ಅಂಕಣಗಳು

ಸಂಜಯ್‌ಗೇಕೆ ಸುಳ್ಳೆ ಕಣ್ಣೀರು?

Published On :

21 ನವೆಂಬರ್ 2012ರಂದು ಅಜ್ಮಲ್ ಕಸಬ್‌ನನ್ನು ನೇಣಿಗೇರಿಸಲಾಯಿತು. ಕೆಲ ಜಾತ್ಯತೀತವಾದಿಗಳು ತಮ್ಮ ಅಸಹನೆಯನ್ನು ತೋರಲು ಆರಂಭಿಸಿದರು. ಅದೃಷ್ಟವಶಾತ್ ಈ ಅಸಹನೆ ಸಂಘಟಿತ ರೂಪದಲ್ಲಿ ನಡೆಯಲಿಲ್ಲ. ಆತನಿಗೆ Fair Trial ಆಗಲೇ ಇಲ್ಲ ಎಂಬ ಅಳಲಿನಿಂದ ಆರಂಭಗೊಂಡು, ಮುಸಲ್ಮಾನರಿಗೆ ನ್ಯಾಯವೇ ಇಲ್ಲ... ನಮ್ಮ ದೇಶ, ದೇಶದ ನ್ಯಾಯಾಲಯ ವ್ಯವಸ್ಥೆ ಬಗ್ಗೆ ಮನಬಂದಂತೆ ದೂರಿದರು. ನ್ಯಾಯಾಲಯದ ಈ ತೀರ್ಪುಗಳನ್ನು, ಸರ್ಕಾರದ ನಿಲುವನ್ನು ಸ್ವಾಗತಿಸಿ ಶ್ಲಾಘಿಸಿದ ರಾಷ್ಟ್ರೀಯವಾದಿ ಚಿಂತಕರನ್ನು  Secular ಶಕ್ತಿಗಳು ಅಪಹಾಸ್ಯ ಮಾಡಿದರು. ಹೌದಾ? ನಿಜವಾಗಿಯೂ ನಮಗೆ ರಾಷ್ಟ್ರೀಯ ಚಿಂತನೆ ಇಲ್ಲವೇ, ನಾವೆಲ್ಲರೂ ಕೋಮುವಾದಿಗಳೇ ಎಂದು ಅವಲೋಕನ ಮಾಡಿಕೊಳ್ಳುವ ಅಗತ್ಯ ಇಲ್ಲದಿದ್ದರೂ, Secularists ಗೋಸ್ಕರ ನಿಲುವನ್ನು ಪರಾಂಬರಿಸಿಕೊಂಡು ಸಮರ್ಥಿಸಿಕೊಳ್ಳುವಲ್ಲಿ ಸಂಜಯ ದತ್ತನ ತೀರ್ಪು ಹೊರಬಿದ್ದಿದೆ. ಸಂಜಯ್‌ದತ್ ತಪ್ಪು ಮಾಡಿದ್ದು ತಿಳಿದೋ ತಿಳಿಯದೆಯೋ ಮತ್ತೊಂದು ವರ್ಗ ಅವನ ಪರವಾಗಿ ನಿಂತಿದೆ. ಸಂಜಯದತ್ ನಮ್ಮ ಸ್ನೇಹಿತ, ಅವನಷ್ಟು ಸಾಚಾ ಮತ್ಯಾರೂ ಇರಲು ಸಾಧ್ಯವಿಲ್ಲ.., ಅವನಿಗೆ ಇಂತಹ ಅನ್ಯಾಯ ಆಗಿದ್ದಕ್ಕೆ ನಮ್ಮ ತೀವ್ರ ವಿರೋಧವಿದೆ... ಅಂತೆಲ್ಲಾ ಬೊಬ್ಬೆ ಇಡಲಾರಂಭಿಸಿದ್ದಾರೆ. ರಾಷ್ಟ್ರೀಯವಾದಿಗಳಿಗೆ ಸಂಜಯ್‌ದತ್ ಹಿಂದುವಾ ಮುಸ್ಲಿಮನಾ ಬೇಕಾಗಿರಲಿಲ್ಲ. ಸಂಜಯ್ ಕೃತ್ಯ ದೇಶಕ್ಕೆ ಮಾರಕವಾಗಿದೆ ಎಂದು ಅರ್ಥ ಮಾಡಿಕೊಂಡಿದ್ದಾರೆ. ಸಂಜಯ್ ನಿರತಗೊಂಡಿದ್ದ ಕಾರ್ಯ ಗಂಭೀರವಾದದ್ದು ಹಾಗೂ ಅಕ್ಷಮ್ಯ ಎಂದು ರಾಷ್ಟ್ರೀಯವಾದಿಗಳು ಸಮರ್ಥಿಸಿ, ಇಂತಹ ಆರೋಪಿಗೆ ಶಿಕ್ಷೆ ಆಗಲೇಬೇಕೆಂದು ಪ್ರತಿಪಾದಿಸುತ್ತಿದ್ದಾರೆ.
