ಚೀನಾದ ವಿರುದ್ಧ ನಾವೇಕೆ ಮೌನ?
ಬಹುಶಃ ಚೀನಾ ತನಗೆ ನುಂಗಲಾಗುವುದಕ್ಕಿಂತ ಹೆಚ್ಚಿನ ತುತ್ತನ್ನು ಬಾಯಿಗೆ ತುರುಕಿಕೊಂಡಿದೆಯೇನೋ ಎಂದೆನಿಸದೇ ಇರದು. ಏಕೆಂದರೆ ಅದು ಇಂಡೊ-ಫೆಸಿಫಿಕ್ ಪ್ರಾಂತ್ಯದ ಮೂರು ರಾಷ್ಟ್ರಗಳ ಜತೆ ಕುಸ್ತಿಗೆ ಬೀಳುವ ಧೋರಣೆ ಹೊರಹಾಕಿದೆ. ಜಪಾನ್, ಅಮೆರಿಕ ಮತ್ತು ಭಾರತಗಳೊಂದಿಗೆ ಅದು ತಪ್ಪು ನಡೆ ಇಡುತ್ತಿದೆ. ಈ ಮೂರೂ ಶಕ್ತಿಗಳೂ ಒಂದುಗೂಡಿ ಚೀನಾದ ಆಕ್ರಮಣಶೀಲತೆಗೆ ಉತ್ತರ ಕೊಡುತ್ತೇವೆಂದು ಹೊರಟರೆ ಆಗ ಅದಕ್ಕೆ ತುಂಬ ಕಷ್ಟವಾಗಲಿದೆ.
ಚೀನಾ ಪಾಲಿಗೆ ಯಾವತ್ತೂ ಕಠಿಣವಾಗಿಯೇ ನಡೆದುಕೊಂಡಿರುವ ಜಪಾನ್ ಅದಾಗಲೇ ಗಡಸು ಸಂದೇಶವೊಂದನ್ನು ಬೀಜಿಂಗ್‌ಗೆ ರವಾನಿಸಿದೆ. ಜಪಾನ್‌ನ ಪ್ರಧಾನಿಯಾಗಿರುವ ಶಿಂಜೊ ಅಬೆ ಯುದ್ಧಾನಂತರ ಅವಧಿಯ ಪ್ರಖರ ರಾಷ್ಟ್ರೀಯವಾದಿ ಎನ್ನಿಸಿಕೊಂಡಿದ್ದಾರೆ. ಜಪಾನ್‌ನ ಉಭಯ ಸದನಗಳಲ್ಲಿ ಶಿಂಜೊ ಅಬೆ ಅವರಿಗೆ ಭಾರಿ ಬೆಂಬಲ ಇರುವುದಕ್ಕೆ ಚೀನಾದ ವಿರುದ್ಧ ನಿಲವು ತಾಳುವುದಕ್ಕೆ ಅವರು ಒಂದಿನಿತೂ ಹಿಂಜರಿಕೆ ಇಟ್ಟುಕೊಳ್ಳದಿರುವುದೇ ಕಾರಣ.
