

ನವದೆಹಲಿ: ಜಾಗತಿಕ ಮಾರುಕಟ್ಟೆಗಳಲ್ಲಿನ ದುರ್ಬಲ ವಹಿವಾಟು ಮತ್ತು ದೇಶೀಯ ಆಭರಣ ತಯಾರಕರು ಹೆಚ್ಚಿನ ಖರೀದಿಗೆ ಮುಂದಾಗದಿದ್ದರಿಂದ ಶನಿವಾರದ ಚಿನಿವಾರ
ಪೇಟೆ ವಹಿವಾಟಿನಲ್ಲಿ ಹತ್ತು ಗ್ರಾಂ ಚಿನ್ನದ ದರ ರು.250 ಕುಸಿದಿದ್ದು ರು.26 ಸಾವಿರಕ್ಕೆ ಇಳಿದಿದೆ. ಇದು ಕಳೆದ ನಾಲ್ಕು ತಿಂಗಳಲ್ಲೇ ಚಿನ್ನದ ಕನಿಷ್ಠ ದರವಾಗಿದೆ. ಬೆಳ್ಳಿ ಸಹ
ಮಾರಾಟ ಒತ್ತಡಕ್ಕೆ ಸಿಲುಕಿದ್ದು ಕೆಜಿ ದರ ರು. 250ರಷ್ಟು ಇಳಿಕೆ ಕಂಡು ರು.34,350ಕ್ಕೆ ತಲುಪಿದೆ. ಅಮೆರಿಕ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂಬ ವರದಿಗಳು ಚಿನ್ನ ಮತ್ತು ಬೆಳ್ಳಿಯ ಬೇಡಿಕೆಯನ್ನು ಕುಂದಿಸಿವೆ. ಡಾಲರ್ ದರ ಏರಿಕೆ ಕಾಣುತ್ತಿರುವುದೂ ಮತ್ತೊಂದು ಕಾರಣವಾಗಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲೂ ಸಹ ಒಂದು ಔನ್ಸ್ ಚಿನ್ನದ ದರ ಶೇ.1ರಷ್ಟು ಇಳಿಮುಖ ಕಂಡು 1,131.90 ಡಾಲರ್‍ಗೆ ಕೊನೆಗೊಂಡಿತು. ಬೆಳ್ಳಿ ಸಹ ಪ್ರತಿ ಔನ್ಸ್ ದರ ಶೇ.1ರಷ್ಟು ಇಳಿಮುಖ ಕಂಡು 14.83 ಡಾಲರ್‍ಗೆ ಕೊನೆಗೊಂಡಿತು. ದೆಹಲಿ ಮಾರುಕಟ್ಟೆಯಲ್ಲಿ ಹತ್ತು ಗ್ರಾಂ ಸವರಿನ್ ಸಹ ರು.100 ಇಳಿಕೆ ಕಂಡು ರು.34,350ಕ್ಕೆ ತಲುಪಿತು. ನೂರು ಬೆಳ್ಳಿ ನಾಣ್ಯಗಳ ಮಾರಾಟ ದರ ರು.2 ಸಾವಿರ ಕುಸಿದು ರು.50 ಸಾವಿರಕ್ಕೆ ಮತ್ತು ಖರೀದಿ ದರ ರು.51 ಸಾವಿರಕ್ಕೆ ಇಳಿಯಿತು.