ವಾಣಿಜ್ಯ

ಕರ ಯಾವ ಥರ?

ಕರ ಯಾವ ಥರ?
Published On :

ಈಗಿನ ಪರಿಸ್ಥಿತಿ ಪ್ರಕಾರ 10 ಕೋಟಿ ಜನರು ಪಾವತಿಸುವ ತೆರಿಗೆ ಹಣದಿಂದ 120 ಕೋಟಿ ಜನರ ಯೋಗಕ್ಷೇವುಗಳನ್ನು ಕೇಂದ್ರ ಸರ್ಕಾರ ನೋಡಬೇಕಿದೆ. ಇದರ ಬದಲು ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಿ ಎಲ್ಲರೂ ಅದನ್ನು ಪಾವತಿ ಮಾಡುವಂತೆ ಮಾಡಬೇಕೇ ಹೊರತು 'ತೆರಿಗೆ ದರ' ಹೆಚ್ಚಿಸಬಾರದು.

ಕೇಂದ್ರ ಸರ್ಕಾರದ ಮುಂಗಡ ಪತ್ರವನ್ನು ಜು.10ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿದ್ದಾರೆ. ಈ ಬಾರಿ ಅದು ಹಲವು ನಿರೀಕ್ಷೆಗಳನ್ನು ಹೊಂದಿದೆ. ಅದಕ್ಕಾಗಿ ದೇಶದ ಜನಸಾಮಾನ್ಯರು ಮತ್ತು ಉದ್ದಿಮೆ ವಲಯದವರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬಾರಿ ಬಜೆಟ್ ನಿರೀಕ್ಷೆಗಳು ಏನು ಇರಲಿದೆ ಎಂಬ ವಿಚಾರ ಇಲ್ಲಿ ಚರ್ಚಿಸಲಾಗಿದೆ.
ಆದಾಯ ತೆರಿಗೆ ನಿರೀಕ್ಷೆ
=     ಮೂಲ ವಿನಾಯಿತಿ ಮಿತಿಯನ್ನು 2 ಲಕ್ಷದಿಂದ 4 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಬೇಡಿಕೆ ಇದೆ. ಇಂಥ ನಿರ್ಧಾರ ಕೈಗೊಂಡಲ್ಲಿ ಕನಿಷ್ಠ ಎಂದರೂ 10 ಸಾವಿರ ತೆರಿಗೆಯನ್ನು ಉಳಿತಾಯ ಮಾಡಿದಂತಾಗಲಿದೆ.
=     ಮಹಿಳೆಯರ ಹಾಗೂ ಹಿರಿಯ ನಾಗರಿಕರಿಗೆ ಮೂಲ ವಿನಾಯಿತಿ ಮಿತಿಯನ್ನು 4 ಲಕ್ಷಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ. ಮುಂಗಡ ಪತ್ರದಲ್ಲಿ ಆ ಬೇಡಿಕೆ ಈಡೇರಿದರೆ ಕನಿಷ್ಠ ಎಂದರೂ 20 ಸಾವಿರ ತೆರಿಗೆ ಉಳಿತಾಯವಾಗಲಿದೆ.
=     ಆದಾಯ ತೆರಿಗೆ ಕಾಯ್ದೆ 80 ಸಿ ಅಡಿಯಲ್ಲಿ ಈಗ ಇರುವ ಉಳಿತಾಯ ಆಧಾರಿತ ಡಿಡಕ್ಷನ್‌ಗಳ ಮಿತಿಯನ್ನು ಹಾಲಿ 1 ಲಕ್ಷದಿಂದ 1.50 ಲಕ್ಷಕ್ಕೆ ಏರಿಸಬೇಕೆಂದು ಕೋರಿಕೆ ಇದೆ. ಇದರಿಂದ ಉಳಿತಾಯ ಯೋಜನೆಗಳಾದ ಪ್ರಾವಿಡೆಂಟ್ ಫಂಡ್, ವಿಮೆ, ಪಿಪಿಎಫ್‌ಗೆ ಹೆಚ್ಚಿನ ಹಣ ಬರುವಂತಾಗುತ್ತದೆ.
=     ಯಾವುದೇ ನಿಗದಿತ ವೈದ್ಯಕೀಯ ಚಿಕಿತ್ಸೆಯ ಬಳಿಕ ಅದನ್ನು ಮತ್ತೆ ವಾಪಸಾತಿ ಮಿತಿ ಹಾಲಿ 15 ಸಾವಿರ ಇದೆ. ಅದರ ಮಿತಿಯನ್ನು ಹೆಚ್ಚಿಸಬೇಕಾಗಿದೆ. ಯಾಕೆಂದರೆ ಈಗಿನ ವೈದ್ಯಕೀಯ ವೆಚ್ಚಗಳು ಗಗನಕ್ಕೇರಿವೆ. ಇದರಿಂದ ಸಾಮಾನ್ಯರಿಗೆ ಹೊರೆಯಾಗಬಾರದು. ಆದಾಯ ತೆರಿಗೆ ಕಾಯ್ದೆ 80 ಡಿ ವಿಧಿಯನ್ವಯ ಮೆಡಿಕ್ಲೇಮ್ ವಿಮೆಯ ಕಂತಿನ ಮಿತಿಯನ್ನು ಈಗಿನ 15 ಸಾವಿರದಿಂದ 20 ಸಾವಿರಕ್ಕೆ ಹೆಚ್ಚಿಸಬೇಕು.
=     ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ತನ್ನ ಕನಸಿನ ಮನೆ ನಿರ್ಮಿಸಿಕೊಳ್ಳುವ ಬಗ್ಗೆ ಆಲೋಚಿಸಿ ಸಾಲ ಪಡೆದುಕೊಳ್ಳುತ್ತಾನೆ. ಪ್ರಸ್ತುತ ಇರುವ ಬಡ್ಡಿ ಕಡಿತ ಮಿತಿ 1,50,000 ಇದೆ. ಅದನ್ನು ಕನಿಷ್ಠ ಎಂದರೂ 3 ಲಕ್ಷಕ್ಕೆ ಪರಿಷ್ಕರಿಸಬೇಕೆಂಬ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಮನೆ ನಿರ್ಮಾಣ ವೆಚ್ಚ ಮತ್ತು ಹೆಚ್ಚಿರುವ ಬಡ್ಡಿ ದರದಿಂದ ಕಂಗಾಲಾಗಿರುವ ಜನ ಸಾಮಾನ್ಯರಿಗೆ ನೆಮ್ಮದಿ ತರಲಿದೆ.
=     ಉಡುಗೊರೆ ತೆರಿಗೆ (Gift Tax)  ಸಂಬಂಧಿಸಿದ ಕೆಲವು ನಿಬಂಧನೆಗಳನ್ನು ಸಡಿಲಗೊಳಿಸಬೇಕು ಎಂಬ ಬೇಡಿಕೆ ಇದೆ. ಇದರ ಜತೆ ಅದಕ್ಕೆ ಸಂಬಂಧಿಸಿದ ಕೆಲವು ನಿಯಮಗಳಿಗೆ ತಿದ್ದುಪಡಿ ತರಬೇಕಾಗಿದೆ. ಹಾಲಿ ಇರುವ ವಿಧಿ 56ರಲ್ಲಿ ಉಡುಗೊರೆ ನೀಡುವ ವಿಚಾರಗಳು ಸೇರಿವೆ.

ಕಾರ್ಪೊರೇಟ್ ವಲಯ
=     ಸೆಕ್ಷನ್ 10 ಎ ಮತ್ತು 10ಬಿ ಗಳನ್ನು ಮತ್ತೆ ಜಾರಿಗೆ ತರಬೇಕು. ಅದರ ಅನುಕೂಲವೇನೆಂದರೆ ಹೆಚ್ಚಿನ ರಫ್ತನ್ನು ಉತ್ತೇಜಿಸಲಾಗುತ್ತದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ರುಪಾಯಿ ಮೌಲ್ಯ ಹೆಚ್ಚುತ್ತದೆ.
=     ಕನಿಷ್ಠ ಬದಲಿ ತೆರಿಗೆ (ಮಿನಿಮಮ್ ಆಲ್ಟರ್‌ನೇಟಿವ್ ಟ್ಯಾಕ್ಸ್) ದರವನ್ನು  ಹಾಲಿ ಶೇ.18.5ರಿಂದ ಶೇ.10ಕ್ಕೆ ಇಳಿಸಬೇಕಾಗಿದೆ. ಹೀಗೆ ಮಾಡುವುದರಿಂದ ಕಾರ್ಪೊರೇಟ್ ವಲಯದ ತೆರಿಗೆ ಲಾಭ (ಟ್ಯಾಕ್ಸ್ ಬೆನಿಫಿಟ್)ಗಳಿಗೆ ತೊಂದರೆ ಯಾಗುವುದಿಲ್ಲ.
=     ಹಿಂದಿನ ಸರ್ಕಾರ ಕೆಲವೊಂದು ತಿದ್ದುಪಡಿಗಳನ್ನು ಮಾಡಿ ವಿದೇಶಿ ಕಂಪನಿಗಳು ದೇಶದಲ್ಲಿ ಬಂಡವಾಳ ಹೂಡಲು ಯೋಚಿಸುವಂತೆ ಮಾಡಿತ್ತು. ಉದಾಹರಣೆಗೆ ವೊಡಾಫೋನ್ ತೆರಿಗೆ ಪ್ರಕರಣದಲ್ಲಿ ಕಾಯ್ದೆ ತಿದ್ದುಪಡಿ ಮಾಡಿ ಅದರಲ್ಲೂ ವಿಶೇಷವಾಗಿ ಏಪ್ರಿಲ್ 1, 1961ರಿಂದ ಮಾಡಿದ ತಿದ್ದುಪಡಿ ವಿದೇಶಿ ಕಂಪನಿಗಳು ದೇಶದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದಾಗುತ್ತಿಲ್ಲ.
=     ಕಳೆದ ವರ್ಷ ಜಾರಿಗೆ ಬಂದಿರುವ ಕಂಪನಿಗಳ ಕಾಯ್ದೆಯಲ್ಲಿ ಕೆಲವೊಂದು ಕಂಪನಿಗಳಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಜಾರಿಗೆ ತಂದಿದೆ. ಅದರ ಪ್ರಕಾರ ಈ ಕಂಪನಿಗಳು ಸಮಾಜದ ಒಳಿತಿಗಾಗಿ ತಮ್ಮ ಆದಾಯದ ಇಂತಿಷ್ಟು ಶೇಕಡವಾರು ಪ್ರಮಾಣವನ್ನು ಮೀಸಲಿರಿಸಬೇಕಾಗಿದೆ. ಅದನ್ನು ವೆಚ್ಚ ಎಂದು ತೋರಿಸಬೇಕಾಗಿದೆ.
=     ಪ್ರಸ್ತಾವಿತ ನೇರ ತೆರಿಗೆ ಸಂಹಿತೆ (ಡಿಟಿಸಿ) ಅನುಷ್ಠಾನದ ಬಗ್ಗೆ ನಿಖರ ದಿನಾಂಕ ಪ್ರಕಟ.

ಸೇವಾ ತೆರಿಗೆ ನಿರೀಕ್ಷೆ
=     ಸೇವಾ ತೆರಿಗೆಯ ಮೂಲ ವಿನಾಯಿತಿ ಮಿತಿಯನ್ನು 10 ಲಕ್ಷದಿಂದ 12 ಲಕ್ಷಕ್ಕೆ ಹೆಚ್ಚಿಸಬೇಕಾಗಿದೆ. ಇದರಿಂದ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.
=     ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವ ಹೊಟೇಲ್‌ಗಳ ಮೇಲಿನ ಸೇವಾ ತೆರಿಗೆಯನ್ನು ರದ್ದುಗೊಳಿಸಬೇಕಾಗಿದೆ. ಈಗಿನ ಕಾಲದಲ್ಲಿ ಪ್ರತಿಯೊಂದು ಹೊಟೇಲ್‌ಗಳಲ್ಲಿಯೂ ಈ ವ್ಯವಸ್ಥೆ ಸಾಮಾನ್ಯವಾದ್ದರಿಂದ ಅದರ ಮೇಲೆ ಪ್ರತ್ಯೇಕ ತೆರಿಗೆ ವಿಧಿಸಬೇಕಾದ ಅಗತ್ಯವಿಲ್ಲ. ಅದೊಂದು ಐಷಾರಾಮಿ ವ್ಯವಸ್ಥೆಯೂ ಅಲ್ಲ.
=     ಹಿಂದಿನ ಸರ್ಕಾರ ಸೇವಾ ತೆರಿಗೆ ಸಂಗ್ರಹಣೆ ಹೆಚ್ಚಿಸಲು ಯೋಜನೆಯೊಂದನ್ನು ಜಾರಿಗೊಳಿಸಿತ್ತು. ಅದನ್ನು ಕಡ್ಡಾಯ ಸ್ವಯಂ ಪ್ರೋತ್ಸಾಹಕ ಯೋಜನೆ (ವಾಲಂಟರಿ ಕಂಪಲ್ಸರಿ  ಎನ್‌ಕರೇಜ್‌ಮೆಂಟ್ ಸ್ಕೀಮ್) ಎಂದು ಹೆಸರಿಸಲಾಗಿತ್ತು. ಅದರ ಪ್ರಕಾರ ಜೂ.30ರ ಒಳಗೆ ಎಲ್ಲ ಸೇವಾ ತೆರಿಗೆ ಹಣವನ್ನು ಬಡ್ಡಿ ಪಾವತಿ ಮಾಡದೆ ನೀಡುವ ವ್ಯವಸ್ಥೆ ಇತ್ತು. ಆದರೆ ವ್ಯಾಪಾರಿಗಳು ಸರಿಯಾಗಿ ಸ್ಪಂದಿಸಲಿಲ್ಲ. ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
=     ಕೆಲಸದ ಗುತ್ತಿಗೆ ಮತ್ತು ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸಾ ಕ್ಷೇತ್ರಗಳಲ್ಲಿ ಸೇವಾ ತೆರಿಗೆ ಬಗ್ಗೆ ಕೆಲವು ಗೊಂದಲಗಳಿವೆ. ಅದನ್ನು ಹೊಸ ಸರ್ಕಾರದ ಬಜೆಟ್‌ನಲ್ಲಿ ನಿರೀಕ್ಷಿಸಬಹುದಾಗಿದೆ.
=     ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜಾರಿ ಬಗ್ಗೆ ಖಚಿತ ದಿನಾಂಕ ಘೋಷಿಸಬೇಕಾಗಿದೆ.

ಅಬಕಾರಿ ಮತ್ತು ಆಮದು ಸುಂಕ
=     ಗೃಹೋಪಯೋಗಿ ವಸ್ತುಗಳ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಬಗ್ಗೆ ನಿರೀಕ್ಷಿಸಬಹುದಾಗಿದೆ. ಅದರಿಂದ ಟಿ.ವಿ, ರೆಫ್ರಿಜರೇಟರ್, ವಾಷಿಂಗ್ ಮೆಷೀನ್ ದರ ತಗ್ಗಬಹುದು.
=     ಕಚ್ಚಾ ತೈಲದ ಮೇಲಿನ ಆಮದು ಸುಂಕವನ್ನು ಪುನಃ ಹೇರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.  ಹೀಗಾಗಿ ತೈಲೋತ್ಪನ್ನಗಳ ಬೆಲೆಯಲ್ಲಿ ಹೆಚ್ಚಳವಾಗಬಹುದು.
ಈಗಿನ ಪರಿಸ್ಥಿತಿ ಪ್ರಕಾರ 10 ಕೋಟಿ ಜನರು ಪಾವತಿಸುವ ತೆರಿಗೆ ಹಣದಿಂದ 120 ಕೋಟಿ ಜನರ ಯೋಗಕ್ಷೇವುಗಳನ್ನು ಕೇಂದ್ರ ಸರ್ಕಾರ ನೋಡಬೇಕಿದೆ. ಇದರ ಬದಲು ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಿ ಎಲ್ಲರೂ ಅದನ್ನು ಪಾವತಿ ಮಾಡುವಂತೆ ಮಾಡಬೇಕೇ ಹೊರತು 'ತೆರಿಗೆ ದರ' ಹೆಚ್ಚಿಸಬಾರದು.

-ಮೋಹನ್‌ಕುಮಾರ್ ಬಿ.ಎನ್‌ಲೆಕ್ಕ ಪರಿಶೋಧಕರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.