ಭಾರತದ ಅತ್ಯಂತ ಸುಂದರ ಪ್ರವಾಸಿತಾಣಗಲ್ಲಿ ಒಂದಾದ ಕೊಡಗು, ತನ್ನ ದಟ್ಟವಾದ ಹಸಿರು, ಕಾಫಿ ತೋಟಗಳು, ಮಂಜು ಮುಸುಕಿದ ಬೆಟ್ಟಗಳು ಮತ್ತು ಜಲಪಾತಗಳಿಂದಾಗಿ "ಭಾರತದ ಸ್ಕಾಟ್ಲೆಂಡ್" ಎಂದೇ ಜಗತ್ಪ್ರಸಿದ್ಧಿಯಾಗಿದೆ. ಅದರಲ್ಲೂ ವಾರಾಂತ್ಯದ ರಜೆ ಕಳೆಯಲು ಅಥವಾ ಪ್ರಕೃತಿಯ ಮಡಲಲ್ಲಿ ಮಳೆಗಾಲವನ್ನ ಎಂಜಾಯ್ ಮಾಡಲು ಬಯಸುವವರಿಗೆ ಕೊಡಗು ಅತ್ಯುತ್ತಮ ಆಯ್ಕೆ. ಅದರಂತೆ, ನೀವು ಕೊಡಗಿಗೆ ಪ್ರವಾಸ ಪ್ಲಾನ್ ಮಾಡುತ್ತಿದ್ದರೆ, ನಿಮ್ಮ ಲಿಸ್ಟ್‌ನಲ್ಲಿ ಇರಲೇಬೇಕಾದ 5 ಪ್ರಮುಖ ಸ್ಥಳಗಳ ಮಾಹಿತಿ ಇಲ್ಲಿದೆ:
ಅಬ್ಬಿ ಜಲಪಾತ: ಮಡಿಕೇರಿಯಿಂದ ಕೇವಲ 6 ಕಿ.ಮೀ ದೂರದಲ್ಲಿರುವ ಅಬ್ಬಿ ಜಲಪಾತವು ಕೊಡಗಿನ ಪ್ರಮುಖ ಆಕರ್ಷಣೆಗಳಲ್ಲೊಂದು. ಖಾಸಗಿ ಕಾಫಿ ಎಸ್ಟೇಟ್‌ಗಳು ಮತ್ತು ಏಲಕ್ಕಿ ತೋಟಗಳ ಮಧ್ಯೆ ಹರಿಯುವ ಈ ಜಲಪಾತವು ಸುಮಾರು 70 ಅಡಿ ಎತ್ತರದಿಂದ ಕಲ್ಲುಬಂಡೆಗಳ ಮೇಲೆ ಧುಮುಕುತ್ತದೆ. ಅದರಲ್ಲೂ, ಇಲ್ಲಿ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ನಿಂತು ಜಲಪಾತದ ಭೋರ್ಗರೆತವನ್ನು ವೀಕ್ಷಿಸುವುದೇ ಒಂದು ರೋಮಾಂಚಕ ಅನುಭವ. ಹಾಗಾಗಿ, ಮಳೆಗಾಲ ಮತ್ತು ಮಳೆಗಾಲದ ನಂತರದ ದಿನಗಳಲ್ಲಿ ಈ ಜಲಪಾತದ ಸೌಂದರ್ಯ ದುಪ್ಪಟ್ಟಾಗುತ್ತದೆ.
ದುಬಾರೆ ಆನೆ ಶಿಬಿರ: ಕಾವೇರಿ ನದಿಯ ದಂಡೆಯ ಮೇಲಿರುವ ದುಬಾರೆ ಆನೆ ಶಿಬಿರವು ಪ್ರಾಣಿ ಪ್ರೇಮಿಗಳಿಗೆ ಮತ್ತು ಮಕ್ಕಳಿಗೆ ನೆಚ್ಚಿನ ತಾಣವಾಗಿದೆ. ಇಲ್ಲಿ ಪ್ರವಾಸಿಗರು ಕೇವಲ ಆನೆಗಳನ್ನು ನೋಡುವುದಷ್ಟೇ ಅಲ್ಲದೆ, ಅವುಗಳಿಗೆ ನದಿಯಲ್ಲಿ ಸ್ನಾನ ಮಾಡಿಸುವುದು, ಆಹಾರ ನೀಡುವುದು ಮತ್ತು ಮಾವುತರಿಂದ ಅವುಗಳ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳುವ ಅಪರೂಪದ ಅವಕಾಶವನ್ನು ಪಡೆಯಬಹುದು. ಇದಲ್ಲದೆ, ಕಾವೇರಿ ನದಿಯಲ್ಲಿ ಸಾಹಸಮಯ ರಿವರ್ ರಫ್ಟಿಂಗ್ ಮಾಡಲು ಸಹ ಅವಕಾಶವಿದೆ.
