.ಸಿ.ಮಿಲಾನ್ ಮತ್ತು ಡೈನಮೋ ಕೀವ್ ಪರವಾಗಿ 17 ವರ್ಷ ಆಡಿದ್ದಾರೆ. 2003ರಲ್ಲಿ ಚಾಂಪಿಯನ್ಶಿಪ್, ದೇಶಕ್ಕೆ 111ಕ್ಯಾಪ್ ಗೌರವ ತಂದಿರುವ ಆಟಗಾರರಲ್ಲಿ ಪ್ರಮುಖ ಮತ್ತು ನಾಯಕ.
ರಾಜಕೀಯ
ಉಕ್ರೇನ್ ಸಂಸತ್ ಪ್ರವೇಶಿಸಲು 'ಉಕ್ರೇನ್ ಫಾರ್ವಡ್' ಪಕ್ಷದಿಂದ ಸ್ಪರ್ಧೆ. ಪಡೆದ ಮತಗಳು ಶೇ.1.6! ರಾಜಕೀಯದಲ್ಲಿ ಭವಿಷ್ಯವಿಲ್ಲ ಎಂಬ ಚಿಂತನೆ. ಸದ್ಯ ವೃತ್ತಿಪರ ಗಾಲ್ಫ್ ಪಟು.
ಜೆಸ್ಸಿ ವೆಂಚುರಾ
ದೇಶ: ಅಮೆರಿಕ
ಕ್ರೀಡೆ: ಕುಸ್ತಿ
1970ರಲ್ಲಿ ಕುಸ್ತಿ ಅಖಾಡ ಪ್ರವೇಶ. 1980ರಲ್ಲಿ ಡಬ್ಲ್ಯೂಡಬ್ಲ್ಯೂಎಫ್ಗೆ ಪಾದಾರ್ಪಣೆ. ಅದಕ್ಕೂ ಮೊದಲು 9 ಬಾರಿ ರಾಷ್ಟ್ರೀಯ ಕುಸ್ತಿ ಚಾಂಪಿಯನ್.
ರಾಜಕೀಯ
ಬ್ರೂಕ್ಲೀನ್ ಪಾರ್ಕ್. ಮಿನ್ನ ಮೇಯರ್ ಆಗಿ 1991-95ರವರೆಗೆ ಸೇವೆ. ಅಂದಿನ ಅಧ್ಯಕ್ಷ ಜಾನ್. ಎಫ್. ಕೆನಡಿಯ ಕೊಲೆಯ ಕುರಿತಾಗಿ ಪುಸ್ತಕ ಹೊರತರುವ ಆಲೋಚನೆಯಲ್ಲಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವ ಮತ್ತು ಅಧ್ಯಕ್ಷನಾಗುವ ಭರವಸೆ ಇಟ್ಟುಕೊಂಡಿದ್ದಾರೆ.
ಜ್ಯಾಕ್ ಕೆಂಪ್
ದೇಶ: ಅಮೆರಿಕ
ಕ್ರೀಡೆ: ಫುಟ್ಬಾಲ್
ಎರಡು ಎಎಫ್ಎಲ್ ಚಾಂಪಿಯನ್ ಟೂರ್ನಿಯನ್ನು ಮುನ್ನಡೆಸಿದ್ದಾರೆ. 1965ರಲ್ಲಿ ಎಮ್ವಿಪಿ ಅವಾರ್ಡ್ ಗಳಿಸಿದರು.
ರಾಜಕೀಯ
ಕ್ರೀಡೆಯಲ್ಲಿ ಗಳಿಸಿದ ಪ್ರಚಾರದಿಂದ ಕಾಂಗ್ರೆಷನಲ್ ಪರ ಇರುವ 9 ಜಿಲ್ಲೆಗಳಲ್ಲಿ ಸ್ಪರ್ಧಿಸುತ್ತಾರೆ. ಆದರೂ 1988ರಲ್ಲಿ ಅಧ್ಯಕ್ಷರಾಗುವ ಕನಸು ಸಾಕಾರ ಆಗಲಿಲ್ಲ. 1996ರಲ್ಲಿ ಉಪಾಧ್ಯಕ್ಷರಾದರು. ಅಮೆರಿಕ ರಾಜಕೀಯದಲ್ಲಿ ಶಕ್ತಿಶಾಲಿ ಧ್ವನಿ ಹೊಂದಿದ್ದರು ಎಂದು 2009ರಲ್ಲಿ ಕೆಂಪ್ ಸಾವನಪ್ಪಿದಾಗ ಪತ್ರಿಕೆಗಳು ಕೊಂಡಾಡಿದ್ದವು.
ಸನತ್ ಜಯಸೂರ್ಯ
ದೇಶ: ಶ್ರೀಲಂಕಾ
ಕ್ರೀಡೆ: ಕ್ರಿಕೆಟ್
1996ರ ವಿಶ್ವಕಪ್ ಗೆಲುವಿನ ಪ್ರಮುಖ ರೂವಾರಿ. ಕೆಲವು ವರ್ಷ ತಂಡದ ನಾಯಕರಾಗಿದ್ದರು. ಶ್ರೀಲಂಕಾ ಕ್ರಿಕೆಟ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ರಾಜಕೀಯ:
2010ರ ಜನರಲ್ ಎಲೆಕ್ಷನ್ನಲ್ಲಿ ತವರು ಜಿಲ್ಲೆ ಮಟಾರಾದಿಂದ ಚುನಾಯಿತರಾದರು. ಪ್ರಸ್ತುತ ಮಹಿಂದಾ ರಾಜಪಕ್ಸೆ ಆಡಳಿತದ ಯುಪಿಎಫ್ಎ ಸರ್ಕಾರದಲ್ಲಿ ಅಂಚೆ ಖಾತೆಯ ಉಪಮಂತ್ರಿ.
