ಪಶು ಪಕ್ಷಗಳು
ಇಂಡಿಯಾ ಗೇಟ್ ದಾಟಿದರೆ ಇದು ತದ್ವಿರುದ್ಧ. ನೀವು ಊಹೆ ಮಾಡದ ರಾಜಕೀಯ ಬೆಳವಣಿಗೆಗಳು ಇಲ್ಲಿಂಟು.
ಭಾರತದ ರಾಜಕಾರಣದಲ್ಲಿ ಪಕ್ಷಗಳಿಗೆ ಪ್ರಾಣಿಗಳು ಚಿಹ್ನೆಗಳಾಗಿರುವುದನ್ನು ನೋಡಿದ್ದೇವೆ. ಆದರೆ, ಇಂಡಿಯಾ ಗೇಟ್ ದಾಟಿದರೆ ಇದು ತದ್ವಿರುದ್ಧ. ನೀವು ಊಹೆ ಮಾಡದ ರಾಜಕೀಯ ಬೆಳವಣಿಗೆಗಳು ಇಲ್ಲಿಂಟು.
ಕತ್ತೆ ಚುನಾವಣೆಗೆ ನಿಂತಿದ್ದನ್ನು ನೋಡಿದ್ದೀರಾ? ಸಾರ್ವಜನಿಕರೇ ಖಡ್ಗಮೃಗವನ್ನು ಅಭ್ಯರ್ಥಿಯನ್ನಾಗಿ ಘೋಷಿಸಿ ಅದಕ್ಕೆ ಮತ ಹಾಕಿದ್ದು ನಿಮಗೆ ಗೊತ್ತಿದೆಯೇ? ಹೋಗ್ಲಿ, ಎರಡು ಬಾರಿ ಬೆಕ್ಕು ಚುನಾವಣೆಗೆ ಸ್ಪರ್ಧಿಸಿದ್ದನ್ನು ಊಹೆ ಮಾಡಲಿಕ್ಕೂ ಆಗದು. ಈಗಲೂ ಕಪ್ಪು ಕುರಿ, ಮೇಕೆ, ಚಿರತೆ ಜನಪ್ರತಿನಿಧಿಗಳಾಗಿ ಆಡಳಿತ ನಡೆಸುತ್ತಿರುವುದನ್ನು ನೋಡಿದ್ದೀರಾ? ಛಾನ್ಸ್ ಇಲ್ಲ ಬಿಡಿ. ಆದರೆ, ರಾಜಕೀಯದಲ್ಲಿ ಏನೂ ಬೇಕಾದರೂ ನಡೆಯುತ್ತದೆ. ಕತ್ತೆಯೂ ಅಭ್ಯರ್ಥಿಯಾಗುತ್ತದೆ, ನಾಯಿಯೂ ಚುನಾವಣೆಗೆ ನಿಲ್ಲುತ್ತದೆ, ಹಂದಿಯೂ ಆಡಳಿತ ಮಾಡುತ್ತದೆ! ಹೌದು, ಇದು ಪೊಲಿಟಿಕಲ್ ಡ್ರಾಮಾ ಸ್ವಾಮಿ. ಇಲ್ಲಿ ಏನೂ ಬೇಕಾದರೂ ನಡೆಯಬಹುದು ಎನ್ನುವುದನ್ನು ತೋರಿಸಿಕೊಟ್ಟಿರುವುದು ಅಮೆರಿಕ, ಬ್ರೆಜಿಲ್, ವಾಷಿಂಗ್ಟನ್, ಕ್ಯಾಲಿಫೋರ್ನಿಯಾದಂತಹ ಜಾಗತಿಕ ದೇಶ- ನಗರಗಳು.