ಇತ್ತೀಚೆಗೆ ಚೀನಾವು ರಷ್ಯಾದ ಯುದ್ಧನೌಕೆಗಳೊಂದಿಗೆ ತಾಲೀಮಿನಲ್ಲಿ ತೊಡಗಿಕೊಂಡಿದ್ದ ತನ್ನ ಬಹುತೇಕ ನೌಕೆಗಳನ್ನು ಉತ್ತರಭಾಗದಿಂದ ಹಿಂತಿರುಗುವಂತೆ ಬೇಕಂತಲೇ ಆದೇಶಿಸಿತು. ಇದು ಜಪಾನ್‌ನ ದ್ವೀಪಸಮೂಹಗಳನ್ನು ಸುತ್ತುವರಿದುಕೊಂಡು ಬರುವ ಪ್ರಚೋದನಾತ್ಮಕ ಮಾರ್ಗವಾಗಿತ್ತು. ಈ ಮೂಲಕ ಅದು ಜಪಾನ್‌ನ ಸಮುದ್ರ ವ್ಯಾಪ್ತಿಯನ್ನು ಕುಗ್ಗಿಸುವ ಕೆಲಸ ಮಾಡಿತು. ಯೊಕೊಸುಕ ಮೂಲದ ಅಮೆರಿಕನ್ ಸೆವೆನ್ತ್ ಫ್ಲೀಟ್ ಅಣ್ವಸ್ತ್ರ ಸಹಿತ ನೌಕೆಗಳಿಗೆ ಸೋಯಾ ಖಾರಿ ಪ್ರದೇಶದಲ್ಲಿ 5.6 ಕಿ.ಮೀ ವ್ಯಾಪ್ತಿಯಲ್ಲೆ ಮುಂದೆ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ಆತಂಕದ ಪರಿಸ್ಥಿತಿಗೆ ಉತ್ತರವಾಗಿ ಜಪಾನ್‌ನ ರಕ್ಷಣಾ ಶ್ವೇತಪತ್ರವು 'ಯಥಾಸ್ಥಿತಿಯನ್ನು ತನ್ನ ಮೂಗಿನ ನೇರಕ್ಕೆ ಬದಲಿಸುವ ಚೀನಾದ ಬಲವಂತದ ಪ್ರಯತ್ನ ಇದು' ಎಂದು ಸಾರಿತು. ಇದರ ಬೆನ್ನಲ್ಲೇ ಸುಮಾರು 400 ದ್ವೀಪ ಸಮುಚ್ಛಯಗಳನ್ನು ಜಪಾನ್ ರಾಷ್ಟ್ರೀಕರಣಗೊಳಿಸಿರುವುದಾಗಿ ಸಾರಿತು. ತನ್ನ ಸಮುದ್ರ ಪ್ರದೇಶವನ್ನು 4.47 ಮಿಲಿಯನ್ ಕಿ.ಮೀ.ಗೆ ವಿಸ್ತರಿಸುವ ಮೂಲಕ ತಾನೂ ಪ್ರತಿ ಆಕ್ರಮಣದ ನೀತಿ ಅನುಸರಿಸುವ ಸೂಚನೆ ನೀಡಿತು.
ಅಫ್ಘಾನಿಸ್ತಾನದಿಂದ ಸೇನಾ ಹಿಂತೆಗೆತದ ಪ್ರಕ್ರಿಯೆ ಆರಂಭಿಸಿರುವ ಅಮೆರಿಕವು ಪೂರ್ವ ಭಾಗದಲ್ಲಿ ಮಿಲಿಟರಿ ಬಲವನ್ನು ಗಟ್ಟಿಗೊಳಿಸಿಕೊಳ್ಳುವ ಸಮತೋಲನದ ಪರಿಕಲ್ಪನೆಗೆ ಪ್ರಯತ್ನಿಸುತ್ತಿದೆ. ಚೀನಾವು ಜಪಾನ್ ಮತ್ತು ಆಗ್ನೇಯ ಏಷ್ಯಗಳ ಸಮುದ್ರ ತೀರದಲ್ಲಿರುವ ದೇಶಗಳೊಂದಿಗೆ, ಅದರಲ್ಲೂ ಮುಖ್ಯವಾಗಿ ಪಿಲಿಪ್ಪೈನ್ಸ್‌ನೊಂದಿಗೆ ಹೊಂದಿರುವ ತಕರಾರುಗಳನ್ನು ಉಲ್ಲೇಖಿಸುತ್ತ, ಅಮೆರಿಕನ್ ನೌಕೆ ಸೆವೆಂತ್ ಫ್ಲೀಟ್‌ನ ಕಮಾಂಡರ್ ಆಗಿರುವ ವೈಸ್ ಅಡ್ಮಿರಲ್ ಸ್ಕಾಟ್ ಸ್ವಿಫ್ಟ್ ಅವರು ಚೀನಾಕ್ಕೆ ಎಚ್ಚರಿಕೆ ನೀಡಿದ್ದರು. 'ರಾಷ್ಟ್ರಗಳ ನಡುವಿನ ವ್ಯತ್ಯಾಸಗಳನ್ನು ಸರಿಪಡಿಸುವುದಕ್ಕೆ ಬಲವನ್ನು ಉಪಯೋಗಿಸಬೇಕಾದ ಪ್ರಚೋದನೆಗೆ ಒಳಗಾಗಬೇಕಾದೀತು' ಎಂಬ ಪ್ರಖರ ಮಾತುಗಳು ಅವರ ಬಾಯಿಂದ ಹೊರಬಿದ್ದಿದ್ದವು.