ಇಮ್ರಾನ್ ಖಾನ್
ದೇಶ: ಪಾಕಿಸ್ತಾನ
ಕ್ರೀಡೆ: ಕ್ರಿಕೆಟ್
ಇಪ್ಪತ್ತನೇ ಶತಮಾನದ ಶ್ರೇಷ್ಠ ಆಲ್ರೌಂಡರ್ ಆಟಗಾರರಲ್ಲಿ ಇಮ್ರಾನ್ ಪ್ರಮುಖರು. 1992ರ ವಿಶ್ವಕಪ್ ಗೆಲ್ಲುವಲ್ಲಿ ಇಮ್ರಾನ್ ಪಾತ್ರ ಶ್ಲಾಘನೀಯ.
ರಾಜಕೀಯ
1996ರಲ್ಲಿ ಇಮ್ರಾನ್ 'ತೆಹ್ರಿಕ್ ಇ ಇನ್ಸಾಫ್' ಪಕ್ಷ ಹುಟ್ಟುಹಾಕಿದರು. ಜನರಲ್ ಎಲೆಕ್ಷನ್ನಲ್ಲಿ ತೆಹ್ರಿಕ್ ಇ ಇನ್ಸಾಫ್ 27 ಸೀಟು ಗೆಲ್ಲುವ ಮೂಲಕ ಮುಂದಿನ ದಿನಗಳಲ್ಲಿ ಅಧಿಕಾರಕ್ಕೇರುವ ಸೂಚನೆ ನೀಡಿದೆ. ಇಮ್ರಾನ್ ಖಾನ್ ಭವಿಷ್ಯದ ಪ್ರಧಾನಿ ಎಂದೇ ಬಿಂಬಿಸಲಾಗಿದೆ. ಪಾಕ್ನ ಕ್ರಿಕೆಟ್ ಮತ್ತು ರಾಜಕೀಯ ಎರಡಕ್ಕೂ ಉತ್ತಮ ಭವಿಷ್ಯ ಒದಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಣೆ.
ಅರ್ಜುನ ರಣತುಂಗಾ
ದೇಶ: ಶ್ರೀಲಂಕಾ
ಕ್ರೀಡೆ: ಕ್ರಿಕೆಟ್
1983ರಿಂದ ಕ್ರಿಕೆಟ್ ಬದುಕಿನ ಆರಂಭ. 1990ರಲ್ಲಿ ನಾಯಕರಾಗಿ ಮುಂಬಡ್ತಿ. 1996 ರಲ್ಲಿ ರಣತುಂಗಾ ನಾಯಕತ್ವದಲ್ಲಿ ಶ್ರೀಲಂಕಾ ತಂಡ ವಿಶ್ವಕಪ್ ಮುಡಿಗೇರಿಸಿಕೊಂಡಿತು.
ರಾಜಕೀಯ
'ಪೀಪಲ್ಸ್ ಅಲೈನ್ಸ್' ಪಕ್ಷದ ಅಭ್ಯರ್ಥಿಯಾಗಿ ಗೆಲುವಿನೊಂದಿಗೆ ರಾಜಕೀಯ ಪ್ರವೇಶ. ಶ್ರೀಲಂಕಾ ಪ್ರವಾಸೋದ್ಯಮ ಖಾತೆಯ ಉಪಮಂತ್ರಿಯಾಗಿ ಸೇವೆ. ಶ್ರೀಲಂಕ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ. 2010ರಲ್ಲಿ ಡೆಮೊಕ್ರಟಿಕ್ ನ್ಯಾಷನಲ್ ಅಲೈಯನ್ಸ್ ಪಕ್ಷಕ್ಕೆ ಸೇರ್ಪಡೆ.
ಕ್ರಿಸ್ ಲೈಟ್
ದೇಶ: ಇಂಡಿಯಾನ, ಕ್ರೀಡೆ: ಮಾರ್ಷಲ್ ಆರ್ಟ್ಸ್
515,000 ಡಾಲರ್ ಬಹುಮಾನದೊಂದಿಗೆ 2012ರಲ್ಲಿ ಯುಎಫ್ಸಿಗೆ ಗುಡ್ಬೈ ಹೇಳಿದರು.
ರಾಜಕೀಯ
ಯುಎಫ್ಸಿಯಿಂದ ಹೊರಬಂದು 2012ರಲ್ಲಿ ರಿಪಬ್ಲಿಕನ್ಆಗಿ ಇಂಡಿಯಾನ ಸಂಸತ್ ಸದಸ್ಯರಾಗಲು ಚುನಾವಣೆ ಎದುರಿಸಿದರು. ಆದರೆ ಸೋಲನುಭವಿಸಿದರು.
-ಮಂಜು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.