

ಮುಂಬೈ: ತಮಿಳು ನಟ ಧನುಷ್ ಜೊತೆ ಪ್ರೀತಿಯಲ್ಲಿದ್ದಾರೆ, ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ, ವಿವಾಹವಾಗುತ್ತಿದ್ದಾರೆಂಬ ಊಹಾಪೋಹಗಳಿಗೆ ನಟಿ ಮೃಣಾಲ್ ಠಾಕೂರ್ ಅವರು ತೆರೆ ಎಳೆದಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ನಟಿ, ನನ್ನನ್ನು ನನ್ನ ಕೆಲಸವೇ ಪರಿಚಯಿಸಬೇಕು ಎಂಬ ನಂಬಿಕೆ ನನಗಿದೆ. ಆದರೆ ನಾನು ಆಡದ ಮಾತು, ತೆಗೆದುಕೊಳ್ಳದ ನಿರ್ಧಾರ ಹಾಗೂ ಬರೆಯದ ಕಥೆಗಳೊಂದಿಗೆ ನನ್ನ ಹೆಸರನ್ನು ಜೋಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಧನುಷ್ ನನಗೆ ಸಹೋದರನಂತೆಯೇ. ನಮ್ಮ ನಡುವೆ ಇರುವುದೇ ಪರಸ್ಪರ ಗೌರವ ಮತ್ತು ವೃತ್ತಿಪರ ಸಂಬಂಧ - ಅದಕ್ಕಿಂತ ಹೆಚ್ಚಿನದೇನೂ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಮಹಿಳೆಯರ ಸಾಧನೆಗಳನ್ನು ಗುರುತಿಸುವ ಬದಲು ಅವರ ವೈಯಕ್ತಿಕ ಜೀವನದ ಬಗ್ಗೆ ಸುಳ್ಳು ಕಥೆಗಳು ಸೃಷ್ಟಿಯಾಗುತ್ತಿರುವುದು ದುಃಖಕರ ವಿಚಾರ. ನಾನು ಮೌನವಾಗಿರುವುದರ ಅರ್ಥ ಏನು ಮುಚ್ಚಿಡುತ್ತದ್ದೇನೆಂದಲ್ಲ. ನನ್ನ ವೈಯಕ್ತಿಕ ಜೀವನಕ್ಕೆ ಸಾರ್ವಜನಿಕ ಅನುಮೋದನೆ ಅಗತ್ಯವಿಲ್ಲವೆಂಬುದು ನನ್ನ ನಂಬಿಕೆ ಎಂದು ತಿಳಿಸಿದ್ದಾರೆ.
ಆಡಿಷನ್, ತಿರಸ್ಕಾರ, ಅನೇಕ ನಿದ್ರೆರಹಿತ ರಾತ್ರಿಗಳು ಹಾಗೂ ಆತ್ಮವಿಶ್ವಾಸದ ಮೂಲಕ ನಾನು ಈ ಹಂತಕ್ಕೆ ಬಂದಿದ್ದೇನೆ. ಆ ಪ್ರಯಾಣವನ್ನು ಊಹಾಪೋಹಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ. ಸಾಮಾಜಿಕ ಜಾಲತಾಣಗಳು ಎಲ್ಲರಿಗೂ ಧ್ವನಿ ನೀಡುತ್ತವೆ, ಆದರೆ, ಅದರೊಂದಿಗೆ ಜವಾಬ್ದಾರಿಯೂ ಅಗತ್ಯ. ಕೆಲವು ಲೈಕ್‌ಗಳು ಮತ್ತು ಶೇರ್‌ಗಳು ಜನರ ಬದುಕಿನ ಮೇಲೆ ಪರಿಣಾಮ ಬೀರುವ ಕಥೆಗಳನ್ನು ರೂಪಿಸುತ್ತವೆ. ಪ್ರಸ್ತುತ ಹರಡುತ್ತಿರುವ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement