ಅಂಕಣಗಳು

ಅವಿವೇಕತನದ ಅಡಕತ್ತರಿಯಲ್ಲಿ ಅಡಕೆ

Published On :

ಕೇಂದ್ರ ಸರ್ಕಾರವು ಅಡಿಕೆ ಬೆಳೆಯನ್ನು ನಿಷೇಧಿಸುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿದೆಯೆಂಬ ಸುದ್ದಿ ಅಡಿಕೆಯ ಮೇಲೆ ಅವಲಂಬಿತವಾಗಿರುವ ಜನರನ್ನು ಆತಂಕಕ್ಕೆ ದೂಡಿದೆ. ನೂರಾರು ವರ್ಷಗಳಿಂದ ಜನರ ಬದುಕಿನ ಅವಿಭಾಜ್ಯ ಅಂಗ ಹಾಗೂ ಆಸರೆಯೂ ಆಗಿರುವ ಅಡಿಕೆಯನ್ನು ನಿಷೇಧಿಸಲು ಹೊರಡುವುದು ಅತ್ಯಂತ ಅವಿವೇಕದ ನಿರ್ಧಾರವಾಗಬಲ್ಲದು.
ಅಡಿಕೆಯು ನೂರಾರು ವರ್ಷಗಳಿಂದ ಜನರ ಜೀವನದಲ್ಲಿ ಹಾಸು ಹೊಕ್ಕಿರುವ ವಸ್ತುಗಳಲ್ಲಿ ಒಂದು ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದು. ಜನಸಾಮಾನ್ಯರ ಬದುಕಿನಲ್ಲಿ, ಸಂಪ್ರದಾಯಗಳಲ್ಲಿ, ಜನಪದದಲ್ಲಿ ಅಡಿಕೆ ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಂಡಿದೆ.
ಇನ್ನು ವ್ಯಾವಹಾರಿಕವಾಗಿ ನೋಡುವುದಾದರೆ ಸುಮಾರು ಆರು ಲಕ್ಷ ಎಕರೆಗಳಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತದೆ. ಇದನ್ನೇ ನೆಚ್ಚಿಕೊಂಡ ಲಕ್ಷಾಂತರ ರೈತ ಕುಟುಂಬಗಳಿವೆ. ಶಿವಮೊಗ್ಗದ ಆರ್ಥಿಕತೆಯ ಬೆನ್ನೆಲುಬಾಗಿರುವ ಅಡಿಕೆ ಮಂಡಿಗಳು ಇಡೀ ಜಗತ್ತಿನಲ್ಲಿಯೇ ಅತಿ ದೊಡ್ಡವು. ವಿಶ್ವದ ಬೇರೆಡೆಯಲ್ಲಿಯೂ ಹೀಗೆ ಅಡಿಕೆಯ ವಹಿವಾಟು ಒಂದೇ ಜಾಗದಲ್ಲಿ ನಡೆಯುವುದಿಲ್ಲ. ಐನೂರಕ್ಕೂ ಹೆಚ್ಚಿನ ಮಂಡಿಗಳಿದ್ದು ಸಾವಿರಾರು ಕೋಟಿ ರುಪಾಯಿಗಳ ವಹಿವಾಟು ನಡೆಯುತ್ತಿದೆ. ಇಲ್ಲಿನ ಮಂಡಿಗಳು ಬರೇ ಸೆಸ್ ರೂಪದಲ್ಲಿ ಸರ್ಕಾರಕ್ಕೆ ಕಟ್ಟುವ ಹಣವೇ ವಾರ್ಷಿಕ ಸುಮಾರು ಹದಿನೈದು ಕೋಟಿಯಷ್ಟಿದೆ. ಇಲ್ಲಿ ಸುಮಾರು ಒಂದೂವರೆ ಸಾವಿರ ಜನಗಳಿಗೆ ನೇರ ಉದ್ಯೋಗವಿದ್ದು ಇನ್ನು ಈ ಮಂಡಿಗಳಲ್ಲಿ ಮೂಟೆ ಹೊರುವ, ಅಡಿಕೆ ಆರಿಸುವ, ಸಾಗಾಟ ಮಾಡುವ ಸಾವಿರಾರು ಕಾರ್ಮಿಕರಿದ್ದಾರೆ. ಅಡಿಕೆ ಕೊಯ್ಲು ಮಾಡುವ, ಉದುರು ಮಾಡುವ, ಸುಲಿಯುವ, ಬೇಯಿಸುವ, ಒಣಗಿಸುವ, ಸಂಸ್ಕರಣೆ ಮಾಡುವ ಕೆಲಸದಲ್ಲಿ ತೊಡಗಿರುವವರ ಸಂಖ್ಯೆಯೂ ತುಂಬಾ ದೊಡ್ಡದಿದೆ. ಬೆಳೆಯುವವರಿಂದ ಹಿಡಿದು ಸಂಸ್ಕರಿಸಿ ಅಂಗಡಿಗಳಲ್ಲಿ ಮಾರುವವರೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಜನರು ಇದರಿಂದಲೇ ಬದುಕುತ್ತಿದ್ದಾರೆ.
