ಅಂಕಣಗಳು

ಈ ಸಾಧನೆಯಲ್ಲಿ ಎಲ್ಲರ ಶ್ರಮವೂ ಇದೆ

ಈ ಸಾಧನೆಯಲ್ಲಿ ಎಲ್ಲರ ಶ್ರಮವೂ ಇದೆ
Published On :

ಇತ್ತೀಚೆಗೆ ನಡೆದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಯಶಸ್ವಿ ಫಲಿತಾಂಶಕ್ಕೆ ಬಿಜೆಪಿಯ ಸಾಂಘಿಕ ಪ್ರದರ್ಶನವೇ ಕಾರಣ ಎನ್ನುತ್ತಾರೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್. ಔಟ್‌ಲುಕ್ ಪತ್ರಿಕೆಯ ಪಣಿನಿ ಆನಂದ್‌ರೊಂದಿಗೆ ಮಾತನಾಡುತ್ತಾ ಅವರು, ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿಗೆ ಕೆಲವು ಪ್ರಾದೇಶಿಕ ಪಕ್ಷಗಳು ಮುಂದಾಗಿವೆ ಎಂದು ಹೇಳಿದ್ದಾರೆ. ಆ ಸಂದರ್ಶನದ ಆಯ್ದ ಭಾಗ ಇಲ್ಲಿದೆ...

-ನಾಲ್ಕು ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶವನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?
ದೇಶ ಬದಲಾವಣೆಗಾಗಿ ಹಪಾಹಪಿಸುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ. ಕಾಂಗ್ರೆಸ್‌ನ ಆಡಳಿತದಿಂದ ಮತದಾರರು ನಿರಾಸೆಗೊಂಡಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.   
-ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿಯ ಸಾಧನೆ ಅತ್ಯುತ್ತಮವಾಗಿದೆ. ಛತ್ತೀಸ್‌ಗಡವನ್ನು ಉಳಿಸಿಕೊಳ್ಳಲು ಅದು ಯಶಸ್ವಿಯಾಗಿದೆ. ಇನ್ನು ದೆಹಲಿಯಲ್ಲಿ ಅದಕ್ಕೆ ಬಹುಮತ ಸಿಕ್ಕಿಲ್ಲ.  ಹಾಗಿದ್ದರೆ ರಾಜಸ್ಥಾನವೊಂದನ್ನು ಹೊರತುಪಡಿಸಿ ಮೋದಿ ಅಲೆ ಅಪ್ಪಳಿಸಿರುವುದೆಲ್ಲಿ? ಇನ್ನು ಮಧ್ಯಪ್ರದೇಶದ ವಿಷಯಕ್ಕೆ ಬಂದರೆ ಆ ಗೆಲುವಿನ ಶ್ರೇಯಸ್ಸು ಶಿವರಾಜ್ ಸಿಂಗ್ ಅವರ ಪರಿಶ್ರಮಕ್ಕೇ ಸಲ್ಲಬೇಕು...
ಗೆಲುವಿಗೆ ಒಂದೇ ಅಂಶ ಕಾರಣ ಎಂದು ನಾನು ಹೇಳುವುದಿಲ್ಲ. ಶಿವರಾಜ್ ಸಿಂಗ್, ವಸುಂಧರಾ ರಾಜೆ ಮತ್ತು ಹರ್ಷವರ್ಧನ್ ಅವರ ಜನಪ್ರಿಯತೆಯಿಂದಾಗಿ ಬಿಜೆಪಿಗೆ ಈ ಸಾಧನೆ ಸಾಧ್ಯವಾಗಿದೆ. ಆದರೆ ಮೋದಿಯವರ ಜನಪ್ರಿಯತೆಯೂ ಬಿಜೆಪಿಗೆ ಸಹಕಾರಿಯಾಯಿತು.