ತಲಕಾವೇರಿ: ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವ ತಲಕಾವೇರಿಯು ದಕ್ಷಿಣ ಭಾರತದ ಜೀವನದಿ 'ಕಾವೇರಿ'ಯ ಉಗಮ ಸ್ಥಾನವಾಗಿದೆ. ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿರುವ ಈ ಪವಿತ್ರ ಸ್ಥಳದಲ್ಲಿ ಕಾವೇರಿ ನದಿ ಉದ್ಭವಿಸುತ್ತದೆ. ಇನ್ನು, ತಲಕಾವೇರಿಗೆ ಹೋಗುವ ಹಾದಿಯಲ್ಲಿ ಸಿಗುವ ಭಾಗಮಂಡಲದಲ್ಲಿ ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ನದಿಗಳು ಸೇರಿ 'ತ್ರಿವೇಣಿ ಸಂಗಮ'ವಾಗುತ್ತದೆ. ಇಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿ ಶ್ರೀ ಭಗಂಡೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಾರೆ.
ರಾಜಾ ಸೀಟ್: ಮಡಿಕೇರಿ ನಗರದ ಹೃದಯಭಾಗದಲ್ಲಿರುವ ರಾಜಾ ಸೀಟ್ ಒಂದು ಐತಿಹಾಸಿಕ ಮತ್ತು ಸುಂದರ ಉದ್ಯಾನವನವಾಗಿದೆ. ಕೊಡಗನ್ನು ಆಳಿದ ರಾಜರು ತಮ್ಮ ರಾಣಿಯರೊಂದಿಗೆ ಸಂಜೆ ವೇಳೆಯಲ್ಲಿ ವಿಶ್ರಾಂತಿ ಪಡೆಯಲು ಮತ್ತು ಸೂರ್ಯಾಸ್ತದ ಸುಂದರ ನೋಟವನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಬರುತ್ತಿದ್ದರು ಎಂಬ ಇತಿಹಾಸವಿದೆ. ಇಲ್ಲಿಂದ ವಿಶಾಲವಾದ ಕಣಿವೆಗಳು, ಅಂಕುಡೊಂಕಾದ ರಸ್ತೆಗಳು ಮತ್ತು ಮಂಜಿನಿಂದ ಆವೃತವಾದ ಬೆಟ್ಟಗಳ ನೋಟ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಅದರರಲ್ಲೂ, ಇಲ್ಲಿನ ಮ್ಯೂಸಿಕಲ್ ಫೌಂಟೇನ್ (ಸಂಗೀತ ಕಾರಂಜಿ) ಸಂಜೆಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ.
ಬೈಲಕುಪ್ಪೆ ಗೋಲ್ಡನ್ ಟೆಂಪಲ್: ಕೊಡಗು ಜಿಲ್ಲೆಯ ಗಡಿಗೆ ಹೊಂದಿಕೊಂಡಂತೆ, ಮೈಸೂರಿನ ಪಿರಿಯಾಪಟ್ಟಣಬಿಳಿಯ ಬೈಲಕುಪ್ಪೆಯಲ್ಲಿರುವ ನಾಮ್ಡ್ರೋಲಿಂಗ್ ಮೊನಾಸ್ಟರಿ (Golden Temple) ದಕ್ಷಿಣ ಭಾರತದ ಅತಿ ದೊಡ್ಡ ಟಿಬೆಟಿಯನ್ ವಸಾಹತು ಪ್ರದೇಶವಾಗಿದೆ. ದೇವಸ್ಥಾನದ ಒಳಗೆ ಸ್ಥಾಪಿಸಲಾಗಿರುವ ಸುಮಾರು 40 ಅಡಿ ಎತ್ತರದ ಭವ್ಯವಾದ ಮೂರು ಚಿನ್ನದ ಬುದ್ಧನ ವಿಗ್ರಹಗಳು ಮತ್ತು ಗೋಡೆಗಳ ಮೇಲಿನ ಸಾಂಪ್ರದಾಯಿಕ ಚಿತ್ರಕಲೆಗಳು ಟಿಬೆಟಿಯನ್ ವಾಸ್ತುಶಿಲ್ಪವನ್ನ ಸಾರುತ್ತವೆ.
ಏತನ್ಮಧ್ಯೆ, ಕೊಡಗು ಕೇವಲ ಈ ಐದು ಸ್ಥಳಗಳಿಗಷ್ಟೇ ಸೀಮಿತವಾಗಿಲ್ಲ. ಸಾಹಸ ಪ್ರೀಯರಿಗೆ ಮಾಂದಲಪಟ್ಟಿ ಜೀಪ್ ಸಫಾರಿ, ತಡಿಯಂಡಮೋಳ್ ಚಾರಣ ಹಾಗೂ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಇರ್ಪು ಜಲಪಾತ, ನಿಸರ್ಗಧಾಮದಂತಹ ಹಲವು ಅದ್ಭುತ ತಾಣಗಳು ಇಲ್ಲಿವೆ.
ಒಟ್ಟಾರೆಯಾಗಿ, ಬಿಡುವಿಲ್ಲದ ಜೀವನದ ಒತ್ತಡದಿಂದ ದೂರವಾಗಿ ಪ್ರಕೃತಿಯ ಮಡಲಲ್ಲಿ ಕಳೆಯಲು ಕೊಡಗು ಅತ್ಯಂತ ಸೂಕ್ತವಾದ ಸ್ಥಳವಾಗಿದೆ.