ಹಿಂದಿರುಗಿದ ದ್ವಿಪಾತ್ರ

ಇದೀಗ ಬಾಲಿವುಡ್‌ನಲ್ಲೀಗ ಸಾಲುಸಾಲಾಗಿ ದ್ವಿಪಾತ್ರಾಭಿನಯಗಳ...
ಪ್ರಿಯಾಂಕ ಚೋಪ್ರ
ಪ್ರಿಯಾಂಕ ಚೋಪ್ರ
Updated on: 

ಇದೀಗ ಬಾಲಿವುಡ್‌ನಲ್ಲೀಗ ಸಾಲುಸಾಲಾಗಿ ದ್ವಿಪಾತ್ರಾಭಿನಯಗಳ ಚಿತ್ರಗಳು ಬರುತ್ತವೆ. ಸೈಫ್ ಅಲಿ ಖಾನ್‌ರ 'ಹಮ್‌ಶಕಲ್ಸ್‌', 'ಹ್ಯಾಪಿ ಎಂಡಿಂಗ್‌' ಚಿತ್ರಗಳ ನಂತರ ಆತನಿಗೆ ಈಗ ದ್ವಿಪಾತ್ರಗಳುಳ್ಳ ಕಥೆಗಳ ಆಫರ್‌ಗಳೇ ಹೆಚ್ಚು ಬರುತ್ತಿವೆ. ಇನ್ನೊಂದೆಡೆ ಶೂಟಿಂಗ್ ಹಂತದಲ್ಲಿರುವ 'ತನು ವೆಡ್ಸ್ ಮನು-2 ಚಿತ್ರದಲ್ಲಿ ಕಂಗನಾ ರನೌತ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.

ಸಿನಿ ಪ್ರೇಕ್ಷಕರಿಗೆ ನೆಚ್ಚಿನ ನಾಯಕ ತೆರೆ ಮೇಲೆ ಬಂದ್ರೆ ಹೇಳತೀರದ ಖುಷಿ. ಅದರಲ್ಲೂ ಆ್ಯಕ್ಷನ್ ಚಿತ್ರವಾಗಿದ್ದರೆ, ಆ ನಾಯಕ ದ್ವಿಪಾತ್ರದಲ್ಲಿ ಕಾಣಿಸಿಕೊಂಡರೆ ಅದು ಡಬಲ್ ಥ್ರಿಲ್ಲು ಇದೇ ಕಾರಣಕ್ಕಾಗಿ, ದ್ವಿಪಾತ್ರ ಎಂಬ ಪದದ ಅರ್ಥದ ಆಳ-ಅಗಲ ಅರಿತಿರುವ ಹಿಂದಿ ಚಿತ್ರರಂಗ ಆರಂಭದಿಂದಲೂ ಪ್ರೇಕ್ಷಕರಿಗೆ ನಾಯಕನ ದ್ವಿಪಾತ್ರ, ತ್ರಿಪಾತ್ರಗಳ ಮನರಂಜನೆಯನ್ನು ಉಣಬಡಿಸಿದ್ದುಂಟು. ಆದರೆ, ಕ್ರಮೇಣ ಕೆಲ ವರ್ಷಘಳ ಕಾಲ ಇದರಿಂದ ಕೊಂಚ ದೂರವಿದ್ದ ಬಾಲಿವುಡ್ ಈಗ ಮತ್ತೆ ಅದೇ ಮಸಾಲೆಯತ್ತ ಹೊರಳಿದೆ. ಇದೀಗ, ಸಾಲುಸಾಲಾಗಿ ಅಲ್ಲಿ ದ್ವಿಪಾತ್ರ, ತ್ರೀಪಾತ್ರಗಳುಳ್ಳ ಚಿತ್ರಗಳು ಬರುತ್ತಿರುವುದೇ ಇದಕ್ಕೆ ಸಾಕ್ಷಿ.

ಧೂಮ್-3, ಕ್ರಿಶ್-3ಯನ್ನೇ ಕಣ್ಮುಂದೆ ತಂದುಕೊಳ್ಳಿ. ಬಾಲಿವುಡ್‌ನ ಈ ಆಶಯಕ್ಕೆ ಆಸರೆಯಾಗಿರುವ ಈಗಿನ ತಂತ್ರಜ್ಞಾನವೂ ಆಗಾಧ ರೀತಿಯಲ್ಲಿ ನಿರ್ದೇಶಕರಿಗೆ, ತಂತ್ರಜ್ಞರಿಗೆ ನೆರವಾಗುತ್ತಿರುವುದು ಮತ್ತೊಂದು ಕಾರಣ.

ಹಿಂದೆ ಹೀಗಿರಲಿಲ್ಲ...