-ಹಾಗಿದ್ದರೆ ಈ ರಾಜ್ಯಗಳಲ್ಲಿನ ಸಾಧನೆ ಮತ್ತು ಗೆಲುವಿನ ಶ್ರೇಯಸ್ಸನ್ನು ಕೇವಲ ಒಬ್ಬ ವ್ಯಕ್ತಿಗೆ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದೀರಾ?
ಎಲ್ಲರ ಕೊಡುಗೆಯೂ ಇದೆ ಎಂದು ನಾನು ಹೇಳುತ್ತಿದ್ದೇನೆ. ಕೆಲವು ನಾಯಕರು ರಾಜ್ಯ ಮಟ್ಟದಲ್ಲಿ ಜನಪ್ರಿಯರಾಗಿದ್ದರೆ ಇನ್ನೂ ಕೆಲವರು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಸದ್ಯಕ್ಕಂತೂ, ಬಿಜೆಪಿಯ ಮತ್ತು ಇಡೀ ರಾಷ್ಟ್ರದ ಅತ್ಯಂತ ಜನಪ್ರಿಯ ನಾಯಕರೆಂದರೆ ನರೇಂದ್ರ ಮೋದಿಯೊಬ್ಬರೇ. ಅವರಿಂದಾಗಿ ಬಿಜೆಪಿಗೆ ಲಾಭವಾಗಿದೆ. ಆದಾಗ್ಯೂ ಶಿವರಾಜ್ ಸಿಂಗ್, ರಮಣ್ ಸಿಂಗ್, ವಸುಂಧರಾಜೇ ಮತ್ತು ಇತರ ನಾಯಕರ ಸಾಧನೆಯೂ ಅದ್ಭುತವಾಗಿದೆ. ಈ ಎಲ್ಲಾ ಅಂಶಗಳು ನಮ್ಮ ಗೆಲುವಿನಲ್ಲಿ ಪಾತ್ರವಹಿಸಿವೆ.

-ದೆಹಲಿಯಲ್ಲಿ ಸರ್ಕಾರ ರಚಿಸಲು ಬಿಜೆಪಿಯೇಕೆ ಹೆದರುತ್ತಿದೆ?
ಯಾವುದೇ ರೀತಿಯ ಜೋಡ್-ತೋಡ್(ಮುರಿಯುವ-ಜೋಡಿಸುವ ಕೆಲಸ) ಮಾಡಲು ನಮಗಿಷ್ಟವಿಲ್ಲ. ಒಂದು ವೇಳೆ ನಮಗೆ ಬೆಂಬಲ ನೀಡಬೇಕೆಂದು ಯಾರಿಗಾದರೂ ಅನ್ನಿಸಿತೆಂದರೆ ಅವರೇ ಮುಂದಾಗಬೇಕು. ಬಿಜೆಪಿಯ ನಂತರದ ಸ್ಥಾನ ಆಮ್ ಆದ್ಮಿ ಪಕ್ಷಕ್ಕೆ ದೊರಕಿದೆ. ಬೆಂಬಲ ನೀಡುವ ಜವಾಬ್ದಾರಿ ಆ ಪಕ್ಷಕ್ಕಿದೆ. ಸರ್ಕಾರ ರಚಿಸುವುದಕ್ಕಾಗಿ ಒಂದು ಪಕ್ಷವನ್ನು ಹೋಳು ಮಾಡುವ ಇರಾದೆ ನಮಗಿಲ್ಲ.

-'ಆಪ್‌' ಮುಂದೆ ಬಂದರೆ ಮಾತ್ರ ನೀವು ಅದರ ಜೊತೆ ಸರ್ಕಾರ ರಚಿಸಲು ಮುಂದಾಗುತ್ತೀರಿ ಎಂದಾಯಿತು
ಹೌದು. ಅದೂ ಐದು ವರ್ಷದ ಅವಧಿಯವರೆಗೆ. ನಂಬಿಕೆ ಮತ್ತು ನಿಷ್ಠೆಯ ಮೇಲೆ ನಿಂತಿರುವ ಮೈತ್ರಿ ಅದಾಗಿರಬೇಕು. ಈ ಮೈತ್ರಿಯ ಹಿಂದೆ ಯಾವುದೇ ರಾಜಕೀಯ ಪಿತೂರಿ ಅಥವಾ ತಮ್ಮ ಹಿತಾಸಕ್ತಿಗಾಗಿ ನಮ್ಮನ್ನು ಬಲಿಕೊಡುವ ತಂತ್ರವಿರಬಾರದು. ಈಗ ದೆಹಲಿಯಲ್ಲಿ ನಮಗೆ ಎಲ್ಲಾ ಪಕ್ಷಗಳಿಗಿಂತಲೂ ಅಧಿಕ ಜನಬೆಂಬಲ ಸಿಕ್ಕಿದೆ. ಮರು ಚುನಾವಣೆ ನಡೆಯಿತೆಂದರೆ ಮತದಾರರು ನಮ್ಮನ್ನು ಸ್ಪಷ್ಟ ಬಹುಮತದೊಂದಿಗೆ ಗೆಲ್ಲಿಸುತ್ತಾರೆ ಎನ್ನುವ ನಂಬಿಕೆ ನನಗಿದೆ.

-ಆದರೆ ಈ ಇಡೀ ಪ್ರಯೋಗವನ್ನು ಅರವಿಂದ್ ಕೇಜ್ರಿವಾಲ್ ಮಾಡಿದರಾ?
ಕೇಜ್ರಿವಾಲ್‌ರಿಗೆ ಎಷ್ಟು ಸಾಮರ್ಥ್ಯವಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಕೇವಲ ಭರವಸೆ/ ಆಶ್ವಾಸನೆಗಳಷ್ಟೇ ಅವರಿಂದ ಹೊರಬಂದಿವೆ. ಆದರೆ ಒಡಿಶಾ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರ ಮತ್ತು ದಕ್ಷಿಣ ರಾಜ್ಯಗಳ ಕಥೆಯೇನು? ಪ್ರಬಲ ಪ್ರಾದೇಶಿಕ ಪಕ್ಷಗಳನ್ನು ಬಿಟ್ಟು ಅವರೇಕೆ ನಿಮ್ಮತ್ತ(ಆಪ್) ನೋಡುತ್ತಾರೆ? ಜನತೆಗೆ ಬಿಜೆಪಿಯ ಮೇಲೆ ನಂಬಿಕೆಯಿದೆ. ಪ್ರಾದೇಶಿಕ ಪಕ್ಷಗಳಿಗೆ ತಮ್ಮ ರಾಜ್ಯಗಳಲ್ಲಿ ಸರ್ಕಾರ ರಚಿಸುವುದಕ್ಕೆ ಸಾಧ್ಯವಿದೆಯೇ ಹೊರತು ರಾಷ್ಟ್ರಮಟ್ಟದಲ್ಲಲ್ಲ ಎನ್ನುವುದು ಜನತೆಗೆ ತಿಳಿದಿದೆ. ಹಾಗಾಗೇ, ಲೋಕಸಭಾ ಚುನಾವಣೆಗಳು ಎದುರಾದಾಗ ಅವರು ಆ ರಾಜ್ಯಗಳಲ್ಲೂ ಬಿಜೆಪಿಗೆ ಮತ ನೀಡಲಿದ್ದಾರೆ.   

-ನಿಮ್ಮ ಪ್ರಧಾನಿ ಅಭ್ಯರ್ಥಿಯ ಹೆಸರು ಕೇಳಿ ಕೆಲವು ಪ್ರಾದೇಶಿಕ ಪಕ್ಷಗಳು ನಿಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಲು ಹಿಂದುಮುಂದು ನೋಡುತ್ತಿವೆ...
ನಮ್ಮ ಗುರಿ ಏನಿದ್ದರೂ 272ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವುದು. ಅದನ್ನು ಸಾಧಿಸಲು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಒಂದು ವೇಳೆ ಅಷ್ಟು ಸ್ಥಾನಗಳನ್ನು ಗಳಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂದರೂ ಕೂಡ ಅತಿ ಹೆಚ್ಚು ಸ್ಥಾನ ಪಡೆದ ಪಕ್ಷವಾಗುತ್ತೇವೆ. ಆಗ ಬಹಳಷ್ಟು ಪ್ರಾದೇಶಿಕ ಪಕ್ಷಗಳು ನಮ್ಮೆಡೆಗೆ ಬರುತ್ತವೆ. ಇದರ ಬಗ್ಗೆ ಸರಿಯಾದ ಸಮಯದಲ್ಲಿ ನಾವು ಮಾತನಾಡೋಣ. ಚುನಾವಣೆಗಳ ನಂತರವೂ ಕೆಲವರು ನಮ್ಮ ಜೊತೆಯಾಗಲಿದ್ದಾರೆ ಎನ್ನುವುದು ನಮಗೆ ಗೊತ್ತು. ಹೊರಗಿನಿಂದ ಕಾಣುವುದೇ ಸತ್ಯವಲ್ಲ(ಯಾರೂ ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎನ್ನುವ ವಾದ).

