ಕಾಂಪೌಂಡ್ ಹಾರಿ ಬಂದ ಸಾಹೇಬರು!
ವಿವೇಕಾನಂದರು ಪಾಶ್ಚಾತ್ಯ ರಾಷ್ಟ್ರಗಳಿಗೆ ನೀಡಿದ ಭೇಟಿಯು ಮೊದಲನೆಯಸಲ ಅಲ್ಲಿಯ ಶಕ್ತಿ, ಸಂಘಟನೆ, ತಂತ್ರಜ್ಞಾನ, ಪ್ರಜಾಪ್ರಭುತ್ವಗಳನ್ನು ಕಂಡು ಮೆಚ್ಚಿಕೊಂಡಿದ್ದರು. ಆದರೆ ಈಗ ಅದರ ಹಿಂದಿರುವುದೆಲ್ಲ ಕೇವಲ ದುರಾಸೆ, ಸ್ವಾರ್ಥ ಮತ್ತು ಅಧಿಕಾರ, ಸವಲತ್ತುಗಳಿಗಾಗಿ ಹೋರಾಟವೇ ವಿನಃ ಇನ್ನೇನೂ ಅಲ್ಲ ಎಂಬುದನ್ನು ಕಂಡು 'ತೋಳಗಳ ಹಿಂಡಿನಲ್ಲಿ ಎಂತಹ ಸೌಂದರ್ಯ?' ಎಂದು ಉದ್ಗರಿಸಿದರು.
ಸ್ವಾಮೀಜಿ ತಮ್ಮ ಪ್ರಿಯ ಸಹಸನ್ಯಾಸಿಗಳನ್ನು ಕೂಡಿಕೊಳ್ಳುವ ಆಲೋಚನೆಯಿಂದ ಮುಂಬೈನಿಂದ ಕೊಲ್ಕತ್ತಾದತ್ತ ಟ್ರೈನ್ ಹತ್ತಿ ಹೊರಟರು. ಐರೋಪ್ಯ ಪೋಷಾಕಿನಲ್ಲಿ ಒಬ್ಬ ಅಧಿಕಾರಿಯಂತೆ ಕಾಣಿಸುತ್ತಿದ್ದ ಸ್ವಾಮೀಜಿಯನ್ನು ಅವರ ಹಳೆಯ ಸ್ನೇಹಿತನ ಹೊರತಾಗಿ ಬೇರೆ ಯಾರೂ ಗುರುತಿಸಲಿಲ್ಲ. ಸ್ವಾಮೀಜಿ ಕೊಲ್ಕತಾದ ಆಶ್ರಮದ ಬಳಿ ಬರುವಾಗ ಊಟದ ಗಂಟೆ ಹೊಡೆಯಿತು. ಆಶ್ರಮವಾಸಿಗಳೆಲ್ಲ ಊಟದ ಮನೆಯಲ್ಲಿ ಸೇರಿದ್ದರು. ಆಗ ತೋಟದ ಮಾಲಿ ಓಡಿಬಂದು, 'ಯಾರೋ ಸಾಹೇಬರು ಬಂದಿದ್ದಾರೆ. ಅವರು ಕಾಂಪೌಂಡು ಹಾರಿ ಸೀದಾ ಇಲ್ಲಿಗೇ ಬರುತ್ತಿದ್ದಾರೆ!' ಎಂದು ಕೂಗಿದ. ಊಟಕ್ಕೆ ಕುಳಿತವರು ಎದ್ದು ಹೊರಟರು. ಅಷ್ಟರಲ್ಲಿ 'ಸಾಹೇಬರು ಅಲ್ಲಿಗೇ ಸೀದಾ ನುಗ್ಗಿದರು!' ನೋಡುತ್ತಾರೆ- ಸ್ವಾಮೀಜಿ! ಅವರೆಲ್ಲರಿಗೆ ತಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ. 'ಸ್ವಾಮೀಜಿ ಬಂದಿದ್ದಾರೆ' ಎಂದು ಕೂಗಿದರು. ಸ್ವಾಮೀಜಿ ನಗುತ್ತಾ, 'ಊಟದ ಗಂಟೆ ಹೊಡೆದದ್ದು ದೂರಕ್ಕೆ ಕೇಳಿಸಿತು. ತಡಮಾಡಿದರೆ ಎಲ್ಲಿ ತುತ್ತಿಗೆ ಕುತ್ತು ಬೀಳುತ್ತದೆಯೋ ಎಂದು ಹೆದರಿ ಓಡಿಬಂದೆ' ಎಂದಾಗ ಆನಂದದ ಅಲೆಯೆದ್ದಿತು.
ಎಲ್ಲರಿಗೂ ತುಂಬಾ ಸಂತೋಷವಾಯಿತು. ಸ್ವಾಮೀಜಿ ತಮ್ಮ ರಸಾನುಭವಗಳನ್ನೆಲ್ಲ ವಿವರಿಸುತ್ತಿದ್ದಂತೆ, ಅವರೆಲ್ಲ ಭಾವಲೋಕದಲ್ಲಿ ವಿಹರಿಸತೊಡಗಿದರು.ಟಿ
=ಆನಂದ ಎಸ್.ಎನ್.
anandsn193@gmail.com