ಮೊದಲೆಲ್ಲಾ ಸ್ಪ್ಲಿಟ್ ಫಿಲ್ಮಿಂಗ್‌ನ ನೆರವಿನಿಂದ ದ್ವಿಪಾತ್ರ ಸೃಷ್ಟಿಸುತ್ತಿದ್ದರು. ಹಿಂದಿನ ಕಾಲದ ಚಿತ್ರಗಳನ್ನು ನೋಡಿದಾಗ ಇದು ತಿಳಿಯುತ್ತದೆ. ನಮ್ಮಲ್ಲಿ ದಾರಿ ತಪ್ಪಿದ ಮಗ, ಬಬ್ರುವಾಹನ ಚಿತ್ರಗಳಲ್ಲಿ ದ್ವಿಪಾತ್ರಗಳು ಒಂದೇ ದೃಶ್ಯಗಳಲ್ಲಿ ಕಾಣಿಸಿಕೊಂಡಾಗ ಆ ಎರಡೂ ಪಾತ್ರಗಳ ನಡುವೆ ಅಂತರವಿರುತ್ತಿತ್ತು.

ಅಲ್ಲದೆ, ಇಬ್ಬರ ನಡುವೆ ದೃಶ್ಯ ಸೀಳಿರುವುದು ಕಾಣುತ್ತಿತ್ತು. ಸೂಕ್ಷ್ಮವಾಗಿ ಗಮನಿಸಿದರೆ, ಇದು ಗೊತ್ತಾಗುತ್ತದೆ. ಬ್ಲ್ಯಾಕ್ ಆ್ಯಂಡ್ ವೈಟ್ ಯುಗದಿಂದ 70-80ರ ದಶಕದವರೆಗಿನ ಚಿತ್ರಗಳಲ್ಲಿ ಇದೇ ತಂತ್ರಜ್ಞಾನವನ್ನು ಬಳಸಲಾಗುತ್ತಿತ್ತು. ಆದರೆ, ಇದೀಗ ಕಂಪ್ಯೂಟರೈಸ್ಡ್ ತಂತ್ರಜ್ಞಾನದಷ್ಟು ಅವಕಾಶ ನೀಡುತ್ತಿರಲಿಲ್ಲ. ಹಾಗಾಗಿ ದ್ವಿಪಾತ್ರ, ತ್ರಿಪಾತ್ರಗಳನ್ನು ಸೃಷ್ಟಿಸುವಾಗ ತುಂಬಾ ಜಾಗರೂಕವಾಗಿ ಸೃಷ್ಟಿಸಬೇಕಿತ್ತು.

ಉದಾಹರಣೆಗೆ, 70-80ರ ದಶಕದಲ್ಲಿ ಬಂದ ಚಿತ್ರಗಳಲ್ಲಿ ನೀವೂ ಗಮನಿಸಿರಬಹುದು. ದ್ವಿಪಾತ್ರದ ನಾಯಕ ಒಂದೇ ದೃಶ್ಯದಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡಾಗ, ಇಬ್ಬರ ಮುಖವನ್ನು ತೋರಿಸುತ್ತಿರಲಿಲ್ಲ. ಇಲ್ಲಿ ನಾಯಕರ ಡ್ಯೂಪ್ ಬಳಕೆಯಾಗುತ್ತಿತ್ತು. ಆದರೀಗ ತಂತ್ರಜ್ಞಾನ ಬದಲಾಗಿದೆ. ದ್ವಿಪಾತ್ರ ಅಲ್ಲ, ತ್ರಿಪಾತ್ರಗಳನ್ನು ಮೊದಲಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ತೋರಿಸಬಹುದು.

ಥ್ಯಾಂಕ್ಸ್ ಟು ಟೆಕ್ನಾಲಜಿ

ಹಿಂದಿ ಚಿತ್ರರಂಗಕ್ಕೆ ಡಬಲ್ ರೋಲ್ ಕಿಚ್ಚು ಹೊತ್ತಿಸಿದ್ದು 1943ರಲ್ಲಿ ತೆರೆಕಂಡ ಕಿಸ್ಮತ್ ಚಿತ್ರ. ಅಲ್ಲಿಂದ ಶುರುವಾದ ನಾಯಕ ಅಥವಾ ನಾಯಕಿಯ ದ್ವಿಪಾತ್ರಗಳುಳ್ಳ ಚಿತ್ರಗಳಿಗೆ ಪ್ರೇಕ್ಷಕರೂ ಮುಗಿಬಿದ್ದು ಪ್ರೋತ್ಸಾಹಿಸಿದರು. 70-80ರ ದಶಕದಲ್ಲಂತೂ ನಾಯಕನ ದ್ವಿಪಾತ್ರದ ಚಿತ್ರಗಳು ಅಪಾರ ಜನಮನ್ನಣೆ ಗಳಿಸಿದವು. ಮೊದಲಿಗೆ ಕೇವಲ ನಾಯಕ ಮಾತ್ರ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಕಥೆಗಳನ್ನು ನೀಡಿದ ಬಾಲಿವುಡ್, ಆನಂತರ ನಾಯಕಿಯ ಪಾತ್ರವನ್ನಲ್ಲದೆ ಖಳನಾಯಕನನ್ನೂ ದ್ವಿಪಾತ್ರದಲ್ಲಿ ತೋರಿಸುವ ಮುಂತಾದ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡಿತ್ತು. ಈ ಎಲ್ಲಾ ಚಿತ್ರಗಳೂ ಬಹುತೇಕ ಸ್ಪ್ಲಿಟ್ ಫಿಲ್ಮಿಂಗ್ ತಂತ್ರಜ್ಞಾನದಿಂದ ರೆಡಿಯಾದವುಗಳೇ.

