ಚಿತ್ರಲೋಕ ಸಭಾ
ಚಿತ್ರ: ಅಭಿಮನ್ಯು (1990), ತಾರಾಗಣ: ರವಿಚಂದ್ರನ್, ಸೀತಾ, ಅನಂತ್ ನಾಗ್, ನಿರ್ದೇಶನ: ರವಿರಾಜಾ ಪಿನಿಶೆಟ್ಟಿ
ಇದು ತೆಲುಗು ಚಿತ್ರ 'ಅಂಕುಶಂ'ನ ರಿಮೇಕ್. ರವಿರಾಜಾ ಪಿನಿಶೆಟ್ಟಿ ಅವರ ದಕ್ಷ ನಿರ್ದೇಶನದಲ್ಲಿ ತೆರೆಕಂಡಿದ್ದ ಈ ಚಿತ್ರ ಅಂದಿನ ತೆಲುಗು ನಟ ರಾಜಶೇಖರ್ ಅವರಿಗೆ ಜನಪ್ರಿಯತೆ ತಂದುಕೊಟ್ಟ ಚಿತ್ರಗಳಲ್ಲೊಂದು. ಕನ್ನಡಕ್ಕೂ ಅವರದ್ದೇ ನಿರ್ದೇಶನ. ನಿಷ್ಠಾವಂತ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬ ಭ್ರಷ್ಟ ರಾಜಕೀಯ ವ್ಯವಸ್ಥೆಯೆದುರು ಹೋರಾಡುವ ಕಥೆಯನ್ನು ಈ ಚಿತ್ರ ಹೊಂದಿದೆ. ತೆಲುಗಿನಲ್ಲಿ ಡಾ. ರಾಜಶೇಖರ್ ಅವರು ನಾಯಕನಾಗಿ ಅಭಿನಯಿಸಿದ್ದರೆ, ಕನ್ನಡದಲ್ಲಿ ಈ ಚಿತ್ರಕ್ಕೆ ರವಿಚಂದ್ರನ್ ಅವರು ನಾಯಕರಾಗಿ ಅಭಿನಯಿಸಿದ್ದರು. ಅದುವರೆಗೂ ರೊಮ್ಯಾಂಟಿಕ್ ಹೀರೋ ಆಗಿಯೇ ಗಮನ ಸೆಳೆದಿದ್ದ ಕನ್ನಡದ ಕನಸುಗಾರ ರವಿಚಂದ್ರನ್, ಫಾರ್ ಎ ಚೇಂಜ್ ಎಂಬಂತೆ ಇಂಥ ಆ್ಯಕ್ಷನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಜನ ಇದನ್ನು ಎಷ್ಟರಮಟ್ಟಿಗೆ ಸ್ವೀಕರಿಸಿದರು ಎನ್ನುವುದಕ್ಕಿಂತ ತಮ್ಮ ಇಮೇಜ್ಗೆ ಹೊರತಾಗಿಯೂ ಬೆಳೆಯಲು ರವಿಚಂದ್ರನ್ ಪ್ರಯತ್ನಿಸಿದ್ದು ಮೆಚ್ಚತಕ್ಕ ಅಂಶ. ಅಂದಹಾಗೆ, ಈ ಚಿತ್ರದಲ್ಲಿ ಗಮನ ಸೆಳೆಯುವ ಮತ್ತೊಂದು ಪಾತ್ರದಲ್ಲಿರುವುದು ನಟ ಅನಂತ್ನಾಗ್. ಶಾಲಾ ಮಾಸ್ತರಾಗಿ ನಂತರ, ರಾಜಕೀಯ ಸೇರಿ ನಿಷ್ಠಾವಂತ ರಾಜಕಾರಣಿಯಾಗಿ ಹೆಸರು ಮಾಡಿದ್ದ ವ್ಯಕ್ತಿಯೊಬ್ಬನ ಪಾತ್ರದಲ್ಲಿ ಅನಂತ್ನಾಗ್, ಗಮನ ಸೆಳೆಯುತ್ತಾರೆ. ತೆಲುಗಿನಲ್ಲಿ ಖಳನಟರಾಗಿ ಅಂಕುಶಂ ಮೂಲಕ ಎಂಟ್ರಿ ಕೊಟ್ಟು, ಸಂಚಲನ ಮೂಡಿಸಿದ್ದ ರಾಮಿರೆಡ್ಡಿ, ಈ ಚಿತ್ರದಲ್ಲೂ ಅದೇ ಪಾತ್ರ ಮಾಡಿದ್ದಾರೆ. ಹಿಂದಿಗೂ ಪ್ರತಿಬಂಧ್ ಹೆಸರಲ್ಲಿ ರೀಮೇಕ್ ಆಗಿದ್ದ ಈ ಚಿತ್ರದಲ್ಲಿ ತೆಲುಗು ಮೆಗಾಸ್ಟಾರ್ ಚಿರಂಜೀವಿ ಹಾಗೂ ಜೂಹಿ ಚಾವ್ಲಾ ನಟಿಸಿದ್ದರು.
-ಚೇತನ್ ಓ.ಆರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.