-ಚುನಾವಣಾ ನಂತರ ಒಂದು ವೇಳೆ ಪ್ರಾದೇಶಿಕ ಪಕ್ಷಗಳೇನಾದರೂ ನಿಮ್ಮ ಪ್ರಧಾನಿ ಅಭ್ಯರ್ಥಿಯನ್ನು ಬದಲಿಸಿ ಎಂದು ಪಟ್ಟುಹಿಡಿದರೆ?
ಹಾಗಾಗಲು ಸಾಧ್ಯವೇ ಇಲ್ಲ. ನಾವು ಸರಿಯಾಗಿ ಯೋಚಿಸಿಯೇ ನರೇಂದ್ರ ಮೋದಿಯವರನ್ನು ಆ ಸ್ಥಾನದಲ್ಲಿ ನಿಲ್ಲಿಸಿದ್ದೇವೆ. ಈ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ.

-ಅಲ್ಲ, ಅಕಸ್ಮಾತ್ ಅವುಗಳು 'ನಮಗೆ ಮೋದಿ ಬೇಡ, ರಾಜನಾಥ್ ಸಿಂಗ್ ಬೇಕು' ಎಂದು ಹೇಳಿದರೆ ಏನು ಮಾಡುತ್ತೀರಿ ಅಂತ?!
ಆಗಲೇ ಹೇಳಿದೆನಲ್ಲ, ಯಾವುದೇ ಕಾರಣಕ್ಕೂ ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ.

-ಅಟಲ್ ಬಿಹಾರಿ ವಾಜಪೇಯಿಯವರು ಹಲವಾರು ಬಲಪಂಥೀಯ ವಿಚಾರಗಳ ಕುರಿತು ತಾಳಿದ್ದ ಪ್ರಗತಿಪರ ನಿಲುವನ್ನು ಈಗ ತ್ಯಜಿಸಿರುವ ಬಿಜೆಪಿ, ಕಟ್ಟರ್ ಹಿಂದುತ್ವಕ್ಕೆ ಅಂಟಿಕೊಂಡಿದೆಯಲ್ಲ?
ನೋಡಿ, ಕಟ್ಟರ್ ಹಿಂದುತ್ವ, ಮೃದು ಹಿಂದುತ್ವ ಎಂಬ ಪದ ಬಳಕೆಯೇ ಸರಿಯಲ್ಲ. ಸುಪ್ರೀಂ ಕೋರ್ಟ್ ಕೂಡ ಹಿಂದುತ್ವ
ಬದುಕಿನ ಮಾರ್ಗ ಎಂದು ಹೇಳಿದೆ.

-ಆದರೆ ಮೋದಿ ಕಟ್ಟರ್‌ವಾದಿ. ನೀವು, ನಿತಿನ್ ಗಡ್ಕರಿ ಮತ್ತು ಹರ್ಷವರ್ಧನ್ ಆರ್‌ಎಸ್‌ಎಸ್‌ಗೆ ಆಪ್ತರು. ನಿಮ್ಮ ಪಕ್ಷವೇ ಅಲ್ಲವೇ ರಾಮಮಂದಿರ, ವಸ್ತ್ರಸಂಹಿತೆ ಇನ್ನಿತರ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದು...?
ನಾವು ಎಂದಿಗೂ ನಮ್ಮ ಸಿದ್ಧಾಂತವನ್ನು ಬಿಟ್ಟಿಲ್ಲ. ರಾಮ ಮಂದಿರದ ವಿಷಯಕ್ಕೆ ಬಂದರೆ, ಭಾರತದ ಯಾವುದೇ ಹಿಂದುವನ್ನು ಕೇಳಿನೋಡಿ, ರಾಮ, ಕೃಷ್ಣ ಮತ್ತು ಶಿವನ ಮಂದಿರಗಳು ಆ ದೇವರುಗಳ ಜನ್ಮಸ್ಥಾನದಲ್ಲಿಯೇ ಇರಬೇಕು ಎಂದು ಅವರು ಬಯಸುತ್ತಾರೆ. ಅದರಂತೆಯೇ ಒಬ್ಬ ಮುಸಲ್ಮಾನ ಮಸೀದಿ ಬೇಕೆನ್ನುತ್ತಾನೆ, ಕ್ರಿಶ್ಚಿಯನ್ ಚರ್ಚಿಗಾಗಿ ಆಶಿಸುತ್ತಾನೆ. ಹಾಗಾಗೇ ಹಿಂದು ಸಮಾಜ ಅಲ್ಲೊಂದು(ಅಯೋಧ್ಯೆ) ರಾಮಮಂದಿರವಿರಬೇಕೆಂದು ಬಯಸುತ್ತಿದೆಯೆಂದರೆ, ಎಲ್ಲರೂ ಇದನ್ನು ಉದಾರ ದೃಷ್ಟಿಯಿಂದ ನೋಡಬೇಕೆಂದು ನಾನು ಬಯಸುತ್ತೇನೆ. ಇದಷ್ಟೇ ಅಲ್ಲ ಒಂದು ವೇಳೆ ಯಾರಾದರೂ ಮಸೀದಿ ಅಥವಾ ಯಾವುದೇ ಧಾರ್ಮಿಕ ಸ್ಥಳವನ್ನು  ಕೆಡವಲು ಮುಂದಾದರೆ ಮಸೀದಿಯ ರಕ್ಷಣೆ ಹಾಗೂ ಭದ್ರತೆಗೆ ನಮ್ಮ ಪಕ್ಷ ಮುಂದಾಗುತ್ತದೆ.

-1990ರ ರಾಮ ಮಂದಿರ ಆಂದೋಲನದ ವೇಳೆ ನಿಮ್ಮ ಘೋಷಣೆಗಳಲ್ಲಿ ಮಥುರಾ ಮತ್ತು ಕಾಶಿಯೂ ಇದ್ದವಲ್ಲ?
ನಾನು ನಿಮ್ಮ ಮಾತನ್ನು ಒಪ್ಪುವುದಿಲ್ಲ. ಆ ಆಂದೋಲನವನ್ನು ಬೇರೆ  ಯವರು ನಡೆಸಿದ್ದರು. ನಾವೆಂದೂ ಅಂತ ಘೋಷಣೆಯನ್ನು ಮಾಡಿಲ್ಲ. ಯಾವುದೇ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಲು ನಾವು ಇಚ್ಛಿಸುತ್ತೇವೆ. ಭಾರತೀಯ ಸಂಸ್ಕೃತಿಯಲ್ಲಿ ಉಗ್ರಗಾಮಿತ್ವಕ್ಕೆ ಸ್ಥಾನವಿಲ್ಲ. ನಾವು ಅತ್ಯಂತ ಉದಾರವಾದಿಗಳು. ವಿಷ ಸರ್ಪಕ್ಕೂ ಪ್ರತಿ ವರ್ಷ ಹಾಲೆರೆದು, ಪೂಜಿಸುವ ಸಂಸ್ಕೃತಿ ನಮ್ಮದು ಎನ್ನುವುದನ್ನು ಮರೆಯದಿರಿ.

