

ನವದೆಹಲಿ: ಗ್ರಾಹಕರು ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುತ್ತಿರುವುದರಿಂದ ಪರ್ಸನಲ್ ಕಂಪ್ಯೂಟರ್ (ಪಿಸಿ) ಮಾರಾಟ ಗಣನೀಯವಾಗಿ ಇಳಿಮುಖ ಕಂಡಿದೆ. ಇದೇ ಮೊದಲ ಬಾರಿಗೆ ಪಿ ಸಿ ಮಾರಾಟ 10.6 ದಶಲಕ್ಷ ಯೂನಿಟ್ ಗೆ ಇಳಿದಿದ್ದು ಶೇ. 10 ರಷ್ಟು ಕುಸಿದಿದೆ ಎಂದು ಮಾಹಿತಿ ತಂತ್ರಜ್ಞಾನ ಸಾಧನಗಳ ಉತ್ಪಾದಕರ ಒಕ್ಕೂಟ (ಎಂಎಐಟಿ) ಹೇಳಿದೆ. 2013-14ನೇ ಸಾಲಿನಲ್ಲಿ ಪಿಸಿ ಮತ್ತು ನೋಟ್‍ಬುಕ್ 11.8 ದಶಲಕ್ಷ ಯೂನಿಟ್ ಮಾರಾಟವಾಗಿದ್ದು ಎಂದು ಎಂಎಐಟಿ ಐಎಂಆರ್‍ಬಿ ವರದಿ ಹೇಳಿದೆ. ಪ್ರಿಂಟರ್, ಸರ್ವರ್ ಮತ್ತು ಕಂಪ್ಯೂಟರ್‍ಗಳ ಒಟ್ಟಾರೆ ಮಾರುಕಟ್ಟೆ 1,587 ಕೋಟಿ ಡಾಲರ್ ಗಳಷ್ಟಿದ್ದು ಕಳೆದ ವರ್ಷ ಶೇ.23.98ರಷ್ಟು ಏರಿಕೆ ದಾಖಲಿಸಿತ್ತು. ಸ್ಮಾರ್ಟ್ ಫೋನ್‍ಗಳ ಮಾರಾಟ ನಿರಂತರವಾಗಿ ಏರಿಕೆ ಕಾಣುತ್ತಿದ್ದರೆ ಪಿಸಿ ಮಾರಾಟ ಇಳಿಮುಖ ಕಾಣುತ್ತಿದೆ. ಪಿಸಿಗಳನ್ನು ಪ್ರತಿ ಮನೆಗೆ ತಲುಪಿಸುವುದೇ ಈ ಕುಸಿತ ತಡೆಯಲು ಇರುವ ಏಕೈಕ ಮಾರ್ಗ ಎಂದು ಎಂಎಐಟಿ ಅಧ್ಯಕ್ಷ ಅಮರ್‍ಬಾಬು ಹೇಳಿದ್ದಾರೆ. ಪಿಸಿಗಳನ್ನು ಬದಲಾಯಿಸಲು ಇಚ್ಚಿಸುವ ಗ್ರಾಹಕರು ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಖರೀದಿಸುತ್ತಿದ್ದಾರೆ. ಮೊದಲ ಬಾರಿಗೆ ಬಳಕೆ ಮಾಡುತ್ತಿರುವವರು ಮಾತ್ರ ಪಿಸಿಖರೀದಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.