ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಎದುರಾಳಿ ಜೋ ಬಿಡೆನ್ ವಿರುದ್ಧ ಗೆಲ್ಲುವ ವಿಶ್ವಾಸವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ. ಪ್ರಮುಖ ರಾಜ್ಯಗಳಲ್ಲಿ ತಾವು ನಡೆಸಿದ ರ‍್ಯಾಲಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಇದು ಮತಗಳಾಗಿ ವರ್ಗಾವಣೆಯಾಗಲಿದೆ ಎಂಬ ಭರವಸೆ ಹೊಂದಿರುವುದಾಗಿ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ 14 ರ‍್ಯಾಲಿಗಳನ್ನು ಉದ್ದೇಶಿಸಿ ಟ್ರಂಪ್ ಭಾಷಣ ಮಾಡಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಪ್ಲೋರಿಡಾ, ಉತ್ತರ ಕಾರೊಲಿನಾ, ಪೆನ್ಸಿಲ್ವೇನಿಯಾ, ಮಿಚಿಗಾನ್, ವಿಸ್ಕಾನ್ಸಿನ್ ಮತ್ತು ಅರಿಜೋನ ಪ್ರಮುಖ ರಾಜ್ಯಗಳಾಗಿವೆ.
ತಮ್ಮ ಪರ ಜನರ ಒಲವು ಚೆ್ನ್ನಾಗಿದೆ ಅನ್ನಿಸುತ್ತಿದೆ. ಹಿಂದೆ ಈ ರೀತಿಯ ಜನಸ್ತೋಮವನ್ನು ನೋಡಿರಲಿಲ್ಲ. ಜನಸ್ತೋಮ ಅದ್ಬುತವಾಗಿದೆ. ಈ ಜನಸ್ತೋಮ ಶೀಘ್ರದಲ್ಲಿಯೇ ಮತಗಳಾಗಿ ವರ್ಗಾವಣೆಯಾಗಲಿದೆ ಎಂದು ಚಿಂತಿಸಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿರುವುದಾಗಿ ಪಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಟೆಕ್ಸಾಸ್, ಪ್ಲೋರಿಡಾ, ಅರಿಜೋನಾ, ಉತ್ತರ ಕಾರೊಲಿನಾ ಮತ್ತು ಪೆನ್ಸಿಲ್ವೇನಿಯಾದಲ್ಲಿ ದೊಡ್ಡ ಗೆಲುವು ಸಿಗಲಿದೆ ಎಂದು ಯೋಚಿಸಿದ್ದು, ಎಲ್ಲಾ ಕಡೆಯಲ್ಲೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದಾಗಿ ಹೇಳಿದರು.
ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಸುಮಾರು 100 ಮಿಲಿಯನ್ ಜನರು ಈಗಾಗಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ವರ್ಷ ಸುಮಾರು 239 ಮಿಲಿಯನ್ ಜನರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ.