ಅಂಕಣಗಳು

ನಮ್ಮೊಳಗೂ ಇದ್ದಾರು ತೇಜ್‌ಪಾಲ್

ನಮ್ಮೊಳಗೂ ಇದ್ದಾರು ತೇಜ್‌ಪಾಲ್
Published On :

ತೆಹೆಲ್ಕಾದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಸದ್ಯ ಚರ್ಚೆಯಲ್ಲಿರುವ ಸುದ್ದಿ. ಪತ್ರಿಕೆಯೊಂದರ ಸಂಪಾದಕ, ಲೇಖಕ, ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದ ಧೈರ್ಯಶಾಲಿ ಎಂದೇ ಪ್ರಸಿದ್ಧಿ ಪಡೆದಿದ್ದ ತೇಜ್‌ಪಾಲ್ ಗೋವಾದ ಲಿಫ್ಟ್‌ನಲ್ಲಿ ಎಡವಿ ಬಿದ್ದಿದ್ದಾರೆ. ಈ ಆರೋಪ ಸಾಬೀತಾದರೆ ತೇಜ್‌ಪಾಲ್ 10 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬರುತ್ತದೆ. ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಮೂಲಕ ತೆಹೆಲ್ಕಾ ಮಾಧ್ಯಮರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು.
2000 ಇಸ್ವಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು 2001ರಲ್ಲಿ  ನಡೆಸಿದ Operation West End ಎಂಬ ಕುಟುಕು ಕಾರ್ಯಾಚರಣೆ ಎನ್‌ಡಿಎ ಸರ್ಕಾರದ ಹಳವಂಡವನ್ನು ಬಯಲಿಗೆಳೆದಿತ್ತು. ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್  ಮತ್ತು ಬಿಜೆಪಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಭ್ರಷ್ಟಾಚಾರ ನಡೆಸಿದ್ದನ್ನು ರಹಸ್ಯ ಕ್ಯಾಮೆರಾ ಮೂಲಕ ತೆಹೆಲ್ಕಾ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಫರ್ನಾಂಡಿಸ್ ರಾಜಿನಾಮೆ ನೀಡಬೇಕಾಗಿ ಬಂತು. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಂಗಾರು ಲಕ್ಷ್ಮಣ್ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಯಿತು.
ತೇಜ್‌ಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವೆದ್ದಾಗ ಆತ ಮಾಡಿದ್ದಾದ್ದರೂ ಏನನ್ನು? ಮೊದಲು ಕ್ಷಮೆಯಾಚಿಸಿ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡಿದರು. 6 ತಿಂಗಳಿಗೆ ಸಂಪಾದಕ ಸ್ಥಾನ ತೊರೆಯುವುದಾಗಿಯೂ ಹೇಳಿದರು. ಇದ್ಯಾವುದೂ ನಡೆಯದೇ ಇದ್ದಾಗ ಆರೋಪ ನಿರಾಕರಿಸತೊಡಗಿದರು. ಇದೀಗ ಅದು ಒಪ್ಪಿಗೆಯ ಕ್ರಿಯೆಯಾಗಿತ್ತು. ನಾನು ಆ ರೀತಿ ಆಕೆಯ ಜತೆ ವರ್ತಿಸುವಾಗ ಆಕೆಯೂ ನನಗೆ ಸಹಕರಿಸಿದ್ದಳು! ಈ ಹೇಳಿಕೆಯ ಮೂಲಕ ತೇಜ್‌ಪಾಲ್ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯನ್ನೇ ಸಂಶಯ ದೃಷ್ಟಿಯಿಂದ ನೋಡುವಂತೆ ಮಾಡಿ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ.
