

ವೆನಿಲ್ಲಾ ಎಂಟರ್ಟೈನ್ಮೆಂಟ್ ನಿರ್ಮಿಸಿರುವ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ಅವರ 'ಪ್ರೇಮದ ಊರಲಿ' ಚಿತ್ರವು ಇದೀಗ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದ್ದು, ಟಿಕೆಟ್ ಮಾರಾಟದಲ್ಲಿ ದಾಖಲೆ ಬರೆದಿದೆ. ಅಕ್ಟೋಬರ್ 12 ರಂದು, ಈ ಕೌಟುಂಬಿಕ ಕಥಾಹಂದರವುಳ್ಳ ಚಿತ್ರವು 'ಬುಕ್ಮೈಶೋ' (BookMyShow) ವೇದಿಕೆಯಲ್ಲಿ ಭಾರತದಾದ್ಯಂತ ಅತಿಹೆಚ್ಚು ಟಿಕೆಟ್ಗಳನ್ನು ಮಾರಾಟ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ.
ಕೇವಲ 24 ಗಂಟೆಗಳಲ್ಲಿ ಈ ಚಿತ್ರವು ಬರೋಬ್ಬರಿ 1.49 ಲಕ್ಷ ಟಿಕೆಟ್ಗಳನ್ನು ಮಾರಾಟ ಮಾಡುವ ಮೂಲಕ, ಅಜಯ್ ದೇವಗನ್ ಅವರ ಹಿಂದಿ ಥ್ರಿಲ್ಲರ್ 'ದೃಶ್ಯಂ 3' (1.14 ಲಕ್ಷ ಟಿಕೆಟ್ಗಳು) ಮತ್ತು ರಜನಿಕಾಂತ್ ಅವರ 'ಜೈಲರ್ 2' ನಂತಹ ಪ್ರಮುಖ ಚಿತ್ರಗಳನ್ನು ಹಿಂದಿಕ್ಕಿದೆ.
ಸುಮಾರು ₹3 ಕೋಟಿಯ ಸಾಧಾರಣ ಬಜೆಟ್ನಲ್ಲಿ ನಿರ್ಮಿಸಲಾದ ಈ ಚಿತ್ರ ಸೆಪ್ಟೆಂಬರ್ 25 ರಂದು ಕೇವಲ 60 ಪ್ರದರ್ಶನಗಳೊಂದಿಗೆ ರಾಜ್ಯದಾದ್ಯಂತ ಬಿಡುಗಡೆಯಾಯಿತು. ಚಿತ್ರತಂಡವು ರಾಜ್ಯದಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡಿತು. ಸ್ಥಳೀಯ ರೈಲುಗಳಲ್ಲಿ ಕರಪತ್ರಗಳನ್ನು ಹಂಚುವುದು ಮತ್ತು ಆಟೋರಿಕ್ಷಾಗಳ ಹಿಂದೆ ಪೋಸ್ಟರ್ಗಳನ್ನು ಅಂಟಿಸುವ ಮೂಲಕ ಜರರೆಡೆಗೆ ಚಿತ್ರವನ್ನು ಕೊಂಡೊಯ್ಯುವ ಕೆಲಸ ಮಾಡಿತು.
ಪ್ರೇಕ್ಷಕರು ಚಿತ್ರಮಂದಿರಗಳಿಗೆ ಕಾಲಿಟ್ಟ ತಕ್ಷಣ, ಬಾಯಿ ಮಾತಿನ ಮೂಲಕವೇ ಚಿತ್ರ ವ್ಯಾಪಕ ಪ್ರಚಾರ ಪಡೆಯಿತು. ಬಿಡುಗಡೆಯಾದ ಎರಡು ವಾರಗಳಲ್ಲಿ, ಚಿತ್ರಮಂದಿರಗಳಲ್ಲಿ ಪ್ರದರ್ಶನಗಳ ಸಂಖ್ಯೆ ಏರಿತು ಮತ್ತು ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರವು 1,600ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿದೆ. ಬುಕ್ಮೈಶೋನಲ್ಲಿ, ಪ್ರತಿ ಗಂಟೆಗೆ ಈ ಚಿತ್ರದ 15,000ಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗುತ್ತಿವೆ. ಚಿತ್ರ ಈಗಾಗಲೇ ₹56 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ವಾರಾಂತ್ಯ ಮಾತ್ರವಲ್ಲದೆ, ಸೋಮವಾರ ಮತ್ತು ಮಂಗಳವಾರದಂದೂ ಚಿತ್ರಮಂದಿರಗಳು ತುಂಬಿ ತುಳುಕುತ್ತಿವೆ.
ಈ ಚಿತ್ರದ ಯಶಸ್ಸು ಶಿವರಾಜ್ಕುಮಾರ್, ರಿಷಬ್ ಶೆಟ್ಟಿ ಮತ್ತು ರಮೇಶ್ ಅರವಿಂದ್ ಅವರಂತಹ ಪ್ರಮುಖ ಕನ್ನಡ ತಾರೆಗಳ ಮೆಚ್ಚುಗೆಗೆ ಪಾತ್ರವಾಗಿದೆ. ನಟ ವಸಿಷ್ಠ ಎನ್. ಸಿಂಹ ಮತ್ತು ಅವರ ಪತ್ನಿ ಹರಿಪ್ರಿಯಾ ಚಿತ್ರವನ್ನು ವೀಕ್ಷಿಸಿ, ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಂನಲ್ಲಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ನಟಿ ತಪಸ್ವಿನಿ ಪೂಣಚ್ಚ ಅವರ ಅಭಿನಯದ ಕುರಿತು ಮಾತನಾಡಲು ಅವರಿಗೆ ಕರೆ ಕೂಡ ಮಾಡಿದರು.