ಹೀಗೆ ಇಂಡೊ-ಫೆಸಿಪಿಕ್‌ನ ಕಾರ್ಯತಂತ್ರದ ಭಾಗವಾಗಿರುವ ಮೂರು ಸ್ತಂಭಗಳ ಪೈಕಿ ಎರಡು ಮಜಬೂತಾಗಿವೆ. ಮೂರನೆಯದು ಭಾರತ. ಇದು ಕಾರ್ಯತಂತ್ರ ಸಂಬಂಧಿ ಎಲ್ಲ ವಿಷಯಗಳಲ್ಲೂ ಗೊಂದಲವನ್ನು ಎದುರಿಸುತ್ತಿದೆ. ಚೀನಾವು ಪದೇ ಪದೆ ಪ್ರಚೋದನೆ ನೀಡುತ್ತಿದ್ದರೂ ಅದಕ್ಕೆ ಪ್ರತಿಯಾಗಿ ಧಾಡಸಿ ಪ್ರತಿಕ್ರಿಯೆಯೊಂದನ್ನು ವ್ಯಕ್ತಪಡಿಸುವುದು ಹೇಗೆ ಎಂಬುದು ನಮ್ಮವರಿಗೆ ಇವತ್ತಿನವರೆಗೆ ಬಗೆಹರಿದಿಲ್ಲ. ಈ ವರ್ಷದ ಏಪ್ರಿಲ್‌ನಲ್ಲಿ ಲಢಾಕ್‌ನ ಡೆಪ್ಸಾಂಗ್ ಕಣಿವೆಯಲ್ಲಿ ಕಂಡ ಚೀನಾ ಆಕ್ರಮಣಶೀಲತೆ ಉದಾಹರಣೆ ಅಷ್ಟೆ. ಜೂನ್ ಮಧ್ಯದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ 'ಲೈನ್ ಆಪ್ ಆ್ಯಕ್ಚುವಲ್ ಕಂಟ್ರೋಲ್' ಅನ್ನು ಮತ್ತೊಮ್ಮೆ ದಾಟಿತು. ಚುಮಾರ್‌ನ ವೀಕ್ಷಣಾ ಪ್ರದೇಶವನ್ನು ಬರ್ಖಾಸ್ತುಗೊಳಿಸಬೇಕು ಎಂದು ಈ ಹಿಂದೆ ಕ್ಯಾತೆ ತೆಗೆದಿದ್ದ ಚೀನಿಯರು ಅದರ ಮೇಲೆಯೇ ದಾಳಿ ಮಾಡಿದರು. ಅದು ಕಾರ್ಯತಂತ್ರದ ದೃಷ್ಟಿಯಿಂದ ಭಾರತಕ್ಕೆ ಬಹಳ ಮಹತ್ವವಾಗಿದ್ದ ಪ್ರದೇಶ. ಕಣಿವೆ ಕೆಳಗೆ ಚೀನಾ ಸೇನೆ ಹೇಗೆಲ್ಲ ತನ್ನ ನಿಯೋಜನೆ ರೂಪಿಸಿದೆ ಎಂಬುದನ್ನು ಕರಾರುವಾಕ್ ಆಗಿ ತಿಳಿದುಕೊಳ್ಳಬಹುದಾಗಿದ್ದ ಜಾಗವದು. ಚೀನಾ ಆಕ್ರಮಣಕಾರರು ನಮ್ಮ ಪರಿವೀಕ್ಷಣಾ ಸಲಕರಣೆಗಳನ್ನೇ ಧ್ವಂಸಗೊಳಿಸಿದರು. ಹೀಗೆ ಗಡಿ ದಾಟಿ ಆಕ್ರಮಣ ತೋರುವುದು ಯಾವ ಮಹಾ ಸಂಗತಿಯೂ ಅಲ್ಲ ಎಂಬಂತೆ ಜುಲೈ 15, 17 ಮತ್ತು 21ನೇ ದಿನಾಂಕಗಳಂದು ಚೀನಾ ಸೈನಿಕರು ಎಲ್‌ಎಸಿ ದಾಟಿ ಬಂದರು.