-ನಿಮ್ಮನ್ನೂ ಒಳಗೊಂಡಂತೆ ಅನೇಕ ಹಿರಿಯ ನಾಯಕರನ್ನು ಹುಟ್ಟುಹಾಕಿರುವ ರಾಜ್ಯದ ಉಸ್ತುವಾರಿಯನ್ನು ಅಮಿತ್ ಶಾ ಅವರಿಗೆ  ಕೊಟ್ಟದ್ದೇಕೆ? ಅವರ ವಿರುದ್ಧ ಅಷ್ಟೊಂದು ಆರೋಪಗಳು ಇವೆಯಲ್ಲ?
ಗುಜರಾತ್‌ನಲ್ಲಿ ಅವರ ಸಂಘಟನಾ ಸಾಮರ್ಥ್ಯವನ್ನು ನಾವು ನೋಡಿದ್ದೇವೆ. ಬಿಜೆಪಿಯ ಸಿದ್ಧಾಂತಕ್ಕೆ ಅಂಟಿಕೊಂಡಿರುವ ವ್ಯಕ್ತಿಯೊಬ್ಬ ಇನ್ನೊಬ್ಬರಿಗೆ ಹಾನಿ ಮಾಡಲಾರ ಎನ್ನುವುದಂತೂ ಸತ್ಯ. ಅವರ ಮೇಲಿನ ಆರೋಪಗಳೇನಿದ್ದರೂ ನ್ಯಾಯಾಲಯದಲ್ಲಿವೆ. ನ್ಯಾಯಾಲಯವೇ ಎಲ್ಲವನ್ನೂ ನಿರ್ಧರಿಸಲಿದೆ.

-ಆಮ್ ಆದ್ಮಿ ಪಕ್ಷ ಲೋಕಸಭಾ ಚುನಾವಣೆಗಳಿಗೆ ಸಿದ್ಧತೆ ನಡೆಸಿದೆ. ಅವರನ್ನು ಸ್ವಾಗತಿಸುತ್ತೀರಾ?
ನನಗೇನೂ ತೊಂದರೆಯಿಲ್ಲ. ನಮ್ಮದು ಅನೇಕ ಪಕ್ಷಗಳ ಪ್ರಜಾಪ್ರಭುತ್ವ. ಸ್ಪರ್ಧಿಸಲಿ ಬಿಡಿ.

-ಅರವಿಂದ್ ಕೇಜ್ರಿವಾಲ್ ವಾಸಿಸುತ್ತಿರುವುದು ಗಾಝಿಯಾಬಾದ್‌ನಲ್ಲಿ. ನೀವು ಆ ಕ್ಷೇತ್ರದಿಂದಲೇ ಸಂಸತ್ ಸದಸ್ಯರಾಗಿದ್ದೀರಿ. ಒಂದು ವೇಳೆ ಕೇಜ್ರಿವಾಲ್ ನಿಮ್ಮ ವಿರುದ್ಧ ಸ್ಪರ್ಧಿಸಿದರೆ?
ಯಾರು ಬೇಕಾದರೂ, ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದು. ಎಲ್ಲರಿಗೂ ಸ್ಪರ್ಧಿಸುವ ಹಕ್ಕಿದೆ.

-ಈಗಲೂ ನಿಮ್ಮ ಪಕ್ಷದಲ್ಲಿ ಕೆಲವು ಹಿರಿಯ ನಾಯಕರು ನಿರಾಶೆಯಿಂದಿದ್ದಾರೆ...
ನೋಡಿ, ಒಂದು ದೊಡ್ಡ ಕುಟುಂಬದಲ್ಲಿ ಕೆಲವೊಮ್ಮೆ, ಕೆಲವರಿಗೆ, ಕೆಲವು ವಿಷಯಗಳ ಬಗ್ಗೆ ಅಸಮಾಧಾನ ಉಂಟಾಗುವುದು ಸಹಜ. ಇನ್ನು ಬಿಜೆಪಿಯೂ ಇಂಥ ಒಂದು ದೊಡ್ಡ ಕುಟುಂಬವೇ. ಆದರೂ ಒಂದು ವಿಷಯ ಗಮನಿಸಿ- ಅಸ್ತಿತ್ವಕ್ಕೆ ಬಂದಾಗಿನಿಂದ ಇದುವರೆಗೂ ಹೋಳಾಗದ ರಾಷ್ಟ್ರೀಯ ಪಕ್ಷವೆಂದರೆ ಬಿಜೆಪಿಯೊಂದೇ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.