

ನವದೆಹಲಿ: ಸತತ 5 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಹಣದುಬ್ಬರ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ಶೇ.1.77ರಷ್ಟು ಇಳಿಕೆ ಕಂಡುಬಂದಿದೆ.
ಇಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ ತರಕಾರಿಗಳ ಸಗಟು ಮಾರುಕಟ್ಟೆಯ ಮೇಲೆ ಹಣದುಬ್ಬರ ಇಳಿಕೆ ಪರಿಣಾಮ ವ್ಯಾಪಕವಾಗಿದ್ದು, ಶೇ.2.38ರಷ್ಟು ಇಳಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಕಚ್ಛಾತೈಲ ಬೆಲೆಯಲ್ಲಿ ಕಂಡುಬಂದ ಸತತ ದರ ಇಳಿಕೆ ಮತ್ತು ಭಾರತದಲ್ಲಿ ಡೀಸೆಲ್ ದರದಲ್ಲಿನ ಇಳಿಕೆಯಿಂದಾಗಿ ಹಣದುಬ್ಬರದಲ್ಲಿ ಇಳಿಕೆ ಕಂಡುಬಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆಹಾರೋತ್ಪನ್ನಗಳ ಮೇಲಿನ ಹಣದುಬ್ಬರ ಪ್ರಮಾಣ 2.7ಕ್ಕೆ ಇಳಿಕೆಯಾಗಿದ್ದು, ಸಕ್ಕರೆ, ಅಡುಗೆ ಎಣ್ಣೆ, ಪಾನೀಯಗಳು ಮತ್ತು ಸಿಮೆಂಟ್ ದರದಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯತೆ ಇದೆ. ಮೊಟ್ಟೆ, ಮಾಂಸ ಮತ್ತು ಮೀನುಗಳ ದರ ಕೂಡ ಇಳಿಕೆಯಾಗಲಿದೆ.
ಕಚ್ಛಾತೈಲ ದರ ಇಳಿಕೆಯೇ ಪ್ರಮುಖ ಕಾರಣ
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಮೇಲಿನ ನಿಯಂತ್ರಣವನ್ನು ನೂತನ ಎನ್‌ಡಿಎ ಸರ್ಕಾರ ತೆಗೆದು ಹಾಕಿದ ಬಳಿಕ ಭಾರತದಲ್ಲಿ ತೈಲೋತ್ಪನ್ನಗಳ ದರದಲ್ಲಿ ಸತತ ಇಳಿಕೆ ಕಂಡುಬಂದಿದ್ದು, ಇದೂ ಕೂಡ ಹಣದುಬ್ಬರದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.
ಸಗಟುದರಸೂಚ್ಯಂಕ (Wholesale Price Index-WPI)ದ ಪ್ರಕಾರ ಪ್ರಸ್ತುತ ಹಣದುಬ್ಬರ ಇಳಿಕೆಯಿಂದಾಗಿ ಈರುಳ್ಳಿ ದರ ಕೊಂಚ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.