ಆದರೆ ಈ ಪ್ರಕರಣಕ್ಕೆ ಒಂದು ಜಾತಿಯ ರಂಗು ಮತ್ತೆ ಬರತೊಡಗಿದೆ. ಕೆಲವರು ಅವನ ತಾಯಿ ಮುಸ್ಲಿಮಳೆಂದು ಅವನಿಗೆ ಈ ಅನ್ಯಾಯ ಎಂದು ಬಿಟ್ಟರು. ಮತ್ತೆ ಕೆಲವರು ಅವನು ಮನ್ಯತಾ (ದಿಲ್‌ನವಾಜ್ ಶೇಖ್) ನ ಮದುವೆ ಆಗಿದ್ದಕ್ಕೆ ಇಂತಹ ತೊಂದರೆಗಳು ಎಂದು ಸಾಂತ್ವನ ಹೇಳಿದರು. ಆದರೆ ಸಂಜಯ್‌ದತ್ ತೊಡಗಿಸಿಕೊಂಡಿದ್ದ ದುಷ್ಟ ಚಟುವಟಿಕೆಗಳನ್ನು ಬಹುತೇಕ ಎಲ್ಲರೂ ಮರೆತು ಬಿಟ್ಟರೇ? ಕಾಯ್ದೆಗೆ ವಿರುದ್ಧವಾಗಿ ಸಂಜಯ್‌ದತ್ ಅಕ್ರಮವಾಗಿ ಸಂಗ್ರಹಿಸಿದ್ದ ಶಸ್ತ್ರಾಸ್ತ್ರಗಳನ್ನು ಎಲ್ಲರೂ ಮರೆತು ಬಿಟ್ಟಿದ್ದೇಕೆ? ಅದು ದೇಶಕ್ಕೆ ಮಾರಕವಾಗಿದ್ದನ್ನು ಮರೆತು ಬಿಟ್ಟಿದ್ದೇಕೆ. ಜಾಣತನದಿಂದ ಎಲ್ಲಾ ಆರೋಪಗಳನ್ನು ಮರೆತು ಇವರಿಗೆ ಬೇಕಾದ ಹಾಗೆ ನ್ಯಾಯ ಬದಲಿಸಿಕೊಳ್ಳುವುದು ಯಾವ ರೀತಿಯ ಸದಾಚಾರ. ಆದರೆ ಹಿಂದೊಮ್ಮೆ ಸಂಜಯ್‌ದತ್ ಸ್ವತಃ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆ- 'ನನ್ನಲ್ಲಿ ಹರಿಯುತ್ತಿರುವ ಮುಸ್ಲಿಮ್ ರಕ್ತ ಇಂತಹ ಚಟುವಟಿಕೆಗೆ ಮುಂದು ಮಾಡಿದೆ' ಎಂದು ಹೇಳಿದ್ದನ್ನೂ ನಾವು ಮರೆತು ಬಿಟ್ಟಿದ್ದೇವೆ.
