'ಗೋವಾ' ನೋಡುವ ಬದಲು ಮಲಗೋವಾ!

ಬಹುಶಃ ಎಲ್ಲ ಭಾಷೆಗಳಲ್ಲೂ ಹಲವಾರು ರೋಮ್ಯಾಂಟಿಕ್ ಹಾಸ್ಯಪ್ರಧಾನ ಸಿನೆಮಾಗಳಿಗೆ ಗೋವಾ ನಗರ ಹಿನ್ನಲೆಯಾಗಿದೆ. ಹಾಸ್ಯಕ್ಕೂ ಗೋವಕ್ಕೂ ಯಾವ
ಗೋವಾ ಸಿನೆಮಾ ಸ್ಟಿಲ್
ಗೋವಾ ಸಿನೆಮಾ ಸ್ಟಿಲ್
Updated on: 

ಬೆಂಗಳೂರು: ಬಹುಶಃ ಎಲ್ಲ ಭಾಷೆಗಳಲ್ಲೂ ಹಲವಾರು ರೋಮ್ಯಾಂಟಿಕ್ ಹಾಸ್ಯಪ್ರಧಾನ ಸಿನೆಮಾಗಳಿಗೆ ಗೋವಾ ನಗರ ಹಿನ್ನಲೆಯಾಗಿದೆ. ಹಾಸ್ಯಕ್ಕೂ ಗೋವಕ್ಕೂ ಯಾವ ಬಾದರಾಯಣ ಸಂಬಂಧವೋ ತಿಳಿಯದು. ಗೋವಾ ೨೦೧೦ ರ ತಮಿಳು ರೋಮ್ಯಾಂಟಿಕ್ ಹಾಸ್ಯ ಸಿನೆಮಾಗೆ ವಸ್ತುವಾಗಿದ್ದಲ್ಲದೆ ಶೀರ್ಷಿಕೆಯೂ ಆಗಿತ್ತು. ಈಗ ೨೦೧೫ ರಲ್ಲಿ ರಿಮೇಕ್ ಪ್ರಧಾನ ಚಿತ್ರರಂಗ ಎನ್ನಬಹುದಾದ ಕನ್ನಡ ಚಿತ್ರೋದ್ಯಮದಲ್ಲಿ ಸೂರ್ಯ ಗೌಡ ಅವರ ನಿರ್ದೇಶನದಲ್ಲಿ ಇದೇ ಚಿತ್ರವನ್ನು ಕನ್ನಡದಲ್ಲಿ ಉಣಬಡಿಸಿದ್ದಾರೆ. ನಿಜಕ್ಕೂ 'ಹಾಸ್ಯ' ಯಾವಾಗ ಹುಟ್ಟುತ್ತದೆ ಎಂದು ಗಂಭೀರ ಚಿಂತನೆಗೆ ಹಚ್ಚುವ ಈ ಚಿತ್ರ ದಿಟವಾಗಿ ಹಾಸ್ಯಪ್ರಧಾನವೇ?

ವಾಜರಹಳ್ಳಿ. ಮೂವರು ಯುವಕರು. ಒಬ್ಬ ಪೂಜಾರಿಯ ಮಗ (ಕೋಮಲ್). ಒಬ್ಬ ಮಾಜಿ ಮಿಲಿಟರಿ ಅಧಿಕಾರಿಯ ಮಗ(ಶ್ರೀಕಾಂತ್) ಹಾಗು ಮತ್ತೊಬ್ಬ ಊರ ನಾಯಕನ ಮಗ (ತರುಣ್). ಮೂವರೂ ಊರಿಂದ ಓಡಿಹೋಗಬೇಕೆಂದುಕೊಂಡು ಪ್ರಯತ್ನಿಸಿ ಹಲವಾರು ಬಾರಿ ಸಿಕ್ಕಿ ಬಿದ್ದಿರುತ್ತಾರೆ ಹಾಗೂ ಊರ ಪಂಚಾಯಿತಿಯಿಂದ ಚೀಮಾರಿ ಹಾಕಿಸಿಕೊಂಡು ಒಬ್ಬರಿಗೊಬ್ಬರು ಮಾತಾಡದಂತೆ ಶಿಕ್ಷೆಗೆ ಒಳಪಟ್ಟಿರುತ್ತರೆ. ಈ ಒತ್ತಡ ಸಹಿಸಲಾರದೆ ಬೆಂಗಳೂರಿನ ಇವರಲ್ಲೊಬ್ಬನ ಗೆಳೆಯನ ಮನೆಗೆ ಓಡಿಹೋಗುತ್ತಾರೆ. ಅಲ್ಲಿ ಆ ಗೆಳೆಯ ವಿದೇಶಿ ಮಹಿಳೆಯಳೊಬ್ಬಳನ್ನು ಮದುವೆಯಾಗುತ್ತಿರುವುದನ್ನು ತಿಳಿದು-ಕಂಡು, ಅವನು ಗೋವಾದಲ್ಲಿ ಮಾರ್ಗದರ್ಶಿಯಾಗಿದ್ದೇ ಇದಕ್ಕೆ ಕಾರಣ ಎಂಬುದು ತಿಳಿಯುತ್ತಾರೆ. ಇದೇ ಸಮಯದಲ್ಲೇ ಬೇರೊಬ್ಬ ತಮ್ಮ ಊರಿನಲ್ಲಿ ದೇವಿಯ ಆಭರಣಗಳನ್ನು ಕದಿಯಲು ಪ್ರಯತ್ನಿಸಿದ್ದರಿಂದ, ಆ ಚೀಲ ಅದಲು ಬದಲಾಗಿ ಇವರಲ್ಲಿಗೆ ಬಂದಿರುತ್ತದೆ. ಈಗ ಕಳ್ಳತನ ಆರೋಪ ಕೂಡ ತಮ್ಮ ಮೇಲೆ ಬರಬಹುದು ಎಂಬ ಭೀತಿದಿಂದ, ಹಾಗೂ ವಿದೇಶಿ ಮಹಿಳೆಯರನ್ನು ಪಟಾಯಿಸಿ, ವಿದೇಶಕ್ಕೆ ಹೋಗಬಹುದೆಂದೆಣಿಸಿ ಗೋವಾದತ್ತ ಪ್ರಯಾಣ ಬೆಳೆಸುತ್ತಾರೆ. ಮುಂದೇನಾಗುತ್ತದೆ?

ಸಿನೆಮಾದಲ್ಲಿ ಕಥೆ ಎಂಬುದೇನೂ ಇಲ್ಲ. ಹಾಸ್ಯಪ್ರಧಾನ ಚಲನಚಿತ್ರಗಳಲ್ಲಿ ಕಥೆಗಳಿಲ್ಲದೆಯೂ ಒಳ್ಳೆ ನಿರೂಪಣೆಯಿಂದ ಹಾಸ್ಯ ಹುಟ್ಟಿಸುವ ಸಾಧ್ಯತೆ ಇರುತ್ತದೆ. ಆದರೆ ಈ ಸಿನೆಮಾದ ಸಂಭಾಷಣೆಯಲ್ಲಿ-ದೃಶ್ಯಗಳಲ್ಲಿ ಅಂತಹ ಹಾಸ್ಯ ಪ್ರಧಾನತೆ ನಮಗೆ ಎಲ್ಲೂ ಸಿಗುವುದಿಲ್ಲ. ದರ್ಶಿನಿಗಳ ಉಪ್ಪಿಟ್ಟಿನಲ್ಲಿ ಗೋಡಂಬಿ ಹುಡುಕಿದಂತೆ ನಾವು ಈ ಸಿನೆಮಾದಲ್ಲಿ ಹಾಸ್ಯ ಹುಡುಕಬೇಕಿದೆ. ಸಿನೆಮಾದ ಮೊದಲಾರ್ಧ ಮತ್ತು ದ್ವಿತೀಯಾರ್ಧ ಯಾವುದೇ ತಾರತಮ್ಯ ತೋರದೆ ಸಮವಾಗಿ ಬೋರು ಹೊಡೆಸುತ್ತದೆ. ತರುಣ್ ಮತ್ತು ಶ್ರೀಕಾಂತ್ ನಾವು ಕಾಮಿಡಿ ನಟರಲ್ಲ ಎಂದು ಈ ಹಾಸ್ಯ ಪ್ರಧಾನ ಚಿತ್ರದಲ್ಲಿ ಹಾಸ್ಯ ಪಾತ್ರಗಳನ್ನು ಪೋಷಿಸಿ ತೋರಿಸಿದ್ದಾರೆ. ಕೋಮಲ್ ತಮ್ಮ ಕಾಮಿಡಿ ಟೈಮಿಂಗ್ ಅನ್ನು ಬಹಳಷ್ಟು ಇಳಿಸಿಕೊಂಡು ಒಂದು ಫೈಟ್  