ಈ ವಿದ್ಯಮಾನಕ್ಕಿಂತ ದಿಕ್ಕೆಡಿಸುತ್ತಿರುವ ಸಂಗತಿ ಎಂದರೆ ಈ ಬಗ್ಗೆ ಭಾರತೀಯ ಸೇನೆಯ ಪ್ರಾರಂಭಿಕ ಪ್ರತಿಕ್ರಿಯೆಗಳು. ಚುಮುರ್ ನೆಲೆಯು ಸಣ್ಣ ಶೆಡ್ ಆಗಿತ್ತಷ್ಟೆ ಎಂಬ ವಿದೇಶಿ ವ್ಯವಹಾರ ಸಚಿವಾಲಯದ ಮಾತನ್ನೇ ಸೇನೆಯೂ ಪ್ರತಿಧ್ವನಿಸಿತು. ಜುಲೈನಲ್ಲಿ ಚೀನಾ ಸೇನೆಯ ಅತಿಕ್ರಮ ಪ್ರವೇಶವನ್ನೂ 'ಸೇನಾ ಪಥಸಂಚಲನ' ಎಂಬ ಹಣೆಪಟ್ಟಿಯೊಂದಿಗೆ ತಣ್ಣಗಾಗಿಸುವ ಕೆಲಸಕ್ಕೆ ಸಚಿವಾಲಯ ಕೈಹಾಕಿತು. ಭಾರತವನ್ನು ಮಣ್ಣು ಮುಕ್ಕಿಸುವುದಕ್ಕೆ ಕಟಿಬದ್ಧವಾದಂತಿರುವ ಚೀನಾದೊಂದಿಗೆ ನಾವು ಸಂಘರ್ಷಕ್ಕೆ ಮುಂದಾಗುವುದೇ ಬೇಡ ಎಂದು ನಿರ್ಧರಿಸಿದಂತಿತ್ತು ನಮ್ಮ ದೇಶದ ಸೇನಾ ಹೆಡ್‌ಕ್ವಾರ್ಟರ್. ಇನ್ನೊಂದೆಡೆ ಪಾಕಿಸ್ತಾನದ ಐಎಸ್‌ಐ ಜಾಲವನ್ನು ಉಪಯೋಗಿಸಿಕೊಂಡು ಭಾರತದಲ್ಲಿ ನಕಲಿ ಕರೆನ್ಸಿಗಳನ್ನು ತೂರುವುದರ ಮೂಲಕ ನಮ್ಮ ಅರ್ಥವ್ಯವಸ್ಥೆ ಅಲ್ಲಾಡಿಸುವ ಕಾರ್ಯದಲ್ಲೂ ಚೀನಾ ಮಗ್ನವಾಗಿರುವುದು ತಿಳಿದು ಬಂತು. ಆದರೂ ಭಾರತ ಸರ್ಕಾರಕ್ಕೆ ಗಡಸು ಪ್ರತಿಕ್ರಿಯೆ ದಾಖಲಿಸಬೇಕು ಅಂತ ಅನ್ನಿಸಲೇ ಇಲ್ಲ. ಅತಿಕ್ರಮಣ ಪ್ರವೇಶದ ವಿಷಯಗಳನ್ನು ಭದ್ರತಾ ವಿಷಯಗಳ ಚರ್ಚೆಯ ವೇದಿಕೆಯಲ್ಲಿ ಮಾತ್ರವೇ ಕೈಗೆತ್ತಿಕೊಳ್ಳೋಣ ಎಂಬ ನಿಲವು ಭಾರತದ್ದಾಗಿರಬಹುದು. ಆದರೆ ಇಂಥ ಯಾವ ವೇದಿಕೆಗಳೂ ಚೀನಾವು ಪದೇ ಪದೆ ಗಡಿದಾಟಿ ಬರುವುದನ್ನು ನಿಯಂತ್ರಿಸಿಲ್ಲ. ಚೀನಾದ ಆಕ್ರಮಣಕಾರಿ ಧೋರಣೆಗೆ ಅಷ್ಟೇ ತೀವ್ರ ಧ್ವನಿಯಲ್ಲಿ ಪ್ರತಿಭಟನೆ ದಾಖಲಿಸುವುದು ಮಾತ್ರವೇ ಭಾರತದ ಮುಂದಿರುವ ಆಯ್ಕೆ.