ಸಲ್ಮಾನ್‌ಖಾನ್ ತನ್ನ ಮೇಲಿನ ಎಲ್ಲಾ ಕೇಸ್‌ಗಳೂ ಬಿದ್ದು ಹೋದ ಮೇಲೆ ಮದುವೆಯಾಗುತ್ತೇನೆಂದು ಹೇಳಿದ್ದಾನೆ.  ಹಾಗಾದರೆ ಮುಂದೆ ಸಲ್ಮಾನ್‌ಗೆ ಕೋರ್ಟ್ ಕೃಷ್ಣಮೃಗ ಬೇಟೆಯ ವಿಷಯವಾಗಿ ಶಿಕ್ಷಿಸಿದರೆ/ಜೈಲುವಾಸ ವಿಧಿಸಿದರೆ (ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇರುವುದರಿಂದ ಇದರ ಬಗ್ಗೆ ಮಾತನಾಡುವುದು  Subjudice ಆಗುತ್ತದೆ). ಪುನಃ ಇಂತಹದ್ದೇ ಸಂಘಟಿಸುವಿಕೆ ನಡೆಯುವುದೇ? ಪಾಪ ಅವನಿಗಿನ್ನೂ ಮದುವೆ ಆಗಿಲ್ಲ ಅವನನ್ನು ಬಿಟ್ಟು ಬಿಡಬೇಕಿತ್ತು; ಅವನ ವಿವಾಹದ ಕನಸನ್ನು ಭಂಗಗೊಳಿಸಿದ್ದು ತಪ್ಪೆಂದು ಅವನು ಮಾಡಿದ ತಪ್ಪನ್ನು ಸಂಪೂರ್ಣವಾಗಿ ಮರೆತು ಬಿಡಲು ಕರೆ ಬರುತ್ತದೆಂದು ತೋರುತ್ತದೆ. ಹಾಗೆ ನೋಡಿದರೆ ಜೈಲುಗಳಲ್ಲಿ ಕೈದಿಯ ನಡತೆ ಚೆನ್ನಾಗಿದ್ದರೆ ಅವನಿಗೆ ಪ್ರಾಯಶ್ಚಿತ್ತವಾಗಿರಬಹುದೆಂದು ಪರಿಗಣಿಸಿ ಅವನ ಶಿಕ್ಷೆಯನ್ನು ಇಳಿಕೆ ಮಾಡುತ್ತದೆ. ಆದರೆ ತಮಾಷೆಯೆಂದರೆ, ತಪ್ಪು ಮಾಡಿ ನ್ಯಾಯಾಲಯಕ್ಕೆ ಓಡಾಡುವ ಸಮಯದಲ್ಲಿ, ಬೇಲ್ ಪಡೆದು ಸಮಾಜ ಸೇವೆ ಮಾಡಿದರೆ ಅವನಿಗೆ ಕ್ಷಮೆ ಆಗಬೇಕು ಅವನ ಮೇಲಿನ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಬೇಕು ಎಂದು ಕೇಳಿಕೊಳ್ಳುವುದು ಸಮಂಜಸವಲ್ಲ. ಮನುಷ್ಯನ ತಪ್ಪನ್ನು ಶಿಕ್ಷಿಸುವಂತಿಲ್ಲ ಎಂದಾದರೆ ಸಂಜಯ್‌ದತ್‌ನ ಪರವಾಗಿ ನಿಂತ ಇದೇ ಬಾಲಿವುಡ್‌ನ ಮಂದಿ ಇತರೆ ಕೈದಿಗಳ ಪರವಾಗಿಯೂ  ನಿಲ್ಲುತ್ತಾರೆಯೇ?