ಅಡಿಕೆಗೆ ಔಷಧೀಯ ಗುಣಗಳೂ ಇದ್ದು, ಜ್ವರ, ಅಜೀರ್ಣ, ಕೀಲುನೋವು, ಗಂಟಲು ಬೇನೆ ಮೊದಲಾದ ತೊಂದರೆಗಳಿಗೆ ಔಷಧವನ್ನು ತಯಾರಿಸಲಾಗುತ್ತಿದೆ. ಅಡಿಕೆಯು ಹಾನಿಕಾರಕ ಎಂಬುದಕ್ಕೆ ಯಾವುದೇ ಸರಿಯಾದ ಪುರಾವೆಯಿಲ್ಲದಿದ್ದರೂ ಕೇಂದ್ರ ಸರ್ಕಾರದ ಏಕಾಎಕಿ ನಿರ್ಧಾರ ಇದನ್ನೇ ನಂಬಿಕೊಂಡಿರುವವರನ್ನು ಕಂಗಾಲಾಗಿಸಿದೆ. ಅದರಲ್ಲೂ ಈ ವರ್ಷ ಅಡಿಕೆಗೆ ಇದುವರೆಗೂ ಬಂದಿರದ ಅತಿ ಹೆಚ್ಚು ಬೆಲೆ ಬಂದಿದೆ. ಕ್ವಿಂಟಾಲಿಗೆ ಸುಮಾರು ಮೂವತ್ತೈದು ಸಾವಿರದಷ್ಟು ಧಾರಣೆ ಕಂಡಿದ್ದು ದಾಖಲೆಯ ಬೆಲೆ ಇದಾಗಿದೆ ಮತ್ತು ಧಾರಣೆಯು ಸ್ಥಿರವಾಗಿ ನಿಂತಿರುವುದು ಗುಟ್ಕಾ ನಿಷೇಧದ ನಡುವೆಯೂ ಸಹ ರೈತರ ಸಂತಸಕ್ಕೆ ಕಾರಣವಾಗಿತ್ತು. ಕೇಂದ್ರ ಸರ್ಕಾರದ ಈ ನಡೆಯ ಹಿಂದೆ ಸಿಗರೇಟು ಕಂಪನಿಗಳ ಲಾಬಿ ಕೆಲಸ ಮಾಡುತ್ತಿದೆ ಎನ್ನುವ ಚರ್ಚೆಗಳೂ ಏಳುತ್ತಿವೆ. ಅದಿರಲಿ, ಹೀಗೆ ಒಂದು ಪ್ರಸ್ತಾವನೆಯನ್ನು  ನ್ಯಾಯಾಲಯಕ್ಕೆ ಕಳುಹಿಸುವಾಗ ಕನಿಷ್ಠಪಕ್ಷ ಅಡಿಕೆ ಬೆಳೆಯುವ ಪ್ರದೇಶಗಳ ಜನಪ್ರತಿನಿಧಿಗಳ ಅಭಿಪ್ರಾಯವನ್ನೂ ಕೇಳದೆ ತಮ್ಮ ಮೂಗಿನ ನೇರಕ್ಕೆ ತೀರ್ಮಾನಿಸುವುದು ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ಸರ್ಕಾರಕ್ಕೆ ಶೋಭೆ ತರುವಂತದಲ್ಲ. ದೇಶದ ಒಂದು ಭಾಗದ ಲಕ್ಷಾಂತರ ಜನರ ಆರ್ಥಿಕತೆಗೆ ಭಾರೀ ಹೊಡೆತ ಕೊಡಬಲ್ಲ ಈ ನಡೆಯನ್ನು ನೋಡಿದಾಗ, ಮತ್ತದೇ ಅತಿ ಕೇಂದ್ರೀಕೃತ ಆಡಳಿತ ವ್ಯವಸ್ಥೆಗಳು ಇಂತಹ ತಪ್ಪು ನಿರ್ಧಾರಗಳಿಗೆ ಪದೇ ಪದೆ ಕಾರಣವಾಗುತ್ತದೆ ಎಂದೇ ಭಾಸವಾಗುತ್ತದೆ. ಅಡಿಕೆ ನಿಷೇಧದ ನಿರ್ಧಾರದ ಸರಿ ತಪ್ಪುಗಳ ಪ್ರಶ್ನೆ ಒಂದೆಡೆಯಾದರೆ, ಸ್ಥಳೀಯವಾದ ಇಂತಹ ನಿರ್ಧಾರವನ್ನು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಯಾರೋ ಒಬ್ಬರು ನಿರ್ಧರಿಸಬಹುದಾದ ಇಂತಹ ಪ್ರಜಾತಂತ್ರ ವಿರೋಧಿ ಆಡಳಿತ ವ್ಯವಸ್ಥೆಯ ಅಂಕುಡೊಂಕುಗಳನ್ನು ನಾವು ಪ್ರಶ್ನೆ ಮಾಡಬೇಕಿದೆ.
ಕರ್ನಾಟಕ ಸರ್ಕಾರ ದೆಹಲಿಯಲ್ಲಿ ತಮ್ಮದೇ ಸರ್ಕಾರವಿರುವುದರಿಂದ ಹೈಕಮಾಂಡಿಗೆ ಹೇಗಪ್ಪ ಹೇಳುವುದು, ಅಂತ ಕೈಕಟ್ಟಿ ಕೂರದೇ ಈ ವಿಷಯದಲ್ಲಿ ಕನ್ನಡ ನಾಡಿನ ಅಡಿಕೆ ರೈತರ ಹಿತ ಕಾಯಲು ಏನಾಗಬೇಕೋ ಅದೆಲ್ಲವನ್ನು ಮಾಡಬೇಕು. ಈ ವಿಷಯದಲ್ಲಿ ಪಕ್ಷಾತೀತವಾಗಿ ದನಿ ಎತ್ತುವುದರ ಮೂಲಕ ಕರ್ನಾಟಕದ ವಿಷಯ ಬಂದಾಗ ಕರ್ನಾಟಕ ಕೇಂದ್ರಿತ ರಾಜಕಾರಣ ಮಾಡುವ ಸಂಪ್ರದಾಯಕ್ಕೆ ಎಲ್ಲ ಪಕ್ಷಗಳು ಮುಂದಾಗಲಿ.
 
- ಗಿರೀಶ್ ಕಾರ್ಗದ್ದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.