ಮನಮೋಹನ ದರ್ಬಾರಿನ ವಿದೇಶ ಸಚಿವ ಸಲ್ಮಾನ್ ಖುರ್ಷಿದ್ ಅವರು ಸರ್ಕಾರವು 'ಶಾಂತಿ ಮತ್ತು ಕಠಿಣ ಪರಿಸ್ಥಿತಿ' ಎರಡಕ್ಕೂ ಸಜ್ಜಾಗುತ್ತಿದೆ ಎಂದು ತಮ್ಮ ವಿದೇಶಿ ನೀತಿಯನ್ನು ಸಾರುತ್ತಾರೆ. ವಾಸ್ತವದಲ್ಲಿ ತುಷ್ಟೀಕರಣ- ಇತರರನ್ನು ಖುಷಿಗೊಳಿಸುವ ಮೂಲಕ ಶಾಂತಿಯನ್ನು ಕೊಳ್ಳುವ ಮಾರ್ಗದಲ್ಲಿ ಇವರಿದ್ದಾರೆ. ಇನ್ನೊಂದು ದುರಂತ ಏನೆಂದರೆ, ಚಿಕ್ಕ ರಾಷ್ಟ್ರಗಳನ್ನು ಚೀನಾದ ವಿರುದ್ಧ ಎದ್ದು ನಿಲ್ಲಿಸುವುದನ್ನು ಬಿಟ್ಟು ಅವರ ವಿಷಯದಲ್ಲಿ ಗಡಸು ಧೋರಣೆ ಅನುಸರಿಸಲಾಗುತ್ತಿದೆ. 1980ರಲ್ಲಿ ನೇಪಾಳಕ್ಕೆ ಆರ್ಥಿಕ ದಿಗ್ಭಂದನ ಹಾಕಿದ್ದ ರಾಜೀವ್ ಗಾಂಧಿ ಕ್ರಮವನ್ನು ಮುಂದಿರಿಸಿಕೊಂಡು ಭೂತಾನ್‌ಗೆ ನೀಡಲಾಗುತ್ತಿರುವ ಗ್ಯಾಸ್ ಸಬ್ಸಿಡಿಯನ್ನು ನಿಲ್ಲಿಸುವ ಬೆದರಿಕೆ ಹಾಕಲಾಗುತ್ತಿದೆ. ಆಗೇನೋ ನೇಪಾಳವನ್ನು ತಣ್ಣಗಾಗಿಸುವುದರಲ್ಲಿ ರಾಜೀವ್ ಯಶ ಸಾಧಿಸಿದ್ದರು. ಆದರೆ ಈಗಿನ ಕ್ರಮ ಭೂತಾನ್ ನಮ್ಮ ಮೇಲೆ ದ್ವೇಷ ಹೆಚ್ಚಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡಲಿದೆ. ಇದರ ಲಾಭವೂ ಚೀನಾಕ್ಕೆ. ಚೀನಾದ ವಿರುದ್ಧ ಬಾಲ ಮುದುರಿಕೊಂಡು ಗುಬ್ಬಿಗಳ ಮೇಲಷ್ಟೇ ಬ್ರಹ್ಮಾಸ್ತ್ರ ಪ್ರಯೋಗಿಸುವ ನಮ್ಮ ನೀತಿ ಜಾಗತಿಕ ಕಾರ್ಯತಂತ್ರ ನಕಾಶೆಯಲ್ಲಿ ಭಾರತದ ಪ್ರಸ್ತುತತೆ ಕುಂದುವ ಆತಂಕ ತಂದೊಡ್ಡಿದೆ.
- ಭರತ್ ಕಾರ್ನಾಡ್, ರಕ್ಷಣಾ ಪರಿಣತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

