ಪದ್ಮಾವತಿ ಚಿತ್ರದಲ್ಲಿ ಇತಿಹಾಸ ತಿರುಚುವ ಪ್ರಯತ್ನವಾಗಿಲ್ಲ: ನಿರ್ದೇಶಕ ಬನ್ಸಾಲಿ ಸ್ಪಷ್ಟನೆ

ಐತಿಹಾಸಿಕ ಹಿನ್ನೆಲೆಯುಳ್ಳ ಬಹು ನಿರೀಕ್ಷಿತ ಪದ್ಮಾವತಿ ಚಿತ್ರದಲ್ಲಿ ಯಾವುದೇ ರೀತಿಯ ಇತಿಹಾಸ ತಿರುಚುವ ಪ್ರಯತ್ನ ಮಾಡಿಲ್ಲ ಎಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹೇಳಿದ್ದಾರೆ.
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (ಸಂಗ್ರಹ ಚಿತ್ರ)
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಐತಿಹಾಸಿಕ ಹಿನ್ನೆಲೆಯುಳ್ಳ ಬಹು ನಿರೀಕ್ಷಿತ ಪದ್ಮಾವತಿ ಚಿತ್ರದಲ್ಲಿ ಯಾವುದೇ ರೀತಿಯ ಇತಿಹಾಸ ತಿರುಚುವ ಪ್ರಯತ್ನ ಮಾಡಿಲ್ಲ ಎಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹೇಳಿದ್ದಾರೆ.

ಜೈಪುರದಲ್ಲಿ ಚಿತ್ರತಂಡ ಹಾಗೂ ತಮ್ಮ ಮೇಲೆ ನಡೆದ ಹಲ್ಲೆ ಬಳಿಕ ಇದೇ ಮೊದಲ ಬಾರಿಗೆ ಹೇಳಿಕೆ ಬಿಡುಗಡೆ ಮಾಡಿರುವ ನಿರ್ದೇಶಕ ಬನ್ಸಾಲಿ, ಯಾವುದೇ ರೀತಿಯಲ್ಲೂ ಚಿತ್ರದ ಇತಿಹಾಸವನ್ನು ನಾವು ತಿರುಚಿಲ್ಲ. ಚಿತ್ರಕ್ಕೆ  ಸಂಬಂಧಿಸಿದಂತೆ ಸುಧೀರ್ಘ ಅಧ್ಯಯನದ ಬಳಿಕವೇ ಚಿತ್ರೀಕರಣ ನಡೆಸುತ್ತಿದ್ದೇವೆ. ರಾಣಿ ಪದ್ಮಾವತಿ ಅವರ ವರ್ಚಸ್ಸು ಹಾಳು ಮಾಡುವ ಯಾವುದೇ ರೀತಿಯ ಅವಹೇಳನಕಾರಿ ಸನ್ನಿವೇಶಗಳೂ ಚಿತ್ರದಲ್ಲಿ ಇಲ್ಲ ಎಂದು  ಹೇಳಿದ್ದಾರೆ.

ದಾಳಿ ಬಳಿಕ ಇದೇ ಮೊದಲ ಬಾರಿಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಬನ್ಸಾಲಿ ಅವರು, ಚಿತ್ರವನ್ನು ನೋಡಿದ ಬಳಿಕ ಮೇವಾರ್ ವಂಶಸ್ಥರು ನಿಜ್ಕಕೂ ಹೆಮ್ಮೆ ಪಡುತ್ತಾರೆ ಎನ್ನುವ ವಿಶ್ವಾಸ ತಮಗಿದೆ. ರಾಜ ಅಲ್ಲಾವುದ್ದೀನ್  ಖಿಲ್ಜಿ ಹಾಗೂ ರಾಣಿ ಪದ್ಮಾವತಿ ನಡುವೆ ಅಂತಹ ಯಾವುದೇ ರೀತಿಯ ಅವಹೇಳನಕಾರಿ ಸನ್ನಿವೇಶಗಳೂ ಇಲ್ಲ. ಯಾವುದೇ ರೀತಿಯಲ್ಲೂ ಚಿತ್ರದಿಂದ ಸ್ಥಳೀಯರ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ. ಆ ಉದ್ದೇಶವೂ ತಮಗಿಲ್ಲ.  ಸ್ಥಳೀಯರು ತಮಗೆ ಸಹಕರಿಸಿದರೆ ತಮ್ಮ ನೆಲದ ಧೀಮಂತ ರಾಣಿ ಪದ್ಮಾವತಿಯನ್ನು ಬೃಹತ್ ತೆರೆ ಮೇಲೆ ತರುವ ಮೂಲಕ ರಾಣಿ ಬಗ್ಗೆ ಇಡೀ ಪ್ರಪಂಚವೇ ಹೆಮ್ಮೆ ಪಡುವಂತಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ದಾಳಿ ಕುರಿತಂತೆ ಮಾತನಾಡಿದ ನಿರ್ದೇಶಕ ಬನ್ಸಾಲಿ, ನಿಜಕ್ಕೂ ಆ ಘಟನೆಯನ್ನು ಮರೆಯಲು ಸಾಧ್ಯವಿಲ್ಲ. ಚಿತ್ರೀಕರಣದ ಸ್ಥಳಕ್ಕೆ ಏಕಾಏಕಿ ನುಗ್ಗಿದ ಹಲವರು ನಮ್ಮ ಸಿಬ್ಬಂದಿಗಳನ್ನು ಥಳಿಸಿ ಚಿತ್ರೀಕರಣದ ಉಪಕರಣಗಳನ್ನು  ಧ್ವಂಸ ಮಾಡಿದರು. ಈ ದಾಳಿ ವೇಳೆ ಚಿತ್ರತಂಡಕ್ಕೆ ಮಾನಸಿಕವಾಗಿ, ಧೈಹಿಕವಾಗಿ ಮತ್ತು ಆರ್ಥಿಕವಾಗಿ ಸಾಕಷ್ಟು ನಷ್ಟವಾಗಿದೆ. ಚಿತ್ರೀಕರಣಕ್ಕಾಗಿ ನಿರ್ಮಿಸಲಾಗಿದ್ದ ದುಬಾರಿ ಸೆಟ್ ಗಳು ಜಖಂಗೊಂಡಿವೆ. ಹೀಗಾಗಿ ಚಿತ್ರೀಕರಣ  ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ.

ರಾಜಸ್ತಾನದ ಜೈಪುರದಲ್ಲಿ ಪದ್ಮಾವತಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕರ್ಣಿ ಸೇನಾ ಕಾರ್ಯಕರ್ತರು ಏಕಾಏಕಿ ದಾಳಿ ಮಾಡಿ ಚಿತ್ರತಂಡದ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಹಲವು ಸಿಬ್ಬಂದಿಗಳು ಥಳಿತಕ್ಕೆ  ಒಳಗಾಗಿದ್ದರು. ನಿರ್ದೇಶಕ ಬನ್ಸಾಲಿ ಅವರ ಟೀಶರ್ಟ್ ಹರಿದು ಹಾಕಿದ್ದ ಕಾರ್ಯಕರ್ತರು ಅವರ ಕಾಪಳಕ್ಕೂ ಹೊಡೆದಿದ್ದರು. ಚಿತ್ರ ತಂಡದ ಮೇಲಿನ ದಾಳಿ ಬಾಲಿವುಡ್ ನಲ್ಲಿ ವ್ಯಾಪಕ ಖಂಡನೆಗೆ ಕಾರಣವಾಗಿತ್ತು.

ಈ ಹಿಂದೆ ಬಾಜಿರಾವ್ ಮಸ್ತಾನಿ ಚಿತ್ರ ನಿರ್ದೇಶಿಸಿದ್ದ ಬನ್ಸಾಲಿ ಅದರ ಯಶಸ್ಸಿನಲ್ಲೇ ರಾಜಸ್ತಾನದ ರಾಣಿ ಪದ್ಮಾವತಿ ಚಿತ್ರಕ್ಕೆ ಮುಂದಾಗಿದ್ದರು. ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಪದ್ಮಾವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಟ ರಣ್ ವೀರ್ ಸಿಂಗ್ ಆಲ್ಲಾವುದ್ದೀನ್ ಖಲ್ಜಿ ಪಾತ್ರದಲ್ಲಿ ಮತ್ತು ನಟ ಶಾಹಿದ್ ಕಪೂರ್ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ಇದೇ ವರ್ಷದ ನವೆಂಬರ್ 17ರಂದು ತೆರೆಕಾಣುವ ಸಾಧ್ಯತೆ ಇದೆ. ಪ್ರಸ್ತುತ ಚಿತ್ರತಂಡದ  ಮೇಲೆ ದಾಳಿಯಾಗಿರುವುದರಿಂದ ಇಡೀ ಚಿತ್ರೀಕರಣವನ್ನು ಪ್ಯಾರಿಸ್ ನಲ್ಲಿ ನಡೆಸಲು ಚಿತ್ರತಂಡ ಆಯೋಜಿಸಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com