ಅಂದಹಾಗೆ ಕಚೇರಿಯಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ವಿರುದ್ಧದ ಕಾನೂನು ಜಾರಿಯಾಗಿದೆ. ಕಾನೂನು ಇದೆ ಎಂದ ಮಾತ್ರಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ, ಮಹಿಳೆಯರು ಹೆಚ್ಚಾಗಿ ಕೆಲಸ ಮಾಡುವ ಕಚೇರಿಗಳಲ್ಲಿ ಪುರುಷಾಧಿಪತ್ಯ ಫೀಲಿಂಗ್‌ಗಳು ಇದ್ದೇ ಇರುತ್ತದೆ. ಹೆಚ್ಚಿನ ಕಚೇರಿಗಳಲ್ಲಿ ಲೈಂಗಿಕ ದೌರ್ಜನ್ಯ ನಡೆದರೂ ಮಹಿಳೆಯರ್ಯಾರೂ ಈ ಬಗ್ಗೆ ಚಕಾರವೆತ್ತುವುದಿಲ್ಲ. ಮಹಿಳಾ ಸಹೋದ್ಯೋಗಿಯೊಬ್ಬರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಿದರೂ ಅದನ್ನು ಕಡೆಗಣಿಸುವ ಪ್ರವೃತ್ತಿ ಮಹಿಳಾ ಸಹೋದ್ಯೋಗಿಗಳಲ್ಲೂ ಇರುತ್ತದೆ. ತೇಜ್‌ಪಾಲ್ ಪ್ರಕರಣದಲ್ಲಿ ಇದು 'ಆಂತರಿಕ ವಿಷಯ' ಎಂದು ಹೇಳುವ ಮೂಲಕ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಶೋಮಾ ಚೌಧರಿ ಮಾಡಿದ್ದು ಕೂಡಾ ಇದನ್ನೇ ಅಲ್ಲವೇ? ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬಾಯ್ಬಿಟ್ಟು ಹೇಳಿದರೆ, ಕೆಲಸ ಹೋಗುತ್ತದೆ ಎಂಬ ಭೀತಿ ಒಂದೆಡೆಯಾದರೆ ಪ್ರಕರಣದಲ್ಲಿ ದೂರು ನೀಡಲು ಹೋದಾಕೆಯೇ ತಪ್ಪಿತಸ್ಥಳಾಗುವ ಸಾಧ್ಯತೆಯೂ ಇರುತ್ತದೆ. ಹೀಗಿರುವಾಗ ದೌರ್ಜನ್ಯಕ್ಕೊಳಗಾದ ಸ್ತ್ರೀ ತನಗಾದ ಅನ್ಯಾಯವನ್ನು ಬಚ್ಚಿಟ್ಟು, ಉದ್ಯೋಗ ಬದಲಿಸುತ್ತಾಳೆಯೇ ವಿನಾ ಬೇರೇನೂ ಮಾಡುವ ಗೋಜಿಗೆ ಹೋಗುವುದಿಲ್ಲ. ಇಂತಹ ಹಲವಾರು ಪ್ರಕರಣಗಳು ಕಚೇರಿಯ ನಾಲ್ಕು ಗೋಡೆಗಳ ಮಧ್ಯೆಯೇ  ಭಯ, ಗಾಸಿಪ್‌ಗಳಿಂದ ಉಸಿರುಗಟ್ಟಿ ಸತ್ತುಹೋಗುತ್ತವೆ.
ಇದೀಗ ಲೈಂಗಿಕ ದೌರ್ಜನ್ಯ ಆರೋಪ ಹೊತ್ತ ತೇಜ್‌ಪಾಲ್ ಉನ್ನತ ಸ್ಥಾನದಿಂದ ಕೆಳಗಿಳಿದಿದ್ದಾರೆ. ಐಗೇಟ್ ಸಿಇಓ ಫಣೀಶ್‌ಮೂರ್ತಿ, ಪೆಂಗ್ವಿನ್ ಸಂಸ್ಥೆಯ ಡೇವಿಡ್ ದಾವಿದಾರ್, ಹರ್ಯಾಣ ಮುಖ್ಯಮಂತ್ರಿ ಗೋಪಾಲ್ ಕಂಡಾ, ಧಾರ್ಮಿಕ ಗುರು ಅಸಾರಾಂ ಬಾಪು ಮೊದಲಾದವರ ಪಟ್ಟಿಗೆ ಹೊಸ ಸೇರ್ಪಡೆ ಈ ತೇಜ್‌ಪಾಲ್ ಎಂದು ಎಲ್ಲರೂ ಲೇವಡಿ ಮಾಡುತ್ತಿದ್ದಾರೆ. ಈ ಪ್ರಕರಣದ ಹಿಂದೆಯೇ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶ ಎ.ಕೆ ಗಂಗೂಲಿ ವಿರುದ್ಧವೂ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಒಂದರ ಹಿಂದೆ ಇನ್ನೊಂದು ಎಂಬಂತೆ ಇಂಥಾ ಪ್ರಕರಣಗಳು ಇದೀಗ ಸುದ್ದಿಯಾಗುತ್ತಿದ್ದರೂ ಅದೆಷ್ಟು ಕಚೇರಿಗಳಲ್ಲಿ ಇಂತಹ ತೇಜ್‌ಪಾಲ್‌ಗಳು ಇದ್ದಾರೇನೋ? ಅದೂ ಸಮಾಜದ ನಾಲ್ಕನೇ ಅಂಗ ಎಂದು ಹೇಳಿಕೊಳ್ಳುವ ಮಾಧ್ಯಮರಂಗದಲ್ಲೇ ಇಂಥ ಗೋಮುಖ ವ್ಯಾಘ್ರರಿರುವಾಗ ನಮ್ಮ ಸಮಾಜದ ಸ್ಥಿತಿ ಏನು?
ಲೈಂಗಿಕ ದೌರ್ಜನ್ಯ  ಪ್ರಕರಣಗಳು ಬಯಲಿಗೆ ಬರುವಾಗಲೇ ಸ್ತ್ರೀ ರಕ್ಷಣಾ ಕಾನೂನು ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತದೆ. ಆದಾಗ್ಯೂ,  ಸ್ತ್ರೀಯರ ರಕ್ಷಣೆಗಾಗಿ ಕಾನೂನು ಜಾರಿಗೆ ತಂದ ಮಾತ್ರಕ್ಕೇ ಸ್ತ್ರೀ ರಕ್ಷಣೆ ಮಾಡಿದಂತಾಗುವುದಿಲ್ಲ. ಆಕೆ ಸಶಕ್ತಳಾಗುವುದಿಲ್ಲ. ಸ್ತ್ರೀಯ ರಕ್ಷಣೆ ಮತ್ತು ಸಶಕ್ತೀಕರಣ ಸಮಾಜದಿಂದ ಆಗಬೇಕಾಗಿದೆ. ತೇಜ್‌ಪಾಲ್‌ನಂತಿರುವ ಕಾಮುಕ ಬಾಸ್‌ಗಳ ಮುಖವಾಡ ಕಳಚಬೇಕಾಗಿದೆ.

- ರಶ್ಮಿ ಕಾಸರಗೋಡು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.