ವಿದೇಶ

ಪರಮಾಣು ತಂತ್ರಜ್ಞಾನವನ್ನು ಅಕ್ರಮವಾಗಿ ಇರಾನ್, ಲಿಬಿಯಾ, ಉತ್ತರ ಕೊರಿಯಾಗೆ ಮಾರಾಟ ಮಾಡಿದ್ದ ಪಾಕ್ ಅಣು ವಿಜ್ಞಾನಿ ಎ.ಕ್ಯು ಖಾನ್ ನಿಧನ

Harshavardhan M

ಇಸ್ಲಾಮಾಬಾದ್: ಪಾಕಿಸ್ತಾನದ ನ್ಯೂಕ್ಲಿಯರ್ ಬಾಂಬ್ ಪಿತಾಮಹ ಎಂದೇ ಹೆಸರಾಗಿದ್ದ ಅಣುವಿಜ್ಞಾನಿ ಅಬ್ದುಲ್ ಖಾದಿರ್ ಖಾನ್ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಇಸ್ಲಾಮಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಖಾದಿರ್ ಖಾನ್ ನಿಧನಕ್ಕೆ ಪ್ರಧಾನಿ ಇಮ್ರಾನ್ ಖಾನ್ ಸಂತಾಪ ಸೂಚಿಸಿದ್ದಾರೆ. ಪಾಕಿಸ್ತಾನದಲ್ಲಿ ಎ.ಕ್ಯು ಖಾನ್ ಅವರನ್ನು ರಾಷ್ಟ್ರೀಯ ನಾಯಕನಂತೆ ಕಾಣುತ್ತಿದ್ದರು. ಪಾಕ್ ದೇಶವನ್ನು ಜಗತ್ತಿನ ಮೊತ್ತ ಮೊದಲ ನ್ಯೂಕ್ಲಿಯರ್ ಬಾಂಬ್ ಹೊಂದಿದ ಇಸ್ಲಾಮಿಕ್ ರಾಷ್ಟ್ರವಾಗಿಸಿದ ಶ್ರೇಯ ಖಾನ್ ಅವರದು.

ಸ್ವದೇಶದಲ್ಲಿ ಅವರನ್ನು ಹೀರೋ ನಂತೆ ಕಂಡರೂ ಅಂತಾರಾಷ್ಟ್ರೀಯ ಮಟ್ತದಲ್ಲಿ ಅವರ ಇಮೇಜ್ ಚೆನ್ನಾಗಿರಲಿಲ್ಲ. ಅವರನ್ನು ಅಪಾಯಕಾರಿ ವ್ಯಕ್ತಿ ಎಂದು ಪರಿಗಣಿಸಲಾಗಿತ್ತು. ಇರಾನ್, ಲಿಬಿಯಾ, ಉ.ಕೊರಿಯಾಗೆ ಪರಮಾಣು ತಂತ್ರಜ್ಞಾನವನ್ನು ಮಾರಾಟ ಮಾಡಿದ ಕಳಂಕ ಅವರ ಬೆನ್ನಿಗಂಟಿತ್ತು. 

ಎ.ಕ್ಯು ಖಾನ್ ಅವರು ಜನಿಸಿದ್ದು 1936, ಮಧ್ಯಪ್ರದೇಶದ ಭೂಪಾಲ್ ನಲ್ಲಿ. 1947ರಲ್ಲಿ ಭಾರತ ಪಾಕ್ ವಿಭಜನೆ ಸಂದರ್ಭದಲ್ಲಿ ಖಾನ್ ಪಾಲಕರು ಪಾಕಿಸ್ತಾನಕ್ಕೆ ವಲಸೆ ಬಂದಿದ್ದರು.

SCROLL FOR NEXT