ಕೂಡ ಮಾಡಿ, ನನಗೆ ಕಾಮಿಡಿ ಪಾತ್ರಗಳನ್ನು ಕೊಟ್ಟಿದ್ದು ಸಾಕು, ಇನ್ನು ಮುಂದೆ ಆಕ್ಷನ್ ಹೀರೋ ಪಾತ್ರ ನೀಡಿ ಎಂದು ಸೂಚಿಸಲು ಮುನಿಸಿಕೊಂಡು ನಟಿಸಿರುವಂತಿದೆ. ಪದೇ ಪದೇ ಅದೇ  ಹಿನ್ನಲೆ ಸಂಗೀತದಲ್ಲಿ ಗೋವಾವನ್ನು ತೋರಿಸುವ ರೀತಿ, ಅಲ್ಲಿನ ಪಾರ್ಟಿಗಳನ್ನು ಬೀಚುಗಳನ್ನು ಕುಣಿತಗಳನ್ನು ತೋರಿಸಿರುವ ರೀತಿ ಯಾವುದೂ ಸರಿಯಾಗಿ ಮನಸ್ಸಿಗೆ ನಾಟುವುದಿಲ್ಲ. ಇನ್ನು ವಿದೇಶಿ ಹುಡುಗಿಯರನ್ನು ಹುಡುಕುವ ರೀತಿ, ಅಲ್ಲಿ ರೋಮ್ಯಾನ್ಸ್, ಅಲ್ಲಿ ಸಂಭಾಷಣೆ ಎಲ್ಲವೂ  ಪೇವಲವಾಗಿದೆ. ಅಶೋಕ್, ರಮೇಶ್ ಭಟ್ ಅವರ ನಿಯಮಿತ ಪೋಷಕ ಪಾತ್ರ ಪರವಾಗಿಲ್ಲ. ಶರ್ಮಿಳಾ ಮಂಡ್ರೆ ಮತ್ತಿಬ್ಬರು ಮುಖ್ಯ ತಾರಾಗಣದ ನಟಿಯರು ಬಂದು ಹೋಗುತ್ತಾರೆ. ಅರ್ಜುನ್ ಜನ್ಯ ಅವರ ಸಂಗೀತ ಕೇಳುವಂತಿಲ್ಲ. ಸ್ಪೂಫ್ ಮಾಡುವ ಉದ್ದೇಶದಿಂದಲೋ ಏನೋ ಬಳಸಿಕೊಂಡಿರುವ ಹಿಂದಿನ ಎರಡು ಸಿನೆಮಾ ಹಾಡುಗಳನ್ನಷ್ಟೇ ಕೇಳಲು ಸಾಧ್ಯ. ಒಳ್ಳೊಳ್ಳೆ ಕಥೆಯುಳ್ಳ ಸಿನೆಮಾಗಳನ್ನು ರಿಮೇಕ್ ಮಾಡಿದರೆ ಅದನ್ನು ಸಮರ್ಥಿಸಿಕೊಳ್ಳಬಹುದೇನೋ ಆದೆರೆ ಕಥೆಯೇ ಇಲ್ಲದ ಇಂತಹ ಸಿನೆಮಾ ರಿಮೇಕ್  ಮಾಡುವುದರ ಮೂಲಕ ನಿರ್ದೇಶಕ ಸೂರ್ಯ ಗೌಡ ಸಾಧಿಸ ಹೊರಟಿರುವುದೇನು ಎಂಬ ಪ್ರಶ್ನೆ ಮೂಡದೆ ಇರದು. ರಿಮೇಕ್ ಹಕ್ಕುಗಳಿಗೆ ನೀಡಿರುವ ದುಡ್ಡನ್ನು ಇಲ್ಲಿನ ಒಳ್ಳೆಯ ಬರಹಗಾರನಿಗೆ ಕೊಟ್ಟಿದ್ದರೆ ಇನ್ನು ಒಳ್ಳೆಯ ಕಥೆಯುಳ್ಳ- ಒಳ್ಳೆಯ ಸಂಭಾಷಣೆಯುಳ್ಳ ಸ್ಕ್ರಿಪ್ಟ್ ಕೊಡುತ್ತಿದ್ದನೇನೋ ಎಂಬ ಸಲಹೆ ಕೊಡಬೇಕು ಎಂದೆನಿಸದೆ ಕೂಡ ಇರಲಾರದು.