ಹೀಗಾಗಿ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರುವ ನಾಯಿ, ಬೆಕ್ಕು, ಹಂದಿ, ಕತ್ತೆ, ಕುದುರೆ ಆಯಾ ರಾಜಕೀಯ ಪಕ್ಷಗಳ ಗುರುತುಗಳಲ್ಲ. ಅಕ್ಷರಶಃ ಪಕ್ಷಗಳ ಅಭ್ಯರ್ಥಿಗಳೇ ಈ ಪ್ರಾಣಿಗಳು. ಕೆಲವು ಕಡೆ ಜನಪ್ರತಿನಿಧಿಗಳ ಆಡಳಿತಕ್ಕೆ ಬೇಸತ್ತು ಸಾರ್ವಜನಿಕರೇ ಅವರ ವಿರುದ್ಧ ಪ್ರಾಣಿಗಳನ್ನು ಚುನಾವಣಾ ಕಣಕ್ಕಿಳಿಸಿದರೆ, ಇನ್ನು ಕೆಲವು ಕಡೆ ನಾಮಕಾವಾಸ್ತೆಗಾಗಿ ಪ್ರಾಣಿಗಳನ್ನು ಗೆಲ್ಲಿಸಿಕೊಂಡು ಮನುಷ್ಯರು ಅವುಗಳ ಹೆಸರಿನಲ್ಲಿ ಆಡಳಿತ ನಡೆಸಿದ್ದಾರೆ. ಅಚ್ಚರಿ ಸಂಗತಿ ಎಂದರೆ ಈಗಲೂ ಕೆಲವು ಕಡೆ ಪ್ರಾಣಿಗಳ ಹೆಸರಿನಲ್ಲೇ ಜನಪ್ರತಿನಿಧಿಗಳು ಆಡಳಿತ ನಡೆಸುತ್ತಿದ್ದಾರೆ. ಅಲ್ಲಿಗೆ ರಾಜಕೀಯ ನಾಯಕರು ಮೂಕಪ್ರಾಣಿಗಳ ಮೇಲೂ ತಮ್ಮ ಪೊಲಿಟಿಕಲ್ ಡ್ರಾಮಾ ಮಾಡಿದ್ದಾರೆ. ಅಂಥ ದೇಶಗಳ ಅನಿಮಲ್ ಅಭ್ಯರ್ಥಿಗಳ ರಾಜಕೀಯ ಜಾತಕ ಇಲ್ಲಿದೆ ನೋಡಿ.
ಕತ್ತೆ ಚಿರಾಯು...
ಅಮೆರಿಕದ ವಾಷಿಂಗ್ಟನ್ನ ಮಿಲ್ಟನ್ ಸಂಸ್ಥಾನದ ಅಭ್ಯರ್ಥಿಯಾಗಿ ಚುನಾವಣಾ ಸ್ಪರ್ಧೆಗಿಳಿದಿದ್ದು ಊರು ಕತ್ತೆ. ಹೌದು, ಕೆಲಸವಿಲ್ಲದೆ ಹಳ್ಳಿಯ ದೃಷ್ಟಿಗೆ ಬಿಟ್ಟಿದ್ದ ಕತ್ತೆಯೊಂದು 1938ರಲ್ಲಿ ನಡೆದ ಮಿಲ್ಟನ್ ಸಂಸ್ಥಾನದ ಸ್ಥಳೀಯ ಚುನಾವಣೆಗೆ ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 52-0 ಮತಗಳ ಅಂತರದಿಂದ ತನ್ನ ಸ್ಪರ್ಧಿಯನ್ನು ಸೋಲಿಸಿ ವಿಜಯ ಮಾಲೆ ಧರಿಸಿತು. ಈ ಕತ್ತೆಯ ಹೆಸರು ಬೋಸ್ಟನ್ ಕರ್ಪಿಸ್.
ಖಡ್ಗಮೃಗವೇ ಖಡ್ಗವಾಯಿತು...
ತಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳು ಅದೇ ಜನಪರವಾಗಿ ಕೆಲಸ ಮಾಡದಿದ್ದರೆ ಅವರ ವಿರುದ್ಧ ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ. ಆದರೆ, ಅಂಥ ನಾಯಕರಿಗೆ ಬುದ್ಧಿ ಕಲಿಸಲು ಖಡ್ಗಮೃಗ ಪ್ರಾಣಿಯನ್ನು ಖಡ್ಗವಾಗಿ ಬಳಸುವುದನ್ನು ನೋಡಿದ್ದೇವೆಯೇ? ನೋಡಿಲ್ಲ ಅಂದರೆ ಇಲ್ಲಿ ಕೇಳಿ. ಬ್ರೆಜಿಲ್ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಅದೇ ಸಮಯಕ್ಕೆ ಸಾರ್ವಜನಿಕ ಚುನಾವಣೆಯೂ ಬಂತು. ಭ್ರಷ್ಟ ವ್ಯವಸ್ಥೆಯನ್ನು ವಿರೋಧಿಸಿ ಏಕಾಏಕಿ ಸಾರ್ವಜನಿಕರೇ ಚುನಾವಣೆ ಕಣಕ್ಕಿಳಿದರು. ಅದು ಕೂಡ ಖಡ್ಗಮೃಗವನ್ನು ಅಭ್ಯರ್ಥಿಯನ್ನಾಗಿಸುವ ಮೂಲಕ. ಆದರೆ, ಚುನಾವಣಾ ಆಯೋಗ ಖಡ್ಗಮೃಗ ಪ್ರಾಣಿಯನ್ನು ಅಭ್ಯರ್ಥಿಯಾಗಿ ಸ್ಪರ್ಧಿಸಲು ಅನುಮತಿ ನೀಡಲಿಲ್ಲ. ಆದರೂ ಜನ ಚುನಾವಣಾ ಆಯೋಗದ ಅಧಿಕಾರಿಗಳ ನಿಯಮಗಳನ್ನು ಲೆಕ್ಕಿಸದೆ ಖಡ್ಗಮೃಗಕ್ಕೆ ಮತ ನೀಡಿದರು. ಒಂದು ಲಕ್ಷ ಮತಗಳು ಬಿದ್ದವು. ಪ್ರಾಣಿ ವಿರುದ್ಧ ನಿಂತ ಬೇರೆ ಯಾವ ಮನುಷ್ಯ ಅಭ್ಯರ್ಥಿಗೂ ಇಷ್ಟು ಮತಗಳು ಬರಲಿಲ್ಲ. ಇದು ನಡೆದದ್ದು 1958ರಲ್ಲಿ ಬ್ರೆಜಿಲ್ನ ಸೋವೊ ಪಾಲೋ ಎನ್ನುವ ನಗರದಲ್ಲಿ.
ನಾಯಿ ಮೇಯರ್ ಆಯಿತು...
ವಿಚಿತ್ರ ಎನಿಸಿದರೂ ಇದು ನಿಜ. ನಾಯಿ ಸಾಯುವವರೆಗೂ ಮೇಯರ್ ಆಗಿ ಅಧಿಕಾರ ನಡೆಸಿದ್ದು ಕ್ಯಾಲಿಫೋರ್ನಿಯಾದ ಸುನೋಲ್ ನಗರದಲ್ಲಿ. ಲಾಬ್ರಡಾರ್ ಎಂಬ ಜಾತಿಗೆ ಸೇರಿದ ಬೋಸ್ಕೊ ಎನ್ನುವ ನಾಯಿ 1981ರಲ್ಲಿ ನಡೆದ ಮೇಯರ್ ಚುನಾವಣೆಗೆ ಸ್ಪರ್ಧಿಸಿ ವಿಜಯ ಸಾಧಿಸಿತು. ಅಲ್ಲಿಂದ 1994ರ ವರೆಗೂ ಅಂದರೆ ಅದು ಸಾಯುವ ತನಕ ಮೇಯರ್ ಪೀಠದಲ್ಲಿ ರಾರಾಜಿಸಿತು.
ವಿಶೇಷ ಎಂದರೆ ಈಗಲೂ ಅಮೆರಿಕದ ಕೆಲ ಸಣ್ಣ ಪುಟ್ಟ ನಗರಗಳಲ್ಲಿ ಮೇಯರ್ಗಳಾಗಿ ಪ್ರಾಣಿಗಳೇ ಅಧಿಕಾರ ನಡೆಸುತ್ತಿವೆ. ಕೆಂಟಕಿಯ ರ್ಯಾಬಿಟ್ ಹಷ್ ಎನ್ನುವ ನಗರದಲ್ಲಿ ಕಪ್ಪು ಕುರಿ, ಟೆಸ್ಕಾಸ್ ನ ಲಾಜಿಟಾಸ್ ನಗರದಲ್ಲಿ ಚಿರತೆ ಹಾಗೂ ಮೇಕೆ ಮೇಯರ್ಗಳಾಗಿ ಸಮ್ಮಿಶ್ರ ಸರ್ಕಾರ ನಡೆಸುತ್ತಿವೆ. ಇಲ್ಲಿ ಪ್ರಾಣಿಗಳು ಅಭ್ಯರ್ಥಿಗಳಾಗಿದ್ದರೂ ಅಲ್ಲಿ ಅಸಲಿ ರಾಜಕೀಯ, ಆಡಳಿತ ಮಾಡುತ್ತಿರುವುದು ಮಾತ್ರ ಮನುಷ್ಯರೇ. ನಮ್ಮೂರಿನ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರು ಗೆದ್ದರೂ, ಅಧಿಕಾರ ನಡೆಸುವುದು ಮಾತ್ರ ಆ ಮನೆ ಯಜಮಾನ. ಅದೇ ರೀತಿ ಈ ಪ್ರಾಣಿ ರಾಜಕೀಯ.
ಬೆಕ್ಕಿನ ಆಟ...
ಬೆಕ್ಕು ಎರಡು ಬಾರಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅಚ್ಚರಿಗೆ ಅಮೆರಿಕ ಸಾಕ್ಷಿಯಾಗಿದೆ. ಇಲ್ಲಿನ ಮಾರಿಸ್ ಎನ್ನುವ ಬೆಕ್ಕು 1988 ಹಾಗೂ 1992ರಲ್ಲಿ ನಡೆದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸುದ್ದಿ ಮಾಡಿತು. ಆದರೆ, ಕೆಲವೇ ಮತಗಳ ಅಂತರದಿಂದ ಪಾಪ ಸೋಲು ಕಂಡಿದ್ದನ್ನು ನೋಡಿ 'ಅಯ್ಯೋ ಇದು ಬೆಕ್ಕಿನ ಆಟ' ಅಂತ ಯಾರೂ ಅಪಹಾಸ್ಯ ಮಾಡಲಿಲ್ಲ ಎನ್ನುವುದೇ ಗಂಭೀರ ಸಂಗತಿ!
ಕಾಡು ಹಂದಿಗೂ ಕಾಲ ಬಂತು!
ಜಗತ್ತಿನ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದಲ್ಲಿ ಮನುಷ್ಯ ರೂಪದ ಅಭ್ಯರ್ಥಿಗಳಿಗೆ ಬರಗಾಲವಿಲ್ಲ. ಆದರೂ 1968ರಲ್ಲಿ ನಡೆದ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಗೆ ಯೂತ್ ಇಂಟರ್ನ್ಯಾಷನಲ್ ಪಾರ್ಟಿ ತನ್ನ ಅಭ್ಯರ್ಥಿಯನ್ನಾಗಿ ಕಾಡು ಹಂದಿಯನ್ನು ಕಣಕ್ಕಿಳಿಸಿ ಅಚ್ಚರಿ ಮೂಡಿಸಿತು. ಇಲ್ಲಿ ಯಾರು ಗೆದ್ದರು ಎನ್ನುವುದಕ್ಕಿಂತ ಲಕಲಕನೆ ಹೊಳೆಯುವ ಅಮೆರಿಕದ ಬೀದಿಗಳಲ್ಲಿ ಕಾಡು ಹಂದಿ ರಾಜಾರೋಷವಾಗಿ ತಿರುಗಾಡಿತು ಎನ್ನುವುದು ದೊಡ್ಡ ಸುದ್ದಿಯಾಯಿತು.
ನಾಯಿ ರಾಜಕೀಯ...
ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ನಾಯಿ ಮಿಂಚಿತು. ಮೋಲಿ ಎನ್ನುವ ನಾಯಿ ಚುನಾವಣಾ ಕಣಕ್ಕಿಳಿದು ಸೋಲು ಕಂಡಿತು. ಇದು ಅಮೆರಿಕದ ನಾಯಿ ರಾಜಕೀಯ.
ಕೊನೆಗೂ ಬೆಕ್ಕು ಗೆದ್ದಿತು
ಹೌದು, ಮಾರಿಸ್ ಎನ್ನುವ ಬೆಕ್ಕು ಸೋತರು ಅದೇ ಅಮೆರಿಕದ ಅಲಾಸ್ಕೋದ ಟಾಕಿಟ್ನಾ ನಗರದಲ್ಲಿ ಬೆಕ್ಕು ಮೇಯರ್ ಸ್ಥಾನಕ್ಕೆ ಆಯ್ಕೆಯಾಯಿತು. 1997ರಲ್ಲಿ ನಡೆದ ಮೇಯರ್ ಚುನಾವಣೆಗೆ ಸ್ಪರ್ಧಿಸಿ ಸ್ಟಬ್ಸ್ ಎನ್ನುವ ಬೆಕ್ಕು ಗೆಲುವಿನ ರುಚಿ ನೋಡಿತು.
-ಆರ್. ಕೇಶವಮೂರ್ತಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.