ಬೆಳ್ಳಿ ಮೂಡಿತೊ... ಸೀಟಿ ಬಿದ್ದಿತೊ...!

ಬೆಳ್ಳಿ ಮೂಡಿತೊ... ಸೀಟಿ ಬಿದ್ದಿತೊ...! 'ಓಂ'ನಿಂದ ಕೇವಲ ವಿಶ್ವ ಮಾತ್ರವಲ್ಲ...
ಬೆಳ್ಳಿ ಮೂಡಿತೊ... ಸೀಟಿ ಬಿದ್ದಿತೊ...!
Updated on: 

ಇಡೀ ವಿಶ್ವ ಹುಟ್ಟಿದ್ದು 'ಓಂ'ಕಾರದಿಂದ ಎಂಬುದು ಪುರಾಣದಲ್ಲಿದೆ. 'ಓಂ'ನಿಂದ ಕೇವಲ ವಿಶ್ವ ಮಾತ್ರವಲ್ಲ ಚಿತ್ರವೂ ಹುಟ್ಟುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ 'ಬೆಳ್ಳಿ' ಚಿತ್ರದ ನಿರ್ದೇಶಕ ಮುಸ್ಸಂಜೆ ಮಹೇಶ್. ಅವರಿಲ್ಲಿ 'ಓಂ'ಕಾರದ ಝೇಂಕಾರಕ್ಕೆ ತೃಪ್ತರಾಗದೆ 'ಜೋಗಿ'ಯ ಜೋಳಿಗೆಗೂ ಕೈ ಹಾಕಿದ್ದಾರೆ. ಹಾಲಿವುಡ್ಡಿನಿಂದ ಕಥೆ ಚಿತ್ರಕಥೆಗಳನ್ನಷ್ಟೇ ಕನ್ನಡಕ್ಕೆ ಎರವಲು ಪಡೆಯಲಾಗುತ್ತಿತ್ತು, ಈ ಚಿತ್ರದಲ್ಲಿ ಕಥೆಯಲ್ಲಾಗಲಿ, ಚಿತ್ರಕಥೆಯಲ್ಲಾಗಲಿ ಹಾಲಿವುಡ್ಡಿನ ಯಾವುದೇ ಅಂಶ ಕಲಬೆರಕೆಯಾಗಿಲ್ಲ, ಹಾಗಾಗಿ ಕೇವಲ ಹಿನ್ನೆಲೆ ಸಂಗೀತದಲ್ಲಿ ಹಾಲಿವುಡ್ಡಿನ ಕ್ಲಾಸಿಕ್ ಚಿತ್ರ 'ಗಾಡ್ ಫಾದರ್'ನ ಥೀಮ್ ಮ್ಯೂಸಿಕ್ ನ ತುಣುಕೊಂದನ್ನು ಯಥಾವತ್ತಾಗಿ ಎತ್ತಲಾಗಿದೆ. ಕನ್ನಡದಲ್ಲಿ ಕಾಲ ಕಾಲಕ್ಕೆ ರೌಡಿಸಂ ಚಿತ್ರಗಳು ಬರುತ್ತಿದ್ದು, ಅದರಲ್ಲಿ ಸ್ಟಾರ್ ನಾಯಕರುಗಳೇ ರೌಡಿಗಳಾಗಿ ವಿಜೃಂಭಿಸುತ್ತಿರುವುದು ವಿಪರ್ಯಾಸವೇ ಸರಿ.

