ತಮ್ಮ ವೃತ್ತಿಜೀವನದ ಆರಂಭದಲ್ಲಿ ಗಂಭೀರ ಆರ್ಥಿಕ ಸಂಕಷ್ಟದ ಅವಧಿಯನ್ನು ಎದುರಿಸಿದ್ದಾಗಿ ನಟ-ನಿರ್ದೇಶಕ ವಿಕ್ರಮ್ ಭಟ್ ಬಹಿರಂಗಪಡಿಸಿದ್ದಾರೆ. ಬಾಲಿವುಡ್‌ನ ಕೆಲವು ದೊಡ್ಡ ತಾರೆಯರು ಮತ್ತು ಚಲನಚಿತ್ರ ನಿರ್ಮಾಪಕರೊಂದಿಗೆ ಕೆಲಸ ಮಾಡಿದ್ದರೂ, ನನ್ನ ಬಳಿ ಸಾಕಷ್ಟು ಹಣವಿರಲಿಲ್ಲ ಮತ್ತು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದ ಸಮಯವಿತ್ತು ಎಂದು ಹೇಳಿದರು.
ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ, ನಿರ್ದೇಶಕರು ಸುಶ್ಮಿತಾ ಸೇನ್ ಅವರೊಂದಿಗಿನ ಸಂಬಂಧ ಮತ್ತು ಅವರ ಜೀವನದ ಆ ಅಧ್ಯಾಯದೊಂದಿಗೆ ಬಂದ ಆರ್ಥಿಕ ಸಂಕಷ್ಟದ ನೆನಪುಗಳನ್ನು ಹಂಚಿಕೊಂಡರು. ಸುಶ್ಮಿತಾ ಅವರೊಂದಿಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಳ್ಳುತ್ತಾ, ಪ್ರಮುಖ ಯೋಜನೆಗಳನ್ನು ನಿರ್ದೇಶಿಸುತ್ತಿದ್ದರೂ ಮತ್ತು ಉನ್ನತ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದರೂ ಸಹ, ನಾನು ಆಗಾಗ್ಗೆ ಹಣದ ಕೊರತೆಯನ್ನು ಅನುಭವಿಸುತ್ತಿದ್ದೆ ಎಂದು ಹೇಳಿದರು.
1996ರಲ್ಲಿ ಸುಶ್ಮಿತಾ ಸೇನ್ ಅವರ ಚೊಚ್ಚಲ ಚಿತ್ರ 'ದಸ್ತಕ್' ನಲ್ಲಿ ಕೆಲಸ ಮಾಡುವಾಗ ವಿಕ್ರಮ್ ಮತ್ತು ಸುಶ್ಮಿತಾ ಹತ್ತಿರವಾದರು. ಈ ಚಿತ್ರದಲ್ಲಿ ವಿಕ್ರಮ್ ನಿರ್ದೇಶಕ ಮಹೇಶ್ ಭಟ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಕೆಲವು ಬಾರಿ ಸರಳ ವಸ್ತುಗಳನ್ನು ಖರೀದಿಗಳನ್ನು ಸಹ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದು ಕಾಲದಲ್ಲಿ ಮ್ಯೂಸಿಕ್ ಸಿಡಿ ಖರೀದಿಸಲು ಹಣದ ಕೊರತೆಯಿತ್ತು ಎಂಬುದನ್ನು ನೆನಪಿಸಿಕೊಂಡರು.
ವಿಕ್ರಮ್ ಭಟ್ ಅವರ ಹೇಳಿಕೆಗಳು ಈ ಹಿಂದೆ ಉದ್ಯಮಿ ಲಲಿತ್ ಮೋದಿ ಅವರು ಮಾಡಿದ್ದ ಅಭಿಪ್ರಾಯಗಳನ್ನು ಪ್ರತಿಧ್ವನಿಸುತ್ತವೆ. ಅವರು ತಮ್ಮ ಸಂಬಂಧದ ಸುತ್ತಲಿನ ಟೀಕೆಗಳ ವಿರುದ್ಧ ಸುಶ್ಮಿತಾ ಸೇನ್ ಅವರನ್ನು ಸಮರ್ಥಿಸಿಕೊಂಡಿದ್ದರು. ತಮ್ಮ ಪ್ರವಾಸಗಳ ಸಮಯದಲ್ಲಿ ಸುಶ್ಮಿತಾ ಅವರೇ ಹೆಚ್ಚಾಗಿ ಖರ್ಚುಗಳನ್ನು ಭರಿಸುತ್ತಿದ್ದರು ಎಂದು ಹೇಳಿದ್ದರು. ಇದೀಗ ಸುಶ್ಮಿತಾ ಅವರೊಂದಿಗಿನ ತಮ್ಮ ಸ್ವಂತ ಅನುಭವವೂ ಇದೇ ರೀತಿಯದ್ದಾಗಿದೆ ಎಂದು ವಿಕ್ರಮ್ ಸೂಚಿಸಿದ್ದಾರೆ.
'ನಾನು ಕಷ್ಟಪಡುತ್ತಿದ್ದ ನಿರ್ದೇಶಕನಾಗಿದ್ದೆ. ಆದರೆ, ನಾನು ಆಮಿರ್ ಖಾನ್ ಅವರ ಚಿತ್ರವನ್ನು ನಿರ್ದೇಶಿಸುತ್ತಿದ್ದೆ ಮತ್ತು ಮಿಸ್ ಯೂನಿವರ್ಸ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದೆ ಎಂದು ಹೇಳುತ್ತಿದ್ದರೂ, ನನ್ನ ಬಳಿ ಹಣವಿರಲಿಲ್ಲ. ನಾನು ದಿವಾಳಿಯಾಗಿದ್ದೆ. ಸಿಡಿ ಖರೀದಿಸಲು ಸಹ ನನ್ನ ಬಳಿ ಹಣವೂ ಇರಲಿಲ್ಲ ಎಂಬುದು ನನಗೆ ನೆನಪಿದೆ. ನಾನು ಫಕೀರನಂತೆ ಜೀವನವನ್ನು ನಡೆಸಿದ್ದೇನೆ' ಎಂದು ಅವರು ಹೇಳಿದರು.
ಸುಶ್ಮಿತಾ ಸೇನ್ ಅವರೊಂದಿಗಿನ ಸಂಬಂಧ ಕೊನೆಗೊಂಡ ನಂತರ, ವಿಕ್ರಮ್ ಭಟ್ ಅವರು ನಟಿ ಅಮೀಷಾ ಪಟೇಲ್ ಅವರೊಂದಿಗೆ ಡೇಟಿಂಗ್ ಮಾಡಿದರು. ಆಪ್ ಮುಜೆ ಅಚ್ಚೆ ಲಗ್ನೆ ಲಗೆ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ ನಂತರ 2002 ರಿಂದ 2007 ರವರೆಗೆ ಇಬ್ಬರೂ ಸಂಬಂಧದಲ್ಲಿದ್ದರು.
ಯಶಸ್ಸು ಮತ್ತು ವೈಫಲ್ಯದ ಬಗ್ಗೆ ಮಾತನಾಡುತ್ತಾ ವಿಕ್ರಮ್ ಭಟ್, ತಮ್ಮ ಸಂಬಂಧಗಳು ಹೆಚ್ಚು ಕಾಲ ಉಳಿಯದಿದ್ದರೂ, ನನ್ನ ಚಿತ್ರಗಳು ಪ್ರೇಕ್ಷಕರಿಗೆ ನೆನಪಿನಲ್ಲಿ ಉಳಿದಿವೆ ಎಂದು ಹೇಳಿದರು.
Advertisement