ಬಾಲಿವುಡ್‌ಮಂದಿ ಹೀಗೆ ಹೇಳಿದ್ದರಲ್ಲೂ ತಮ್ಮ ಸ್ನೇಹಿತ, ಮಿತ್ರನ ಬಗ್ಗೆ ಇದ್ದ ಕಾಳಜಿ ಎಂದು ಸುಮ್ಮನಾಗಬಹುದು. ಆದರೆ  Press Council of India ಅಧ್ಯಕ್ಷ ಮಾರ್ಕಂಡೇಯ ಕಟ್ಜು ಸ್ವತಃ ನಿವೃತ್ತ ನ್ಯಾಯಾಧೀಶರು ರಾಜ್ಯಪಾಲರ ಬಳಿ ಅಪೀಲ್ ಹೋಗುತ್ತೇನೆ, ಸಂಜಯ್ ದತ್‌ಗೆ ನ್ಯಾಯ ಒದಗಿಸುತ್ತೇನೆ ಎಂದು ಹೇಳುತ್ತಾರಲ್ಲಾ... ಇವರಿಗೆ Ethics ಇದೆಯಾ ಎಂಬ ಪ್ರಶ್ನೆ ಕಾಡುತ್ತದೆ. ಕೋರ್ಟ್ ಕೆಲಸಗಳು ಮಂದಗತಿಯಲ್ಲಿ ಸಾಗುತ್ತೆ, ಒಂದು ಕೇಸ್ ಬಗೆಹರಿಸುವುದಕ್ಕೆ ಇವರಿಗೆ 20 ವರ್ಷ ಬೇಕಾಯ್ತು ಎಂದೆಲ್ಲಾ ಪ್ರಶ್ನೆ ಇವರದ್ದಾದರೆ ಒಂದು ನೇರ ಪ್ರಶ್ನೆ ಸಂಜಯ್‌ದತ್ ಅಭಿಮಾನಿಗಳಿಗೆ, ಬಾಲಿವುಡ್ ಮಂದಿಗೆ. ಸಂಜಯ್‌ದತ್ ಕೋರ್ಟ್‌ನಲ್ಲಿ ಒಮ್ಮೆಯೂ adjournment ತೆಗೆದುಕೊಳ್ಳಲೇ ಇಲ್ಲವೇ? Court Hearing  ಇದ್ದಾಗಲೆಲ್ಲಾ ನೆಪ ಒಡ್ಡುತ್ತಾ ತಪ್ಪಿಸಿಕೊಳ್ಳುತ್ತಿದ್ದ ಸಂಜಯ್ ಈಗ ಬಹಳ ಬಳಲಿದ್ದಾನೆ, ಕಷ್ಟ ಅನುಭವಿಸಿದ್ದಾನೆ ಎಂಬ ಕಾರಣಗಳನ್ನು ನೀಡಿ ಅವನಿಗೆ ಕ್ಷಮೆ ತೋರಬೇಕೆಂದು ಬೇಡಿಕೊಳ್ಳುವುದು ಎಷ್ಟು ಸರಿ? ಹಾಗಾದ ಪಕ್ಷದಲ್ಲಿ, ಪ್ರತಿ ಕೈದಿಯೂ ತನ್ನ ಸ್ವಾರ್ಥ ಸಾಧನೆಗಾಗಿ ಕೊಲೆ, ದರೋಡೆ, ಲೂಟಿ ಮಾಡಿ ನಂತರ ಸಮಾಜಮುಖಿ ಕಾರ್ಯದಲ್ಲಿ ಭಾಗವಹಿಸಿದ್ದಲ್ಲಿ ಅವನನ್ನು ಆರೋಪ ಮುಕ್ತನೆಂದು ನಿರ್ಧರಿಸಬೇಕೆ? ಆರೋಪಿಗೆ ಶಿಕ್ಷೆ ಆಗದೆ ಇದ್ದರೆ ತಪ್ಪು ಮಾಡುವವರು, ಮಾಡದವರು ಎಲ್ಲರೂ ಸಮಾನರು ಎಂದಾದರೆ ದೇಶದ ಪರಿಸ್ಥಿತಿ? ಅಥವಾ ಸಂಜಯ್‌ದತ್ ಒಬ್ಬ ಸಿನೆಮಾ ನಟ, ಮತ್ಯಾರೋ ಒಬ್ಬ ಕ್ರೀಡಾಪಟು, ಇನ್ನೊಬ್ಬ ರಾಜಕಾರಣಿ ಹೀಗೆ ಸಬಲರು ತಪ್ಪಿಸಿಕೊಂಡು ಅಬಲರು ಪರಿತಪಿಸುವ ದಿನವನ್ನು ಮುಂದು ನೋಡುತ್ತಿದ್ದೇವಾ?

-ಪ್ರವೀಣ ಪಟವರ್ಧನ್, ಹವ್ಯಾಸಿ ಬರಹಗಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.