ಮತಗಾನ
ಚುನಾವಣೆ ಅಂದಾಕ್ಷಣ ಅಲ್ಲಿ ಮೇಲುನೋಟಕ್ಕೆ ಬರೀ ಮತದಾನ, ಸೋಲು-ಗೆಲುವು, ಅಧಿಕಾರ ಹಿಡಿಯುವ ಪ್ರಕ್ರಿಯೆಗಳು ಮಾತ್ರ ಕಂಡರೂ ಅದು ಇತಿಹಾಸದ ರಾಜಕಾರಣದ ರಿಸಲ್ಟು ಹಾಗೂ ಭವಿತವ್ಯದ ಪ್ಲಾನಿಂಗು ಆಗಿರುತ್ತೆ ಅನ್ನೋದನ್ನ ಪ್ರಜೆಗಳು ಮರೆಯಕೂಡದು. ಅದನ್ನರಿಯದೆ ಮತದಾನ ಮರೆತಾಗ, ಅಥವಾ ಹಣ ಹೆಂಡಕ್ಕಾಗಿ ಮತ ಮಾರಿಕೊಂಡಾಗ ಅಯೋಗ್ಯ ಸರ್ಕಾರ ಅಧಿಕಾರಕ್ಕೆ ಬರುವುದಷ್ಟೇ ಅಲ್ಲ, ಬೇಜವಾಬ್ದಾರಿ ತೋರಿದ ಕಾರಣಕ್ಕೆ ನಮ್ಮ ದನಿಯನ್ನೂ ಕಸಿದುಕೊಳ್ಳುತ್ತದೆ. ವ್ಯವಸ್ಥೆಯ ವಿರುದ್ಧ ದಂಗೆ ಏಳೋಕೆ ನಕ್ಸಲರೋ, ಉಗ್ರಗಾಮಿಗಳೋ ಆಗಬೇಕಿಲ್ಲವಾದರೂ ಅವರಿಗಿರುವ ಧೈರ್ಯವನ್ನು, ಕೆಚ್ಚನ್ನು ಮೈಗೂಡಿಸಿಕೊಂಡು ಅದನ್ನು ಪಾಸಿಟಿವ್ ಆಗಿ ಬಳಸುವುದರಲ್ಲಿ ತಪ್ಪೇನಿಲ್ಲ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಮಾತಾಡ್ ಮಾತಾಡು ಮಲ್ಲಿಗೆ', ಅಧಿಕಾರಶಾಹಿಗಳು ಗಣಿಗಾರಿಕೆ, ಬಹುರಾಷ್ಟ್ರೀಯ ಕಂಪನಿಗಳನ್ನು ಕರೆತರುವಿಕೆ, ಮುಂತಾದುವುಗಳ ಹೆಸರಿನಲ್ಲಿ ಹೇಗೆ ದೇಶವನ್ನು ಕೊಳ್ಳೆಹೊಡೆದು ಮಾರಿಹಾಕುತ್ತಾರೆ ಎಂಬುದನ್ನು ಮನೋಜ್ಞವಾಗಿ ಕಟ್ಟಿಕೊಟ್ಟ ಸಿನಿಮಾ. ಗೊಲ್ಲಹಳ್ಳಿ ಶಿವಪ್ರಸಾದ್ ಸಾಹಿತ್ಯದ ಈ ಕ್ರಾಂತಿಗೀತೆಯಲ್ಲಿ, ಭ್ರಷ್ಟ ವ್ಯವಸ್ಥೆಯನ್ನು ಒಪ್ಪಿಕೊಂಡು ದೇಶ ಹರಾಜಾಗುವುದನ್ನು ನೋಡುತ್ತಾ ಅಮಾಯಕತೆಯಿಂದ ಭಷ್ಟತೆಯ ಪಾಲುದಾರರಾಗುವ ಪ್ರಜೆಗಳನ್ನು ಎಚ್ಚರಿಸುವ ಸಾಲುಗಳಿವೆ. ಮೆಲೋಡಿ ರೊಮ್ಯಾಂಟಿಕ್ ಟ್ಯೂನ್‌ಗಳಿಗೆ ಖ್ಯಾತರಾಗಿದ್ದ ಮನೋಮೂರ್ತಿ ಸಂಗೀತದ ಈ ಗೀತೆಯನ್ನು ಹಾಡಿದ್ದು ದಿವಂಗತ ಸಿ.ಅಶ್ವಥ್. ಬಹುಶಃ ಇದು ಅವರ ಕೊನೆಯ ಸಿನಿಮಾಗೀತೆ. ವಿಷ್ಣುವರ್ಧನ್ ನಾಯಕರಾಗಿದ್ದ ಈ ಚಿತ್ರದಲ್ಲಿ ಪ್ರಸ್ತುತ ಗೀತೆಗೆ ಸುದೀಪ್ ಅಭಿನಯವಿತ್ತು.
ಜಣ ಜಣ ಜಣ ಕಾಂಚಾಣದಲ್ಲಿ
ಅಮೆರಿಕಾದ ಲಾಂಛನದಲ್ಲಿ
ದೇವರು ದಿಂಡಿರ ಭಜನೆಯಲ್ಲಿ
ಮಂದಿರ ಮಸೀದಿ ಗದ್ದಲದಲ್ಲಿ
ಎಲ್ಲ ಮಾಯ ನಾಳೆ ನಾವು ಮಾಯ
ಎಲ್ಲಾ ಮಾಯ ನಾಳೆ ನೀವು ಮಾಯ
ಭೂಮಿತಾಯಿಯ ಉದರ ಸೀಳಿದರು
ಮುತ್ತುರತ್ನಗಳ ಮಾರಿಕೊಂಡರು
ಗುಂಡಿಗೆಗೆ ಗುಂಡಿಟ್ಟು ಸಿಡಿಸಿದರು
ಕೋಟಿಕೋಟಿ ಹಣ ಕೊಳ್ಳೆ ಹೊಡೆದರು
ಗಣಿಗಳ ಧಣಿಗಳ ದಿಬ್ಬಣದಲ್ಲಿ
ಭರತ ಮಾತೆಯೇ ಬೆತ್ತಲಾದಳು
ಎಲ್ಲ ಮಾಯ ನಾಳೆ ನಾವು ಮಾಯ
ಎಲ್ಲಾ ಮಾಯ ನಾಳೆ ನೀವು ಮಾಯ
ಈಸ್ಟ್ ಇಂಡಿಯಾ ಕಂಪನಿಯೊಂದು
ಇನ್ನೂರು ವರ್ಷ ಆಳಿತು ಅಂದು
ಸಾವಿರ ಸಾವಿರ ಕಂಪನಿ ಬಂದು
ನಾಡು ನಾಡಿಗಳ ಕಡಿಯುವರಿಂದು
ಸೆಡ್ಡು ಹೊಡೆದು ನೀವು ನಿಲ್ಲದಿದ್ದರೆ
ದೇಶ ಕೋಶ ನಾಶವಯ್ಯ.
ಎಳನೀರನ್ನ ಇರಿದು ಕೊಂದಿತು
ಪೆಪ್ಸಿ ಕೋಲಾ ಕೇಕೆ ಹಾಕಿತು
ಪರಂಗಿಯವರು ಮತ್ತೆ ಬಂದರೆ
ನೀವು ನಾವು ಎಲ್ಲಾ ಮಾಯ
ಎಲ್ಲ ಮಾಯ ನಾಳೆ ನಾವು ಮಾಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.