ಸಿನೆಮಾ ತೆರೆದುಕೊಳ್ಳುವುದು ಲೇಖಕಿ ಸುಧಾರಾಣಿ ಪುಸ್ತಕ ಬರೆಯುವ ಸಲುವಾಗಿ ಮುಗಿದುಹೋದ ರೌಡಿಸಂ ಕಥೆಯೊಂದರ ಎಳೆಯ ಹಿಂದೆ ಬೀಳುವುದರಿಂದ. ಅದರಲ್ಲಿ ಬರುವ ಐವರು ಪಾತ್ರಧಾರಿಗಳೇ ದೀಪಕ್, ಒರಟ ಪ್ರಶಾಂತ್, ವಿನೋದ್ ಪ್ರಭಾಕರ್, ವೆಂಕಟೇಶ್ ಮತ್ತು ಬಸವರಾಜ್ ಅಲಿಯಾಸ್ ಬೆಳ್ಳಿ. ಶಿವರಾಜ್ ಕುಮಾರ್ ಗೆ ಬೆಳ್ಳಿ ಎಂಬ ಹೆಸರು ಹೇಗೆ ಬಂತೆಂದು ಅತ್ಯಾಶ್ಚರ್ಯ ಪಡುತ್ತಿರುವವರಿಗಾಗಿ ಇಲ್ಲಿದೆ ಉತ್ತರ. ಚಿಕ್ಕಂದಿನಿಂದಲೂ ಅವನ ತಾಯಿ(ಪದ್ಮಾ ವಾಸಂತಿ) ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿಸುತ್ತಿರುತ್ತಾಳೆ. ಅದಕ್ಕೂ ಆತನ ಹೆಸರಿಗೂ ಕನೆಕ್ಷನ್ ಹುಡುಕಲು ಹೋಗಿ ಟೆನ್ಶನ್ ಮಾಡಿಕೊಳ್ಳುವ ಹಾಗಿಲ್ಲ. ಸುಧಾರಾಣಿಯವರು ಈಗ ಹುಚ್ಚನಾಗಿರುವ ಬೆಳ್ಳಿಯ ಕಥೆಯನ್ನು ದಾಖಲು ಮಾಡಿಕೊಳ್ಳುವ ಸಲುವಾಗಿ ತಲೆಮರೆಸಿಕೊಂಡಿರುವ ಆತನ ಸ್ನೇಹಿತರನ್ನು ಭೇಟಿ ಮಾಡಿ ಅವರುಗಳ ಮೂಲಕ ಚಿತ್ರದ ಫ್ಲ್ಯಾಷ್ ಬ್ಯಾಕ್ ಕಥೆ ನಿರೂಪಿಸಲ್ಪಡುತ್ತಾ ಹೋಗುತ್ತದೆ. ರೌಡಿಯಾಗಿ ಹುಚ್ಚನಾಗಿರುವುದರಿಂದ ಶಿವರಾಜ್ ಕುಮಾರ್ ರವರು ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಆಕರ್ಷಣೆಯ ಕೇಂದ್ರ ಬಿಂದುವೇ ಅವರಾಗಿದ್ದಾರೆ. ಅವರ ನಟನೆ, ಡಯಲಾಗುಗಳಿಗೆ ಅಭಿಮಾನಿಗಳಿಂದ ಚಪ್ಪಾಳೆ, ಸೀಟಿಗಳು ಬೀಳುವುದರಲ್ಲಿ ಸಂಶಯವಿಲ್ಲ. ನಾಯಕಿ ಕೃತಿ ಖರಬಂದಾರ ಪಾತ್ರದಲ್ಲಿ ನಟನೆಯಲ್ಲಿ ಹೆಚ್ಚಿನ ಬೆಳವಣಿಗೆಯಿಲ್ಲ. ಇತರ ನಾಲ್ವರು ಸ್ನೇಹಿತರ ನಟನೆ ಓಹೋ ಎನ್ನುವಂತೇನೂ ಇಲ್ಲ. 'ಜೋಗಿ'ಯ ನೆರಳು ಬೀಳುವುದಕ್ಕೆ ತಾಯಿ ಮಗನನ್ನು ಪಟ್ಟಣಕ್ಕೆ ಬಂದು ಹುಡುಕುವುದು, ಮಗ ಕಣ್ಣ ಮುಂದೆಯೇ ಜಸ್ಟ್ ಮಿಸ್ಸಾಗುವುದು ಇವೇ ಮುಂತಾದ ಸೀನುಗಳು ಕಾರಣವಾಗಿವೆ. ವಿ.ಶ್ರೀಧರ್ ಕಂಪೋಸ್ ಮಾಡಿರುವ ಚಿತ್ರದ ಹಾಡುಗಳಲ್ಲಿ ಗುನುಗುವಂಥದ್ಯಾವುದೂ ಇಲ್ಲ. ಇನ್ನುಳಿದಂತೆ ಶ್ರೀನಿವಾಸ್ ಮೂರ್ತಿ, ಆದಿ ಲೋಕೇಶ್, ಜಯಲಕ್ಷ್ಮಿ ಮುಂತಾದ ಬೃಹತ್ ಪೋಷಕ ವರ್ಗವಿದ್ದರೂ ಅನೇಕ ವಿಧಗಳಲ್ಲಿ ಬಹುತೇಕ ಪ್ರೇಕ್ಷಕ ವರ್ಗವನ್ನು ಮೆಚ್ಚಿಸುವಲ್ಲಿ ಚಿತ್ರ ಸೋಲುತ್ತದೆ.

- ಹರ್ಷವರ್ಧನ್
ಕನ್ನಡಪ್ರಭ.ಕಾಮ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com