ಶಹಬಾಜ್ ಷರೀಫ್-ಟ್ರಂಪ್-ಅಸಿಮ್ ಮುನೀರ್ 
ವಿದೇಶ

ಇರಾನ್‌ ಪ್ರವಾಸಕ್ಕೂ ಮುನ್ನ ಪಾಕ್‌ ಸೇನಾ ಮುಖ್ಯಸ್ಥರಿಗೆ ಟ್ರಂಪ್‌ ಕರೆ: ಚರ್ಚೆಯಾಗಿದ್ದೇನು..?

ಇರಾನ್ ದೇಶವನ್ನು ಮರಳಿ ಅಮೆರಿಕ ಜೊತೆಗಿನ ಮಾತುಕತೆಯ ಮೇಜಿಗೆ ತರಲು ಪಾಕಿಸ್ತಾನ ತನ್ನ ಪ್ರಭಾವವನ್ನು ಬಳಸಬೇಕು ಎಂದು ಡೊನಾಲ್ಡ್ ಟ್ರಂಪ್ ಈ ಕರೆಯಲ್ಲಿ ವಿನಂತಿಸಿದ್ದಾರೆ ಎನ್ನಲಾಗಿದೆ.

ವಾಷಿಂಗ್ಟನ್‌: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ ಜಾಗತಿಕ ರಾಜಕಾರಣದಲ್ಲಿ ಭಾರಿ ಬೆಳವಣಿಗೆಯೊಂದು ನಡೆದಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವುದು ಈಗ ಜಗತ್ತಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪಾಕ್ ಸೇನಾ ಮುಖ್ಯಸ್ಥರ ಇರಾನ್ ಪ್ರವಾಸಕ್ಕೂ ಕೆಲವೇ ದಿನಗಳ ಮುನ್ನ ಈ ರಹಸ್ಯ ದೂರವಾಣಿ ಕರೆ ನಡೆದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇರಾನ್ ದೇಶವನ್ನು ಮರಳಿ ಅಮೆರಿಕ ಜೊತೆಗಿನ ಮಾತುಕತೆಯ ಮೇಜಿಗೆ ತರಲು ಪಾಕಿಸ್ತಾನ ತನ್ನ ಪ್ರಭಾವವನ್ನು ಬಳಸಬೇಕು ಎಂದು ಡೊನಾಲ್ಡ್ ಟ್ರಂಪ್ ಈ ಕರೆಯಲ್ಲಿ ವಿನಂತಿಸಿದ್ದಾರೆ ಎನ್ನಲಾಗಿದೆ.

ಸೋಮವಾರ ಮುನೀರ್‌ ಅವರು ಇರಾನ್‌ಗೆ ಭೇಟಿ ನೀಡಿದ್ದು, ಅಲ್ಲಿ ಇರಾನ್‌ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೇಜರ್‌ ಜನರಲ್‌ ಮೊಹ್ಸೆನ್‌ ರೆಜಾಯಿಯನ್ನು ಭೇಟಿಯಾಗಿದ್ದಾರೆ ಎಂದು ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ ಐಆರ್‌ಐಬಿ ವರದಿ ಮಾಡಿದೆ.

ಅಮೆರಿಕ ತನ್ನ ನಡವಳಿಕೆಯನ್ನು ಬದಲಿಸಬೇಕು ಎಂದು ರೆಜಾಯಿ ಹೇಳಿದ್ದು, ಹಾರ್ಮುಜ್‌ ಜಲಸಂಧಿಯ ಭದ್ರತೆಯನ್ನು ಇರಾನ್‌ ನಿರ್ವಹಿಸುತ್ತಿರುವ ಕುರಿತು ಅವರು ಒತ್ತಿ ಹೇಳಿದ್ದು, ತಿಳುವಳಿಕೆ ಒಪ್ಪಂದದ ಷರತ್ತುಗಳನ್ನು ಜಾರಿಗೆ ತರಲು ಅಮೆರಿಕ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆ ಹಾಗೂ ತಾಂತ್ರಿಕ ಮಾತುಕತೆಗಳಿಗೆ ದಾರಿ ಮಾಡಿಕೊಡುವ ಉದ್ದೇಶದಿಂದ ಪಾಕಿಸ್ತಾನದ ಪ್ರಯತ್ನದಲ್ಲಿ ರೂಪುಗೊಂಡ 14 ಅಂಶಗಳ ತಿಳುವಳಿಕೆ ಒಪ್ಪಂದವನ್ನು ರೆಜಾಯಿ ಉಲ್ಲೇಖಿಸಿದ್ದಾರೆ ಎಂದು ಐಆರ್‌ಐಬಿ ತಿಳಿಸಿದೆ.

ಮುನೀರ್‌ ಅವರ ಭೇಟಿಯ ಸಂದರ್ಭದಲ್ಲಿ ಇರಾನ್‌ ಸಂಸತ್‌ ಸ್ಪೀಕರ್‌ ಮೊಹಮ್ಮದ್‌ ಬಾಘರ್‌ ಗಾಲಿಬಾಫ್‌ ಕೂಡ ಅವರನ್ನು ಭೇಟಿಯಾಗಿದ್ದಾರೆ.

ಜೂನ್‌ನಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಅಂತ್ಯಗೊಳಿಸಲು ಹಾಗೂ ಹಾರ್ಮುಜ್‌ ಜಲಸಂಧಿ ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮ ಸೇರಿದಂತೆ ಹಲವು ವಿಷಯಗಳ ಕುರಿತು ತಾಂತ್ರಿಕ ಮಾತುಕತೆಗಳಿಗೆ ವೇದಿಕೆ ಕಲ್ಪಿಸಲು ಸಹಿ ಮಾಡಲಾಗಿದ್ದ 14 ಅಂಶಗಳ ತಿಳುವಳಿಕೆ ಒಪ್ಪಂದದ ಬದ್ಧತೆಗಳನ್ನು ಅಮೆರಿಕ ಪದೇಪದೇ ಉಲ್ಲಂಘಿಸಿದೆ ಎಂದು ಗಾಲಿಬಾಫ್‌ ಆರೋಪಿಸಿದ್ದಾರೆ.

ಮುನೀರ್‌ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಒಪ್ಪಂದ ಜಾರಿಯಲ್ಲಿ ಅಮೆರಿಕ ಮಾಡಿರುವ “ಹಲವು ಉಲ್ಲಂಘನೆಗಳನ್ನು” ಪರಿಶೀಲಿಸಿರುವುದಾಗಿ ಗಾಲಿಬಾಫ್‌ ಟೆಲಿಗ್ರಾಂನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಿಳುವಳಿಕೆ ಒಪ್ಪಂದದಲ್ಲಿನ ಎಲ್ಲ ಪಕ್ಷಗಳ ಬದ್ಧತೆಗಳು ಸ್ಪಷ್ಟವಾಗಿವೆ. ಆದರೆ ಅಮೆರಿಕ ತನ್ನ ಬದ್ಧತೆಗಳನ್ನು ಉಲ್ಲಂಘಿಸುವ ಮೂಲಕ ಈ ಪ್ರದೇಶದಲ್ಲಿ ಸ್ಥಿರತೆ ಸ್ಥಾಪನೆಯಾಗುವುದನ್ನು ತಡೆದಿದೆ ಮತ್ತು ಆ ದೇಶದ ಮೇಲಿನ ಅಪನಂಬಿಕೆಗೆ ಮತ್ತೊಂದು ಕಾರಣ ಸೃಷ್ಟಿಸಿದೆ” ಎಂದು ಗಾಲಿಬಾಫ್‌ ಹೇಳಿದ್ದಾರೆ.

ಒಪ್ಪಂದದ ಷರತ್ತುಗಳನ್ನು ಜಾರಿಗೆ ತರಲು ಇರಾನ್‌ ಮುಂದುವರಿಯುತ್ತಿದ್ದು, ಬಾಹ್ಯ ಒತ್ತಡದಿಂದ ಇರಾನ್‌ ಮೇಲೆ ಯಾವುದೇ ಪರಿಣಾಮವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ನಾವು ತಿಳುವಳಿಕೆ ಒಪ್ಪಂದದ ಷರತ್ತುಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇವೆ. ಒಪ್ಪಂದದ ಪ್ರಕಾರ ತನ್ನ ಬದ್ಧತೆಗಳನ್ನು ಪಾಲಿಸಬೇಕಿರುವುದು ಅಮೆರಿಕ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಮುನೀರ್‌ ಕೂಡ ಪ್ರದೇಶದಲ್ಲಿ ಸ್ಥಿರತೆ ಮರುಸ್ಥಾಪಿಸಲು ತಮ್ಮ ಪ್ರಯತ್ನಗಳನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಏತನ್ಮಧ್ಯೆ, ಪ್ರಾದೇಶಿಕ ಉದ್ವಿಗ್ನತೆ ತೀವ್ರಗೊಂಡಿರುವ ಹಾಗೂ ಇರಾನ್‌-ಅಮೆರಿಕ ನಡುವಿನ ಸಂಘರ್ಷ ಮುಂದುವರಿದಿರುವ ಸಂದರ್ಭದಲ್ಲಿ ಮುನೀರ್‌ ಸೋಮವಾರ ತೆಹ್ರಾನ್‌ಗೆ ಆಗಮಿಸಿದ್ದು, ಇರಾನ್‌ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