'ಸ್ಪ್ಲಿಟ್ ಫಿಲ್ಮಿಂಗ್‌'ನ ಲಾಭ ಒಂದೆರಡಲ್ಲ. ಇತ್ತೀಚಿನ ಧೂಮ್ 3 ಅಥವಾ ಕ್ರಿಶ್ 3 ನೋಡಿದರೆ ಅದು ಅರ್ಥವಾಗುತ್ತದೆ. ಅದರಲ್ಲೂ ಧೂಮ್ 3ನಲ್ಲಿ ಅಮೀರ್ ಖಾನ್ ದ್ವಿಪಾತ್ರದಲ್ಲಿ ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವಾಗ ಇದು ಕೃತಕವಂದೆನಿಸುವುದಿಲ್ಲ. ಒಂದು ಕ್ಷಣ ಇವೆರಡೂ ಪಾತ್ರಗಳು ಬೇರೆ ಬೇರೆ ಎಂದನಿಸುತ್ತದೆ.

ಅದರಲ್ಲೂ ಒಬ್ಬರನ್ನೊಬ್ಬರು ಬಿಗಿದಪ್ಪುವಾಗ, ಫೈಟ್ ಮಾಡುವಾಗ ಒಬ್ಬನೇ ದ್ವಿಪಾತ್ರ ಮಾಡಿದ್ದಾನೆ ಎಂಬ ಸತ್ಯವನ್ನು ಮರೆಸುತ್ತದೆ. ಇದೆಲ್ಲಾ ಸಾಧ್ಯವಾಗಿದ್ದು ಹೊಸ ತಂತ್ರಜ್ಞಾನಗಳಿಂದ. 'ಮೋಷನ್ ಕಂಟ್ರೋಲ್ ಟೆಕ್ನಿಕ್‌'ನಿಂದ ಚಿತ್ರೀಕರಿಸುತ್ತಿರುವುದರಿಂದ ಇದೆಲ್ಲಾ ಸಾಧ್ಯವಾಗಿದೆ.

ಸಾಲು ಸಾಲು ಚಿತ್ರಗಳು

ಇದೀಗ ಬಾಲಿವುಡ್‌ನಲ್ಲಿಗ ಸಾಲುಸಾಲಾಗಿ ದ್ವಿಪಾತ್ರಾಭಿನಯಗಳ ಚಿತ್ರಗಳು ಬರುತ್ತಿವೆ. ಸೈಫ್ ಅಲಿ ಖಾನ್‌ರ 'ಹಮ್‌ಶಕಲ್ಸ್‌', 'ಹ್ಯಾಪಿ ಎಂಡಿಂಗ್‌' ಚಿತ್ರಗಳ ನಂತರ ಆತನಿಗೆ ಈಗ ದ್ವಿಪಾತ್ರಗಳುಳ್ಳ ಕಥೆಗಳ ಆಫರ್‌ಗಳೇ ಹೆಚ್ಚು ಬರುತ್ತವೆ. ಇನ್ನೊಂದೆಡೆ ಶೂಟಿಂಗ್ ಹಂತದಲ್ಲಿರುವ 'ತನು ವೆಡ್ಸ್ ಮನು-2' ಚಿತ್ರದಲ್ಲಿ ಕಂಗನಾ ರನೌತ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.

ಜಾಕ್ವೆಲಿನ್ ಫರ್ನಾಂಡಿಸ್ ಸಹಾ 'ರಾಯ್‌' ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಹ್ಯಾಪಿ ನ್ಯೂ ಇಯರ್‌'ನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಭಿಷೇಕ್ ಬಚ್ಚನ್‌ಗೂ ಇದೇ ಮಾದರಿಯ ಪಾತ್ರಗಳು ಸಿಕ್ಕುತ್ತಿವೆಯಂತೆ.

ಒಟ್ಟಿನಲ್ಲಿ ಡಬಲ್ ರೋಲ್, ತ್ರಿಬಲ್ ರೋಸ್ ಮಸಾಲೆ ಮತ್ತಷ್ಟು ರುಚಿ ನೀಡಿ ಪ್ರೇಕ್ಷಕರನ್ನು ಮುದಗೊಳಿಸಲು ಬಾಲಿವುಡ್ ಸಜ್ಜಾಗಿದೆ. ತಂತ್ರಜ್ಞಾನಗಳು ಮತ್ತಷ್ಟು ಬೆಳೆದು, ಹೆಚ್ಚೆಚ್ಚು ಅವಕಾಶಗಳು ಸಿಕ್ಕರೆ ಬಾಲಿವುಡ್ ಮತ್ತಷ್ಟು ಪ್ರಯೋಗಗಳಿಗೆ ಒಡ್ಡಿಕೊಳ್ಳಲೂ ಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com