ಇಂತಹ ಸಿನೆಮಾಗಳನ್ನು ನೋಡಿದಾಗಲೇ ಹಾಸ್ಯ ಯಾವಾಗ ಹುಟ್ಟುವುದು ಎಂಬ ಘನವಾದ ಪ್ರಶ್ನೆ ನಮ್ಮಲ್ಲಿ ಮೂಡುವುದು. ಹಿಂದಿನ ಸಮಯದ ಕೆಲವು ಸಿನೆಮಾಗಳನ್ನು ನೆನೆಪಿಸಿಕೊಳ್ಳಿ. ಜಿಪುಣನ ಪಾತ್ರದಲ್ಲಿ ಹಾಸ್ಯ ಹುಟ್ಟುತ್ತಿತ್ತು. ದುಡ್ಡಿಲ್ಲದ ಬಡವನಿಂದ ಹಾಸ್ಯ ಹುಟ್ಟುತ್ತಿತ್ತು. ಸಾಂಸ್ಕೃತಿಕ ಅಘಾತದಿಂದ (ಭಿನ್ನತೆ) ಹಾಸ್ಯ ಹುಟ್ಟುತ್ತಿತ್ತು. ಹಾಸ್ಯ ಹುಟ್ಟುವುದು ಈ ಸಂಘರ್ಷಗಳಿಂದ. ಈ ಸಿನೆಮಾದಲ್ಲಿ ಅಂತಹ ಹಾಸ್ಯ ಮೂಡಿಸುವ ಎಲ್ಲ ಅವಕಾಶಗಳಿದ್ದರೂ ಅದರ ಬಗ್ಗೆ ಸಿನೆಮಾದ ಕಥೆಗಾರ-ನಿರ್ದೇಶಕ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಆ ಮೂವರು ಹುಡುಗರು ಗೋವಾಕ್ಕೆ ಬಂದಾಗ ದುಡ್ಡಿನ ಕೊರತೆ ಇರುವುದಿಲ್ಲ. ಅವರಿಗೆ ಯಾವುದೇ ಸಾಂಸ್ಕೃತಿಕ ಶಾಕ್ ಆಗುವುದಿಲ್ಲ. ಸುಮ್ಮನೇ ಒಂದು ಪೂರ್ವನಿಯೋಜಿತ ಕಥೆ ತಲೆಯಲ್ಲಿ ಇಟ್ಟುಕೊಂಡು ಸಾಮಾನ್ಯ ಸಂಭಾಷಣೆಯನ್ನು ಅತೀವವಾಗಿ-ಅಬ್ಬರವಾಗಿ ಹೇಳಿಸಿ ಹಾಸ್ಯ ಮೂಡಿಸಲು ಪ್ರಯತ್ನಿಸಿ ನಿರ್ದೇಶಕರು ದಯನೀಯವಾಗಿ ಸೋತಿದ್ದಾರೆ. ಮೂವರಿಗೂ ಇಂಗ್ಲಿಶ್ ಬರುವುದಿಲ್ಲ ಎಂಬ ಅಂಶವನ್ನು ಹಾಸ್ಯಪ್ರಧಾನವಾಗಿ ಬಳಸಿಕೊಳ್ಳಲು ಕೆಲವು ಕಡೆ ಪ್ರಯತ್ನಿಸಿದ್ದರು ಅದು ಅಷ್ಟೇನೂ ಸಮರ್ಪಕವಾಗಿ ವೀಕ್ಷಕರನ್ನು ನಗಿಸಲು ಸಾಧ್ಯವಾಗಿಲ್ಲ.

ಪುರುಷ ಪ್ರಧಾನ ಚವನಿಸ್ಟ್ ಮನೋಭಾವವನ್ನು ತೋರಿಸುವ ನಿರ್ಭಯ ರೇಪ್ ಬಗ್ಗೆ  ಬಿಬಿಸಿ ನಿರ್ಮಿಸಿದ್ದ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಯತ್ನಿಸಿತು. ಈ ಪುರುಷ ಪ್ರಧಾನ ಚಿಂತನೆ ನಮ್ಮ ಬಹುತೇಕ ಎಲ್ಲ ಚಿತ್ರಗಳಲ್ಲೂ ತುಂಬಿರುತ್ತದೆ ಎಂಬುದನ್ನು ಸರ್ಕಾರ ಅಥವಾ ಸೆನ್ಸಾರ್ ಮಂಡಳಿ ಮನನ ಮಾಡಿಕೊಳ್ಳಬೇಕು. ಸಿನೆಮಾದಲ್ಲಿ ಬರುವ "ಯಾವ ದೇಶದ ಹುಡುಗಿಯಾದರೂ ಹುಡುಗನಿಗೆ ಮೋಸ ಮಾಡಲೇ ಹುಟ್ಟಿರುವುದು" ಎಂಬಂತಹ ಸಂಭಾಷಣೆಗಳು ಪುರುಷ ಪ್ರಧಾನ ಸಣ್ಣ ಮನಸ್ಥಿತಿಯನ್ನು ತೋರಿಸುವುದಲ್ಲದೇ ಅದಕ್ಕೆ ಉತ್ತೇಜನವನ್ನು ನೀಡುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಈ ಸಿನೆಮಾ ನೋಡುವುದರ ಬದಲು ನೀವೊಬ್ಬರೇ ಆದರೂ ಪರವಾಗಿಲ್ಲ ಸ್ವಲ್ಪ ಹೆಚ್ಚು ಸಮಯ ದುಡ್ಡು ಖರ್ಚು ವ್ಯಯಿಸಿ ಗೋವಾ ನಗರ-ಬೀಚುಗಳಿಗೇ  ಹೋಗಿ ಬರಬಾರದೇಕೆ? ಇವ್ವೆಲ್ಲಾ ಬೇಡವೆಂದಾದರೆ ಸುಮ್ಮನೆ ಮನೆಯಲ್ಲಿ ಮಲಗಬಾರದೇಕೆ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com